Arabian Khajur: ಇಲ್ಲಿ ಮದೀನಾದಲ್ಲಿ ನೋಡಿದರೆ ಎಂತೆಂತಹ ಖರ್ಜೂರಗಳು ಮಾರಾಯ್ರೆ, ಅರೇಬಿಯಾದ ಖರ್ಜೂರ ಕುರಿತು ಬಿ ಎಂ ಹನೀಫ್ ಬರಹ
ಅರೇಬಿಯನ್ ಖರ್ಜೂರದ ಸೊಬಗು, ರುಚಿ ಎಲ್ಲವೂ ಅದ್ಭುತ. ಕಪ್ಪು ಬಣ್ಣದ ಖರ್ಜೂರವನ್ನು ಬಹಳ ಜನ ಇಷ್ಟಪಡುತ್ತಾರೆ. ಇಂತಹ ಖರ್ಜೂರದಲ್ಲಿ ಅನೇಕ ವೈರೆಟಿ ಇದೆ. ಅರೇಬಿಯನ್ ಖರ್ಜೂರಗಳ ಕಿರುಪರಿಚಯವನ್ನು ತಮ್ಮ ಫೇಸ್‌ಬುಕ್ ಪೋಸ್ಟ್ ಮೂಲಕ ಮಾಡಿಕೊಟ್ಟಿದ್ದಾರೆ ಹಿರಿಯ ಪತ್ರಕರ್ತ ಬಿಎಂ ಹನೀಫ್.
ಖರ್ಜೂರ ಅತ್ಯಂತ ಪೌಷ್ಠಿಕಾಂಶ ಇರುವಂತಹ ಹಣ್ಣು. ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳೂ ಹತ್ತಾರು. ಖರ್ಜೂರಕ್ಕೆ ಸಂಬಂಧಿಸಿದ ಒಂದಿಲ್ಲೊಂದು ವಿಚಾರಗಳು ನಿತ್ಯವೂ ಗಮನಸೆಳೆಯುತ್ತಿರುತ್ತವೆ. ಖರ್ಜೂರ ಅಂದ್ರೆ ಮರುಭೂಮಿಯ ಬೆಳೆ ಎಂದೇ ಖ್ಯಾತ. ಅರೇಬಿಯನ್ ಖರ್ಜೂರಕ್ಕೆ ಬೇಡಿಕೆ ಹೆಚ್ಚು.
ಮದೀನಾ ಪ್ರವಾಸ ಮಾಡಿದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಖರ್ಜೂರದ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಖರ್ಜೂರಕ್ಕೆ ಸಂಬಂಧಿಸಿದ ಹಲವು ಮಾಹಿತಿಯನ್ನು ಒದಗಿಸಿದ್ದಾರೆ.
ಅವರ ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಬೆಂಗಳೂರಿನ ಟೆರೇಸ್‌ನಲ್ಲಿ ಖರ್ಜೂರ ಬೆಳೆಯಲು ಪ್ರಯತ್ನಿಸುತ್ತಿರುವ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.
ಬಿ.ಎಂ.ಹನೀಫ್ ಅವರ ಅರೇಬಿಯನ್ ಖರ್ಜೂರದ ಪೋಸ್ಟ್ ಹೀಗಿದೆ -
ಅರೇಬಿಯಾದ ಖರ್ಜೂರ - ಈ ಅರಬ್ಬರ ಬಗ್ಗೆ ನನಗೆ ನಿಜಕ್ಕೂ ಅಸೂಯೆ ಆಗುವುದು ಬಹಳಷ್ಟು ಸಲ ಖರ್ಜೂರದ ಕಾರಣಕ್ಕೆ. ಆಜಾನುಬಾಹು ಅರಬ್ಬರ ಅತ್ಯಂತ ಪೌಷ್ಟಿಕ ಆಹಾರ ಖರ್ಜೂರ. ನನ್ನ ಪ್ರಕಾರ ಖರ್ಜೂರದ ಸಿಹಿಗೆ ಸಾಟಿಯಾದದ್ದು ಯಾವುದೂ ಇಲ್ಲ. ಬೆಳಿಗ್ಗೆ ಎದ್ದು ಒಂದು ಫುಲ್ ಗ್ಲಾಸ್ ಬಿಸಿನೀರಿನ ಜೊತೆಗೆ ಎರಡು ಖರ್ಜೂರ ತಿನ್ನುವುದು ನನ್ನ ಬಹಳ ವರ್ಷಗಳ ಅಭ್ಯಾಸ.
ಇಲ್ಲಿ ಮದೀನಾದಲ್ಲಿ ನೋಡಿದರೆ ಎಂತೆಂತಹ ಖರ್ಜೂರಗಳು ಮಾರಾಯ್ರೆ! ಖಡ್ರಾವಿ, ಸುಕ್ಕಾರಿ, ಅನ್ಬರ್, ಮಬ್ರೂಮ್, ಸುಗಾಯಿ, ಕಲ್ಬೀ, ರಬಿಯಾ, ಅಜ್ವಾ.....! ಒಂದಕ್ಕಿಂತ ಒಂದು ಮಧು ಮಧುರ! ಮೊದಲ ಬಾರಿಗೆ ಇಲ್ಲಿ ಮದೀನಾದ ಸೀಡ್ ಲೆಸ್ ಖರ್ಜೂರ ನೋಡಿ ಅಚ್ಚರಿಯಾಯಿತು.
ಅಜ್ವಾ ಖರ್ಜೂರದ ಬಗ್ಗೆ ಅರಬ್ಬರಿಗೆ ವಿಶೇಷ ಮಮತೆ. ಪ್ರತಿದಿನ ಬೆಳಿಗ್ಗೆ ಎದ್ದು ಬರಿಹೊಟ್ಟೆಗೆ ಎರಡು ಖರ್ಜೂರ ತಿನ್ನುತ್ತಾರೆ. ಪ್ರವಾದಿಯವರ ವಚನಗಳಲ್ಲಿ ಇದರ ಬಗ್ಗೆ ಉಲ್ಲೇಖವಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಕಡುಕಪ್ಪು ಬಣ್ಣದ ಮಬ್ರೂಮ್ ನಲ್ಲಿ ದೊಡ್ಡದು ಮತ್ತು ಸಣ್ಣದು ಎರಡೂ ವೆರೈಟಿ ಇದೆ.
"ಅಯ್ಯೊ ನಮಗೆ ಮಧುಮೇಹ" ಅನ್ನುವವರಿಗೂ ಇಲ್ಲಿ ಶುಗರ್ ಲೆಸ್ ಖರ್ಜೂರ ಸಿಗುತ್ತದೆ. ಸುಗಾಯಿ ಎನ್ನುವುದು ಆ ತಳಿಯ ಹೆಸರು.
ನಮ್ಮ ಗೈಡ್ ಮುಸ್ತಾಫಾ ಅವರು ತಮ್ಮ ನಝೀರ್ ಮತ್ತು ನನ್ನನ್ನು ಖರ್ಜೂರದ ತೋಟವೊಂದಕ್ಕೆ ಕರೆದೊಯ್ದರು. ಅಲ್ಲಿ ಬೃಹತ್ ಕಂಟೇನರ್ ಲಾರಿಗೆ ಶುದ್ಧೀಕರಿಸಿದ ಖರ್ಜೂರವನ್ನು ತುಂಬುತ್ತಿದ್ದರು. ಅದಕ್ಕೂ ಯಂತ್ರೋಪಕರಣವಿದೆ.
ಬೆಂಗಳೂರಲ್ಲಿ ಖರ್ಜೂರ ಕೆಜಿಗೆ ರೂ. 200 ರಿಂದ 1200 ರವರೆಗೆ ಬೆಲೆ ಕೊಟ್ಟು ಖರೀದಿಸುತ್ತೇವೆ. ಇಲ್ಲಿ ಬೆಳೆಗಾರನ ತೋಟಕ್ಕೆ ಹೋಗಿ ಖರೀದಿಸಿದರೆ, ಕೆಜಿ ಗೆ ನಮ್ಮ 20 ರಿಂದ 40 ರೂಪಾಯಿಯೊಳಗೆ ಅತ್ಯುತ್ತಮ ತಳಿಯ ಖರ್ಜೂರ ಸಿಗುತ್ತಿದೆ!
ನಮಗೂ ಸ್ವಲ್ಪ ತಗೊಂಬನ್ನಿ ಅಂತ ಅಲ್ಪತೃಪ್ತಿ ತೋರಿಸಬೇಡಿ. ಖರ್ಜೂರದ export/ import ವ್ಯಾಪಾರ ತುಂಬಾ ಲಾಭದಾಯಕ ಅನ್ನುವುದನ್ನು ಗಮನಿಸಿ.
ಖರ್ಜೂರದ ಪೋಸ್ಟ್‌ಗೆ ಬಂದಿದೆ ಹಲವು ಪ್ರತಿಕ್ರಿಯೆ
ಬಿ.ಎಂ.ಹನೀಫ್ ಅವರ ಪೋಸ್ಟ್‌ಗೆ ಜೋಗಿ ಗಿರೀಶ್ ರಾವ್ ಹತ್ವಾರ್ ಅವರು “ತೋಟ ತಗಂಡ್ಯಾ” ಅಂತ ಪ್ರಶ್ನಿಸಿದರು. ಇದಕ್ಕೆ ಊರಲ್ಲಿ ಖರ್ಜೂರ ನೆಟ್ಟರೆ ಹೇಗೆ ಅಂತ ಯೋಚಿಸ್ತಿದ್ದೇನೆ ಎಂದು ಬಿ.ಎಂ.ಹನೀಫ್ ಉತ್ತರಿಸಿದ್ದಾರೆ.
ಈ ಉತ್ತರದ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಸುನೀತಾ ರಾವ್ ಅವರು, ಖರ್ಜೂರ ನನ್ನ ಫೇವರಿಟ್. ಅದ್ಭುತವಾದ ವಿಡಿಯೋ ಶೇರ್ ಮಾಡಿದ್ದೀರಿ. ಬೆಂಗಳೂರಿನಲ್ಲಿ ನನ್ನ ಮನೆಯ ಟೆರೇಸ್‌ನಲ್ಲಿ ಎರಡು ಖರ್ಜೂರದ ಗಿಡಗಳು ಬೆಳೆಯುತ್ತಿವೆ. ನಿಮಗೆ ಕೃಷಿ ಜಮೀನು ಇದ್ದರೆ ಅವುಗಳನ್ನು ಅಲ್ಲಿ ನೆಟ್ಟು ಬೆಳೆಸುವುದಕ್ಕಾಗಿ ಖುಷಿಯಿಂದ ನೀಡುವೆ ಎಂದು ಹೇಳಿಕೊಂಡಿದ್ದಾರೆ.
ಹೀಗೆ ಹತ್ತಾರು ಪ್ರತಿಕ್ರಿಯೆಗಳು ಈ ಪೋಸ್ಟ್‌ಗೆ ವ್ಯಕ್ತವಾಗಿದೆ.