Rat Car Protection Tips: ಗಣಪತಿಯ ವಾಹನ ಕಾರಿಗೆ ಹಾನಿ ಮಾಡುವುದೇ? ಕಾರಿನ ವೈರ್ ಕಟ್ ಮಾಡುವ ಇಲಿಗಳಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಸಲಹೆ
Rat Car Protection Tips: ಗೌರಿ ಗಣೇಶ ಹಬ್ಬದ ಈ ಸಮಯದಲ್ಲಿ "ಕಾರಿಗೆ ಹಾನಿ ಮಾಡುವ ಇಲಿಗಳಿಂದ" ಪಾರಾಗುವುದು ಹೇಗೆ ಎಂದು ತಿಳಿಯೋಣ. ಕಾರಿನ ವೈರ್ ಕತ್ತರಿಸುವ ಇಲಿಗಳಿಂದ ಸಾಕಷ್ಟು ಜನರು ತೊಂದರೆಗೆ ಈಡಾಗಿರಬಹುದು. ಇಲಿಗಳಿಂದ ಕಾರುಗಳನ್ನು ರಕ್ಷಿಸಲು ಇಲ್ಲೊಂದಿಷ್ಟು ಸಲಹೆಗಳಿವೆ.
Rat Car Protection Tips: ಬೆಂಗಳೂರಲ್ಲಿ ಸ್ನೇಹಿತರೊಬ್ಬರ ಅನುಭವ. ಮರುದಿನ ಬೆಳಗ್ಗೆ ಬೇಗ ಎದ್ದು ಮಂಗಳೂರಿಗೆ ಹೋಗುವ ಯೋಜನೆ ಮಾಡಿಕೊಂಡಿದ್ದರು. ದೂರ ಪ್ರಯಾಣಕ್ಕೆ ಮುನ್ನ ಕಾರು ಸುಸ್ಥಿತಿಯಲ್ಲಿರುವುದೇ ಎಂದು ರಾತ್ರಿಯೇ ಚೆಕ್ ಮಾಡಿಟ್ಟಿದ್ದರು. ಒಂದಿಷ್ಟು ದೂರ ಕಾರು ಚಾಲನೆ ಮಾಡಿ ಕಾರು ಸರಿಯಾಗಿದೆ ಎಂದು ಖಾತ್ರಿ ಮಾಡಿಕೊಂಡು ರಾತ್ರಿ ನೆಮ್ಮದಿಯಾಗಿ ನಿದ್ರಿಸಿ ಬೆಳಗ್ಗೆ ಬೇಗ ಎದ್ದಿದ್ದರು. ಮನೆಯವರ ಜತೆ ಗಂಟುಮೂಟೆ ಪ್ಯಾಕ್ ಮಾಡಿಕೊಂಡು ಬೆಳಗ್ಗೆ 4 ಗಂಟೆಗೆ ಕಾರು ಹತ್ತಿ ಕೀಲಿಕೈ ಹಾಕಿ ತಿರುಗಿಸಿದರೆ "ಕಾರ್ ಸ್ಟಾರ್ಟ್ ಆಗುತ್ತಿಲ್ಲ". ಹಲವು ಬಾರಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದೇನಪ್ಪ ಆಯ್ತು ಎಂದು ತಲೆಕೆಡಿಸಿಕೊಂಡರು. ದೂರ ಪ್ರಯಾಣದ ಉತ್ಸಾಹ ಇಳಿದು ಹೋಯಿತು. ಅರ್ಜೆಂಟಾಗಿ ಮಂಗಳೂರಿಗೆ ಹೋಗಲೇ ಬೇಕು. ಬಾನೆಟ್ ಎತ್ತಿ ಟಾರ್ಚ್ ಹಾಕಿ ಸೂಕ್ಷ್ಮವಾಗಿ ಗಮನಿಸಿದರೆ ಒಂದು ಕಡೆ ವೈರ್ ಕಟ್ ಆಗಿರುವುದು ಕಾಣಿಸಿತ್ತು. ಇನ್ನೂ ಸೂಕ್ಷ್ಮವಾಗಿ ನೋಡಿದಾಗ ಹಲವು ಕಡೆ ವೈರ್‌ಗಳು ಕಟ್ ಆಗಿದ್ದವು. ರಾತ್ರಿ ಬಾನೆಟ್ ಒಳಗೆ ನುಗ್ಗಿದ ಇಲಿ ಅಥವಾ ಇಲಿಗಳು ಕಾರಿನೊಳಗೆ ತಮ್ಮ ಹಲ್ಲಿನ ಪೌರುಷ ತೋರಿಸಿದ್ದವು. ಇಷ್ಟು ಮುಂಜಾನೆ ಗ್ಯಾರೇಜ್‌ನವರು ದೊರಕುವುದಿಲ್ಲ. ಯಾರದ್ದೋ ನೆರವಿನಿಂದ ಕಾರಿನ ವೈರಿಂಗ್ ಸರಿಮಾಡಿಸಿಕೊಂಡು ಬೆಂಗಳೂರು ಬಿಟ್ಟಾಗ ಬೆಳಗ್ಗೆ 7 ಗಂಟೆ ದಾಟಿತ್ತು.
ಬೆಂಗಳೂರಿನಂತಹ ನಗರಗಳಲ್ಲಿ ವಾಸ ಮಾಡುವ ಕಾರು ಮಾಲೀಕರು ಇಲಿಗಳೆಂದರೆ ಭಯಪಡುತ್ತಾರೆ. ಅತ್ಯುತ್ತಮ ಪಾರ್ಕಿಂಗ್ ವ್ಯವಸ್ಥೆಯಿದ್ದರೆ ತೊಂದರೆಯಿಲ್ಲ. ಕೆಲವೊಮ್ಮೆ ಪಾರ್ಕಿಂಗ್ ಸ್ಥಳದೊಳಕ್ಕೂ ಆಗಮಿಸಿ ಕಾರಿನ ವೈರ್ ಕತ್ತರಿಸುವ ಇಲಿಗಳು ಇವೆ. ಕೆಲವು ಇಲಿಗಳು ಏಸಿ ವೆಂಟ್‌ನೊಳಗೆ ನುಸುಳಿ ಸತ್ತು ಕಾರನ್ನು ವಾಸನೆ ಬರಿಸುವುದೂ ಇದೆ. ಆದರೆ, ಮನೆಯ ಹೊರಗಡೆ ಕಾರು ನಿಲ್ಲಿಸುವವರಿಗೆ ಇಲಿಗಳು ಆಗಾಗ ಹಲವು ಸಾವಿರ ರೂಪಾಯಿ ನಷ್ಟಮಾಡುತ್ತವೆ. ಇಲಿಗಳನ್ನು ಓಡಿಸಲು ನಾನಾ ಉಪಾಯ ಮಾಡುತ್ತಾರೆ. ನಿಮಗೂ ಇಂತಹ ಇಲಿಗಳ ಕಾಟವಿದ್ದರೆ ಕಾರನ್ನು ಸುರಕ್ಷಿತವಾಗಿರಿಸಲು ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಈ ಮೂಲಕ ನಿಮ್ಮ ಕಾರನ್ನು ರಕ್ಷಿಸಿಕೊಳ್ಳಬಹುದು. ಇಲ್ಲಿನ ಕೆಲವೊಂದು ಸಲಹೆಗಳು ಕೆಲವು ಇಲಿಗಳಿಗೆ ನಾಟದೆಯೂ ಇರಬಹುದು.
ಅತ್ಯುತ್ತಮ ಪಾರ್ಕಿಂಗ್ ವ್ಯವಸ್ಥೆ
ಮನೆಯಲ್ಲಿ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಇದ್ದರೆ ಮಾತ್ರ ಹೊಸ ಕಾರು ಖರೀದಿಸಿ. ಬೆಂಗಳೂರಿನ ಬೀದಿಬದಿಗಳಲ್ಲಿ ಅಥವಾ ಅಕ್ಕಪಕ್ಕದ ಖಾಲಿ ಸೈಟ್‌ಗಳಲ್ಲಿ ಕಾರು ನಿಲ್ಲಿಸುವುದಾದರೆ ಹೊಸ ಕಾರು ಖರೀದಿ ಬೇಡ. ಕಡಿಮೆ ಬಜೆಟ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ತೃಪ್ತಿಪಡಿ. ಕಾರು ಪಾರ್ಕ್ ಮಾಡುವ ಸ್ಥಳ ಸ್ವಚ್ಛವಾಗಿರಲಿ. ಇಲಿಗಳ ಉಪಟಳವಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ.
ಕಾರಿನೊಳಗೆ ಆಹಾರ ಚೆಲ್ಲಬೇಡಿ
ರಾತ್ರಿ ಹೊತ್ತು ಇಲಿಗಳು ಕಾರಿನೊಳಗೆ ಬರಲು ಹಲವು ಕಾರಣಗಳಿವೆ. ಕಾರಿನೊಳಗೆ ತಿಂಡಿ ತಿನಿಸುಗಳನ್ನು ಚೆಲ್ಲಿದ್ದರೆ ಅದರ ವಾಸನೆಗೆ ಇಲಿಗಳು ಬರಬಹುದು. ಹೀಗಾಗಿ, ಕಾರಿನೊಳಗೆ ತಿನ್ನುವುದನ್ನು ಅವಾಯ್ಡ್ ಮಾಡಿ. ಕಾರಿನೊಳಗೆ ಆಹಾರ ತುಣುಕುಗಳು ಚೆಲ್ಲಿದ್ದರೆ ಕ್ಲೀನ್ ಮಾಡಿ.
ಕಾರಿಗೆ ಬಾಡಿ ಮೆಷ್ ಅಳವಡಿಸಿ
ಕಾರಿನೊಳಗೆ ಇಲಿಗಳು ಪ್ರವೇಶಿಸಲು ಹಲವು ಕಿಂಡಿಗಳು ಇವೆ. ಏಸಿ ಅಥವಾ ಇತರೆ ಕಿಂಡಿಗಳು ಇರುವಲ್ಲಿ ಗಟ್ಟಿ ತಂತಿಯ ಬಾಡಿ ಮೆಷ್‌ಗಳನ್ನು ಅಳವಡಿಸಿ. car rat protection mesh ಅಥವಾ car rat protection net ಬಳಸಿ ಕಾರನ್ನು ಸುರಕ್ಷಿತವಾಗಿರಿಸಬಹುದು.
ಕತ್ತಲೆಯಿಂದ ಕಾರು ದೂರವಿರಲಿ
ಇಲಿಗೆ ಕತ್ತಲು ಇಷ್ಟ. ಕಾರು ಪಾರ್ಕ್ ಮಾಡುವ ಸ್ಥಳದಲ್ಲಿ ರಾತ್ರಿಯೂ ಬೆಳಕು ಇದ್ದರೆ ಉತ್ತಮ. ಉದಾಹರಣೆಗೆ ಸ್ಟ್ರೀಟ್ ಲೈಟ್ ಬೆಳಕು ಇದ್ದರೆ ಅಲ್ಲಿ ಇಲಿಗಳ ಉಪಟಳ ಕಡಿಮೆ ಇರಬಹುದು. ಕಾರು ಪಾರ್ಕಿಂಗ್ ಮಾಡುವ ಗ್ಯಾರೇಜ್‌ನಲ್ಲಿ ಲೈಟ್ ಹಾಕಿರಿ. ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಲೈಟ್ ಹಾಕಿಡಬಹುದು.
ಪೆಪ್ಪರ್‌ಮಿಂಟ್ ಆಯಿಲ್
ಇಲಿಗಳಿಗೆ ಇಷ್ಟವಾಗದ ಪೆಪ್ಪರ್‌ಮಿಂಟ್ ಆಯಿಲ್ ಅನ್ನು ಹತ್ತಿಯ ಉಂಡೆಗಳಿಗೆ ಅದ್ದಿ ಕಾರಿನ ಬಾನೆಟ್‌ನೊಳಗೆ ಹಲವು ಕಡೆಗಳಲ್ಲಿ ಇಡಬಹುದು.
ತಂಬಾಕು
ಸಾಕಷ್ಟು ಕಾರು ಮಾಲೀಕರ ಪ್ರಕಾರ ಇಲಿಗಳಿಂದ ಪಾರಾಗಲು ತಂಬಾಕಿಗಿಂತ ಉತ್ತಮ ಮದ್ದು ಇನ್ನೊಂದಿಲ್ಲ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಇಲಿಗಳಿಗೆ ಚೆನ್ನಾಗಿ ಗೊತ್ತು. ತಂಬಾಕಿನ ಸ್ಮೆಲ್ ಇದ್ದರೆ ಇಲಿಗಳು ಕಾರಿನೊಳಗೆ ಸುಳಿಯದು. ಆದರೆ, ತಂಬಾಕು ಬೇಗ ಒಣಗಿ ಬಿಡುತ್ತದೆ. ಅದಕ್ಕಾಗಿ ಒದ್ದೆ ಬಟ್ಟೆ, ಒದ್ದೆ ಡೈಪರ್‌ನೊಳಗೆ (ಮಕ್ಕಳು ಬಳಸುವ) ತಂಬಾಕು ಇಡುವಂತಹ ಐಡಿಯಾಗಳನ್ನು ಮಾಡಿದರೆ ಒಳ್ಳೆಯದು.
ರಾಟ್ ಕಾರ್ ಸ್ಪ್ರೇಗಳು
ಆನ್‌ಲೈನ್ ಅಥವಾ ಆಫ್‌ಲೈನ್ ಅಂಗಡಿಗಳಲ್ಲಿ rat car sprayಗಳು ದೊರಕುತ್ತವೆ. ಇವುಗಳನ್ನು ಬಳಸಿ ನೋಡಬಹುದು. ಇಂತಹ ಸ್ಪ್ರೇ ಬಳಸುವ ಮುನ್ನ ಅದರಲ್ಲಿ ನೀಡಿದ ಸಲಹೆಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು. ಅಂದರೆ, ಮಾಸ್ಕ್ ಇತ್ಯಾದಿ ಧರಿಸಿ ಸ್ಪ್ರೇ ಮಾಡಬೇಕು.
ಆಪರೇಷನ್ ಇಲಿ!
ಕೆಲವೊಮ್ಮೆ ಕಾರುಗಳಿಗೆ ನಿರ್ದಿಷ್ಟ ಇಲಿಗಳು ಮಾತ್ರ ಹಾನಿ ಮಾಡುತ್ತವೆ. ಯಾವುದೋ ಒಂದು ಇಲಿ ಹೆಚ್ಚಾಗಿ ನಿಮ್ಮ ಕಾರನ್ನು ಟಾರ್ಗೆಟ್ ಮಾಡಿರುತ್ತದೆ. ಇಲಿ ಬೋನು ಅಥವಾ ಇಲಿಯನ್ನು ಹಿಡಿಯುವ, ಸಾಯಿಸುವ ವ್ಯವಸ್ಥೆಗಳ ಮೂಲಕ ಅಂತಹ ಇಲಿಗಳಿಂದ ಕಾರನ್ನು ರಕ್ಷಿಸಬಹುದು.
ಗಣಪತಿಯ ವಾಹನವಾದ ಇಲಿಯಿಂದ ನಿಮ್ಮ ಕಾರನ್ನು ಕಾಪಾಡಿಕೊಳ್ಳುವಂತೆ ಮೂಷಿಕ ವಾಹನ ಅನುಗ್ರಹಿಸಲಿ!