Mahindra Cars: ಮಹೀಂದ್ರ ಥಾರ್, ಎಕ್ಸ್‌ಯುವಿ4ಒಒ ಇವಿ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್, ದಾಸ್ತಾನು ಖಾಲಿ ಮಾಡಲು ಭಾರಿ ದರ ಕಡಿತ
Mahindra Car price discounts: ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಮೂರು ಡೋರ್‌ನ ಥಾರ್ ಮತ್ತು XUV400 ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ವಿನಾಯಿತಿ ಘೋಷಿಸಿದೆ. ದಾಸ್ತಾನು ಕಾಲಿ ಮಾಡುವುದು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುವ ಉದ್ದೇಶದಿಂದ ಈ ರಿಯಾಯಿತಿ ನೀಡುತ್ತಿದೆ. ಮಹೀಂದ್ರ ಕಾರು ಅಭಿಮಾನಿಗಳು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು.
ಬೆಂಗಳೂರು: ಹಬ್ಬದ ಅವಧಿಯಲ್ಲಿ ವಿವಿಧ ಕಾರು ಕಂಪನಿಗಳು ತಮ್ಮ ಕಾರು ದರಕ್ಕೆ ಡಿಸ್ಕೌಂಟ್ ಘೋಷಿಸುವುದು ಸಾಮಾನ್ಯ. ಈ ಗಣೇಶ ಹಬ್ಬದ ಸಮಯದಲ್ಲಿ ಮಹೀಂದ್ರ ಕಂಪನಿಯು ತನ್ನ ಎರಡು ಕಾರುಗಳಿಗೆ ಭರ್ಜರಿ ರಿಯಾಯಿತಿ ದರ ಘೋಷಿಸಿದೆ. ಆದರೆ, ಈ ಕಂಪನಿ ಡಿಸ್ಕೌಂಟ್ ಘೋಷಿಸಿರುವುದು ಹಬ್ಬದ ಆಫರ್ ಆಗಿ ಅಲ್ಲ. ತನ್ನ ದಾಸ್ತಾನು ಖಾಲಿ ಮಾಡಲು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುವ ಉದ್ದೇಶದಿಂದ ರಿಯಾಯಿತಿ ಕೊಡುಗೆ ಘೋಷಿಸಿದೆ. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಥಾರ್ ರೋಕ್ಸ್ ಆಫ್ ರೋಡರ್ ಎಸ್‌ಯುವಿಯ ಬುಕ್ಕಿಂಗ್ ಆರಂಭಿಸುತ್ತಿದೆ. ಇದೇ ಸಮಯದಲ್ಲಿ ಥಾರ್ ರೋಕ್ಸ್ ಆಫ್‌ರೋಡರ್‌ನ ಟೆಸ್ಟ್ ಡ್ರೈವ್ ಅವಕಾಶವನ್ನೂ ನೀಡಿದೆ. ಇದೇ ಸಮಯದಲ್ಲಿ ತನ್ನ ಎರಡು ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಮೂರು ಡೋರ್‌ನ ಮಹೀಂದ್ರ ಥಾರ್ ಮತ್ತು ಆಲ್ ಎಲೆಕ್ಟ್ರಿಕ್ ಮಹೀಂದ್ರ ಎಕ್ಸ್‌ಯುವಿ 4ಒಒ ಕಾರುಗಳಿಗೆ ಡಿಸ್ಕೌಂಟ್ ನೀಡುತ್ತಿದೆ.
ಮಹೀಂದ್ರ ಥಾರ್‌ನ ಎಲ್ಲಾ ಆವೃತ್ತಿಗಳಿಗೂ 1.50 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಈ ಆಫ್ ರೋಡರ್‌ನ ಎಕ್ಸ್ ಶೋರೂಂ ದರ ಸುಮಾರು 11.35 ಲಕ್ಷ ರೂಪಾಯಿಯಿಂದ 17.60 ಲಕ್ಷ ರೂಪಾಯಿವರೆಗಿದೆ. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ನೂತನ ಥಾರ್ ರೋಕ್ಸ್ (Thar Roxx) ಬಿಡುಗಡೆ ಮಾಡುತ್ತಿರುವುದರಿಂದ ಡೀಲರ್‌ಶಿಪ್‌ಗಳಲ್ಲಿ ಹಳೆಯ ಥಾರ್ ಆವೃತ್ತಿಗಳ ದಾಸ್ತಾನು ಖಾಲಿ ಮಾಡಲು ಉದ್ದೇಶಿಸಿದೆ. ಇದೇ ಕಾರಣಕ್ಕೆ ಥಾರ್ ಮಾಡೆಲ್‌ಗೆ ಡಿಸ್ಕೌಂಟ್ ದೊರಕಿದೆ. ಮಹೀಂದ್ರ ಥಾರ್ ಖರೀದಿಸಬೇಕೆಂದು ಯೋಜಿಸಿದ್ದವರಿಗೆ ಖರೀದಿಸಲು ಇದು ಸೂಕ್ತ ಸಮಯವಾಗಿದೆ.
ಇದೇ ಸಮಯದಲ್ಲಿ ಮಹೀಂದ್ರ ಎಕ್ಸ್‌ಯುವಿ4ಒಒ ಎಲೆಕ್ಟ್ರಿಕ್ ಕಾರಿಗೂ ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ. ಎಲ್ಲಾ ಎಲೆಕ್ಟ್ರಿಕ್ ಆವೃತ್ತಿಗಳಿಗೂ 3 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಮಹೀಂದ್ರ ಎಕ್ಸ್‌ಯುವಿ4ಒಒ ಎಲೆಕ್ಟ್ರಿಕ್ ವಾಹನದ ಎಕ್ಸ್ ಶೋರೂಂ ದರ 16.74 ಲಕ್ಷ ರೂಪಾಯಿಯಿಂದ 17.69 ಲಕ್ಷ ರೂಪಾಯಿವರೆಗೆ ಇದೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರಿನ ಜತೆ ಸ್ಪರ್ಧಿಸುವ ಉದ್ದೇಶದಿಂದ ಮಹೀಂದ್ರ ಕಂಪನಿಯು ಈ ಕಾರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.
ಮಹೀಂದ್ರ ಎಕ್ಸ್‌ಯುವಿ4ಒಒ ಎಲೆಕ್ಟ್ರಿಕ್ ಕಾರಿಗೆ ಟಾಟಾ ನೆಕ್ಸಾನ್ ಇವಿ ನೇರ ಸ್ಪರ್ಧಿಯಾಗಿದೆ. ಈ ಕಾರಿಗೆ ಕಳೆದ ತಿಂಗಳು 1.20 ಲಕ್ಷ ರೂಪಾಯಿ ದರ ಕಡಿತ ಘೋಷಿಸಲಾಗಿತ್ತು. ಇದೇ ಸಮಯದಲ್ಲಿ ಟಾಟಾ ಮೋಟಾರ್ಸ್ ಟಾಟಾ ಕರ್ವ್ ಇವಿ ಎಂಬ ಕೂಪೆಯನ್ನು ಲಾಂಚ್ ಮಾಡಿದೆ. ಇದೇ ಕಾರಣಕ್ಕೆ ಮಹೀಂದ್ರ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಕ್ಕೆ ಡಿಸ್ಕೌಂಟ್ ನೀಡಿದೆ.