Ola S1 Air: ಹೇಗಿದೆ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್, ಕಡಿಮೆ ದರ ಅಧಿಕ ಫೀಚರ್‌ನ ಯುಗಳ ಗೀತೆ, ಓದಿ ಫಸ್ಟ್ ರೈಡ್ ವಿಮರ್ಶೆ
Ola S1 Air first ride review: ಓಲಾ ಎಸ್1 ಏರ್ ಎನ್ನುವುದು ಈಗಾಗಲೇ ರಸ್ತೆಯಲ್ಲಿರುವ ಎಸ್1 ಪ್ರೊ ಎಂಬ ಎಲೆಕ್ಟ್ರಿಕ್ ಸ್ಕೂಟರ್‌ನ ಕಡಿಮೆ ದರದ ಆವೃತ್ತಿ. ಈ ಸ್ಕೂಟರ್ ಅನ್ನು ಎಚ್‌ಟಿ ಬಳಗ ಟೆಸ್ಟ್ ರೈಡ್ ಮಾಡಿದ್ದು, ಹೇಗಿದೆ ಎಂದು ನೋಡೋಣ ಬನ್ನಿ.
ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಪಾಲು ಸುಮಾರು ಶೇಕಡ 40ರಷ್ಟಿದೆ. ಇದೀಗ ಕಡಿಮೆ ದರದಲ್ಲಿ ಕಂಪನಿಯು ಹಲವು ಸ್ಕೂಟರ್‌ಗಳನ್ನು ಪರಿಚಯಿಸಲು ಪ್ರಯತ್ನಿಸುತ್ತಿದೆ. ಇದೇ ಕಾರಣಕ್ಕೆ ಕಂಪನಿಯು Ola S1 Air ಎಂಬ ಸ್ಕೂಟರ್ ಪರಿಚಯಿಸಿದೆ. ಇದು ಓಲಾ ಎಲೆಕ್ಟ್ರಿಕ್‌ಕ ಅತ್ಯಂತ ಕಡಿಮೆ ದರದ ಸ್ಕೂಟರ್ ಆಗಿದೆ. ಕಡಿಮೆ ದರದ ಸ್ಕೂಟರ್ ಮೂಲಕ ಕಂಪನಿಯು ಹೆಚ್ಚು ಗ್ರಾಹಕರನ್ನು ತಲುಪಲು ಯೋಜಿಸಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ಪತ್ರಿಕೆ, ವಿಶೇಷವಾಗಿ ವಾಹನ ಮಾಹಿತಿಗಾಗಿಯೇ ಮೀಸಲಾದ ಎಚ್‌ಟಿ ಆಟೋ ತಂಡವು ಈ ಎಲೆಕ್ಟ್ರಿಕ್ ಸ್ಕೂಟರ್‌ನ ಟೆಸ್ಟ್ ರೈಡ್ ಮಾಡಿದೆ. ಇವರು ತಮಿಳುನಾಡಿನ ಓಲಾ ಫ್ಯೂಚರ್‌ಫ್ಯಾಕ್ಟರಿಯಲ್ಲಿ ಈ ಸ್ಕೂಟರ್‌ನ ಟೆಸ್ಟ್ ರೈಡ್ ಮಾಡಿದ್ದಾರೆ. ಬನ್ನಿ ಹೊಸ ಓಲಾ ಸ್ಕೂಟರ್ ಹೇಗಿದೆ ಎಂದು ತಿಳಿಯೋಣ.
ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ನ ಮಾಹಿತಿ
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಇ-ಸ್ಕೂಟರ್‌ಗಳಲ್ಲಿ ಅತ್ಯಂತ ಕಡಿಮೆ ದರದ ಸ್ಕೂಟರ್ ಓಲಾ ಎಸ್1 ಏರ್. 2022ರ ಅಕ್ಟೋಬರ್‌ನಲ್ಲಿ ಕಂಪನಿಯು 80,000 ರೂಪಾಯಿ ಎಕ್ಸ್ ಶೋರೂಂ ದರದಲ್ಲಿ ಇದನ್ನು ಪರಿಚಯಿಸಿತ್ತು. ಬಳಿಕದ ಹತ್ತು ತಿಂಗಳಲ್ಲಿ ಈ ಸ್ಕೂಟರ್ ಸಾಕಷ್ಟು ಬದಲಾವಣೆ ಕಂಡಿತ್ತು. ಗ್ರಾಹಕರಿಗೆ ಹಲವು ಫೀಚರ್‌ಗಳು, ಆಯ್ಕೆಗಳು ದೊರಕಿವೆ. ಅಂತಿಮವಾಗಿ ಈ ಸ್ಕೂಟರ್ ದರ 1.10 ಲಕ್ಷ ರೂಪಾಯಿಗೆ ತಲುಪಿದೆ. ಆಗಸ್ಟ್ 15ರಿಂದ ಸಬ್ಸಿಡಿ ಬಳಿಕ ಈ ಸ್ಕೂಟರ್‌ನ ದರ 1.20 ಲಕ್ಷ ರೂಪಾಯಿ ಇರಲಿದೆ. ಇದು ಓಲಾ ಎಸ್1 ಪ್ರೊಗೆ ಹೋಲಿಸಿದರೆ 30,000 ರೂಪಾಯಿ ಕಡಿಮೆ ದರದ ಸ್ಕೂಟರ್ ಆಗಿದೆ.
ಓಲಾ ಎಸ್1 ಏರ್ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಆಗಮನ
ಓಲಾ ಎಲೆಕ್ಟ್ರಿಕ್ ಕಂಪನಿಯು ನೂತನ ಓಲಾ ಎಸ್1 ಏರ್ ಸ್ಕೂಟರ್ ಅನ್ನು ನೂತನ ಜೆನ್2 ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಿದೆ. ಮುಂದಿನ ಎಲ್ಲಾ ಎಂಟ್ರಿ ಲೆವೆಲ್ ಸ್ಕೂಟರ್‌ಗಳಿಗೆ ಇದು ವೇದಿಕೆಯಾಗಲಿದೆ. ಜೆನ್ 1 ಮಾಡೆಲ್‌ಗಳಿಗೆ ಹೋಲಿಸಿದರರೆ ಜೆನ್ 2 ಪ್ಲಾಟ್‌ಫಾರ್ಮ್ ಸ್ಕೂಟರ್‌ಗಳು ಶೇಕಡ 14ರಷ್ಟು ಹಗುರವಾಗಿವೆ ಎಂದು ಕಂಪನಿ ತಿಳಿಸಿದೆ. ಈ ಹಿಂದಿನ ಸ್ಕೂಟರ್‌ಗಳಿಗೆ ಹೋಲಿಸಿದರೆ ತಯಾರಿಕಾ ವೆಚ್ಚ ಶೇಕಡ 25ರಷ್ಟು ಕಡಿಮೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಸ್ಕೂಟರ್‌ನ ಮುಂಭಾಗದ ಫ್ಲೋರ್‌ಬೋರ್ಡ್‌ನಲ್ಲಿ ಆರಾಮವಾಗಿ ಕಾಲಿಡಬಹುದು. ಇಲ್ಲಿ ಲಗೇಜ್ ಕೂಡ (ಕಾಲುಗಳ ನಡುವೆ) ಇಟ್ಟುಕೊಳ್ಳಬಹುದು. ಮುಂಭಾಗಕ್ಕೆ ಹೊಸ ಬಗೆಯ ಅಪ್ರೊನ್ ಪಾಕೆಟ್ ಅಳವಡಿಸಲಾಗಿದ್ದು, ಇದರಲ್ಲಿ ಸ್ಮಾರ್ಟ್‌ಫೋನ್ ಅನ್ನು ಹೆಚ್ಚು ಸುರಕ್ಷಿತವಾಗಿ ಇಡಬಹುದು. ಆದರೆ, ಸೀಟಿನೊಳಗಿನ ಸ್ಥಳಾವಕಾಶ 36 ಲೀಟರ್‌ನಿಂದ 34 ಲೀಟರ್‌ಗೆ ಇಳಿಕೆಯಾಗಿದೆ. ಹೀಗಿದ್ದರೂ, ಸೀಟಿನೊಳಗಿನ ಸ್ಥಳಾವಕಾಶ ಅತ್ಯುತ್ತಮವಾಗಿಯೇ ಇದೆ ಎನ್ನಬಹುದು.
Ola S1 Air: ನೂತನ ಸ್ಕೂಟರ್‌ನ ಸೌಂದರ್ಯ
ಮೊದಲ ನೋಟಕ್ಕೆ ಇದು ಇತರೆ ಓಲಾ ಸ್ಕೂಟರ್‌ಗಳಂತೆಯೇ ಕಾಣಿಸುತ್ತದೆ. ಅಂದರೆ, ಎಸ್1 ಪ್ರೊದ ಸ್ಟೈಲಿಂಗ್ ಫೀಚರ್‌ಗಳನ್ನೇ ಹೊಂದಿದೆ. ಕಂಪನಿಯು ನಿರ್ಮಾಣ ವೆಚ್ಚ ಕಡಿಮೆ ಮಾಡುವ ಮೂಲಕ ದರ ಕಡಿಮೆ ಮಾಡಲು ಪ್ರಯತ್ನಿಸಿದೆ. ಸ್ಕೂಟರ್‌ನ ನಿಯೊನ್ ಗ್ರೀಮ್ ಸ್ಕೀಮ್ ಸುಂದರವಾಗಿ ಕಾಣಿಸುತ್ತದೆ. ಆದರೆ, ಮ್ಯಾಟ್ ಫಿನಿಶ್ ಹೆಚ್ಚು ಆಕರ್ಷಕವಾಗಿ ಅಥವಾ ಪ್ರಿಮೀಯಂ ಆಗಿ ಕಾಣಿಸದು. ದೀರ್ಘಕಾಲದ ಬಳಿಕ ಧೂಳು ಮತ್ತು ಗೆರೆಗಳು ಕಾಣಿಸಬಹುದು.
ಓಲಾವು ನೂತನ ಸೀಟ್‌ಗೆ ಬೇಸಿಕ್ ಸೀಟ್ ಕವರ್ ಹಾಕಿದೆ. ಓಲಾ ಎಸ್1 ಪ್ರೊದಲ್ಲಿದ್ದ ಸ್ಪ್ಲಿಟ್ ಗ್ರಾಬ್ ರೇಲ್ ಬದಲಿಗೆ ಹೊಸ ಸಿಂಗಲ್ ಯೂನಿಟ್ ಯುಟಿಲೇಟೇರೇಷನ್ ಹಾಕಲಾಗಿದೆ. ಚಕ್ರಕ್ಕೆ ಅಲಾಯ್ ವೀಲ್ ಬದಲು ಸ್ಟೀಲ್ ವೀಲ್ ಹಾಕಲಾಗಿದೆ. ಎಸ್1 ಪ್ರೊ ಸ್ಕೂಟರ್ 12 ಬಣ್ಣಗಳ ಆಯ್ಕೆಗಳಲ್ಲಿ ದೊರಕಿದರೆ ನೂತನ ಎಸ್1 ಏರ್ ಕೇವಲ 6 ಬಣ್ಣಗಳಲ್ಲಿ ದೊರಕುತ್ತದೆ.
ಮೊದಲ ನೋಟಕ್ಕೆ ಓಲಾದ ಇತರೆ ಸ್ಕೂಟರ್‌ಗಳಿಗೆ ಹೋಲಿಸಿದರೆ ನೂತನ ಓಲಾ ಎಸ್1 ಏರ್ ಕೊಂಚ ಅಗ್ಗದ ಪ್ರಾಡಕ್ಟ್‌ನಂತೆ ಕಾಣಿಸುತ್ತದೆ. ಕೊಂಚ ಪ್ಲಾಸ್ಟಿಕ್ ಸ್ಕೂಟರ್‌ನಂತೆ ಕಾಣಿಸುತ್ತದೆ. ಕೆಲವು ಕಡೆ ಫಿನಿಶಿಂಗ್ ಅಪೂರ್ಣವಿರುವಂತೆ ಕಾಣಿಸುತ್ತದೆ, ವೆಲ್ಡಿಂಗ್ ಕಾಣಿಸುತ್ತದೆ. ನೀವೊಮ್ಮೆ ಈ ಸ್ಕೂಟರ್‌ನ ಚಿತ್ರಗಳನ್ನು ಅವಲೋಕಿಸಿದರೆ ಇಂತಹ ಬದಲಾವಣೆಗಳನ್ನು ಗುರುತಿಸುವಿರಿ.
ಓಲಾ ಎಸ್1 ಏರ್ ಟೆಸ್ ರೈಡ್ ಅನುಭವ
ಎಸ್1 ಪ್ರೊದ ಮಿಡ್ ಡ್ರೈವ್ ಎಂಜಿನ್‌ಗೆ ಹೋಲಿಸಿದರೆ ನೂತನ ಎಸ್1 ಏರ್‌ನಲ್ಲಿ ಕಡಿಮೆ ವೆಚ್ಚದ ಬಿಎಲ್‌ಡಿಸಿ ಹಬ್ ಮೋಟಾರ್ ಇದೆ. ಈ ಮೋಟಾರ್ 4.5 ಕಿಲೋವ್ಯಾಟ್ ಅಂದರೆ 6 ಬಿಎಚ್‌ಪಿ ಪವರ್ ಒದಗಿಸುತ್ತದೆ. ಕಂಟಿನ್ಯೂಸ್ ಪವರ್ ಔಟ್‌ಪುಟ್ 2.7 ಕಿಲೋವ್ಯಾಟ್ (3.6 ಬಿಎಚ್‌ಪಿ) ಇದೆ. ಇದು ಎಸ್ 1 ಪ್ರೊಗೆ ಹೋಲಿಸಿದರೆ ಅದರ ಅರ್ಧದಷ್ಟು ಪವರ್ ಆಗಿದೆ. ಈ ಸ್ಕೂಟರ್‌ನಲ್ಲಿ ಹೈಪರ್ ಮೋಡ್ ಆಯ್ಕೆ ಇಲ್ಲ. ವೇಗ ಪಡೆದುಕೊಳ್ಳಲು ಕೊಂಚ ಸಮಯ ತೆಗೆದುಕೊಂಡರೂ ನಾರ್ಮಲ್ ಮತ್ತು ಸ್ಪೋರ್ಟ್ ಮೋಡ್‌ಗೆ ತಕ್ಕಮಟ್ಟಿಗೆ ಬೇಗ ಸಾಗಬಹುದು. ಒಟ್ಟಾರೆ ನಗರದ ಸ್ಪೀಡ್ ಲಿಮಿಟ್‌ಗೆ ಸೂಕ್ತವಾಗಿ ವರ್ತಿಸುತ್ತದೆ. ಈ ಸ್ಕೂಟರ್‌ನಲ್ಲಿ ಗಂಟೆಗೆ ಗರಿಷ್ಠ 90 ಕಿ.ಮೀ. ವೇಗದಲ್ಲಿ ಹೋಗಬಹುದು.
ಇದರ ಥ್ರೋಟಲ್ ತಿರುಗಿಸಿದರೆ ಹೆಚ್ಚು ಪವರ್ ಡೆಲಿವರಿ ಕಾಣಿಸುವುದಿಲ್ಲ. ಸ್ಮೂಥ್ ಆದ ಥ್ರೋಟಲ್ ರೆಸ್ಪಾನ್ಸ್ ಇದ್ದರೆ ಇನ್ನಷ್ಟು ಖುಷಿ ಕೊಡುತ್ತಿತ್ತು. ಇದರ ರಿವರ್ಸ್ ಮೋಡ್ ಕೊಂಚ ಜರ್ಕಿ ರೀತಿ ಇದೆ. ಹಿಂಬದಿಗೆ ಸಡನ್ ಎಳೆಯುವುದು ಅನ್‌ಕಂಫರ್ಟ್ ಅನಿಸುತ್ತದೆ. ಸ್ಪೋರ್ಟ್ ಮೋಡ್‌ನಿಂದ ನಾರ್ಮಲ್ ಮೋಡ್‌ಗೆ ಬದಲಾಯಿಸಿದಾಗ ಸ್ಕೂಟರ್‌ನ ಪರ್ಫಾಮೆನ್ಸ್ ತುಂಬಾ ಕಡಿಮೆಯಾದ ಭಾವನೆ ನಮಗೆ ಟೆಸ್ಟ್ ರೈಡ್ ಸಮಯದಲ್ಲಿ ಉಂಟಾಯಿತು. ನಾವು ಹೆಚ್ಚು ಬಿಸಿಲು ಇದ್ದ ದಿನದಂದು ಟೆಸ್ಟ್ ರೈಡ್ ಮಾಡಿದೆವು. ಹೀಗಾಗಿ, ಬಿಸಿಲು ಅಥವಾ ಬಿಸಿಗೆ ನಮಗೆ ಈ ರೀತಿ ಅನುಭವವಾಗಿರಬಹುದು.
ತಿರುವುಗಳಲ್ಲಿ ಸಂಚರಿಸುವಾಗ ಯಾವುದೇ ಭಯ ಹುಟ್ಟಿಸುವುದಿಲ್ಲ. ಇದರ ಅಧಿಕ ಗ್ರೌಂಡ್ ಕ್ಲಿಯರೆನ್ಸ್‌ನಿಂದ ರಸ್ತೆಯ ದೊಡ್ಡ ಗುಂಡಿ ಏರು ತಗ್ಗುಗಳಲ್ಲಿ ಭಯವಿಲ್ಲದೆ ಸಾಗಬಹುದು.
ಹೊಸ ಸಸ್ಪೆನ್ಷನ್ ಹೇಗಿದೆ?
ಈ ಸ್ಕೂಟರ್‌ನ ಹಿಂಬದಿಗೆ ಟೆಲಿಸ್ಕೋಪಿಕ್ ಫೋರ್ಕ್ಸ್ ಬದಲು ಟ್ವಿನ್ ಶಾಕ್ ಅಬ್ಸಾರ್ಬರ್ ಅಳವಡಿಸಲಾಗಿದೆ. ಈಗಿನ ಎಸ್1 ಪ್ರೊಗೆ ಹೋಲಿಸಿದರೆ ಈ ಸಸ್ಪೆನ್ಷನ್ ಸೆಟಪ್ ಸರಳವಾಗಿರುವಂತೆ ಕಾಣಿಸುತ್ತದೆ. ಕಂಪನಿಯ ಪ್ರಕಾರ ಈ ಸಸ್ಪೆನ್ಷನ್ ಬದಲಾವಣೆಯಿಂದ ಅಂತಹ ವ್ಯತ್ಯಾಸವಾಗದು. ನಮಗೂ ಅಂತಹ ವ್ಯತ್ಯಾಸ ಗೋಚರಿಸಿಲ್ಲ. ಚಾಲನಾ ಅನುಭವ ಕಂಫರ್ಟೆಬಲ್ ಆಗಿತ್ತು. ಹಿಂಬದಿ ಪ್ರಯಾಣಿಕನ ಸೀಟು ತುಸು ಅಗಲ ಹೆಚ್ಚಾದಂತೆ ಅನಿಸುತ್ತದೆ. ವಿಶೇಷವಾಗಿ ಹಿಂಬದಿಯಲ್ಲಿ ಮಕ್ಕಳು ಕುಳಿತರೆ ಅವರಿಗೆ ಕಷ್ಟವಾಗಬಹುದು.
ಫೀಚರ್‌ಗಳು
ಸ್ಕೂಟರ್‌ನ ಫೀಚರ್‌ಗಳು ರಿಚ್ ಆಗಿವೆ. ಒಟಿಎ ಅಪ್‌ಡೇಟ್ ಎಂಬ ಆನ್‌ಲೈನ್ ಸಪೋರ್ಟ್ ಫೀಚರ್ ಇದರಲ್ಲಿದೆ. ಇದರಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಇದೆ. ಇದು ಬ್ಲೂಟೂಥ್ ಕನೆಕ್ಟಿವಿಟಿ, ಪಾಸ್‌ವರ್ಡ್ ಪ್ರೊಟೆಕ್ಷನ್ ಇರುವ ಇಗ್ನಿಷನ್, ಸ್ಟೋರೇಜ್ ಅನ್ನು ಕೀ ಇಲ್ಲದೆ ತೆರೆಯುವ ಆಯ್ಕೆ, ಡಿಜಿ ಲಾಕರ್, ನ್ಯಾವಿಗೇಷನ್, ಯುಐ ಕಸ್ಟಮೈಜೇಷನ್ ಇತ್ಯಾದಿ ಹಲವು ಫೀಚರ್‌ಗಳಿವೆ. ಇದರಲ್ಲಿ ಪಾರ್ಟಿ ಮೋಡ್ ಆಯ್ಕೆಯೂ ಇದ್ದು, ಸ್ಪೀಕರ್ ಕೂಡ ಇದೆ. ಕ್ರೂಷ್ ಕಂಟ್ರೋಲ್ ಮತ್ತು ರಿವರ್ಸ್ ಮೋಡ್ ಆಯ್ಕೆಯೂ ಇದೆ.
ಚಾರ್ಜಿಂಗ್ ವಿಷ್ಯ
ಓಲಾ ಎಸ್1 ಏರ್ ಸ್ಕೂಟರ್‌ನಲ್ಲಿ ಫಾಸ್ಟ್ ಚಾರ್ಜಿಂಗ್ ಆಯ್ಕೆ ಇಲ್ಲ. ಕೇವಲ 5 ಗಂಟೆಗಳಲ್ಲಿ ಶೇಕಡ 0-100ರಷ್ಟು ಪೂರ್ತಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಲಿಸಿದೆ. ಇದೇ ಕಾರಣದಿಂದ ಓಲಾ ಎಸ್1 ಏರ್ ಗ್ರಾಹಕರಿಗೆ ಓಲಾದ 1000+ ಚಾರ್ಜಿಂಗ್ ಸ್ಟೇಷನ್‌ಗಳ ಲಾಭ ದೊರಕದು. ಎಲ್ಲಾದರೂ ಅನಿವಾರ್ಯವಾದರೆ ಕೆಲವು ನಿಮಿಷ ಚಾರ್ಜ್ ಮಾಡಿ ಮುಂದುವರೆಯಬಹುದು. ಒಂದು ಫುಲ್ ಚಾರ್ಜ್‌ಗೆ 2.98 ಕಿಲೋವ್ಯಾಟ್ ಬ್ಯಾಟರಿಯು 125 ಮೈಲೇಜ್ ನೀಡುತ್ತದೆ. ನಾರ್ಮಲ್ ಮೋಡ್‌ನಲ್ಲಿ ಪ್ರಯಾಣಿಸಿದರೆ ಮಾತ್ರ ಇಷ್ಟು ಮೈಲೇಜ್ ದೊರಕಬಹುದು. ಸ್ಪೋರ್ಟ್ ಮೋಡ್‌ನಲ್ಲಿ ಪ್ರಯಾಣಿಸಿದರೆ ಪೂರ್ತಿ ಚಾರ್ಜ್ 87 ಕಿಲೋಮೀಟರ್‌ಗೆ ಖಾಲಿಯಾಗಬಹುದು.
ಓಲಾ ಎಸ್1 ಏರ್ ಅಂತಿಮ ತೀರ್ಪು
ಈ ವಿಮರ್ಶೆಯ ಅಂತ್ಯದಲ್ಲಿ ಅಂತಿಮ ತೀರ್ಪು ನೀಡೋದು ನಮ್ಮ ಅಭ್ಯಾಸ. ಕಡಿಮೆ ದರಕ್ಕೆ ದೊರಕುವ ಕಾರಣ ಅದಕ್ಕೆ ತಕ್ಕಂತೆ ಇದೆ ಎನ್ನಬಹುದು. ಆದರೆ, ಹೆಚ್ಚು ಫೀಚರ್ ಇರುವುದು ಪ್ಲಸ್ ಪಾಯಿಂಟ್. ಈ ದರಕ್ಕೆ ಇಷ್ಟೊಂದು ಫೀಚರ್‌ಗಳು ದೊರಕುತ್ತದೆ. ಕೆಲವೊಂದು ಕಡೆ ಗುಣಮಟ್ಟದ ವಿಷಯದಲ್ಲಿ ರಾಜಿಯಾದಂತೆ ಕಾಣಿಸುತ್ತದೆ. ಇದರೊಂದಿಗೆ ಪರ್ಫಾಮೆನ್ಸ್ ಇನ್ನಷ್ಟು ಉತ್ತಮವಾಗಿರಬೇಕಿತ್ತು. ಫಾಸ್ಟ್ ಚಾರ್ಜಿಂಗ್ ಆಯ್ಕೆ ಬೇಕಿತ್ತು. ಫಿನಿಶಿಂಗ್ ಇನ್ನಷ್ಟು ಪ್ರೀಮಿಯಂ ಆಗಿರಬೇಕಿತ್ತು ಎನ್ನುವುದು ನಮ್ಮ ಅಭಿಪ್ರಾಯ. ಪ್ರತಿನಿತ್ಯದ ಅಗತ್ಯಗಳಿಗೆ ಈ ಸ್ಕೂಟರ್ ಸೂಕ್ತ. ಆದರೆ, ಹೆಚ್ಚು ವೇಗ ಬಯಸುವವರಿಗೆ ಇದು ಇಷ್ಟವಾಗದು. ನಗರದೊಳಗೆ ದಿನನಿತ್ಯದ ಅಗತ್ಯಗಳಿಗೆ ಇದು ಸಾಕಾಗಬಹುದು.