ಎನ್‌ಪಿಎಸ್ ವಾತ್ಸಲ್ಯ: ವರ್ಷಕ್ಕೆ ರೂ 10 ಸಾವಿರ ಹಾಕಿದ್ರೆ ನಿಮ್ಮ ಕಂದಮ್ಮನಿಗೆ ವಯಸ್ಸಾಗೋ ಹೊತ್ತಿಗೆ ಸಿಗುತ್ತೆ 11 ಕೋಟಿ, ಹೌದು 11 ಕೋಟಿ
ಎನ್‌ಪಿಎಸ್ ವಾತ್ಸಲ್ಯ ಯೋಜನೆ ಜಾರಿಯಾಗಿದೆ. ಇದರಲ್ಲಿ, ವರ್ಷಕ್ಕೆ ರೂ 10 ಸಾವಿರ ಹಾಕಿದ್ರೆ ನಿಮ್ಮ ಕಂದಮ್ಮನಿಗೆ ವಯಸ್ಸಾಗೋ ಹೊತ್ತಿಗೆ 11 ಕೋಟಿ ಸಿಗುತ್ತೆ. ಹೌದು 11 ಕೋಟಿ ರೂಪಾಯಿ ಸಿಗುತ್ತೆ. ಆ ಲೆಕ್ಕಾಚಾರ ಏನು ಎಂಬುದನ್ನು ಅರ್ಥಮಾಡಿಕೊಳ್ಳೋಣ.
ಮೋದಿ 3.0 ಆಡಳಿತದ ಪ್ರಮುಖ ಯೋಜನೆ ಎನ್‌ಪಿಎಸ್ ವಾತ್ಸಲ್ಯ. ಇದರಲ್ಲಿ ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳ ಆರ್ಥಿಕ ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದು. ಇದು ನಿಯತ ರಾಷ್ಟ್ರೀಯ ಪಿಂಚಣಿ ಯೋಜನೆಯ ವಿಸ್ತರಣೆಯಾಗಿದೆ. ಇದು 18 ಮತ್ತು 70 ವರ್ಷದ ನಡುವಿನ ಎಲ್ಲಾ ಭಾರತೀಯ ನಾಗರಿಕರಿಗೆ ಉಳಿತಾಯ ಮತ್ತು ನಿವೃತ್ತಿ ಯೋಜನೆ.
ಎನ್‌ಪಿಎಸ್‌ನಂತೆಯೇ, ಎನ್‌ಪಿಎಸ್ ವಾತ್ಸಲ್ಯವನ್ನು ಸಹ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ನಿರ್ವಹಿಸುತ್ತದೆ. ಮಕ್ಕಳಗಾಗಿ ವಿನ್ಯಾಸಗೊಳಿಸಲಾದ ಈ ಯೋಜನೆಯು ತಮ್ಮ ಮಗುವಿಗೆ 18 ವರ್ಷ ತುಂಬಿದಾಗ ಯೋಜನೆಯಿಂದ ನಿರ್ಗಮಿಸಲು ಪೋಷಕರಿಗೆ ಆಯ್ಕೆಯನ್ನು ನೀಡುತ್ತದೆ. ಮೆಚ್ಯೂರಿಟಿ ಮೊತ್ತದ ಕನಿಷ್ಠ 80 ಪ್ರತಿಶತದಷ್ಟು ವರ್ಷಾಶನ ಯೋಜನೆಗೆ ಮರು ಹೂಡಿಕೆ ಮಾಡಬೇಕಾಗುತ್ತದೆ. ಕೇವಲ 20 ಶೇಕಡ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ.
ಎನ್‌ಪಿಎಸ್f ವಾತ್ಸಲ್ಯ ಯೋಜನೆಯು ನಂತರದ ಹಂತದಲ್ಲಿ ಪೋಷಕರಿಗೆ ಸೂಕ್ತ ರೀತಿಯಲ್ಲಿ ನೆರವಿಗೆ ಬರಬಹುದು. ಮೆಚ್ಯೂರಿಟಿ ಮೊತ್ತ ಕೈ ಸೇರಿದಾಗ ವ್ಯಾಪಾರವನ್ನು ಪ್ರಾರಂಭಿಸುವುದು ಅಥವಾ ಅವರ ಮಗುವಿಗೆ ಇತರ ಅಗತ್ಯ ಜೀವನದ ಮೈಲಿಗಲ್ಲುಗಳಿಗೆ ಈ ಮೊತ್ತ ನೆರವಾಗಬಹುದು.
ಎನ್‌ಪಿಎಸ್ ವಾತ್ಸಲ್ಯ; ಕನಿಷ್ಠ ಮತ್ತು ಗರಿಷ್ಠ ಹೂಡಿಕೆ
ಎನ್‌ಪಿಎಸ್ ವಾತ್ಸಲ್ಯ ಪೋಷಕರು ಅಥವಾ ಪೋಷಕರಿಗೆ ವರ್ಷಕ್ಕೆ 1,000 ರೂಪಾಯಿಯಷ್ಟು ಕಡಿಮೆ ಹೂಡಿಕೆ ಮಾಡುವ ಆಯ್ಕೆಯನ್ನು ನೀಡುತ್ತದೆ. ಅವರು ಎಷ್ಟು ಹೂಡಿಕೆ ಮಾಡಬಹುದು ಎಂಬುದರ ಮೇಲೆ ಯಾವುದೇ ಹೆಚ್ಚಿನ ಮಿತಿಯಿಲ್ಲ. ಆದ್ದರಿಂದ ಪೋಷಕರು ಯಾವಾಗಲೂ ಕಡಿಮೆ ಮೊತ್ತದೊಂದಿಗೆ ಹೂಡಿಕೆ ಪ್ರಾರಂಭಿಸುವುದಕ್ಕೆ ತಕ್ಕಂತೆ ಈ ಯೋಜನೆ ಇದೆ. ಮಗು ಬೆಳೆದಂತೆ ಮೊತ್ತವನ್ನು ಹೆಚ್ಚಿಸಲಾಗುತ್ತದೆ.
ಎನ್‌ಪಿಎಸ್ ವಾತ್ಸಲ್ಯ ಖಾತೆ ತೆರೆಯಲು ಭಾರತದ ಪ್ರಜೆಯಾಗಿರಬೇಕು. ಮಗು 18 ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿರಬೇಕು. ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಅವಶ್ಯಕತೆಗಳನ್ನು ಅನುಸರಿಸುವುದು ಸಹ ಅತ್ಯಗತ್ಯ.
ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ, ಪೋಷಕರು ಮಗುವಿನ ಹೆಸರಿನಲ್ಲಿ ವಾರ್ಷಿಕ ಕನಿಷ್ಠ 1000 ರೂ ಹೂಡಿಕೆ ಮಾಡಬಹುದು. ಇದರಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಇದಕ್ಕೆ ಯಾವುದೇ ವಾರ್ಷಿಕ ಆದಾಯ ಮಿತಿ ಇಲ್ಲ. ದೀರ್ಘಾವಧಿಯ ಹೂಡಿಕೆಯಾದ ಕಾರಣ ಚಕ್ರಬಡ್ಡಿ ಈ ಹಣವನ್ನು ದೊಡ್ಡಮೊತ್ತವನ್ನಾಗಿಸುತ್ತದೆ. ಮಗುವಿಗೆ 18 ವರ್ಷ ತುಂಬಿದಾಗ ಎನ್‌ಪಿಎಸ್ ವಾತ್ಸಲ್ಯ ಯೋಜನೆಯನ್ನು ಎನ್‌ಪಿಎಸ್‌ಯೇತರ ಯೋಜನೆಯನ್ನಾಗಿ ಪರಿವರ್ತಿಸಬಹುದು.
ಎನ್‌ಪಿಎಸ್ ವಾತ್ಸಲ್ಯ; ವರ್ಷಕ್ಕೆ ರೂ 10 ಸಾವಿರ ಹಾಕಿದ್ರೆ 11 ಕೋಟಿ ಸಿಗುವ ಲೆಕ್ಕಾಚಾರ
ಎನ್‌ಪಿಎಸ್ ವಾತ್ಸಲ್ಯದಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಮಗುವಿಗೆ 18 ವರ್ಷ ತುಂಬುವ ವೇಳೆಗೆ ಈ ಯೋಜನೆ ಮೂಲಕ ದೊಡ್ಡ ಮೊತ್ತದ ನಿಧಿ ನಿರ್ಮಿಸುವುದು ಹೇಗೆ ಎಂಬುದನ್ನು ತಿಳಿಯೋಣ. ಅದಕ್ಕಾಗಿ ಈ ಲೆಕ್ಕಾಚಾರ.
ಉದಾಹರಣೆಗೆ ಪಾಲಕರೊಬ್ಬರು ತಿಂಗಳಿಗೆ 1,000 ರೂಪಾಯಿ ಎನ್‌ಪಿಎಸ್ ವಾತ್ಸಲ್ಯ ಖಾತೆಗೆ ಜಮೆ ಮಾಡುತ್ತ ಸಾಗುತ್ತಾರೆ.
ಯೋಜನೆ ಅವಧಿ - 18 ವರ್ಷ, ವಾರ್ಷಿಕ ರಿಟರ್ನ್ಸ್ ಶೇಕಡ 12.86, ಒಟ್ಟು ಮೊತ್ತ ಹೂಡಿಕೆಯಾಗಿರುವುದು 2,16,000 (ತಿಂಗಳಿಗೆ 1,000 ರೂX 12 ತಿಂಗಳುX18 ವರ್ಷ). ಇದಕ್ಕೆ ಬರಬಹುದಾದ ಬಡ್ಡಿ ಮೊತ್ತ 6,32,718 ರೂಪಾಯಿ. ಒಟ್ಟು ನಿಧಿ 8.48,000 ರೂಪಾಯಿ.
ವಾರ್ಷಿಕ ರಿಟರ್ನ್ಸ್ ಅನ್ನು ಶೇ 12.86 ಅನ್ನು ಎನ್‌ಪಿಎಸ್ ಶುರುವಾದ ಅಂದಿನಿಂದ ಈವರೆಗಿನ ಐತಿಹಾಸಿಕ ಸರಾಸರಿ ಎಂಬ ಕಾರಣಕ್ಕೆ ಇಲ್ಲಿ ಲೆಕ್ಕಾಚಾರಕ್ಕೆ ಬಳಸಲಾಗಿದೆ. 2024ರ ಜುಲೈ 19ರ ದತ್ತಾಂಶ ಪ್ರಕಾರ ಎನ್‌ಪಿಎಸ್ ಹೂಡಿಕೆ ಪೋರ್ಟ್‌ಫೋಲಿಯೋ ಶೇಕಡ 75 ಷೇರುಗಳಲ್ಲಿ ಶೇಕಡ 25 ಸರ್ಕಾರಿ ಸೆಕ್ಯೂರಿಟಿಗಳಲ್ಲಿದೆ.
ಎನ್‌ಪಿಎಸ್ ವಾತ್ಸಲ್ಯ ನಿಯಮ ಪ್ರಕಾರ ಮೆಚ್ಯೂರಿಟಿ ಮೊತ್ತದ ಶೇಕಡ 80 (6,78,400 ರೂಪಾಯಿ) ಕಡ್ಡಾಯವಾಗಿ ವರ್ಷಾಶನ ಯೋಜನೆಗೆ ಹೋಗಬೇಕು. ಇನ್ನು ಶೇಕಡ 20 (1,69,600 ರೂಪಾಯಿ) ಇಡಿಯಾಗಿ ವಾಪಸ್ ಪಡೆಯಬಹುದು.
ಈಗ ಎಸ್‌ಬಿಐ ಪೆನ್ಶನ್ ಫಂಡ್ಸ್ ವೆಬ್‌ಸೈಟ್ ಮಾಹಿತಿ ಪ್ರಕಾರ, ವರ್ಷಕ್ಕೆ 10,000 ರೂಪಾಯಿಯಂತೆ 18 ವರ್ಷ ಜಮೆ ಮಾಡುವುದರಿಂದ ಬೇರೆ ಬೇರೆ ಬಡ್ಡಿದರದಲ್ಲಿ ಯಾವ ರೀತಿ ರಿಟರ್ನ್ಸ್ ಕೊಡಬಲ್ಲದು ಎಂಬುದರ ಕಡೆಗೆ ಗಮನಹರಿಸೋಣ.
18 ವರ್ಷದ ಹಂತದಲ್ಲಿ ವೈವಿಧ್ಯಮಯ ಬಡ್ಡಿದರ ಶೇಕಡ 10 ಎಂದಿಟ್ಟುಕೊಂಡರೆ ಒಟ್ಟು ನಿಧಿ ಅಂದಾಜು 5 ಲಕ್ಷ ರೂಪಾಯಿ.
ಅದುವೇ 60 ವರ್ಷದ ಹಂತದಲ್ಲಿ ಅದೇ ಹೂಡಿಕೆಯನ್ನು ನಿವೃತ್ತಿ ತನಕ ಮುಂದುವರಿಸಿದರೆ ನಿಧಿಯ ಮೊತ್ತ 2.75 ಕೋಟಿ ರೂಪಾಯಿ. ಬಡ್ಡಿದರ ಶೇಕಡ 10 ಎಂದಿಟ್ಟುಕೊಳ್ಳಿ. ಹಾಗೆಯೇ ಶೇಕಡ 11.59ರ ಬಡ್ಡಿದರದಲ್ಲಿ ಒಟ್ಟು ಮೊತ್ತ 5.97 ಕೋಟಿ ರೂಪಾಯಿ. ಇದರಲ್ಲಿ ಶೇಕಡ 50 ಷೇರು, ಶೇಕಡ 30 ಕಾರ್ಪೊರೇಟ್ ಸಾಲಪತ್ರ, ಶೇಕಡ 20 ಗೌರ್ನಮೆಂಟ್ ಸೆಕ್ಯುರಿಟೀಸ್ ಇರುವುದನ್ನು ಪರಿಗಣಿಸಲಾಗಿದೆ.
ಇನ್ನು ಶೇಕಡ 12.86 ಬಡ್ಡಿದರದಲ್ಲಿ 10,000 ರೂಪಾಯಿ ವಾರ್ಷಿಕ ಹೂಡಿಕೆ ಮಾಡುತ್ತ ಸಾಗಿದರೆ ಅದು ಶೇಕಡ 75 ಷೇರು ಮತ್ತು ಶೇಕಡ 25 ಗೌರ್ನಮೆಂಟ್ ಸೆಕ್ಯುರಿಟೀಸ್ ಹೂಡಿಕೆ ಮೇಲೆ 11.05 ಕೋಟಿ ರೂಪಾಯಿ ತನಕ ಬೆಳೆಯಬಲ್ಲದು.
ಗಮನಿಸಿ: ಇಲ್ಲಿ ಕೊಟ್ಟಿರುವ ಲೆಕ್ಕಾಚಾರ ಮಾಹಿತಿಗೋಸ್ಕರ ಮತ್ತು ಹೂಡಿಕೆಯಿಂದ ಯಾವ ರೀತಿ ಪ್ರಯೋಜನ ಎಂಬುದನ್ನು ವಿವರಿಸುವುದಕ್ಕಾಗಿ ನೀಡಲಾಗಿದೆ. ಐತಿಹಾಸಿಕ ದತ್ತಾಂಶ ಮತ್ತು ಅಂದಾಜುಗಳನ್ನು ಇಟ್ಟುಕೊಂಡು ಈ ಲೆಕ್ಕಾಚಾರ ಮಾಡಲಾಗಿದೆ. ವಾಸ್ತವ ರಿಟರ್ನ್ಸ್ ವ್ಯತ್ಯಾಸವಾಗಬಹುದು.