ತಿಂಗಳಿಗೆ 4600 ರೂಪಾಯಿ ಉಳಿಸಿದ್ರೆ ಮಗಳ 21 ವರ್ಷಕ್ಕೆ 25 ಲಕ್ಷ ಸಿಗುವಂತೆ ಮಾಡೋ ಸೂಪರ್ ಸ್ಕೀಮ್ ಇದು; ಸುಕನ್ಯಾ ಸಮೃದ್ಧಿ ಲೆಕ್ಕಾಚಾರ
ಹನಿಗೂಡಿದರೆ ಹಳ್ಳ ಎನ್ನುವಂತೆ ಸಣ್ಣ ಮೊತ್ತ ಹೂಡಿಕೆ ಮಾಡುತ್ತ ದೊಡ್ಡ ಮೊತ್ತದ ಹಣ ಬೆಳೆಸುವುದು ಸಾಧ್ಯವಿದೆ. ಅದಕ್ಕಾಗಿ ಸುಕನ್ಯಾ ಸಮೃದ್ಧಿ ಲೆಕ್ಕಾಚಾರ ಗಮನಿಸೋಣ. ತಿಂಗಳಿಗೆ 4600 ರೂಪಾಯಿ ದಿನಕ್ಕೆ ಅಂದಾಜು 154 ರೂಪಾಯಿ ಉಳಿಸಿದ್ರೆ ಮಗಳ 21 ವರ್ಷಕ್ಕೆ 25 ಲಕ್ಷ ಸಿಗುವಂತೆ ಮಾಡೋ ಸೂಪರ್ ಸ್ಕೀಮ್ ಇದು. ಹೇಗೆ ಎಂಬುದನ್ನು ತಿಳ್ಕೊಳ್ಳೋದಕ್ಕೆ ಈ ಬರೆಹ ಗಮನಿಸಿ.
ಮಗಳ ಭವಿಷ್ಯದ ಬಗ್ಗೆ ಯಾರು ಆಲೋಚಿಸೋದಿಲ್ಲ ಹೇಳಿ. ಪ್ರತಿಯೊಬ್ಬ ಅಪ್ಪ, ಅಮ್ಮನೂ ಮಗಳ ಬದುಕು ಎಲ್ಲ ರೀತಿಯಲ್ಲೂ ಸುಭದ್ರವಾಗಿರಬೇಕು ಎಂದು ಬಯಸುತ್ತಾರೆ. ಉತ್ತಮ ಶಿಕ್ಷಣ ಸಿಗಬೇಕು, ಔದ್ಯೋಗಿಕವಾಗಿ, ವ್ಯಾವಹಾರಿಕವಾಗಿ ಉತ್ತಮ ಬುನಾದಿ ಸಿಗಬೇಕು ಎಂದು ಬಯಸುತ್ತಲೇ ಆರ್ಥಿಕ ಭದ್ರತೆ ಒದಗಿಸುವ ಕಡೆಗೂ ಗಮನಹರಿಸುತ್ತಾರೆ. ಇದಕ್ಕೆ ಸಮಯೋಚಿತವಾಗಿ ಹೂಡಿಕೆ ಮಾಡಬೇಕಾದ್ದು ಕೂಡ ಅಗತ್ಯ.
ಒಂದು ಲೆಕ್ಕಾಚಾರ ಪ್ರಕಾರ ಮಗಳಿಗೆ 21 ವರ್ಷ ತುಂಬುವ ಹೊತ್ತಿಗೆ 25 ಲಕ್ಷ ರೂಪಾಯಿ ಕೈಗೆ ಬರಬೇಕು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ ಅಥವಾ ವರ್ಷಕ್ಕೆ ಎಷ್ಟು ಹಣ ಹೂಡಿಕೆ ಮಾಡಿದರೆ ಒಳ್ಳೆಯದು? ಹೀಗೊಮ್ಮೆ ಲೆಕ್ಕ ಹಾಕಿ ನೋಡಿ. ಅದಕ್ಕೂ ಮೊದಲು ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದ್ದು ಅಗತ್ಯ.
ಹೆಣ್ಣು ಮಕ್ಕಳ ಆರ್ಥಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಯನ್ನು ಜಾರಿಗೊಳಿಸಿದೆ. 10 ವರ್ಷದೊಳಗಿನ ಮಗಳ ಹೆಸರಿನಲ್ಲಿ ಈ ಯೋಜನೆಯ ಖಾತೆಯನ್ನು ನೀವು ತೆರೆಯಬಹುದು. ಇದು ಅತ್ಯಂತ ಸುರಕ್ಷಿತ ಹೂಡಿಕೆ ಮತ್ತು ತೆರಿಗೆ ಮುಕ್ತ ಯೋಜನೆ ಎಂಬುದನ್ನು ಗಮನಿಸಿ.
ಸುಕನ್ಯಾ ಸಮೃದ್ಧಿ ಮೆಚುರಿಟಿ ಮೊತ್ತ 25 ಲಕ್ಷ ರೂ ಬೇಕಾದರೆ ತಿಂಗಳಿಗೆ ಎಷ್ಟು ಹಣ ಕಟ್ಟಬೇಕು
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮೆಚುರಿಟಿ ಅವಧಿ 21 ವರ್ಷ. ನೀವು ಈ ಖಾತೆಯಲ್ಲಿ 15 ವರ್ಷ ಹೂಡಿಕೆ ಮಾಡಬೇಕು. ಅದಾಗಿ 6 ವರ್ಷ ಆ ಹಣವನ್ನು ಅಲ್ಲಿಯೇ ಬಿಡಬೇಕು. ಈ ಅವಧಿಯಲ್ಲಿ ನಿರಂತರ ಬಡ್ಡಿ ಅದಕ್ಕೆ ಜಮೆಯಾಗುತ್ತಿರುತ್ತದೆ. ನಂತರ ಅದು ಮೆಚುರಿಟಿ ಆಗಿ ಕೈ ಸೇರುತ್ತದೆ. ಈ ಯೋಜನೆಯಡಿ ಇಬ್ಬರು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಖಾತೆ ತೆರೆಯಬಹುದು. ಅವಳಿಗಳಿದ್ದರೆ ಅಂತಹ ಸಂದರ್ಭದಲ್ಲಿ, 2 ಕ್ಕಿಂತ ಹೆಚ್ಚು ಖಾತೆ ತೆರೆಯಲು ಅವಕಾಶವಿದೆ.
ಉದಾಹರಣೆಗೆ ನೀವು ಈ ವರ್ಷ (2024) ಸುಕನ್ಯಾ ಸಮೃದ್ಧಿ ಖಾತೆ ಶುರುಮಾಡಿದರೆ, ಅದು 2045 ರಲ್ಲಿ ಪಕ್ವವಾಗುತ್ತದೆ. ಮಗಳು ನವಜಾತ ಶಿಶುವಾಗಿದ್ದರೆ, ಆ ಮಗುವಿಗೆ 21 ವರ್ಷ ಪೂರ್ಣವಾದಾಗ ಈ ಮೊತ್ತ ಪಕ್ವವಾಗಿ ಕೈ ಸೇರುತ್ತದೆ. ಒಂದೊಮ್ಮೆ ಮಗಳಿಗೆ 4 ವರ್ಷ ಎಂದಾದರೆ
ಅವರು 21 ವರ್ಷಗಳಲ್ಲಿ ಪೂರ್ಣ ಮೊತ್ತವನ್ನು ಪಡೆಯಬಹುದು, ಆದರೆ ಮಗಳು 4 ವರ್ಷ ವಯಸ್ಸಿನವರಾಗಿದ್ದರೆ, ಆಕೆಗೆ 25 ವರ್ಷ ತುಂಬುವಾಗ ಈ ಮೊತ್ತ ಪಡೆಯಬಹುದು.
ಸುಕನ್ಯಾ ಸಮೃದ್ಧಿ ಖಾತೆ ತೆರೆಯುವ ವರ್ಷ- 2024. ಪ್ರಸ್ತುತ ಬಡ್ಡಿದರ ಶೇಕಡ 8.2. ವಾರ್ಷಿಕ ಹೂಡಿಕೆ- 55,000 ರೂಪಾಯಿ (ಅಂದಾಜು 4600 ರೂಪಾಯಿ, ದಿನಕ್ಕೆ 150 ರೂಪಾಯಿ). 15 ವರ್ಷದಲ್ಲಿ ಒಟ್ಟು ಹೂಡಿಕೆ 8,25,000 ರೂಪಾಯಿ. 21 ವರ್ಷ ಮುಕ್ತಾಯದ ಹೊತ್ತಿಗೆ ಒಟ್ಟು ಮೌಲ್ಯ 25,40,112 ರೂಪಾಯಿ. ಅಂದರೆ ಹೂಡಿಕೆ ಮೇಲೆ 17,15,112 ರೂಪಾಯಿ ಬಡ್ಡಿ ಬಂದಂತೆ ಆಯಿತು.
ಅದುವೇ ನೀವು ಗರಿಷ್ಠ ವಾರ್ಷಿಕ ಹೂಡಿಕೆ 1.5 ಲಕ್ಷ ರೂಪಾಯಿ (ತಿಂಗಳ ಲೆಕ್ಕಾಚಾರದಲ್ಲಿ 12,500 ರೂಪಾಯಿ) ಮಾಡಿದರೆ, 15 ವರ್ಷಕ್ಕೆ 22.50 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಶೇಕಡ 8.2 ಬಡ್ಡಿದರದಲ್ಲಿ 21 ವರ್ಷದ ನಂತರ ಕೈ ಸೇರುವ ಮೊತ್ತ 69,27,578 ರೂಪಾಯಿ. ಇಲ್ಲಿ ಹೂಡಿಕೆಗೆ ಸಿಕ್ಕ ಲಾಭ 46,77,578 ರೂಪಾಯಿ.
ಅತಿ ಹೆಚ್ಚು ಬಡ್ಡಿ ನೀಡುವ ಸಣ್ಣ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿ
ಸುಕನ್ಯಾ ಸಮೃದ್ಧಿ ಯೋಜನೆಯು ಅಂಚೆ ಕಚೇರಿಯಲ್ಲಿ ಅತ್ಯಧಿಕ ಬಡ್ಡಿ ಪಾವತಿಸುವ ಸಣ್ಣ ಉಳಿತಾಯ ಯೋಜನೆಯಾಗಿದೆ. ಪ್ರಸ್ತುತ ಈ ಯೋಜನೆಗೆ ವಾರ್ಷಿಕ 8.2 ರಷ್ಟು ಬಡ್ಡಿ ಸಿಗುತ್ತಿದೆ.
ಸುಕನ್ಯಾ ಸಮೃದ್ಧಿ ಯೋಜನೆಯು ಹೆಚ್ಚಿನ ಬಡ್ಡಿಯನ್ನು ನೀಡುವುದು ಮಾತ್ರವಲ್ಲದೆ, ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯಾದ ಕಾರಣ 100% ಸುರಕ್ಷಿತ. ಇದು ದೀರ್ಘಾವಧಿ ಯೋಜನೆಯಾಗಿರುವ ಕಾರಣ, ಸಣ್ಣ ಮೊತ್ತದ ಹೂಡಿಕೆಯೂ ದೊಡ್ಡ ನಿಧಿ ಸಂಗ್ರಹಕ್ಕೆ ಕಾರಣವಾಗುತ್ತದೆ.