2034ರ ಅಕ್ಟೋಬರ್‌ನಲ್ಲಿ 8.5 ಲಕ್ಷ ರೂ ಬೇಕು; ಅಂಚೆ ಕಚೇರಿ ಆರ್‌ಡಿನಲ್ಲಿ ತಿಂಗಳಿಗೆ 5000 ರೂ ಉಳಿಸಿದರೆ ಸಾಕಾಗುತ್ತ?
ಮಗನಿಗೋ/ ಮಗಳಿಗೋ ಗಿಫ್ಟ್ ಕೊಡುವ ಆಲೋಚನೆ ಇದೆ. ಇನ್ನು 10 ವರ್ಷ ಬಿಟ್ಟು ಅಂದರೆ 2034ರ ಅಕ್ಟೋಬರ್‌ನಲ್ಲಿ 8.5 ಲಕ್ಷ ರೂ ಬೇಕು. ಅಂಚೆ ಕಚೇರಿ ಆರ್‌ಡಿನಲ್ಲಿ ತಿಂಗಳಿಗೆ 5000 ರೂ ಉಳಿಸಿದರೆ ಸಾಕಾಗುತ್ತ. ಈಗ ಎಷ್ಟಿದೆ ಬಡ್ಡಿ? ಒಮ್ಮೆ ಲೆಕ್ಕಾಚಾರ ಹಾಕಿ ನೋಡೋಣ ಅಲ್ವ.
ಹಣಕಾಸಿನ ಅಗತ್ಯಗಳು ಮುಗಿಯಲ್ಲ. ಮಕ್ಕಳು ಚಿಕ್ಕವರಾಗಿದ್ದರೆ, ಅವರಿಗೆ 10 ವರ್ಷ ಆದಾಗ ಒಂದೊಳ್ಳೆ ಸೈಕಲ್ ಅಥವಾ ಚಿನ್ನಾಭರಣ, ಬೆಸ್ಟ್ ಎಂದು ಹೇಳಿಕೊಳ್ಳಬಹುದಾದ ಕಂಪ್ಯೂಟರ್ ಹೀಗೆ ಏನೋ ಒಂದು ನೆನಪಿನಲ್ಲಿ ಉಳಿಯಬಲ್ಲ, ಉತ್ತಮ ರೀತಿಯಲ್ಲಿ ಕೆಲಸಕ್ಕೆ ಬರಬಲ್ಲ ಉಡುಗೊರೆ ಕೊಡಬೇಕು ಎಂಬ ಆಲೋಚನೆ ಇದ್ದರೆ ನೀವು ಈಗಾಗಲೇ ಉಳಿತಾಯಕ್ಕೆ ಶುರುಮಾಡಿರುತ್ತೀರಿ. ಇದು ಬಡ-ಮಧ್ಯಮ ವರ್ಗದವರ ಬದುಕಿನ ಸಹಜ ಆಲೋಚನೆ ಮತ್ತು ಕನಸು ನನಸುಮಾಡುವ ವಿಧಾನ. ಉಳಿತಾಯ ಅಂತ ಬಂದಾಗ ಬಹುತೇಕರು ಮುಖ ಮಾಡುವುದು ಅಂಚೆ ಕಚೇರಿಯ ಕಡೆಗೆ. ಈಗ 10 ವರ್ಷದ ನಂತರ ಕೈಯಲ್ಲಿ 8.5 ಲಕ್ಷ ರೂಪಾಯಿ ಬೇಕು. ತಿಂಗಳಿಗೆ 5000 ರೂಪಾಯಿ ಉಳಿಸಬಹುದು ಎನ್ನುವವರು ಅಂಚೆ ಕಚೇರಿಯ ಆರ್‌ಡಿ ಕಡೆಗೆ ಗಮನಹರಿಸುತ್ತಾರೆ. ಈ ಲೆಕ್ಕಾಚಾರವನ್ನೊಮ್ಮೆ ನೋಡೋಣ.
ಅಂಚೆ ಇಲಾಖೆಯ ಆರ್‌ಡಿ ಯೋಜನೆಯಲ್ಲಿ ಉಳಿತಾಯ
ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿರುವ ರಾಷ್ಟ್ರೀಯ ಉಳಿತಾಯ ಯೋಜನೆ ಇದು. ಅಂಚೆ ಇಲಾಖೆ ಇದನ್ನು ನಿರ್ವಹಿಸುತ್ತಿದ್ದು, ಇದು ಸಣ್ಣ ಉಳಿತಾಯ ಯೋಜನೆಯಾಗಿ ಪರಿಗಣಿಸಲ್ಪಟ್ಟಿದೆ. ಸದ್ಯ ಆರ್‌ಡಿ ಯೋಜನೆಗೆ ಶೇಕಡ 6.7ರ ಬಡ್ಡಿದರ ಇದೆ. ಈ ಆರ್‌ಡಿ ಯೋಜನೆಯು 5 ವರ್ಷಗಳ ಅವಧಿಯದ್ದು.
ಈ ಲೆಕ್ಕಾಚಾರ ಪ್ರಕಾರ ನೋಡುವುದಾದರೆ ತಿಂಗಳಿಗೆ 5,000 ರೂಪಾಯಿಯಂತೆ 5 ವರ್ಷ ಅಂದರೆ 60 ತಿಂಗಳು ಆರ್‌ಡಿ ಖಾತೆಗೆ ಜಮೆ ಮಾಡಿದರೆ 3 ಲಕ್ಷ ರೂಪಾಯಿ ಅಲ್ಲಿ ಉಳಿಯುತ್ತದೆ. ಇದಕ್ಕೆ ಬಡ್ಡಿಯಾಗಿ 56,830 ರೂಪಾಯಿ ಸೇರ್ಪಡೆಯಾಗಿತ್ತದೆ.
ವಿಶೇಷ ಎಂದರೆ ಈ ಆರ್‌ಡಿ ಯೋಜನೆಯನ್ನು ಇನ್ನೂ 5 ವರ್ಷ ವಿಸ್ತರಿಸಲು ಅವಕಾಶ ಇದೆ. ಇದಕ್ಕಾಗಿ ಖಾತೆದಾರರು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಲಿಖಿತ ಮನವಿ ಸಲ್ಲಿಸಿ ಅವಧಿ ವಿಸ್ತರಣೆ ಕೋರಬೇಕು. ಹೀಗೆ ಮಾಡಿದಾಗ ಆಗುವ ಲೆಕ್ಕಾಚಾರ ಗಮನಿಸೋಣ.
ಒಟ್ಟು 120 ತಿಂಗಳು ತಲಾ 5000 ರೂಪಾಯಿ ಜಮೆ ಮಾಡಲಾಗುತ್ತದೆ. ಇಲ್ಲಿ 6,000 ಲಕ್ಷ ರೂಪಾಯಿ ಉಳಿತಾಯವಾದರೆ ಬಡ್ಡಿ ರೂಪದಲ್ಲಿ 2,54,272 ರೂಪಾಯಿ ಜಮೆಯಾಗುತ್ತದೆ. ಖಾತೆಯಲ್ಲಿ ಒಟ್ಟು 8,54,272 ರೂಪಾಯಿ ಇರಲಿದೆ. ಅಲ್ಲಿಗೆ 8.5 ಲಕ್ಷ ರೂಪಾಯಿ ಒಟ್ಟುಗೂಡಿಸುವುದಕ್ಕೆ ಒಂದು ದಾರಿ ಕಂಡುಕೊಂಡ ಹಾಗಾಯಿತು.
ಈ ಉಳಿತಾಯದ ಲೆಕ್ಕವನ್ನು ಬೇರೆ ಬೇರೆ ಅಗತ್ಯಗಳಿಗೆ ಬಳಸಬಹುದು
ಅಂದ ಹಾಗೆ ಆರ್‌ಡಿ ಖಾತೆಯಲ್ಲಿರುವ ಹಣದ ಮೇಲೆ ತುರ್ತು ಸಂದರ್ಭಗಳಲ್ಲಿ ಸಾಲವನ್ನೂ ಪಡೆಯಬಹುದು. ಆರ್‌ಡಿ ಖಾತೆಯ ಬಡ್ಡಿದರಕ್ಕಿಂತ ಶೇಕಡ 2 ಹೆಚ್ಚು ಬಡ್ಡಿದರ ಇರುತ್ತದೆ. ಆರ್‌ಡಿ ಖಾತೆಯಲ್ಲಿರುವ ಒಟ್ಟು ಮೊತ್ತದ ಅರ್ಧದಷ್ಟು ಮಾತ್ರವೇ ಸಾಲ ಸಿಗುತ್ತದೆ.
ಅಂಚೆ ಇಲಾಖೆಯ ಆರ್‌ಡಿ ಖಾತೆ ತೆರೆದು ತಿಂಗಳಿಗೆ 100 ರೂಪಾಯಿ ರೀತಿ ಕೂಡ ಉಳಿಸಬಹುದು. ಈ ರೀತಿ ಉಳಿಸಿದರೆ 5 ವರ್ಷಕ್ಕೆ ಅಂದರೆ 6000 ರೂಪಾಯಿ ಉಳಿತಾಯ ಆಗುತ್ತದೆ. ಅದಕ್ಕೆ ಬಡ್ಡಿ ರೂಪದಲ್ಲಿ 1,137 ರೂಪಾಯಿ ಸೇರ್ಪಡೆಯಾಗಿ ಒಟ್ಟು 7,137 ರೂಪಾಯಿ ಆಗುತ್ತದೆ. 10 ವರ್ಷಕ್ಕೆ 12,000 ರೂಪಾಯಿ ಉಳಿತಾಯ. ಅದಕ್ಕೆ ಬಡ್ಡಿ 5,086 ರೂ. ಒಟ್ಟು 17,086 ರೂಪಾಯಿ ಒಟ್ಟುಗೂಡಿರುತ್ತದೆ. ಜನಸಾಮಾನ್ಯರೂ ಈ ರೀತಿ ಉಳಿತಾಯ ಮಾಡಿಕೊಂಡು ಮುಂದುವರಿಯಬಹುದು. ಹನಿಗೂಡಿದರೆ ಹಳ್ಳ ಅಂತಾರಲ್ಲ. ಅದು ಇದುವೇ.