ಹೂಡಿಕೆದಾರರು ಈಗ ಏನು ಮಾಡಬೇಕು, ಷೇರುಪೇಟೆಯಲ್ಲಿ ಕರಡಿ ಕುಣಿತ ನೋಡ್ತಾ ಕೂರೋದಾ ಅಥವಾ ದೀರ್ಘಾವಧಿಗೆ ಹೂಡಿಕೆ ಮಾಡೋದಾ
ಜಾಗತಿಕ ವಿದ್ಯಮಾನಗಳ ಕಾರಣ ಷೇರುಪೇಟೆಯಲ್ಲಿ ಕರಡಿ ಕುಣಿತ ತೀವ್ರಗೊಂಡಿದ್ದು, ರಕ್ತಪಾತವಾಗುತ್ತಿದೆ. ಹೂಡಿಕೆದಾರರು ಈಗ ಏನು ಮಾಡಬೇಕು, ಷೇರುಪೇಟೆಯಲ್ಲಿ ಕರಡಿ ಕುಣಿತ ನೋಡ್ತಾ ಕೂರೋದಾ ಅಥವಾ ದೀರ್ಘಾವಧಿಗೆ ಹೂಡಿಕೆ ಮಾಡುವುದಾ, ಪರಿಣತರು ಏನು ಹೇಳ್ತಾರೆ, ಷೇರುಪೇಟೆ ಪರಿಸ್ಥಿತಿ ಹೇಗಿದೆ ನೋಡೋಣ.
ಮುಂಬಯಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸೆಬಿಯ ಹೊಸ ನಿಯಮಗಳ ಪರಿಣಾಮ ಗುರುವಾರ ದೇಶೀಯ ಷೇರು ಮಾರುಕಟ್ಟೆಗಳ ಮೇಲೆ ಉಂಟಾಯಿತು. ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಷೇರುಗಳ ಮಾರಾಟಕ್ಕೆ ಇಳಿದ ಕಾರಣ ಷೇರುಪೇಟೆಯ ಎರಡೂ ಸೂಚ್ಯಂಕಗಳು ಅಂದರೆ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡ 2ಕ್ಕಿಂತ ಹೆಚ್ಚು ಕುಸಿದವು. ಸೆನ್ಸೆಕ್ಸ್ 1,769 ಅಂಕ ಹಾಗೂ ನಿಫ್ಟಿ 547 ಅಂಕ ಕುಸಿದಿದೆ. ಇದರಿಂದಾಗಿ ಹೂಡಿಕೆದಾರರು 9.78 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದರು. ಆಗಸ್ಟ್ 5ರ ಕುಸಿತದ ನಂತರದ ದೊಡ್ಡ ಪ್ರಮಾಣದ ಕುಸಿತ ಇದಾಗಿತ್ತು. ಆಗಸ್ಟ್ 5ರಂದು ಸೆನ್ಸೆಕ್ಸ್ 2,222 ಅಂಕಗಳು ಮತ್ತು ನಿಫ್ಟಿ 662 ಅಂಕಗಳು ಕುಸಿದವು. ಅದೇ ಸಮಯದಲ್ಲಿ, ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ, ಸೆನ್ಸೆಕ್ಸ್ ಎರಡು ಬಾರಿ ಸಾವಿರಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ. ಹೂಡಿಕೆದಾರರು ಈಗ ಏನು ಮಾಡಬೇಕು? ಇದು ಹೂಡಿಕೆ ಮಾಡುವುದಕ್ಕೆ ಅವಕಾಶವೇ ಅಥವಾ ಕಾದು ನೋಡಬೇಕಾದ ಸಮಯವೇ?. ಯಾವುದಕ್ಕೂ ಷೇರುಪೇಟೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳೋಣ.
ಭಾರತದ ಷೇರುಪೇಟೆಯಲ್ಲಿ ನಡೆಯುತ್ತಿರುವುದೇನು
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಎ)ನ 30 ಸೆನ್ಸೆಕ್ಸ್ ಕಂಪನಿಗಳ ಪೈಕಿ ಒಂದು ಕಂಪನಿ ಮಾತ್ರ ಗುರುವಾರದ ವಹಿವಾಟಿನಲ್ಲಿ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್ಇ)ನ 50 ನಿಫ್ಟಿ ಕಂಪನಿಗಳ ಪೈಕಿ 48 ಕಂಪನಿಗಳು ನಷ್ಟದಲ್ಲಿ ವಹಿವಾಟು ನಡೆಸಿದ್ದವು. ಎರಡೂ ಬೆಂಚ್‌ಮಾರ್ಕ್ ಸೂಚ್ಯಂಕಗಳು ಸೆಪ್ಟೆಂಬರ್ 27 ರ ಮಟ್ಟದಿಂದ ಸುಮಾರು ನಾಲ್ಕು ಶೇಕಡಾ ಇಳಿಕೆಯಾಗಿವೆ. ಸೆನ್ಸೆಕ್ಸ್ 82,497.10 ಪಾಯಿಂಟ್‌ಗಳಿಗೆ ಕುಸಿಯಿತು. ಇದು ನಾಲ್ಕು ವಾರಗಳ ಕನಿಷ್ಠ ಮಟ್ಟ. ಸೆನ್ಸೆಕ್ಸ್ 82,352.64 ಅಂಶಗಳಲ್ಲಿತ್ತು. ನಿಫ್ಟಿ 25,250 ಅಂಕಗಳಿಗೆ ತಲುಪಿದೆ.
ಜೂನ್‌ನಿಂದ ಸತತ ನಾಲ್ಕು ತಿಂಗಳ ಲಾಭದ ನಂತರ ಅಕ್ಟೋಬರ್‌ನಲ್ಲಿ ಸೂಚ್ಯಂಕವು ಶೇಕಡ ಎರಡರಷ್ಟು ಕುಸಿದಿದೆ. ಮಿಡ್‌ಕ್ಯಾಪ್ ಶೇಕಡ 2.27 ರಷ್ಟು ಕುಸಿದು 48,362.53 ಪಾಯಿಂಟ್‌ಗಳಿಗೆ ಮತ್ತು ಸ್ಮಾಲ್‌ಕ್ಯಾಪ್ ಶೇಕಡ 1.84 ರಷ್ಟು ಕುಸಿದು 56,396.36 ಪಾಯಿಂಟ್‌ಗಳಿಗೆ ತಲುಪಿದೆ. ಇನ್ನು ವಲಯವಾರು ಗಮನಿಸುವುದಾದರೆ, ರಿಯಾಲ್ಟಿ ಶೇ 4.49, ಕ್ಯಾಪಿಟಲ್ ಗೂಡ್ಸ್ ಶೇ 3.18, ಆಟೋ ಶೇ 2.94, ಇಂಡಸ್ಟ್ರಿಯಲ್ಸ್ ಶೇ 2.75, ಸೀಡ್ ಶೇ 2.50, ಎನರ್ಜಿ ಶೇ 2.47, ಬ್ಯಾಂಕಿಂಗ್ ಶೇ 2.23, ಹಣಕಾಸು ಸೇವೆಗಳು ಶೇ 2.31 ಕುಸಿತ ಕಂಡವು.
300ಕ್ಕೂ ಹೆಚ್ಚು ಷೇರುಗಳಲ್ಲಿ ಲೋವರ್ ಸರ್ಕ್ಯೂಟ್; ಹೂಡಿಕೆದಾರರು ಏನು ಮಾಡಬೇಕು
ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ 4,076 ಕಂಪನಿಗಳ ಷೇರುಗಳು ವಹಿವಾಟು ನಡೆಸುತ್ತವೆ. ಈ ಪೈಕಿ 2,864 ಕಂಪನಿಗಳ ಷೇರುಗಳು ತೀವ್ರ ಕುಸಿತ ಕಂಡಿವೆ. ಈ ಅವಧಿಯಲ್ಲಿ, 67 ಕಂಪನಿಗಳ ಷೇರುಗಳು ಒಂದು ವರ್ಷದ ಕನಿಷ್ಠ ಮಟ್ಟದಲ್ಲಿ ಉಳಿದುಕೊಂಡಿದ್ದರೆ, 286 ಷೇರುಗಳು ಲೋವರ್ ಸರ್ಕ್ಯೂಟ್‌ಗೆ ತಲುಪಿದವು. ಇದೇ ವೇಳೆ ನಿಫ್ಟಿಯಲ್ಲಿ 2,900 ಕಂಪನಿಗಳ ಷೇರುಗಳು ವಹಿವಾಟಾಗಿವೆ. ಈ ಪೈಕಿ 2,219 ಷೇರುಗಳು ಕುಸಿತ ಕಂಡಿವೆ. 63 ಷೇರುಗಳು ವರ್ಷದ ಕನಿಷ್ಠ ಮಟ್ಟವನ್ನು ತಲುಪಿವೆ. ಆದರೆ, 105 ಷೇರುಗಳು ಲೋವರ್ ಸರ್ಕ್ಯೂಟ್‌ನಲ್ಲಿವೆ.
ಹೂಡಿಕೆದಾರರು ಏನು ಮಾಡಬೇಕು: ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು. ಇಸ್ರೇಲ್ ಪ್ರತೀಕಾರ ತೀರಿಸಿಕೊಂಡರೆ, ಷೇರು ಪೇಟೆೆ ಕುಸಿತದ ವ್ಯಾಪ್ತಿಯು ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಹೂಡಿಕೆದಾರರು ಜಾಗರೂಕರಾಗಿರಬೇಕು ಮತ್ತು ಷೇರು ಮಾರುಕಟ್ಟೆ ಸ್ಥಿರಗೊಳ್ಳುವವರೆಗೆ ಕಾಯಬೇಕು. ದೀರ್ಘಾವಧಿ ಹೂಡಿಕೆದಾರರಿಗೆ ಇದು ಉತ್ತಮ ಅವಕಾಶ. ಅವರು ಕೆಳ ಹಂತದಿಂದ ಷೇರುಗಳಲ್ಲಿ ಹೂಡಿಕೆ ಮಾಡಬಹುದು.