ವಿವಾಹಿತೆ ಅನ್ಯ ಪುರುಷನ ಜತೆ ಭಾವನಾತ್ಮಕ ಸಂಬಂಧ ಹೊಂದಬಹುದೇ? ದೈಹಿಕ ಸಂಬಂಧ ಮಾತ್ರ ಅನೈತಿಕವೇ- ಕಾಳಜಿ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ವಿವಾಹಿತೆ ಅನ್ಯ ಪುರುಷನ ಜತೆ ಭಾವನಾತ್ಮಕ ಸಂಬಂಧ ಹೊಂದಬಹುದೇ? ದೈಹಿಕ ಸಂಬಂಧ ಮಾತ್ರ ಅನೈತಿಕವೇ- ಕಾಳಜಿ ಅಂಕಣ

ವಿವಾಹಿತೆ ಅನ್ಯ ಪುರುಷನ ಜತೆ ಭಾವನಾತ್ಮಕ ಸಂಬಂಧ ಹೊಂದಬಹುದೇ? ದೈಹಿಕ ಸಂಬಂಧ ಮಾತ್ರ ಅನೈತಿಕವೇ- ಕಾಳಜಿ ಅಂಕಣ

ವಿವಾಹಿತೆಯೊಬ್ಬಳು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬರ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಆಕೆಯ ಅರ್ಥದಲ್ಲಿ ದೈಹಿಕ ಸಂಬಂಧ ಹೊಂದಿರುವುದು ಮಾತ್ರ ಅನೈತಿಕ, ಭಾವನಾತ್ಮಕ ಸಂಬಂಧ ಎಂದಿಗೂ ನೈತಿಕ ಚೌಕಟ್ಟಿನಲ್ಲಿರುತ್ತದೆ ಎಂಬ ಭಾವನೆ. ಹಾಗಾದರೆ ಆಕೆಯ ವಾದ ತಪ್ಪೋ ಸರಿಯೋ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ ಡಾ. ರೂಪ ರಾವ್‌.

ಕಾಳಜಿ ಅಂಕಣ– ಡಾ. ರೂಪ ರಾವ್‌
ಕಾಳಜಿ ಅಂಕಣ– ಡಾ. ರೂಪ ರಾವ್‌

ಪ್ರಶ್ನೆ: ಮೇಡಂ, ನನ್ನ ಪರಿಚಿತರೊಬ್ಬರಿಗೆ ಒಂದು ಮಗುವಿದೆ. ಅವರು ಸೋಶಿಯಲ್ ಮಿಡಿಯಾದಿಂದ ಪರಿಚಯವಾದ ವ್ಯಕ್ತಿಯೊಬ್ಬರ ಜೊತೆ ಕೇವಲ ಭಾವನಾತ್ಮಕ ಪ್ರೀತಿಯ ಸಂಬಂಧ ಹೊಂದಿದ್ದಾರೆ. ಅವರಿಬ್ಬರು ಗಂಟೆಗಟ್ಟಲೆ ಫೇಸ್‌ಬುಕ್‌ ಅಥವಾ ವಾಟ್ಸ್‌ಆಪ್‌ನಲ್ಲಿ ಮಾತಾಡುತ್ತಾರೆ, ಹರಟೆ ಹೊಡೆಯುತ್ತಾರೆ. ನಡುರಾತ್ರಿ ವಿಡಿಯೊ ಕಾಲ್ ಮಾಡುತ್ತಾರೆ. ಆ ವ್ಯಕ್ತಿ ದೂರದ ದೇಶದಲ್ಲಿದ್ದಾರೆ, ಇಲ್ಲಿಯವರೆಗೂ ಇವರಿಬ್ಬರೂ ಒಮ್ಮೆಯೂ ಭೇಟಿಯಾಗಿಲ್ಲ. ಇವರಿಬ್ಬರ ಈ ವಿಷಯ ಅವರ ಗಂಡನಿಗೂ ಗೊತ್ತಾಗಿದೆ. ಆಕೆ ತಾನೇನೂ ತಪ್ಪು ಮಾಡಿಲ್ಲ ಎಂದೇ ಹೇಳುತ್ತಾರೆ. ಜೊತೆಗೆ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯ ಜೊತೆ ಸಂಬಂಧದಲ್ಲಿ ಮುಂದುವರೆಯುವುದಾಗಿ ಹೇಳುತ್ತಾರೆ‌. ನಾನೇನು ಅವನ ಜೊತೆ ದೈಹಿಕ ಸಂಬಂಧ ಹೊಂದಿಲ್ಲ, ಹಾಗಾಗಿ ಇದೇನು ಮಹಾಪರಾಧವಲ್ಲ ಎನ್ನುತ್ತಾರೆ. ಅವರ ಗಂಡನಿಗೆ ಹೆಂಡತಿ ಎಂದರೆ ಬಹಳ ಇಷ್ಟ. ಅವಳನ್ನು ಬಿಡಲು ಇಷ್ಟವಿಲ್ಲ, ಆದರೆ ಈ ರೀತಿ ಮುಂದುವರೆಯಬೇಡ ಎಂದು ಆಕೆಗೆ ಹೇಳುತ್ತಿದ್ದಾರೆ. ಆಕೆಗೂ ಇವರನ್ನು ಬಿಡಲು ಇಷ್ಟವಿಲ್ಲ, ಮಗುವಿಗೆ ಅಪ್ಪ ಅಮ್ಮ ಇಬ್ಬರೂ ಬೇಕು ಎಂಬುದು ಅವರ ವಾದ. ಆದರೆ ಅದರೊಂದಿಗೆ ಆ ದೂರದ ದೇಶದಲ್ಲಿರುವ, ಸಾಮಾಜಿಕ ಜಾಲಾತಾಣದ ಮೂಲಕ ಪರಿಚಯವಾದ ವ್ಯಕ್ತಿಯನ್ನು ಬಿಡಲೂ ಮನಸಿಲ್ಲ.ವಿವಾಹಿತರೊಬ್ಬರು ದೈಹಿಕವಾಗಿ ಮತ್ತೊಬ್ಬರ ಜೊತೆ ಸಂಬಂಧ ಹೊಂದಿದ್ದರೆ ಮಾತ್ರ ಅದು ವಿವಾಹ ಬಾಹಿರ ಅನೈತಿಕ ಸಂಬಂಧ ಆಗುತ್ತಾ? ಈಗ ಈಕೆ ಮಾಡುತ್ತಿರುವುದು ತಪ್ಪೋ, ಸರಿಯೋ? ಅವರ ದ್ವಂದ್ವ ಮನಸಿನ ಗೊಂದಲಕ್ಕೊಂದು ದಾರಿ ತೋರಿಸಿ. ನಾನು ಈ ಉತ್ತರವನ್ನು ಅವರಿಬ್ಬರಿಗೂ ತೋರಿಸುವೆ.

‌ಹೆಸರು ಬರೆದಿಲ್ಲ, ಬೆಂಗಳೂರು

ಉತ್ತರ: ಮೊದಲಿಗೆ ನೈತಿಕ, ಅನೈತಿಕ ಎಂಬ ಪ್ರಶ್ನೆ ಬದಿಗಿಡೋಣ. ವಿವಾಹಬಾಹಿರ ಸಂಬಂಧ ಎಂಬ ಪದ ಬಳಕೆ ಬಗ್ಗೆ ಮಾತನಾಡೋಣ. ನಿಜ, ಬಹಳ ಜನ ಪ್ಲೇಟಾನಿಕ್ ಪ್ರೀತಿ ಎಂಬ ಪದ ಬಳಸುತ್ತಾರೆ. ಪ್ಲೇಟಾನಿಕ್ ಎಂದರೆ ದೈಹಿಕ ಸಂಬಂಧವಿಲ್ಲದ ಕೇವಲ ಪರಸ್ಪರ ಅನುರಾಗದ ಪ್ರೀತಿ ಅಂದರೆ ಭಾವನಾತ್ಮಕವಾಗಿ ಎರಡು ಮನಸ್ಸುಗಳು ಒಂದಾಗುವುದು. ಈಗ ದಾಂಪತ್ಯ ಅಂದರೆ‌ ಏನು ಎಂದು ನೋಡೋಣ. ದಾಂಪತ್ಯ ಎಂಬುದು ಸತಿ-ಪತಿ ಇಬ್ಬರೂ ಪರಸ್ಪರ ಅರ್ಥ ಧರ್ಮ, ಕಾಮ, ಮೋಕ್ಷ ಮುಂತಾದವುಗಳಲ್ಲಿ ಒಟ್ಟಿಗೇ ನಡೆಯುವ ವ್ಯವಸ್ಥೆ. ಮದುವೆ ಎಂಬ ಸಂಬಂಧದಲ್ಲಿ ಮುಖ್ಯವಾದದ್ದು ಕಮಿಟ್‌ಮೆಂಟ್ ಅಥವಾ ಬದ್ಧತೆ. ಅಂದರೆ ಕಾಯಾ ವಾಚಾ ಮನಸಾ ನಾನು ನಿನ್ನೊಂದಿಗೆ ಇರುತ್ತೇನೆ ಎಂದು ದೃಢನಿರ್ಧಾರ ಮಾಡುವುದು.

ಇಂದಿನ ಆಧುನಿಕ ಯುಗದಲ್ಲಿರಲಿ, ಹಳೆಯ ಕಾಲದಲ್ಲಿರಲಿ ಮನಸಲ್ಲಿ ಅದೆಷ್ಟೋ ಜನ ಬೇರೆಯವರನ್ನು ಬಯಸಿದ್ದು ಇರಬಹುದು. ಏಕೆಂದರೆ ಅದು ಮನಸಿನ ವಿಚಾರ, ಬೇರಾರೂ ಅಲ್ಲಿ ಹೋಗಿ ನೋಡುವಂತಿಲ್ಲವಾದ್ದರಿಂದ ಅದು ಬೇರೆಯವರಿಗೆ ಗೊತ್ತಾಗುವುದಿಲ್ಲ. ಹಾಗಾಗಿ ಕಾಯಾ‌ ಮತ್ತು ವಾಚಾ ಎಂದಷ್ಟೇ ತೆಗೆದುಕೊಳ್ಳೋಣ, ಅಂದರೆ ದೈಹಿಕ ಮತ್ತು ಮಾತುಕತೆಯಲ್ಲಿ ಒಬ್ಬರಿಗೆ ಕಮಿಟ್ ಆಗಿರುವುದು.

ಹಿಂದೆ ರಾಜರ ಕಾಲದಲ್ಲಿ ಒಬ್ಬ ರಾಜ ಒಬ್ಬರಿಗಿಂತ ಹೆಚ್ಚು ಮಡದಿಯರನ್ನು ಹೊಂದುವುದು ಸಾಮಾನ್ಯವಿತ್ತು, ಆದರೆ ಪ್ರೀತಿ ಮಾತ್ರ ಒಂದೋ ಪಟ್ಟದ ರಾಣಿ ಅಥವಾ ಕಿರಿಯ ರಾಣಿಯ ಮೇಲೆ ಇರುತ್ತಿತ್ತು. ಯಾವುದೇ ಸಮಯದಲ್ಲಾಗಲಿ ಸಾಂಗತ್ಯ ಪ್ರೀತಿ ಸಂಪೂರ್ಣ ಎನಿ‌ಸುವುದು ಒಬ್ಬರೊಡನೇ ಬದ್ಧರಾಗಿದ್ದಾರೆ ಮಾತ್ರ‌.

ನೀವು ಹೇಳಿದ ಮೇಲಿನ ಪ್ರಕರಣದಲ್ಲಿ ದೇಹ, ಮನಸನ್ನು ಬೇರೆಯಾಗಿ ನೋಡಿ ಅವರು ತಮ್ಮದೇನೂ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮದುವೆಯಂತಹ ಕಮಿಟೆಡ್ ರಿಲೇಷನ್‌ಶಿಪ್‌ನಲ್ಲಿದ್ದೂ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸಿದ್ದು ನೈತಿಕ ದೃಷ್ಟಿಯಿಂದ ಸರಿಯಿರಲಿಕ್ಕಿಲ್ಲ. ಪ್ರೀತಿಗೆ ಕಟ್ಟುಪಾಡಿಲ್ಲ ನಿಜ, ಆದರೆ ದಾಂಪತ್ಯಕ್ಕೆ ಒಂದು ಪಾವಿತ್ರ್ಯತೆ ಇದೆ‌. ಅದನ್ನು ನಿಯಮಾನುಸಾರ ನಿರ್ವಹಿಸುವುದು ಕೂಡ ಕರ್ತವ್ಯ.

ಇರಲಿ ಈಗ ಆಗಿದ್ದು ಆಗಿ ಹೋಯಿತು, ಒಂದೇ ಸಲ ಎರೆಡೆರಡು ದೋಣಿಯಲ್ಲಿ ನಡಿಗೆ ಸಾಧ್ಯವಿಲ್ಲ. ಅವರು ಒಂದೋ ಈ ಮದುವೆಯಲ್ಲಿರಬೇಕು ಇಲ್ಲ, ಆ ವ್ಯಕ್ತಿಯೊಂದಿಗೆ ಇರಬೇಕು .

ಈಗ ಅವರಿಗೆ ಪ್ರಮಾದವನ್ನು ಸರಿಪಡಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಅವರು ಅಲ್ಲಿಂದ ಹೊರಬರಲು ಇದು ಸೂಕ್ತ ಸಮಯ. ಇಲ್ಲ ಈಗ ಇರುವ ವೈವಾಹಿಕ ಸಂಬಂಧದಲ್ಲಿ ಮುಂದುವರಿಯಲು ಅವರಿಗೆ ಇಷ್ಟವಿಲ್ಲ ಎಂದಾದರೆ ಸಂಬಂಧ ಕಡಿದುಕೊಳ್ಳುವ ಬಗ್ಗೆಯೂ ಯೋಚಿಸಬಹುದು.

ನನ್ನ ಬಳಿಯೂ ಕೌನ್ಸೆಲಿಂಗ್‌ಗೆಂದು ಬಂದಿದ್ದ ಯುವತಿಯೊಬ್ಬಳು ತನ್ನ ತಾಯಿ ಹೊಂದಿದ್ದ ಇಂತಹ‌ ಸಂಬಂಧ ತನ್ನ ಬದುಕು ಹಾಗೂ ಮನ‌ಸ್ಸಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರಿತು ಎಂಬುದನ್ನು ಅಳುತ್ತಾ ವಿವರಿಸಿದ್ದಳು. ಹೀಗೆ ಇಂತಹ ಸಂಬಂಧದ ನೇರ ಪರಿಣಾಮ ಮಗುವಿನ ಮೇಲೆ ಆಗುವುದರಿಂದ ಅವರು ತಾನು ಎಲ್ಲಿ ಹೆಚ್ಚು ಸಲ್ಲುವೆ ಎಂಬುದನ್ನು ನಿರ್ಧರಿಸಬೇಕು. ಸಾಮಾನ್ಯವಾಗಿ ಇಂತಹ‌ ಹೊರಗಿನ ಸಂಬಂಧಗಳನ್ನು ಕಾಪಿಡಲು ಅಥವಾ ಮುಖ್ಯವಾಹಿನಿಯ ಮದುವೆಯವರೆಗೂ ತರಲು ಇನ್ನೊಂದು ಕಡೆಯಲ್ಲಿರುವ ವ್ಯಕ್ತಿ ನಿರಾಕರಿಸುತ್ತಾನೆ. ಹಾಗೇನಾದರೂ ಇವರ ಬಾಳಲ್ಲಿ ಆದರೆ ತಮ್ಮ ನಿರ್ಧಾರದ ಬಗ್ಗೆ ಗಿಲ್ಟ್ ಫೀಲ್ ಆಗಬಾರದಷ್ಟೇ. ನನ್ನ ಪ್ರಕಾರ ಇವರಿಗೆ ಮಾನಸಿಕ ಅಥವಾ ದೈಹಿಕ ಹಿಂಸೆ ಇರದಿದ್ಧಲ್ಲಿ ಪ್ರಸ್ತುತ ಮದುವೆಯಲ್ಲಿ ಮುಂದುವರೆಯುವುದೇ ಮೇಲು.

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

Whats_app_banner