ಇಂಥವ್ರು ಎಂದಿಗೂ ಒಳ್ಳೇ ಫ್ರೆಂಡ್ಸ್ ಆಗಲ್ಲ: ಸ್ನೇಹದ ಹೆಸರಿನಲ್ಲಿ ಆತ್ಮವಿಶ್ವಾಸ ಕೊಲ್ಲುವ ಟಾಕ್ಸಿಕ್ ವರ್ತನೆಯ ಹಿತಶತ್ರುಗಳ ಬಗ್ಗೆ ಇರಲಿ ಎಚ್ಚರ-column kalaji toxic friendship be aware of friends who interfere in your life and try to curb your confidence dmg ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಇಂಥವ್ರು ಎಂದಿಗೂ ಒಳ್ಳೇ ಫ್ರೆಂಡ್ಸ್ ಆಗಲ್ಲ: ಸ್ನೇಹದ ಹೆಸರಿನಲ್ಲಿ ಆತ್ಮವಿಶ್ವಾಸ ಕೊಲ್ಲುವ ಟಾಕ್ಸಿಕ್ ವರ್ತನೆಯ ಹಿತಶತ್ರುಗಳ ಬಗ್ಗೆ ಇರಲಿ ಎಚ್ಚರ

ಇಂಥವ್ರು ಎಂದಿಗೂ ಒಳ್ಳೇ ಫ್ರೆಂಡ್ಸ್ ಆಗಲ್ಲ: ಸ್ನೇಹದ ಹೆಸರಿನಲ್ಲಿ ಆತ್ಮವಿಶ್ವಾಸ ಕೊಲ್ಲುವ ಟಾಕ್ಸಿಕ್ ವರ್ತನೆಯ ಹಿತಶತ್ರುಗಳ ಬಗ್ಗೆ ಇರಲಿ ಎಚ್ಚರ

ಡಾ ರೂಪಾ ರಾವ್: ನಮ್ಮ ಸುತ್ತಲಿನ ಸ್ನೇಹಿತರು ನಮ್ಮ ಜೀವನವನ್ನು ರೂಪಿಸುತ್ತಾರೆ. ಆದರೆ ನಾವು ಗೆಳೆಯರು ಎಂದುಕೊಂಡಿರುವವರು ‘ಟಾಕ್ಸಿಕ್’ (ವಿಷಕಾರಿ) ಮನಃಸ್ಥಿತಿಯ ಹಿತಶತ್ರುಗಳಾದರೆ ಅಂಥವರು ನಮ್ಮ ಜೀವನವನ್ನು ಅಕ್ಷರಶಃ ನರಕ ಮಾಡುತ್ತಾರೆ. ನಿಮ್ಮ ಸುತ್ತಲೂ ಇಂಥವರು ಇರಬಹುದು? ಅಂಥವರನ್ನು ಗುರುತಿಸುವುದು ಹೇಗೆ? ನಮ್ಮನ್ನು ಕಾಪಾಡಿಕೊಳ್ಳುವುದು ಹೇಗೆ? -ಈ ಬರಹ ಓದಿ.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಪ್ರಶ್ನೆ: ಕಳೆದ ವಾರ ನೀವು ಉತ್ತಮ ಸ್ನೇಹಿತರ ಲಕ್ಷಣಗಳ ಬಗ್ಗೆ ಬರೆದಿದ್ದು ಓದಿದ್ದೆ. ಆದರೆ ನನ್ನ ಪ್ರಶ್ನೆ ಬೇರೆಯೇ ಇದೆ. ನನಗೊಬ್ಬ ಬಾಲ್ಯದ ಸ್ನೇಹಿತನಿದ್ದಾನೆ. ಮುಂದಿನ ಭಾನುವಾರ ಪಾರ್ಟಿ ಮಾಡೋಣ ಬಾರೋ ಎಂದಿದ್ದಾನೆ. ಅವನು ನನ್ನ ಬಾಲ್ಯದ ಗೆಳೆಯ. ಆದರೆ ನನಗೇನೋ ಅವನ ಜೊತೆ ಕಿರಿಕಿರಿ ಅನ್ನಿಸುತ್ತಿರುತ್ತದೆ. ಪ್ರತಿ‌ಸಲ ನನಗೆ ಏನೇ ಒಳ್ಳೆಯದಾದರೂ, 'ನಿನಗೇನೋ ಮಗ ಸಿಕ್ಕಾಪಟ್ಟೆ ಹಣ, ಆಸ್ತಿ ಇದೆ. ಎಲ್ಲವೂ ಸುಲಭವಾಗಿ ಸಿಗುತ್ತೆ' ಅಂತಾನೆ. ನನಗೆ ಕೆಲಸ ಸಿಕ್ಕಾಗಲೂ 'ಲಕ್' ಅಂದನೇ ಹೊರತು ನನ್ನ ಪರಿಶ್ರಮದಿಂದ ಅಂತ ಹೇಳಲಿಲ್ಲ. ನನ್ನ ಮದುವೆಯಾದ ನಂತರ ಹೆಂಡತಿಯನ್ನು ಪರಿಚಯ ಮಾಡಿಕೊಟ್ಟೆ. ಆದರೆ ಮನೆಗೆ ಬಂದಾಗಲೆಲ್ಲ, 'ಇವನು ನಿಮಗೆ ಒಳ್ಳೆಯ ಜೋಡಿ ಅಲ್ಲವೇ ಅಲ್ಲ' ಅಂತ ನನ್ನ ಹೆಂಡತಿಗೆ ಹೇಳುತ್ತಲೇ ಇರುತ್ತಾನೆ. ಬಹಳ ಓಪನ್ ಮತ್ತು ತಮಾಷೆಯಾಗಿ ಮಾತಾಡುವಂತೆ ತೋರಿಸಿಕೊಳ್ಳುತ್ತಾನೆ. ಅದನ್ನು ಗಮನಿಸಿದರೆ ನಾನೇ ಅತಿಸೂಕ್ಷ್ಮವಾಗಿ ಬಿಟ್ಟೆನೇನೋ ಅನಿಸುತ್ತೆ. ದಯವಿಟ್ಟು ಹೇಳಿ, ಇದು ನನ್ನ ತೊಂದರೆಯೋ? ಅವನ ತೊಂದರೆಯೋ? ನನಗೆ ಅವನ ಜೊತೆಗೆ ಕಫಂರ್ಟ್‌ ಫೀಲ್ ಆಗ್ತಿಲ್ಲ ಮೇಡಂ. -ರಾಘವೇಂದ್ರ, ರಾಯಚೂರು

ಉತ್ತರ: ನನ್ನ ಕಳೆದ ವಾರದ ಬರಹ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರಶ್ನೆಗೆ ಖಂಡಿತ ಉತ್ತರಿಸುತ್ತೇನೆ. ನೀವು ಕೊಟ್ಟಿರುವ ಒಂದೆರೆಡು ಉದಾಹರಣೆಗಳನ್ನು ಗಮನಿಸಿದೆ. ನೀವು ನಿಮ್ಮ ಸ್ನೇಹಿತನತ್ತಲೇ ಬೊಟ್ಟು ಮಾಡುತ್ತಿದ್ದೀರಿ ಅನ್ನಿಸಿದರೂ, ಅವರ ವರ್ತನೆಯಿಂದ ನಿಮಗೆ ಕಿರಿಕಿರಿ ಉಂಟಾಗುತ್ತಿರುವುದು ನಿಜ. ಇಂಥವರನ್ನು ಟಾಕ್ಸಿಕ್ ಗೆಳೆಯರು ಎನ್ನುತ್ತಾರೆ. ನಮ್ಮ ಗೆಳೆಯರ ಜೊತೆ ಇರುವುದು ನಮಗೆ ಆಹ್ಲಾದ ಹಾಗೂ ಆನಂದದ ಅನುಭವ ಕೊಡಬೇಕು. ಎಂದಿಗೂ ಅದು ಕಿರಿಕಿರಿ ಅನ್ನಿಸಬಾರದು.

ಆಹ್ಲಾದ ಕೊಡುವಂತಿದ್ದರೆ ಮಾತ್ರ ಅದು ಉತ್ತಮ‌ ಸಂಬಂಧ. ಎದುರಿಗೆ ಇರುವವರ ವರ್ತನೆಯು ತಮಾಷೆಗಾಗಿಯೇ ಆಗಿರಲಿ ಅದು ನಿಮಗೆ ಇಷ್ಟವಾಗುತ್ತಿಲ್ಲ ಎಂಬುದು ಅವರಿಗೆ ಗೊತ್ತಾಗಬೇಕಿತ್ತು, ಹಾಗೆಯೇ ಅದರಿಂದ ಅವರ ಈ ವರ್ತನೆ ನಿಲ್ಲಬೇಕಿತ್ತು. ನಿಮ್ಮ‌ ಗೆಳೆಯ ಟಾಕ್ಸಿಕ್ ಇರಬಹುದಾ ಎಂದು ಖಚಿತಪಡಿಸಿಕೊಳ್ಳಲು‌ ಕೆಳಗಿನ 10 ಅಂಶಗಳನ್ನು ತಿಳಿದುಕೊಳ್ಳಿ.

1) ಸತತ ನೆಗೆಟಿವ್ ಚಿಂತನೆ ಮತ್ತು ಟೀಕೆ

ಟಾಕ್ಸಿಕ್ ಸ್ನೇಹಿತರು ಪದೇಪದೆ ನಿಮ್ಮನ್ನು, ನಿಮ್ಮ ಆಯ್ಕೆಗಳನ್ನು ಮತ್ತು ನಿಮ್ಮ ಸಾಧನೆಗಳನ್ನು ಕೀಟಲೆ ಹಾಗೂ ನೆಗೆಟೀವ್ ಅಗಿ ನೋಡುತ್ತಾರೆ. ಟೀಕೆ ಮಾಡುತ್ತಿರುತ್ತಾರೆ. ಅವರು ನಿಮ್ಮ ಸಾಮರ್ಥ್ಯಗಳನ್ನು ನೋಡುವುದಕ್ಕಿಂತಲೂ ಹೆಚ್ಚಾಗಿ ನಿಮ್ಮ ನ್ಯೂನತೆಗಳನ್ನೇ ಎತ್ತಿ ತೋರಿಸುತ್ತಿರುತ್ತಾರೆ. ನಿರಂತರ ನಕಾರಾತ್ಮಕತೆಯು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು. ನೀವೇ ಸರಿ ಇಲ್ಲ ಅಥವಾ ಅಸಮರ್ಥರು ಅಥವಾ ಅನರ್ಹರೆಂದು ನಿಮ್ಮ ಮನಸ್ಸು ಭಾವಿಸಬಹುದು. ಉದಾಹರಣೆಗೆ ನಿಮ್ಮ ಪ್ರತಿಯೊಂದು ಸಾಧನೆಗೂ 'ನೀನೇನು ಗುರು ಏನೋ ಮಾಡಿ ಗಿಟ್ಟಿಸಿಕೊಳ್ತೀಯ ಅನ್ನುವುದು ಅಥವಾ ನಿನ್ನದು ಯಾವಾಗಲೂ ಗೋಳು' ಎಂದು ಪ್ರತಿಸಲ ಹೇಳುವುದು ಒಳ್ಳೆಯ ಸ್ನೇಹಿತರ ಲಕ್ಷಣವಲ್ಲ.

2) ಬೆಂಬಲಕ್ಕೆ ನಿಲ್ಲದ ಗೆಳೆಯರು

ನಿಮ್ಮ ಜೀವನದ ಪ್ರಮುಖ ಮೈಲಿಗಲ್ಲುಗಳು, ಸಾಧನೆಗಳು ಅಥವಾ ಕಷ್ಟಗಳಂಥ ಸಂದರ್ಭದಲ್ಲಿ ಅವರು ದೂರ ಉಳಿಯಬಹುದು. ಪ್ರೋತ್ಸಾಹವನ್ನು ಕೊಡುವ ಬದಲು ಅಸಡ್ಡೆ ತೋರಿಸಬಹುದು ಅಥವಾ ನಿಮ್ಮ ಸಾಧನೆಯನ್ನೇ ತಿರಸ್ಕಾರ ಮಾಡಬಹುದು. ಇಂಥ ವರ್ತನೆಯಿಂದ ನಿಮ್ಮನ್ನು ಏಕಾಂಗಿತನ ಕಾಡಬಹುದು. ಸ್ನೇಹದ ಮೌಲ್ಯವನ್ನೇ ನಿಮ್ಮ ಮನಸ್ಸು ಪ್ರಶ್ನಿಸಬಹುದು. 'ಇಂಥ ಫ್ರೆಂಡ್ಸ್‌ ಯಾಕಾದರೂ ಬೇಕು' ಎಂದು ನಿಮಗೆ ಅನ್ನಿಸಬಹುದು.

3) ನಿಮ್ಮ ಮೇಲೆ ನಿಯಂತ್ರಣ ಸಾಧಿಸುವ ಗೆಳೆಯರು

ಕೆಲವರು ಸ್ನೇಹದ ಸೋಗಿನಲ್ಲಿ ನಿಮ್ಮ ಮೇಲೆ ಸತತ ನಿಯಂತ್ರಣ ಸಾಧಿಸಲು ಯತ್ನಿಸುತ್ತಾರೆ. ತಾನೊಬ್ಬನೇ ಎಲ್ಲ ವಿಷಯಗಳಲ್ಲಿಯೂ ಪರಿಣಿತನೇನೋ ಎನ್ನುವಂತೆ ನಿಮ್ಮೆಲ್ಲಾ ಕೆಲಸಗಳನ್ನು ನಿರ್ವಹಿಸಲು ಅಥವಾ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಒತ್ತಾಯ, ಬೆದರಿಕೆ ಅಥವಾ ಭಾವನಾತ್ಮಕ ಬ್ಲ್ಯಾಕ್‌ಮೇಲ್‌ಗಳನ್ನು ಬಳಸಿಕೊಂಡು ನಿಮ್ಮನ್ನು ತಮ್ಮ ದಾರಿಗೆ ಎಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ತಂತ್ರಗಳಿಂದ ಅವರು ನಿಮ್ಮ ನಿರ್ಧಾರಗಳನ್ನು ದುರ್ಬಲಗೊಳಿಸುತ್ತಾರೆ. ಅಥವಾ ನಿಮ್ಮ ಜೀವನವನ್ನು ನೀವು ಹೇಗೆ ನಿರ್ವಹಿಸಬೇಕು ಎಂದು ನಿರ್ದೇಶಿಸಲು ಪ್ರಯತ್ನಿಸುತ್ತಾರೆ. ನೀವು ಆತ್ಮೀಯರು ಎಂದುಕೊಂಡಿರುವವರ ಇಂಥ ವರ್ತನೆಗಳಿಂದ ನಿಮ್ಮೊಳಗಿನ ಆತ್ಮವಿಶ್ವಾಸ ಕುಸಿಯಬಹುದು ಮತ್ತು ನೀವು ಅವರ ಕೈಗೊಂಬೆ ಆಗಬಹುದು. ಭಾವನಾತ್ಮಕವಾಗಿ ಶಕ್ತಿಹೀನರಾಗಬಹುದು.

4) ಅಸೂಯೆ ಮತ್ತು ಮತ್ಸರ

ಅವರು ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆಪಡಬಹುದು. ನಿಮ್ಮ ಸಾಧನೆಗಳು ಲೆಕ್ಕಕ್ಕೇ ಇಲ್ಲ ಎನ್ನುವಂತೆ ವರ್ತಿಸಬಹುದು. ಅಥವಾ ಸಂತೋಷವನ್ನು ಹಾಳುಮಾಡಲು ಯತ್ನಿಸಬಹುದು. ನಿಮ್ಮ ಉನ್ನತಿಗಾಗಿ ಸಂತೋಷಪಡುವ ಬದಲು, ಅಸೂಯೆ ಅಥವಾ ಅಸಮಾಧಾನದ ಭಾವ ಅನುಭವಿಸುತ್ತಾರೆ. ಇಂಥ ಅಸೂಯಾಪರ ವರ್ತನೆಯಿಂದ ಇಬ್ಬರಲ್ಲಿಯೂ ಉದ್ವೇಗ ಹೆಚ್ಚಾಗುತ್ತದೆ. ನೀವು ನಿಮ್ಮ ಸಾಮರ್ಥ್ಯ ಕಡಿಮೆಯಿದೆ ಎಂದೇ ಸದಾ ಭಾವಿಸಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಅವರು ಏನಂದುಕೊಳ್ಳುತ್ತಾರೋ ಎನ್ನುವ ಭಯದಲ್ಲಿಯೇ ಕಾಲ ಕಳೆಯುತ್ತೀರಿ.

5) ಗೆಳೆತನಕ್ಕಾಗಿ ಒಮ್ಮುಖ ಪ್ರಯತ್ನ

ಗೆಳೆತನವನ್ನು ಕಾಪಾಡಿಕೊಳ್ಳಲು ನೀವೊಬ್ಬರೇ ಹೆಚ್ಚಿನ ಪ್ರಯತ್ನವನ್ನು ಸದಾ ಮಾಡಿ ಸೋಲುತ್ತಿರುತ್ತೀರಿ. ಅವರ ಎಲ್ಲ ಬಗೆಯ ಆಟಾಟೋಪಗಳನ್ನೂ ನೀವೊಬ್ಬರೇ ಸಹಿಸಿಕೊಳ್ಳುತ್ತಿದ್ದೀರಿ. ಹೀಗೆ ಮಾಡುವುದರಿಂದ ಸ್ನೇಹ ಎನ್ನುವುದು ಒಮ್ಮುಖ (ಒನ್ ವೇ) ಪ್ರಯತ್ನವಷ್ಟೇ ಆಗುತ್ತದೆ. ಅವರು ಅಪರೂಪಕ್ಕೆ ನಿಮ್ಮೊಂದಿಗೆ ಸಂಪರ್ಕ ಇರಿಸಿಕೊಳ್ಳಲು ಬಯಸುತ್ತಾರೆ. ನಿಮ್ಮನ್ನು ಭೇಟಿಯಾಗುವ ಉತ್ಸಾಹ ಇರುವುದಿಲ್ಲ. ಅಥವಾ ನಿಮ್ಮ ಜೀವನದ ಬಗ್ಗೆ ಅವರಿಗೆ ಯಾವುದೇ ಆಸಕ್ತಿಯೂ ಇರುವುದಿಲ್ಲ. ಇದರ ಪರಿಣಾಮವಾಗಿ ಇಂಥ ಪ್ರಯತ್ನಗಳಲ್ಲಿ ಕೊನೆಗೊಮ್ಮೆ ನೀವೂ ಸಹ ಉತ್ಸಾಹ ಕಳೆದುಕೊಳ್ಳುತ್ತೀರಿ. ಅವರ ಕಣ್ಣಲ್ಲಿ ನೀವು ಸದರ ಆಗಬಹುದು.

6) ನಾಟಕೀಯ ಮಾತುಕತೆ ಅಥವಾ ಸದಾ ಜಗಳ

ಟಾಕ್ಸಿಕ್ ಸ್ನೇಹಿತರು ತೀರಾ ನಾಟಕೀಯವಾಗಿ ಮಾತನಾಡುತ್ತಾರೆ, ಅಳುತ್ತಾರೆ ಅಥವಾ ಕರುಣೆ (ಸಿಂಪತಿ) ಬಯಸುತ್ತಾರೆ. ಸಣ್ಣಸಣ್ಣ ವಿಷಯವನ್ನೂ ದೊಡ್ಡ ಸನ್ನಿವೇಶವಾಗಿ ಬದಲಿಸುತ್ತಾರೆ. ಅವರು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುವುದೂ ಸಹಾ ಒಂದು ತಂತ್ರವೇ ಆಗಿರುತ್ತದೆ. ಇದು ನಿಮ್ಮ ಬದುಕಿನಲ್ಲಿಯೂ ಸಮಸ್ಯೆ ಹುಟ್ಟುಹಾಕಬಹುದು ಅಥವಾ ನಿಮ್ಮಿಬ್ಬರ ಸಂಘರ್ಷದಿಂದ ಮನಸ್ತಾಪ ಹೆಚ್ಚಬಹುದು. ನಿರಂತರ ಜಗಳ, ಅಳು ಮತ್ತು ಕೋಪ ಮನಸ್ಸಿಗೆ ದಣಿವು ಉಂಟು ಮಾಡುತ್ತದೆ. ಅನಗತ್ಯ ಒತ್ತಡವನ್ನೂ ಸೃಷ್ಟಿಸುತ್ತದೆ. ಇದು ನಿಮ್ಮ ಭಾವನಾತ್ಮಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.

7) ಅಗೌರವದ ವರ್ತನೆ, ವೈಯಕ್ತಿಕ ವಿಚಾರಗಳಲ್ಲಿ ಅನಗತ್ಯ ಮಧ್ಯಪ್ರವೇಶ

ಟಾಕ್ಸಿಕ್ ಸ್ನೇಹಿತರು ನಿಮ್ಮ ಗಡಿಗಳಿಗೆ ಗೌರವ ಕೊಡುವುದಿಲ್ಲ. ನಿಮ್ಮ ಆಸೆಗಳನ್ನು ಮತ್ತು ಅಗತ್ಯಗಳನ್ನು ನಿರ್ಲಕ್ಷಿಸುತ್ತಾರೆ. ನಿಮ್ಮದೇ ಆದ ವೈಯಕ್ತಿಕ ಸ್ಪೇಸ್‌ ಬಗ್ಗೆ ಅವರು ಆಲೋಚಿಸುವುದೂ ಇಲ್ಲ. ಇಂಥ ಅಗೌರವದ ವರ್ತನೆಯು ನಿಮ್ಮನ್ನು ಅಶಕ್ತರನ್ನಾಗಿಸುತ್ತದೆ. ನಿಮ್ಮ ಸ್ವಯಂ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ.

8) ವಿಶ್ವಾಸಾರ್ಹತೆ ಮತ್ತು ಅಸಂಗತತೆ

ಅವರು ವಿಶ್ವಾಸಕ್ಕೆ ಅರ್ಹರೆಂದು ನಿಮಗೆ ಅನ್ನಿಸುವುದೇ ಇಲ್ಲ. ಅವರ ಬಳಿ ಹೇಳಿದ ರಹಸ್ಯ ವಿಚಾರಗಳು ಬಹಿರಂಗಗೊಳ್ಳುತ್ತಲೇ ಇರುತ್ತವೆ. ಅವರ ವರ್ತನೆಯು ಅಸಮಂಜಸ ಎನಿಸುತ್ತದೆ. ಕೊಟ್ಟ ಮಾತು ಉಳಿಸಿಕೊಳ್ಳಲು ವಿಫಲರಾಗುತ್ತಾರೆ. ಕೊಟ್ಟ ಭರವಸೆಗಳನ್ನು ಮುರಿಯುತ್ತಾರೆ. ನಿಮ್ಮ ಕಷ್ಟಕಾಲದಲ್ಲಿ ಅಥವಾ ನಿಮಗೆ ಅತ್ಯಂತ ಅಗತ್ಯವಿದ್ದಾಗ ಅವರು ನಿಮ್ಮೊಂದಿಗೆ ನಿಲ್ಲುತ್ತಾರೆ ಎಂಬ ನಂಬಿಕೆಯೇ ನಿಮ್ಮಲ್ಲಿ ಮೂಡುವುದಿಲ್ಲ. ಇಂಥ ಅಸಮಾಧಾನದಿಂದ ಹತಾಶೆಯು ಹೆಚ್ಚಾಗುತ್ತದೆ. ಸಂಬಂಧದಲ್ಲಿ ನಂಬಿಕೆ ಉಳಿಯುವುದಿಲ್ಲ.

9) ಗ್ಯಾಸ್‌ಲೈಟಿಂಗ್: ನಾನು ಮಾಡಿದ್ದೇ ಸರಿ, ನೀನು ಮಾಡೋದೆಲ್ಲ ತಪ್ಪು

ಟಾಕ್ಸಿಕ್ ಸ್ನೇಹಿತ ಗ್ಯಾಸ್‌ಲೈಟಿಂಗ್‌ನಲ್ಲಿ ತೊಡಗಬಹುದು. ನಿಮ್ಮ ಅರಿವು, ನೆನಪುಗಳು ಅಥವಾ ಭಾವನೆಗಳನ್ನು ಅವರಿಗೆ ಬೇಕಾದಂತೆ ಬದಲಿಸಿ, ಅವರು ಹೇಳಿದ ಅಥವಾ ಮಾಡಿದ ವಿಷಯಗಳನ್ನು ಮಾಡಿಯೇ ಇಲ್ಲ ಎಂದು ಸಾಧಿಸಲು ಯತ್ನಿಸಬಹುದು. ಇದು ನಿಮ್ಮ ನಂಬಿಕೆ, ಅಸ್ತಿತ್ವವನ್ನೇ ಅಲುಗಾಡಿಸುತ್ತದೆ. ಗ್ಯಾಸ್‌ಲೈಟಿಂಗ್ ವರ್ತನೆಯು ನಿಮ್ಮ ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥಿರತೆಯನ್ನು ಹಾಳುಮಾಡುತ್ತದೆ. ಇದರಿಂದಾಗಿ ನೀವು ಗೊಂದಲ ಮತ್ತು ಆತಂಕವನ್ನು ಅನುಭವಿಸಬಹುದು.

10) ಭಾವನಾತ್ಮಕ ಖಾಲಿತನ

ನೀವು ಗೆಳೆಯರು ಎಂದುಕೊಂಡಿರುವವರೊಂದಿಗೆ ಮಾತುಕತೆ ಆಡಿದರೆ ಶಾಂತಿ ಪಡೆಯುವ ಬದಲು ಭಾವನಾತ್ಮಕವಾಗಿ ಬರಿದಾಗುತ್ತೀರಿ. ಒಂದು ರೀತಿಯ ಒಣ ಮಾತುಕತೆಯ ಅನುಭವ ಬರುತ್ತದೆ. ಅವರೊಂದಿಗೆ ಸಮಯ ಕಳೆದ ನಂತರ ನಿಮಗೆ ಆತಂಕ, ಒತ್ತಡ ಅಥವಾ ಅತೃಪ್ತಿ ಕಾಡಬಹುದು. ಇದು ನಿಮ್ಮ ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ದೇಹ ಹಾಗೂ ಮನಸಿನ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಇಂಥ ಸಂದರ್ಭಗಳಲ್ಲಿ ಸ್ನೇಹ‌ವು ಸಹಾಯ ಮಾಡುವುದಕ್ಕಿಂತ ಹಾನಿಮಾಡುವುದೇ ಹೆಚ್ಚು.

ಮೇಲಿನ ಹತ್ತರಲ್ಲಿ ಐದಕ್ಕಿಂತ ಹೆಚ್ಚು ವರ್ತನೆ ನೀವು ಗೆಳತಿ ಅಥವಾ ಗೆಳೆಯ ಎಂದುಕೊಂಡಿರುವವರಲ್ಲಿ ಇದ್ದರೆ ಅಂಥವರ ಗೆಳೆತನದಿಂದ ತಡಮಾಡದೇ ಹೊರಬನ್ನಿ. ಒಡನಾಟವನ್ನೂ ಕಡಿಮೆ ಮಾಡಿಕೊಳ್ಳಿ.

ಟಾಕ್ಸಿಕ್ ಗೆಳೆತನದಿಂದ ಹೊರಗೆ ಬರುವುದು ಹೇಗೆ

1) ಆತ್ಮಾವಲೋಕನ: ಸ್ನೇಹವು ನಿಮಗೆ ಕಿರಿಕಿರಿ ಅನಿಸುತ್ತಿದೆಯೇ, ಅವರೊಂದಿಗೆ ಮಾತಾಡುವಾಗ ನಿಮ್ಮ ಮನಸ್ಥಿತಿ ನೆಗೆಟಿವಿಟಿಗೆ ಹೋಗುತ್ತದೆಯೇ ಎಂಬುದನ್ನು ಕಂಡುಕೊಳ್ಳಿ. ಅಂಥವರೊಂದಿಗಿನ ನಿಮ್ಮ ಒಡನಾಟದ ಅನುಭವಗಳನ್ನು ಬರೆದಿಡುವುದು ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ.

2) ಗಡಿಗೆರೆ ನಿರ್ಧರಿಸಿಕೊಳ್ಳಿ: ನಿಮ್ಮ ಭಾವನಾತ್ಮಕ ಮನಸ್ಸನ್ನು ಅಂಥವರಿಂದ ರಕ್ಷಿಸಿಕೊಳ್ಳಲು ಸ್ಪಷ್ಟ ನಿಯಮಗಳನ್ನು ಗಡಿಯ ರೀತಿಯಲ್ಲಿ ಸ್ಥಾಪಿಸಿ. ಎಂಥ ನಡವಳಿಕೆಗಳನ್ನು ನೀವು ಒಪ್ಪುತ್ತೀರಿ, ಎಂಥವನ್ನು ಒಪ್ಪುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿಕೊಡಿ.

3) ಒಡನಾಟ ಕಡಿಮೆ ಮಾಡಿ: ಟಾಕ್ಸಿಕ್ ಮನಸ್ಥಿತಿಯ ಸ್ನೇಹಿತನೊಂದಿಗೆ ನೀವು ಕಳೆಯುವ ಸಮಯವನ್ನು ಕ್ರಮೇಣ ಕಡಿಮೆ ಮಾಡಿ. ಇದು ನಿಮ್ಮ ಜೀವನದ ಮೇಲೆ ಅವರ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4) ಬೆಂಬಲ ಹುಡುಕಿ: ನಿಮ್ಮ ಅನುಭವಗಳ ಬಗ್ಗೆ ಇತರ ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಮಾನಸಿಕ ಚಿಕಿತ್ಸಕರೊಂದಿಗೆ ಮಾತನಾಡಿ. ಈ ಬಗ್ಗೆ ಅವರ ದೃಷ್ಟಿಕೋನ, ಬೆಂಬಲ ಮತ್ತು ಸಲಹೆಯನ್ನು ಕೇಳಿ.

5) ನಿರ್ಧಾರ ಮಾಡಿ: ಸ್ನೇಹವು ಉಳಿಸಲು ಯೋಗ್ಯವಾಗಿದೆಯೇ ಎಂದು ನಿರ್ಧರಿಸಿ. ಅವರ ಟಾಕ್ಸಿಕ್ ನಡವಳಿಕೆಯು ಅದನ್ನು ಪರಿಹರಿಸಲು ನಿಮ್ಮ ಪ್ರಯತ್ನಗಳ ಹೊರತಾಗಿಯೂ ನಿಲ್ಲದೇ ಇದ್ದರೆ, ಆ ಸಂಬಂಧದ ಅಗತ್ಯವೇನು ಎಂದು ಯೋಚಿಸಿ, ಅಂಥ ಸಂಬಂಧವನ್ನು ಕೊನೆಗೊಳಿಸುವುದು ಅತ್ಯುತ್ತಮ ನಿರ್ಧಾರವಾಗುತ್ತದೆ.

6) ಸ್ವ-ಕಾಳಜಿಗೆ ಗಮನ ನೀಡಿ: ನಿಮ್ಮ ದೈಹಿಕ ಮತ್ತು ಆರೋಗ್ಯವನ್ನು ಉತ್ತಮಪಡಿಸುವ ಸ್ವಯಂ-ಆರೈಕೆ, ಸ್ವ-ಕೇಂದ್ರಿತ ಚಟುವಟಿಕೆಗಳ ಕಡೆಗೆ ಗಮನಕೊಡಿ. ನಿಮ್ಮನ್ನು ಪ್ರೀತಿಸುವ, ಇಷ್ಟಪಡುವ, ನಿಮಗೆ ಒಳಿತು ಬಯಸುವ ಜನರೊಂದಿಗೆ ಕಾಲ ಕಳೆಯಿರಿ.

ಗೆಳೆತನವು ಜೀವನದ ಆಧಾರ ಸ್ತಂಭ. ಆದರೆ ಜೊತೆಗೇ ಇದ್ದು ನಮ್ಮನ್ನು ಕೊಲ್ಲುವ ಟಾಕ್ಸಿಕ್ ಗೆಳೆತನವು ಜೀವನವನ್ನೇ ಬುಡಮೇಲು ಮಾಡಿಬಿಡುತ್ತದೆ. ನಮ್ಮ ಸುತ್ತಲಿನ ಸ್ನೇಹಿತರು ನಮ್ಮ ಜೀವನವನ್ನು ರೂಪಿಸುತ್ತಾರೆ. ನಮ್ಮ ಬದುಕು ಎಂದಿಗೂ ಇಂಥ ಟಾಕ್ಸಿಕ್ ಸ್ನೇಹಿತರ ಕೈಗೆ‌ ಸಿಕ್ಕು ವಿರೂಪವಾಗದಿರಲಿ. ನನ್ನ ಅಭಿಪ್ರಾಯ, ಸಲಹೆ ನಾನು ತಿಳಿಸಿದ್ದೇನೆ. ನಿಮ್ಮ ನಿರ್ಧಾರ ನೀವು ತೆಗೆದುಕೊಳ್ಳಿ. ಕೆಲವೊಮ್ಮೆ ಎದುರಿಗೆ ಇರುವವರಿಗೆ ಅತಿಹೆಚ್ಚು ಅವಕಾಶ ಕೊಡುವುದು ಸಹ ನಮಗೆ ತೊಂದರೆ ಉಂಟು ಮಾಡಬಹುದು ಎನ್ನುವುದು ತಿಳಿದಿರಲಿ.

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990