ನಿಮಗಿರುವ ಗೆಳೆಯರ ಪೈಕಿ ಕೆಲವರಿಗೆ ಮಾತ್ರ ಈ 10 ಗುಣ ಇರಲು ಸಾಧ್ಯ, ಅವರು ಮಾತ್ರವೇ ಬೆಸ್ಟ್‌ ಫ್ರೆಂಡ್ ಆಗಿರ್ತಾರೆ, ಬೇಕಿದ್ರೆ ಚೆಕ್ ಮಾಡ್ಕೊಳಿ-friendship day 2024 who is your best friend check these 10 qualities psychological aspect of friendship by dr roopa rao ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮಗಿರುವ ಗೆಳೆಯರ ಪೈಕಿ ಕೆಲವರಿಗೆ ಮಾತ್ರ ಈ 10 ಗುಣ ಇರಲು ಸಾಧ್ಯ, ಅವರು ಮಾತ್ರವೇ ಬೆಸ್ಟ್‌ ಫ್ರೆಂಡ್ ಆಗಿರ್ತಾರೆ, ಬೇಕಿದ್ರೆ ಚೆಕ್ ಮಾಡ್ಕೊಳಿ

ನಿಮಗಿರುವ ಗೆಳೆಯರ ಪೈಕಿ ಕೆಲವರಿಗೆ ಮಾತ್ರ ಈ 10 ಗುಣ ಇರಲು ಸಾಧ್ಯ, ಅವರು ಮಾತ್ರವೇ ಬೆಸ್ಟ್‌ ಫ್ರೆಂಡ್ ಆಗಿರ್ತಾರೆ, ಬೇಕಿದ್ರೆ ಚೆಕ್ ಮಾಡ್ಕೊಳಿ

ಉತ್ತಮ ಸ್ನೇಹಿತರ 10 ಗುಣಲಕ್ಷಣಗಳ ವಿವರ ಇಲ್ಲಿದೆ. ಈ ಪೈಕಿ ಯಾವುದೆಲ್ಲ ನಿಮ್ಮ ಸ್ವಭಾವದ ಭಾಗವಾಗಿದೆ? ನಿಮ್ಮ ಆತ್ಮೀಯರಲ್ಲಿ ಯಾವ ಗುಣಗಳಿವೆ? ನೀವು ಇನ್ನೂ ಏನೆಲ್ಲ ಅಂಶಗಳನ್ನು ರೂಢಿಸಿಕೊಳ್ಳುವ ಮೂಲಕ ಗೆಳೆತನದ ಬಾಂಧವ್ಯದ ಬಂಧ ಹೆಚ್ಚಿಸಬಹುದು? ಪೂರ್ತಿ ಬರಹ ಓದಿದರೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೆ ಅವನ ಬದುಕಿನಲ್ಲಿ ನೂರಾರು, ಸಾವಿರಾರು ಜನರು ಬಂದು ಹೋಗುತ್ತಾರೆ. ಶಾಲಾ ದಿನಗಳು, ಕಾಲೇಜಿನ ಒಡನಾಡಿಗಳು, ಸಹೋದ್ಯೋಗಿಗಳು, ವೃದ್ಧಾಪ್ಯದಲ್ಲಿ ವಾಕಿಂಗ್ ಜೊತೆಗಾರರು... ಹೀಗೆ ಬದುಕಿನ ಪ್ರತಿ ಹಂತದಲ್ಲಿಯೂ ಜೊತೆಯಾಗುವವರ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು. ಆದರೆ ಹೀಗೆ ಬದುಕಿಗೆ ಬಂದ ಎಲ್ಲರನ್ನೂ ನಮ್ಮ ಮನಸ್ಸು 'ಫ್ರೆಂಡ್' ಎಂದು ಪರಿಗಣಿಸುವುದಿಲ್ಲ. ಮನಸ್ಸಿನ ಆಳದಲ್ಲಿ ಕೆಲವರಿಗಷ್ಟೇ ಆ ಸ್ಥಾನ ಸಿಗುತ್ತದೆ. ಏಕೆ ಹೀಗೆ? ಬೆಸ್ಟ್‌ ಫ್ರೆಂಡ್ ಎಂದು ನಮ್ಮ ಮನಸ್ಸು ಪರಿಗಣಿಸಿರುವ ಕೆಲವೇ ಕೆಲವರಲ್ಲಿ ಅಂಥ ಯಾವ ವಿಶೇಷ ಗುಣ ಇರುತ್ತೆ? ಈ ಬರಹದಲ್ಲಿದೆ ಉತ್ತರ. ಉತ್ತಮ ಸ್ನೇಹಿತರ 10 ಗುಣಲಕ್ಷಣಗಳ ವಿವರ ಇಲ್ಲಿದೆ. ಈ ಪೈಕಿ ಯಾವುದೆಲ್ಲ ನಿಮ್ಮ ಸ್ವಭಾವದ ಭಾಗವಾಗಿದೆ? ನಿಮ್ಮ ಆತ್ಮೀಯರಲ್ಲಿ ಯಾವ ಗುಣಗಳಿವೆ? ನೀವು ಇನ್ನೂ ಏನೆಲ್ಲ ಅಂಶಗಳನ್ನು ರೂಢಿಸಿಕೊಳ್ಳುವ ಮೂಲಕ ಗೆಳೆತನದ ಬಾಂಧವ್ಯದ ಬಂಧ ಹೆಚ್ಚಿಸಬಹುದು? ಪೂರ್ತಿ ಬರಹ ಓದಿದರೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

1) ಸಕ್ರಿಯ ಆಲಿಸುವಿಕೆ: ಒಬ್ಬ ಒಳ್ಳೆಯ ಸ್ನೇಹಿತನು ನೀವು ಮಾತಾಡುವಾಗ ಅಡ್ಡಿಪಡಿಸದೆ, ಅತ್ತಿತ್ತ ನೋಡದೆ, ವಿಷಯಾಂತರ ಮಾಡಲೆತ್ನಿಸಿದೆ ಗಮನವಿಟ್ಟು ಕೇಳುತ್ತಾನೆ, ನೀವು ಹೇಳುತ್ತಿರುವುದರ ಬಗ್ಗೆ ನಿಜವಾದ ಆಸಕ್ತಿಯನ್ನು ತೋರಿಸುತ್ತಾನೆ. ಇದು ಆಲೋಚನೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಸುರಕ್ಷಿತ ಸ್ಥಳವನ್ನು ಸೃಷ್ಟಿಸುತ್ತದೆ.

2) ಸಹಾನುಭೂತಿ: ಉತ್ತಮ ಸ್ನೇಹಿತರು ನಿಮ್ಮ ಸ್ಥಾನದಲ್ಲಿ ತಮ್ಮನ್ನು ತಾವು ಇರಿಸಿಕೊಂಡು ನಿಮ್ಮನ್ನು ಹಾಗೂ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಇದು ಭಾವನಾತ್ಮಕ ಸಂಪರ್ಕವನ್ನು ಆಳವಾಗಿಸುವುದಲ್ಲದೇ ಮತ್ತು ಅವರು ನಿಮ್ಮ ಅನುಭವಗಳ ಬಗ್ಗೆ ನೈಜ ಕಾಳಜಿ ವಹಿಸುತ್ತಾರೆ ಎಂದು ತೋರಿಸುತ್ತದೆ.

3) ವಿಶ್ವಾಸಾರ್ಹತೆ: ಒಬ್ಬ ವಿಶ್ವಾಸಾರ್ಹ ಸ್ನೇಹಿತ ನಿಮಗಾಗಿ ಯಾವಾಗಲೂ ಇರುತ್ತಾನೆ. ಅವನು ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳುತ್ತಾನೆ ಅಗತ್ಯದ ಸಮಯದಲ್ಲಿ ನಾನಿದ್ದೇನೆ ಎಂಬುದನ್ನು ಕೃತಿಯ ಮೂಲಕ ತೋರಿಸುತ್ತಾನೆ. ಇದು ನಂಬಿಕೆ ಮತ್ತು ಸುರಕ್ಷಿತ ಎನ್ನಿಸುವ ಭಾವನೆಯನ್ನು ಕೊಡುತ್ತದೆ.

4) ತೀರ್ಪುರಹಿತ ವರ್ತನೆ: ಯಾವುದೇ ಟೀಕೆ ಅಥವಾ ತೀರ್ಪು ಇಲ್ಲದೆ, ನಿಮ್ಮನ್ನು ನೀವು ಇರುವಂತೆಯೇ ಸ್ವೀಕರಿಸುತ್ತಾರೆ. ಅವರೊಡನೆ ನಿಜವಾದ ‘ನೀವು’ ನೀವಾಗಿಯೇ ಇರಬಲ್ಲಿರಿ. ಇದು ಮುಕ್ತ ಮತ್ತು ಪ್ರಾಮಾಣಿಕ ಸಂಬಂಧವನ್ನು ಬೆಳೆಸುತ್ತದೆ.

5) ಮಾರ್ಗದರ್ಶನ ಮತ್ತು ಬೆಂಬಲ: ನಿಜವಾದ ಗೆಳೆಯರು ನಿಮ್ಮ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಾರೆ ಮತ್ತು ನಿಮ್ಮ ಯಶಸ್ಸನ್ನು ಸಂಭ್ರಮಿಸುತ್ತಾರೆ. ಪ್ರೇರಣೆ ಮತ್ತು ಸ್ಫೂರ್ತಿಯ ಮೂಲವನ್ನು ಒದಗಿಸುತ್ತಾರೆ. ಕೆಟ್ಟದಾರಿ ತುಳಿಯುವಾಗ ಅಥವಾ ನಿಮಗೆ ತೊಂದರೆ ಆಗುವಾಗ ನಿಮ್ಮನ್ನು ಎಚ್ಚರಿಸಿ ನಿಮ್ಮ ಬದುಕಿನ ಪ್ರಗತಿಗೆ ಪೂರಕವಾಗಿ ನಿಲ್ಲುತ್ತಾರೆ.

6) ಉತ್ತಮ ಸಂವಹನ: ಒಳ್ಳೆಯ ಸ್ನೇಹಿತರು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಸಂವಹನ ನಡೆಸುತ್ತಾರೆ, ನಿಮ್ಮ ಆಲೋಚನೆಯನ್ನು ಗೌರವಿಸುತ್ತಲೇ, ಅದಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅವರ ಆಲೋಚನೆಗಳು ಮತ್ತು ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ.

7) ವೈಯಕ್ತಿಕ ಸ್ಪೇಸ್ ಬಗ್ಗೆ ಗೌರವ: ಉತ್ತಮ ಸ್ನೇಹಿತರು ಪರಸ್ಪರರ ವೈಯಕ್ತಿಕ ಗಡಿಗಳನ್ನು ಗುರುತಿಸುತ್ತಾರೆ ಮತ್ತು ಗೌರವಿಸುತ್ತಾರೆ, ನಿಮಗೆ ಯಾವಾಗ ಏಕಾಂತ ಕೊಡಬೇಕು ಮತ್ತು ಯಾವಾಗ ಹತ್ತಿರವಾಗಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಈ ಸಮತೋಲನವು ಆರೋಗ್ಯಕರ ಸ್ನೇಹವನ್ನು ಕಾಪಾಡಿಕೊಳ್ಳಲು ಸಹಾಯಕ.

8) ಒಟ್ಟಾಗಿ ಹಂಚಿಕೊಂಡ ಸಂತೋಷ ಮತ್ತು ಮನರಂಜನೆ: ಅವರು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಖುಷಿ ತರುತ್ತಾರೆ. ನಗು ಮತ್ತು ಸಕಾರಾತ್ಮಕ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಇಂಥ ಅಪರೂಪದ ಕ್ಷಣಗಳು ಹೃದಯದ ಒತ್ತಡವನ್ನು ನಿವಾರಿಸುತ್ತವೆ.

9) ಭಾವನಾತ್ಮಕ ಲಭ್ಯತೆ: ಒಬ್ಬ ಉತ್ತಮ ಸ್ನೇಹಿತೆ ಭಾವನಾತ್ಮಕವಾಗಿ ಯಾವಾಗಲೂ ಜೊತೆ ಇರುತ್ತಾಳೆ ಅಥವಾ ಲಭ್ಯವಿರುತ್ತಾಳೆ. ಇಂತಹ ಸ್ನೇಹಿತರು ಸ್ವಂತ ಭಾವನೆಗಳನ್ನು ಮತ್ತು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಿದ್ಧರಿರುತ್ತಾರೆ.

10) ಪ್ರಾಮಾಣಿಕತೆ: ಅವರ ವರ್ತನೆ ನೈಜವಾಗಿರುತ್ತದೆ. ಇಂಥವರು ಸದಾ ವಿಶ್ವಾಸಾರ್ಹರು, ಇವರೊಂದಿಗೆ ಹಂಚಿಕೊಂಡ ವಿಷಯಗಳು ನಿಮ್ಮಿಬ್ಬರನ್ನು ಬಿಟ್ಟು ಇನ್ನೊಂದು ಕಿವಿಗೆ ಹೋಗುವುದಿಲ್ಲ.

ಈ ಮೇಲಿನ ಚಿಹ್ನೆಗಳು ಭಾವನಾತ್ಮಕ ಸಂಪರ್ಕ, ಪರಸ್ಪರ ಗೌರವ ಮತ್ತು ಸ್ನೇಹದಲ್ಲಿ ಬೆಂಬಲದ ಪ್ರಾಮುಖ್ಯವನ್ನು ಎತ್ತಿ ತೋರಿಸುತ್ತವೆ. ನಮ್ಮ ಒಟ್ಟಾರೆ ಮಾನಸಿಕ ಆರೋಗ್ಯ ಮತ್ತು ಸಂತೋಷಕ್ಕೆ ತನ್ನದೇ ಆದ ಕೊಡುಗೆ ನೀಡುತ್ತವೆ.