Motivation: ನೀವು ಪ್ರತಿದಿನ ಖುಷಿಯಾಗಿರಬೇಕೆ? ನಿಮಗೆ ನೀವೇ ಈ 5 ಮಾತು ಹೇಳಿಕೊಳ್ಳಿ, ಅನುಸರಿಸಿ -ಮನದ ಮಾತು-column manada mathu 5 affiermations you should follow everyday to get better mind and good health bhavya vishwanath rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Motivation: ನೀವು ಪ್ರತಿದಿನ ಖುಷಿಯಾಗಿರಬೇಕೆ? ನಿಮಗೆ ನೀವೇ ಈ 5 ಮಾತು ಹೇಳಿಕೊಳ್ಳಿ, ಅನುಸರಿಸಿ -ಮನದ ಮಾತು

Motivation: ನೀವು ಪ್ರತಿದಿನ ಖುಷಿಯಾಗಿರಬೇಕೆ? ನಿಮಗೆ ನೀವೇ ಈ 5 ಮಾತು ಹೇಳಿಕೊಳ್ಳಿ, ಅನುಸರಿಸಿ -ಮನದ ಮಾತು

ಭವ್ಯಾ ವಿಶ್ವನಾಥ್: ನೆಮ್ಮದಿಯಾಗಿರಬೇಕು ಎನ್ನುವುದು ಎಲ್ಲರ ಆಸೆ. ಆದರೆ ನೆಮ್ಮದಿ ಎನ್ನುವುದು ಹೊರಗೆ ಎಲ್ಲಿಯೋ ಇಲ್ಲ; ಅದು ನಮ್ಮೊಳಗೇ ಇದೆ. ಆದರೆ ಅದನ್ನು ಕಂಡುಕೊಳ್ಳುವುದು, ಅನುಭವಿಸುವುದು ಹೇಗೆ? ಅದಕ್ಕೆ ಏನು ಮಾಡಬೇಕು? ಈ ಸರಳ ಬರಹದಲ್ಲಿದೆ ಉತ್ತರ.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು ಇರುತ್ತದೆ. ದೇಹ ಮತ್ತು ಮನಸ್ಸು ಬೇರೆ ಎನಿಸಿದರೂ ಒಂದು ಮತ್ತೊಂದರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಸ್ವಸ್ಥ ದೇಹ ಮತ್ತು ಮನಸ್ಸುಗಳು ನೆಮ್ಮದಿಯ ಬದುಕಿಗೆ ಅತ್ಯಗತ್ಯ. ನೆಮ್ಮದಿ ಸಾಧಿಸಲು ಮನಸ್ಸು ಪ್ರಶಾಂತವಾಗಿರಬೇಕು. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಈ 5 ಮಾತನ್ನು ನಮಗೆ ನಾವೇ ಹೇಳಿಕೊಂಡರೆ ಮನಸ್ಸು ತಣಿಯುತ್ತದೆ, ತಣ್ಣಗಾಗುತ್ತದೆ, ನೆಮ್ಮದಿಯ ಭಾವ ಅನುಸರಿಸುತ್ತದೆ. ಈ ಸರಳ ಸೂತ್ರವನ್ನೇ 'ದೃಢೀಕರಣ' (Affiemation) ಎಂದು ಹೇಳುವುದು. ನಿಮಗೂ ನೆಮ್ಮದಿ ಕಂಡುಕೊಳ್ಳುವ ಆಸೆಯಿದ್ದರೆ ಮರೆಯದೇ ಈ 5 ಮಾತನ್ನು ನಿಮ್ಮ ಮನಸ್ಸಿಗೆ ಹೇಳಿಕೊಡಿ.

1) ಕೃತಜ್ಞತೆ ಸಲ್ಲಿಸಿ: ನಾನು ಇನ್ನೂ ಜೀವಂತ ಇದ್ದೇನೆ. ಗಾಳಿ, ಬೆಳಕು, ನೀರು, ಆಹಾರ ಸೇವಿಸುತ್ತಿದ್ದೇನೆ. ಈ ಎಲ್ಲವನ್ನೂ ಒದಗಿಸುತ್ತಿರುವ ಆ ಪ್ರಕೃತಿಗೆ ನನ್ನ ನಮನ.

2) ಈ ಕ್ಷಣ, ಈ ದಿನ: ಈ ಕ್ಷಣ ನನ್ನದು, ಈ ದಿನ ನನ್ನದು. ಇಂದಿನ ಪ್ರತಿಕ್ಷಣದಲ್ಲಿಯೂ ಬದುಕುವ ಪ್ರಯತ್ನ ಮಾಡುತ್ತೇನೆ (I live in this moment). ನಿನ್ನೆ ಅಥವಾ ನಾಳೆ ನನ್ನ ನಿಯಂತ್ರಣದಲ್ಲಿ ಇಲ್ಲ. ಆದ್ದರಿಂದ ಅದರ ಕುರಿತು ಹೆಚ್ಚು ಚಿಂತೆ ಮಾಡುವುದಿಲ್ಲ.

3) ನನ್ನೊಳಗೇ ಇದೆ ಸಂತೋಷ: ನಾನು ಈ ದಿನ ಸಂತೋಷವಾಗಿರುವುದಕ್ಕೆ ಬಯಸುತ್ತೇನೆ. ಮತ್ತೊಬ್ಬರು ನನಗೆ ಸಂತೋಷ ನೀಡಬೇಕೆಂಬ ಅಪೇಕ್ಷೆಯ ಬದಲು ನನ್ನ ಸಂತೋಷವನ್ನು ನನ್ನೊಳಗೆ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ.

4) ಕೈಲಾದ ಸಹಾಯ ಮಾಡುವೆ: ನನ್ನ ಸುತ್ತಮುತ್ತಲಿರುವ ಎಲ್ಲ ಜೀವಿಗಳನ್ನು ಅನುಕಂಪ, ಪ್ರೀತಿ ಮತ್ತು ಗೌರವದಿಂದ ಕಾಣುತ್ತೇನೆ. ನನ್ನ ಕೈಲಾದ ಸಹಾಯ ಮಾಡುತ್ತೇನೆ. ಯಾರಿಗೂ ತೊಂದರೆ ಕೊಡುವುದಿಲ್ಲ ಮತ್ತು ಹಿಂಸಿಸುವುದಿಲ್ಲ.

5) ನನ್ನ ಆರೋಗ್ಯ, ನನ್ನ ಜವಾಬ್ದಾರಿ: ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ನನ್ನ ಜವಾಬ್ಧಾರಿ. ನನ್ನ ದೇಹದ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇನೆ. ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಚುಕೊಳ್ಳುತ್ತೇನೆ. ನನ್ನನ್ನು ನಾನು ಗೌರವಿಸುತ್ತೇನೆ ಮತ್ತು ಪ್ರೀತಿಸುತ್ತೇನೆ.

ಸ್ವಯಂದೃಢೀಕರಣ ಏಕೆ ಅಗತ್ಯ?

ನೆಮ್ಮದಿ ಕಾಪಾಡಿಕೊಳ್ಳಲು ನಾವು ಆಗಾಗ ಸ್ವಯಂ ದೃಢೀಕರಣಕ್ಕೆ ಒಳಪಡುವುದು ಅತ್ಯಗತ್ಯ. ಇದರಿಂದ ನಮ್ಮ ಗುರಿಗಳು ಸ್ಪಷ್ಟವಾಗುತ್ತವೆ. ನಾವು ಯಾವ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆ, ಮುನ್ನಡೆಯಬೇಕಿದೆ ಎನ್ನುವುದೂ ಸ್ಪಷ್ಟವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಒಂಟಿತನ ಹೋಗುತ್ತದೆ. ನಮ್ಮ ಜೊತೆಗೆ ನಾವಿರುವುದು, ನಮ್ಮೊಡನೆ ನಾವು ಮಾತನಾಡುವುದು ನಮಗೆ ರೂಢಿಯಾಗುತ್ತದೆ.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.