Kannada Rajyotsva: ಕರ್ನಾಟಕ ಏಕೀಕರಣದ ನೆನಪು; ಸ್ವಾತಂತ್ರ್ಯ ಹೋರಾಟದ ಮೊದಲೇ ಆರಂಭವಾಗಿತ್ತು ಕನ್ನಡಿಗರ ಹೋರಾಟ
ಕನ್ನಡ ಸುದ್ದಿ  /  ಜೀವನಶೈಲಿ  /  Kannada Rajyotsva: ಕರ್ನಾಟಕ ಏಕೀಕರಣದ ನೆನಪು; ಸ್ವಾತಂತ್ರ್ಯ ಹೋರಾಟದ ಮೊದಲೇ ಆರಂಭವಾಗಿತ್ತು ಕನ್ನಡಿಗರ ಹೋರಾಟ

Kannada Rajyotsva: ಕರ್ನಾಟಕ ಏಕೀಕರಣದ ನೆನಪು; ಸ್ವಾತಂತ್ರ್ಯ ಹೋರಾಟದ ಮೊದಲೇ ಆರಂಭವಾಗಿತ್ತು ಕನ್ನಡಿಗರ ಹೋರಾಟ

ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಕರ್ನಾಟಕ ಏಕೀಕರಣದ ಹೋರಾಟದ ನೆನಪುಗಳನ್ನು ನೆನಪಿಸಿಕೊಳ್ಳುವುದು ಸೂಕ್ತವಾಗಿದೆ. ಕನ್ನಡ ನಾಡಿನ ಇತಿಹಾಸದ ಪುಟಗಳಲ್ಲಿ ದಾಖಲಾದ ಕರ್ನಾಟಕ ಏಕೀಕರಣದ ಪ್ರಮುಖ ವಿಚಾರಗಳು ಇಲ್ಲಿವೆ.

Kannada Rajyotsva: ಕರ್ನಾಟಕ ಏಕೀಕರಣದ ನೆನಪು; ಹೀಗಿತ್ತು ಸ್ವಾಭಿಮಾನದ ಹೋರಾಟ
Kannada Rajyotsva: ಕರ್ನಾಟಕ ಏಕೀಕರಣದ ನೆನಪು; ಹೀಗಿತ್ತು ಸ್ವಾಭಿಮಾನದ ಹೋರಾಟ

ಕರ್ನಾಟಕ ಪ್ರತಿವರ್ಷ ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತದೆ. ಏಕೀಕೃತ ಕರ್ನಾಟಕಕ್ಕಾಗಿ ಕನ್ನಡಿಗರು ಮಾಡಿರುವ ಹೋರಾಟವನ್ನು ನೆನಪಿಸಿಕೊಳ್ಳಲು ಇದು ಸಕಾಲ. ವಿಶೇಷವೆಂದರೆ, ಕರ್ನಾಟಕ ಏಕೀಕರಣ ಹೋರಾಟ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕುವ ಮೊದಲೇ ಆರಂಭವಾಗಿತ್ತು. ಈ ಕುರಿತು ಒಂದಿಷ್ಟು ಮಾಹಿತಿಯನ್ನು ವಿಕಿಪೀಡಿಯಾ, ನಮ್ಮ ಕೆಪಿಎಸ್‌ಸಿ ವೆಬ್‌, ವಿವಿಧ ಪುಸ್ತಕಗಳು ಮುಂತಾದ ಹಲವು ಕಡೆಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.

  • ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಕರ್ನಾಟಕ ಹೀಗೆ ಇರಲಿಲ್ಲ. ಸುಮಾರು ಇಪತ್ತು ಆಡಳಿತಾತ್ಮಕ ಘಟಕಗಳಾಗಿ ಹಂಚಿ ಹೋಗಿತ್ತು. ಮೈಸೂರು ಸಂಸ್ಥಾನ, ಹೈದ್ರಾಬಾದ್​​ನ ನಿಜಾಮರು, ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಕೊಡಗು ಇತ್ಯಾದಿ ಹಲವು ಆಡಳಿತಾತ್ಮಕ ಘಟಕಗಳು ಆಗಿನ ಕರ್ನಾಟಕದಲ್ಲಿತ್ತು.
  • ಮೈಸೂರು ಸಂಸ್ಥಾನವು ಕನ್ನಡವನ್ನು ಅಧಿಕೃತ ಆಡಳಿತ ಭಾಷೆ ಮಾಡಿಕೊಂಡಿತ್ತು. ಈ ಮೈಸೂರು ಸಂಸ್ಥಾನ ಮಾತ್ರವಲ್ಲದೆ ಈಗಿನ ಕರ್ನಾಟಕದ ಮೂರನೇ ಎರಡು ಭಾಗ ಪರದೇಶಿಗರ ಆಳ್ವಿಕೆಗೆ ಒಳಪಟ್ಟಿತ್ತು. ಕನ್ನಡಿಗರು ಬಹುಸಂಖ್ಯೆಯಲ್ಲಿದ್ದರೂ ಆಡಳಿತದ ಹಕ್ಕು ಬೇರೆಯವರ ಕೈಯಲ್ಲಿತ್ತು. ಹುಬ್ಬಳ್ಳಿ ಕರ್ನಾಟಕವನ್ನು ಬಾಂಬೆ ಪ್ರಸಿಡೆನ್ಸಿ ಆಳುತ್ತಿತ್ತು. ಇಲ್ಲಿಯವರು ಮರಾಠಿಯಲ್ಲಿ ವ್ಯವಹಾರ ಮಾಡಬೇಕಿತ್ತು. ಹೈದರಾಬಾದ್‌ ಕರ್ನಾಟಕದಲ್ಲಿ ನಿಜಾಬರು ಉರ್ದು ಹೇರಿದ್ದರು. ಕರಾವಳಿ ಕರ್ನಾಟಕದ ಮೇಲೆ ಮದ್ರಾಸ್‌ ಪ್ರೆಸಿಡೆನ್ಸಿ ಆಳ್ವಿಕೆ ಇತ್ತು. ತಮಿಳರ ತುಳಿತಕ್ಕೆ ಒಳಪಟ್ಟಿದ್ದರು.
  • ಈ ರೀತಿ ಒಂದು ಕರ್ನಾಟಕವನ್ನು ಹಲವು ಘಟಕಗಳಾಗಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಾಷಾ ದಬ್ಬಾಳಿಕೆ ವಿರುದ್ಧ ಆಕ್ರೋಶವು ಕರ್ನಾಟಕ ಏಕೀಕರಣ ಚಳವಳಿಯಾಗಿ ರೂಪುಗೊಂಡಿತು.
  • 1890ರಲ್ಲಿ ಕರ್ನಾಟಕದ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲಾಯಿತು. ಆರ್‌ ದೇಶಪಾಂಡೆಯವರು ಕನ್ನಡ ಭಾಷೆಯ ಪುನರುತ್ಥಾನಕ್ಕಾಗಿ ಈ ಸಂಘವನ್ನು ಸ್ಥಾಪಿಸಿದರು. ಈ ಸಂಘದಡಿ ಒಟ್ಟು ಸೇರಿದ ಹಲವು ನಾಯಕರು ಪ್ರತಿಭಟನೆ ಆರಂಭಿಸಿದರು. ಇದರ ಯಶಸ್ಸಿನ ಬಳಿಕ ಹಲವು ಸಂಘಗಳು ಹುಟ್ಟಿಕೊಂಡವು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌, ಶಿವಮೊಗ್ಗದಲ್ಲಿ ಮರುವರ್ಷ ಕರ್ನಾಟಕ ಸಂಘ, 1955ರಲ್ಲಿ ಕಾಸರಗೋಡಿನಲ್ಲಿ ಕರ್ನಾಟಕ ಸಮಿತಿ ಹುಟ್ಟಿಕೊಂಡಿತು.
  • ನಿಮಗೆ ಗೊತ್ತೆ, 1856ರಲ್ಲಿಯೇ ಪ್ರತಿಭಟನೆಗಳು ಆರಂಭವಾಗಿದ್ದವು. ಆಲೂರು ವೆಂಕಟರಾವ್‌ ಅವರು ಪ್ರವೇಶಿಸಿದ ಬಳಿಕ ಇದು ತೀವ್ರವಾಯಿತು. 1903ರಲ್ಲಿ ವಿದ್ಯಾವರ್ಧಕ ಸಂಘದ ಸಭೆಯಲ್ಲಿ ಆಲೂರು ಅವರು ಕನ್ನಡ ಭಾಷಿಕ ಎಲ್ಲಾ ಪ್ರದೇಶಗಳು ಮೈಸೂರು ಸಂಸ್ಥಾನದ ಜತೆ ಸೇರಬೇಕು ಎಂಬ ಬೇಡಿಕೆ ಇಟ್ಟರು.
  • ಅಲ್ಲಿಂದ ಆಲೂರು ವೆಂಕಟರಾವ್‌ ಅವರು ಕರ್ನಾಟಕ ಏಕೀಕರಣ ಹೋರಾಟದ ನೇತೃತ್ವ ವಹಿಸಿದರು. ಬಂಗಾಳದ ವಿಭಜನೆ ಅವರಿಗೆ ಸ್ಪೂರ್ತಿಯಾಯಿತು. 1907 ಮತ್ತು1908ರಲ್ಲಿ ಅಖಿಲ ಕರ್ನಾಟಕ ಬರಹಗಾರರ ಸಮ್ಮೇಳನವನ್ನು ಧಾರವಾಡದಲ್ಲಿ ಆಯೋಜಿಸಿದರು. 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಮೈಸೂರು ದೊರೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ ಪರಿಷತ್ ನೇತೃತ್ವವಹಿಸಿದರು.
  • ಆಲೂರು ವೆಂಕಟರಾವ್‌ ಅವರು 1912ರಲ್ಲಿ ಕರ್ನಾಟಕ ಗತ ವೈಭವ ಎಂಬ ಕೃತಿಯನ್ನು ಪರಿಚಯಿಸಿದರು. ವಿಜಯನಗರದ ಇತಿಹಾಸದಿಂದ ಮರಾಠಿಗರು, ನಿಜಾಮರ ಆಳ್ವಿಕೆ, ಬ್ರಿಟಿಷ್‌ ಆಧಿಪತ್ಯ ಎಲ್ಲ ಮಾಹಿತಿ ಇದರಲ್ಲಿತ್ತು. ಈ ಕೃತಿಯು ಕನ್ನಡಿಗರಿಗೆ ಹೊಸ ಸ್ಪೂರ್ತಿ ನೀಡಿತು. ಏಕೀಕರಣದ ಹೋರಾಟ ಮತ್ತೊಂದು ಮಜಲಿಗೆ ತೆರೆದುಕೊಳ್ಳಲು ಕಾರಣವಾಯಿತು.
  • ಆಗ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಆರಂಭವಾಯಿತು. ಇದೇ ಸಮಯದಲ್ಲಿ ಪ್ರತ್ಯೇಕ ಕರ್ನಾಟಕ ಸ್ಥಾಪನೆಗೆ ಹೋರಾಟಗಳು ಜೋರಾಯಿತು.
  • ಗುಡ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್ ಹೆಚ್ ದೇಶಪಾಂಡೆ, ರಂಗರಾವ್ ದಿವಾಕರ್, ಶ್ರೀನಿವಾಸ್​ರಾವ್ ಕೌಜಲಗಿ,, ಶ್ರೀನಿವಾಸ್ ರಾವ್ ಮಂಗಳ್ವಾಡೆ, ಕೆಂಗಲ್ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಎಸ್ ನಿಜಲಿಂಗಪ್ಪ, ಟಿ ಮರಿಯಪ್ಪ, ಸುಬ್ರಮಣ್ಯ, ಸಾಹುಕಾರ್ ಚೆನ್ನಯ್ಯ, ಬಿ.ವಿ ಕಕ್ಕಿಲ್ಲಾಯ, ಆ.ನ.ಕೃ ಹೀಗೆ ಹಲವರು ತಮ್ಮದೇ ರೀತಿಯಲ್ಲಿ ಕನ್ನಡ ಪರ ಹೋರಾಟಕ್ಕೆ ಧುಮುಕಿದರು.
  • 1920ರಲ್ಲಿ ಕರ್ನಾಟಕ ರಾಜ್ಯ ರಾಜಕೀಯ ಸಮ್ಮೇಳನ ಧಾರವಾಡದಲ್ಲಿ ನಡೆಯಿತು. ವಿ.ಪಿ. ಮಾಧವ ರಾವ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಎಲ್ಲಾ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣಕ್ಕೆ ಅವಿರೋಧ ನಿರ್ಣಯವನ್ನು ಅಂಗೀಕರಿಸಲಾಯಿತು.
  • 1920ರಲ್ಲಿ ನಾಗ್ಪುರ ಕಾಂಗ್ರೆಸ್‌ ಅಧಿವೇಶನದಲ್ಲಿ 800 ಮಂದಿ ಕನ್ನಡಿಗರ ನಿಯೋಗ ಪಾಲ್ಗೊಂಡಿತ್ತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಚನೆಯಾಯಿತು.
  • ಎಸ್ ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಮುಂತಾದ ಮುಖಂಡರು ಕನ್ನಡ ಚಳವಳಿಯ ನೇತೃತ್ವ ವಹಿಸಿದರು. ಮುಂದೆ ಇವರು ಮುಖ್ಯಮಂತ್ರಿಗಳಾದರು.
  • 1924ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನ ಸಂಘಟಿಸಲಾಗಿತ್ತು. ಗಾಂಧೀಜಿಯವರು ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯೇ ಕರ್ನಾಟಕ ಏಕೀಕರಣ ಸಮ್ಮೇಳನವನ್ನೂ ಆಯೋಜಿಸಲಾಗಿತ್ತು.
  • ಬಾಂಬೆಯಲ್ಲಿ 1946ರ ಜನವರಿ 10ರಂದು ಏಕೀಕರಣ ಚಳವಳಿಯ ಸಮ್ಮೇಳನ ನಡೆಯಿತು. ಸರ್ದಾರ್ ಪಟೇಲ್ ಅವರು ಈ ಸಮ್ಮೇಳವನ್ನು ಉದ್ಘಾಟಿಸಿದರು.
  • ಸ್ವಾತಂತ್ರ್ಯಾನಂತರವೂ ಹೈದ್ರಾಬಾದ್​​ನ ನಿಜಾಮರು ಭಾರತ ಒಕ್ಕೂಟ ಸೇರಲು ನಿರಾಕರಿಸಿದರು. ಬಲಪ್ರಯೋಗಿಸಿ ಹೈದ್ರಾಬಾದನ್ನು ಭಾರತ ಒಕ್ಕೂಟಕ್ಕೆ ಸೇರ್ಪಡೆ ಮಾಡಲಾಯಿತು.
  • ಕಾಂಗ್ರೆಸ್ ಮಾಡಿದ ಮೋಸಕ್ಕೆ ಪ್ರತಿಯಾಗಿ ಕರ್ನಾಟಕ ಏಕೀಕರಣ ಪಕ್ಷ ಸ್ಥಾಪಿಸಿ 1951ರ ಚುನಾವಣೆಯಲ್ಲಿ ಕನ್ನಡ ಹೋರಾಟಗಾರರು ಸ್ಪರ್ಧಿಸಿದರು. 1953ರ ಹೈದ್ರಾಬಾದ್ ಕಾಂಗ್ರೆಸ್ ಅಧಿವೇಶನದಲ್ಲಿ ಆಂಧ್ರ ರಚನೆಗೆ ನಿರ್ಣಯ ಅಂಗೀಕರಿಸಿ, ಕರ್ನಾಕಟದ ಹೆಸರು ಕೈ ಬಿಡಲಾಯಿತು. ಹುಬ್ಬಳ್ಳಿ ಭಾಗದಲ್ಲಿ ಜನ ದಂಗೆ ಎದ್ದರು.
  • ಸಾಕಷ್ಟು ಒತ್ತಡಗಳ ಬಳಿಕ ಈ ಸಮಿತಿಯು ಭಾಷೆ ಆಧಾರದಲ್ಲಿ ರಾಜ್ಯಗಳ ಪುನರಚನೆಗೆ ಶಿಫಾರಸ್ಸು ಮಾಡಿತು. ಇದನ್ನು ಸಂಸತ್ ಕೂಡಾ ಅಂಗೀಕರಿಸಿತು. ಅಂತೂ ಇಂತೂ ಕರ್ನಾಟಕ ಒಗ್ಗೂಡಿತು. ಕೇರಳದ ಕಿರೀಟದಲ್ಲಿರುವ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಇಂದಿಗೂ ಹೋರಾಟ ನಡೆಯುತ್ತಲೇ ಇದೆ. 1973ರ ನವೆಂಬರ್ 1 ರಂದು ಮುಖ್ಯಮಂತ್ರಿ ದೇವರಾಜ್ ಅರಸ್ ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು.

(ಪೂರಕ ಮಾಹಿತಿ: ನಮ್ಮ ಕೆಪಿಎಸ್‌ಸಿ ವೆಬ್‌ ತಾಣ, ವಿಕಿಪೀಡಿಯಾ)

Whats_app_banner