ತವಾ ಮೇಲೆ ಇಟ್ಟ ತಕ್ಷಣ ಚಪಾತಿ ಉಬ್ಬಿ ಬರಬೇಕಾ: ಚಪಾತಿ ದಿನವಿಡೀ ಮೃದುವಾಗಿರಲು ಈ ಟ್ರಿಕ್ಸ್ ಪಾಲಿಸಿ
ಕೆಲವೊಮ್ಮೆ ಚಪಾತಿ ಮಾಡುವಾಗ ಸುಡುವುದು, ಉಬ್ಬಿ ಬರುವುದಿಲ್ಲ ಇಂತಹ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಈ ಸಲಹೆಗಳನ್ನು ಪಾಲಿಸಿದರೆ ಚಪಾತಿಯನ್ನು ತವಾ ಮೇಲೆ ಇಟ್ಟ ತಕ್ಷಣ ಚಪಾತಿ ಉಬ್ಬಿ ಬರುತ್ತದೆ. ಈ ಟ್ರಿಕ್ಸ್ ಪಾಲಿಸಿದರೆ ಖಂಡಿತಾ ಚಪಾತಿ ಉಬ್ಬಿ ಬರುವುದರಲ್ಲಿ ಸಂಶಯವಿಲ್ಲ.
ಭಾರತೀಯ ಆಹಾರದಲ್ಲಿ ಚಪಾತಿ ಅತ್ಯಂತ ಪ್ರಮುಖವಾದದ್ದು. ಉತ್ತರ ಭಾರತದಲ್ಲಿ ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ದಿನಕ್ಕೆರಡು ಬಾರಿ ಚಪಾತಿ ತಯಾರಿಸುತ್ತಾರೆ. ದಕ್ಷಿಣ ಭಾರತೀಯರು ಕೂಡ ಬಹುತೇಕರು ಪ್ರತಿದಿನ ಚಪಾತಿ ಸೇವಿಸುತ್ತಾರೆ. ಆದರೂ, ಬಹುತೇಕ ಮಂದಿಗೆ ಚೆನ್ನಾಗಿ ಚಪಾತಿ ಮಾಡುವುದು ಹೇಗೆ ಎಂಬುದು ತಿಳಿದಿಲ್ಲ. ಚಪಾತಿಯನ್ನು ಬೇಯಿಸಿ ಇರಿಸಿದಾಗ ಕೆಲವೊಮ್ಮೆ ಗಟ್ಟಿಯಾಗುತ್ತದೆ. ಕೆಲವೊಮ್ಮೆ ಚಪಾತಿ ಸುಡುತ್ತದೆ, ಉಬ್ಬಿ ಬರುವುದಿಲ್ಲ ಇಂತಹ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಈ ಸಲಹೆಗಳನ್ನು ಪಾಲಿಸಿದರೆ ಚಪಾತಿಯನ್ನು ತವಾ ಮೇಲೆ ಇಟ್ಟ ತಕ್ಷಣ ಚಪಾತಿ ಉಬ್ಬಿ ಬರುತ್ತದೆ. ಈ ಟ್ರಿಕ್ಸ್ ಪಾಲಿಸಿದರೆ ಖಂಡಿತಾ ಚಪಾತಿ ಉಬ್ಬಿ ಬರುವುದರಲ್ಲಿ ಸಂಶಯವಿಲ್ಲ.
ಚಪಾತಿ ಮೃದುವಾಗಲು ಇಲ್ಲಿದೆ ಸಲಹೆ
ಹಿಟ್ಟನ್ನು ಸರಿಯಾಗಿ ಬೆರೆಸಿದಾಗ ಮಾತ್ರ ಚಪಾತಿ ಮೃದು ಮತ್ತು ಉತ್ತಮವಾಗಿರುತ್ತದೆ. ಮೊದಲಿಗೆ ಗೋಧಿ ಹಿಟ್ಟನ್ನು ನೀರು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಬೇಕು. ಸ್ವಲ್ಪ ಸ್ವಲ್ಪವೇ ನೀರು ಹಾಕಿ ಹಿಟ್ಟನ್ನು ಕಲಸಬೇಕು. ಬಳಿಕ ಚೆನ್ನಾಗಿ ನಾದಬೇಕು. ಕನಿಷ್ಠ 10 ನಿಮಿಷ ಆದ್ರೂ ಚೆನ್ನಾಗಿ ನಾದಬೇಕು. ಬಳಿಕ ಮೇಲೆ ಎಣ್ಣೆ ಸವರಿ ಅದಕ್ಕೆ ಒದ್ದೆ ಬಟ್ಟೆ ಮುಚ್ಚಿಡಬೇಕು. ಇಲ್ಲವೇ ತಟ್ಟೆ ಮುಚ್ಚಿಡಬೇಕು. ಕನಿಷ್ಠ 15 ನಿಮಿಷಗಳ ಕಾಲ ಹಾಗೆಯೇ ಇರಿಸಬೇಕು. ಚಪಾತಿ ಮಾಡಲು ಇದು ಹಿಟ್ಟನ್ನು ಚೆನ್ನಾಗಿ ಹೊಂದಿಸುತ್ತದೆ. ಬಳಿಕ ಚಪಾತಿ ಮಾಡುವಾಗ ಒಂದೊಂದಾಗಿ ಉಂಡೆಗಳನ್ನು ತೆಗೆದು ಲಟ್ಟಣಿಗೆಯಲ್ಲಿ ಲಟ್ಟಿಸಬೇಕು. ಈ ವೇಳೆ ಜಾಸ್ತಿ ಚಪಾತಿ ಹಿಟ್ಟನ್ನು ತೆಗೆದುಕೊಳ್ಳಬಾರದು. ಆದಷ್ಟು ಹಿಟ್ಟನ್ನು ಕಡಿಮೆ ಬಳಸಬೇಕು. ಒಣ ಹಿಟ್ಟನ್ನು ಚಪಾತಿಗೆ ಕನಿಷ್ಠ ಎರಡು ಬಾರಿ ಅನ್ವಯಿಸಿದರೆ ಸಾಕು.
ಲಟ್ಟಿಸಿದ ಚಪಾತಿಯನ್ನು ಸ್ಟೌವ್‌ನಲ್ಲಿಟ್ಟ ಪ್ಯಾನ್ ಬಿಸಿಯಾದ ಮೇಲೆ ಹಾಕಿ, ಎರಡೂ ಬದಿ ಬೇಯಿಸಬೇಕು. ಈ ವೇಳೆ ಚಪಾತಿ ಉಬ್ಬಿ ಬರುತ್ತದೆ. ಸ್ವಲ್ಪ ಬೇಯಿಸಿದ ಬಳಿಕ ನೇರವಾಗಿ ಬೆಂಕಿಯ ಜ್ವಾಲೆಗೂ ಚಪಾತಿಯನ್ನು ಹಾಕಿ ಬೇಯಿಸಬಹುದು. ಇದರಿಂದ ಚಪಾತಿ ಉಬ್ಬಿ ಬರುತ್ತದೆ. ಈ ರೀತಿ ಮಾಡುವುದರಿಂದ ಯಾವಾಗಲೂ ನೇರವಾದ ಭಾಗವನ್ನು ಜ್ವಾಲೆಯ ಮೇಲೆ ಇರಿಸಬೇಕು. ಈ ವೇಳೆ ರೊಟ್ಟಿಯನ್ನು ವೃತ್ತಾಕಾರದಲ್ಲಿ ತಿರುಗಿಸಿ. ಈ ರೀತಿ ಮಾಡುವುದರಿಂದ ಚಪಾತಿ ಉಬ್ಬಿ ಬರುತ್ತದೆ.
ಕೆಲವರು ಚಪಾತಿಯನ್ನು ಸರಿಯಾಗಿ ಬೇಯಿಸುವುದಿಲ್ಲ. ಅಥವಾ ಹಿಟ್ಟನ್ನು ಚೆನ್ನಾಗಿ ನಾದಿರುವುದಿಲ್ಲ. ಹೀಗಾದಾಗ ಚಪಾತಿ ಚೆನ್ನಾಗಿ ಮೂಡಿ ಬರುವುದಿಲ್ಲ. ಅಷ್ಟೇ ಅಲ್ಲ ಸ್ವಲ್ಪ ಸಮಯದ ಬಳಿಕ ಅದು ಗಟ್ಟಿಯಾಗುತ್ತದೆ. ಇನ್ನು ಚಪಾತಿ ಬೇಯಿಸಬೇಕಾದರೆ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಇದಕ್ಕೆ ಎಣ್ಣೆ ಹಚ್ಚಬಾರದು. ಕೆಲವರು ಬೇಯಿಸುವಾಗ ಎರಡೂ ಬದಿ ಎಣ್ಣೆ ಹಚ್ಚುತ್ತಾರೆ. ಇದರಿಂದ ಚಪಾತಿ ಉಬ್ಬಿ ಬರುವುದಿಲ್ಲ. ಬೇಗನೆ ಗಟ್ಟಿಯಾಗುತ್ತದೆ.
ಕೆಲವರು ಹಿಟ್ಟು ಕಲಸುವಾಗಲು ಎಣ್ಣೆ ಹಾಕುತ್ತಾರೆ. ಈ ರೀತಿಯೂ ಮಾಡಬಾರದು. ಹಿಟ್ಟು ನಾದಿಟ್ಟ ನಂತರ ಮೇಲಷ್ಟೇ ಎಣ್ಣೆ ಸವರಬೇಕು. ನಂತರ ಚಪಾತಿ ಬೇಯಿಸುವಾಗಲೂ ಎಣ್ಣೆ ಹಾಕಬಾರದು. ಹೀಗೆ ಮಾಡಿದರೆ ಚಪಾತಿ ಗಟ್ಟಿಯಾಗುತ್ತದೆ. ಚಪಾತಿ ಬೇಯಿಸಿ ಅದನ್ನು ಪ್ಯಾನ್‌ನಿಂದ ತೆಗೆದ ನಂತರ ತುಪ್ಪ ಅಥವಾ ಎಣ್ಣೆ ಸವರಬಹುದು. ಈ ರೀತಿ ಮಾಡುವುದರಿಂದ ದಿನವಿಡೀ ಚಪಾತಿ ಮೃದುವಾಗಿರುತ್ತದೆ.