ಢಾಬಾ ಶೈಲಿ ಆಲೂ ಪರೋಟ ನಿಮಗೆ ಇಷ್ಟನಾ, ಇದನ್ನು ಮಾಡೋದು ತುಂಬಾ ಸುಲಭ ಕಣ್ರಿ, ರೆಸಿಪಿ ಇಲ್ಲಿದೆ ನೋಡಿ, ಮನೆಯಲ್ಲಿ ಮಾಡ್ಕೊಳ್ಳಿ
ಢಾಬಾಗಳಲ್ಲಿ ಮಾಡುವ ಪಂಜಾಬಿ ಶೈಲಿ ಆಲೂ ಪರೋಟದ ರುಚಿಯನ್ನು ನೀವು ಸವಿದಿರಬಹುದು. ಅದನ್ನ ಮಾಡೋದು ಹೇಗೆಪ್ಪಾ, ನಾವು ಒಮ್ಮೆ ಮನೆಯಲ್ಲಿ ಮಾಡ್ಬೇಕು ಅಂತ ನೀವು ಅಂದುಕೊಂಡಿರಬಹುದು. ಇದನ್ನ ಮಾಡೋದು ಬಹಳ ಸುಲಭ. ಅಲ್ಲದೇ ತಕ್ಷಣಕ್ಕೆ ರೆಡಿ ಆಗುವ ರೆಸಿಪಿ ಇದು. ಈ ಆಲೂ ಪರೋಟ ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ನೋಡಿ.
ಚಳಿಗಾಲದಲ್ಲಿ ಏನಾದ್ರೂ ತಿನ್ನಬೇಕು ಅಂತ ಪದೇ ಪದೇ ಅನ್ನಿಸೋದು ಸಹಜ. ಹಾಗಂತ ಆರೋಗ್ಯ ಕೆಡುವ ಆಹಾರಗಳನ್ನು ತಿಂದ್ರೆ ಹೊಟ್ಟೆ ಕೆಡುತ್ತೆ. ಹಾಗಾಗಿ ಬಾಯಿಗೂ ರುಚಿಸುವ ಆರೋಗ್ಯಕ್ಕೂ ಹಿತ ಎನ್ನಿಸುವ ಆಹಾರಗಳನ್ನು ತಿನ್ನಬೇಕು. ಅಂತಹ ಆಹಾರಗಳಲ್ಲಿ ಗೋಧಿಹಿಟ್ಟಿನಿಂದ ಮಾಡುವ ಪರೋಟವು ಒಂದು. ಅದರಲ್ಲೂ ಢಾಬಾ ಶೈಲಿಯ ಪರೋಟ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ.
ನೀವು ಢಾಬಾ ಶೈಲಿಯ ಆಲೂ ಪರೋಟವನ್ನು ಹೊರಗಡೆ ತಿಂದಿರಬಹುದು. ಮಾತ್ರವಲ್ಲ ಅದರ ರುಚಿಗೆ ಫಿದಾ ಆಗಿರಬಹುದು. ಇದನ್ನು ಹೇಗಪ್ಪಾ ಮಾಡೋದು ಅಂತ ಗೂಗಲ್ ಮಾಡಿರಬಹುದು. ಈ ಪರೋಟ ಮಾಡೋದು ತುಂಬಾ ಸುಲಭ, ಅದಕ್ಕೆ ಕಡಿಮೆ ಸಾಮಗ್ರಿ ಹಾಗೂ ಸಮಯ ಸಾಕಾಗುತ್ತದೆ. ಮೊಸರು, ಉಪ್ಪಿನಕಾಯಿ ಅಥವಾ ಹಸಿರು ಚಟ್ನಿಯೊಂದಿಗೆ ಆಲೂ ಪರೋಟ ನೆಂಜಿ ತಿನ್ನೋಕೆ ಸೂಪರ್ ಆಗಿರುತ್ತೆ. ಹಾಗಾದರೆ ಆಲೂ ಪರೋಟ ಮಾಡೋದು ಹೇಗೆ ನೋಡೋಣ.
ಆಲೂ ಪರೋಟ ರೆಸಿಪಿ
ಬೇಕಾಗುವ ಸಾಮಗ್ರಿಗಳು
ಗೋಧಿಹಿಟ್ಟು – 2ಕಪ್, ಬೇಯಿಸಿದ ಆಲೂಗೆಡ್ಡೆ – 5, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಕೊತ್ತಂಬರಿ ಸೊಪ್ಪು – ಕಾಲು ಕಪ್, ಕೊತ್ತಂಬರಿ ಜೀರಿಗೆ ಪುಡಿ – 1 ಚಮಚ, ಹಸಿಮೆಣಸಿನ ಪೇಸ್ಟ್ – 1ಚಮಚ, ಅರಿಸಿನ – ಕಾಲು ಚಮಚ, ಖಾರದಪುಡಿ – 1 ಚಮಚ, ಮ್ಯಾಗಿ ಮಸಾಲ – 2 ಚಮಚ, ಎಣ್ಣೆ – 3 ಚಮಚ, ಕರಿಯಲು ಎಣ್ಣೆ ಅಥವಾ ತುಪ್ಪ, ಉಪ್ಪು – ರುಚಿಗೆ ತಕ್ಕಷ್ಟು,
ಆಲೂ ಪರೋಟ ಮಾಡುವ ವಿಧಾನ
ಆಲೂ ಪರಾಠಾ ಮಾಡಲು, ಮೊದಲು ದೊಡ್ಡ ಪಾತ್ರೆಯಲ್ಲಿ ಹಿಟ್ಟನ್ನು ತೆಗೆದುಕೊಂಡು, 3 ಚಮಚ ಎಣ್ಣೆ ಮತ್ತು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ನೀರು ಸೇರಿಸಿ ಚೆನ್ನಾಗಿ ನಾದಿಕೊಂಡು ಹಿಟ್ಟು ತಯಾರಿಸಿ. ಹಿಟ್ಟನ್ನು ಬೆರೆಸಿದ ನಂತರ, ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಚ್ಚಿ ಮತ್ತು 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಬೇಯಿಸಿಕೊಂಡ ಆಲೂಗೆಡ್ಡೆಗಳನ್ನು ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಟ್ಟುಕೊಳ್ಳಿ. ಉಳಿದ ಮಸಾಲೆಗಳೊಂದಿಗೆ ಈರುಳ್ಳಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಪೇಸ್ಟ್, ಅರಿಶಿನ ಸೇರಿಸಿ. ಮಸಾಲೆಗಳಿಗೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣದಿಂದ ಸಮಾನ ಗಾತ್ರದ ಉಂಡೆಗಳನ್ನು ಮಾಡಿ. ಮೊದಲೇ ಕೆಲಸಿಟ್ಟ ಹಿಟ್ಟನ್ನು ಮತ್ತೆ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಅದರಿಂದ ಅಷ್ಟೇ ದೊಡ್ಡ ಉಂಡೆಗಳನ್ನು ಮಾಡಿ. ನಂತರ ಹಿಟ್ಟಿನ ಉಂಡೆಯನ್ನು ಅಂಗೈ ಗಾತ್ರಕ್ಕೆ ತಟ್ಟಿಕೊಂಡ ಅದರೊಳಗೆ ಆಲೂಗೆಡ್ಡೆ ಮಿಶ್ರಣದ ಉಂಡೆ ಇರಿಸಿ. ಇದನ್ನು ಸುತ್ತಲೂ ನೀಟಾಗಿ ಮಡಿಸಿ. ನಂತರ ಚೆನ್ನಾಗಿ ಲಟ್ಟಿಸಿ. ಈಗ ಪ್ಯಾನ್ ಬಿಸಿ ಮಾಡಿ. ಎಣ್ಣೆ ಅಥವಾ ತುಪ್ಪ ಹಾಕಿ. ಅದರ ಮೇಲೆ ಲಟ್ಟಿಸಿಟ್ಟುಕೊಂಡ ಪರೋಟ ಇರಿಸಿ. ಇದನ್ನು ಎರಡೂ ಕಡೆ ಚೆನ್ನಾಗಿ ಬೇಯಿಸಿ. ಈಗ ನಿಮ್ಮ ಮುಂದೆ ರುಚಿಯಾದ ಢಾಬಾ ಶೈಲಿಯ ಆಲೂ ಪರೋಟ ತಿನ್ನಲು ಸಿದ್ಧ. ಇದನ್ನು ನೀವು ಮೊಸರು, ಉಪ್ಪಿನಕಾಯಿ ತಿಂದ್ರೆ ಆಹಾ ಅದರ ರುಚಿಯನ್ನ ಸವಿದವರೇ ಬಲ್ಲರು.