ಆರೋಗ್ಯಕ್ಕೂ ಹಿತ ಎನ್ನಿಸಿ, ಫಿಟ್ನೆಸ್ ಕಾಯ್ದುಕೊಳ್ಳಲು ನೆರವಾಗುವ ಸ್ಪೆಷಲ್ ರೆಸಿಪಿಯಿದು; ಓಟ್ಸ್-ಬೀಟ್ರೂಟ್ ಮಸಾಲಾ ದೋಸೆ ಮಾಡೋದು ಹೇಗೆ ನೋಡಿ
Oats Beetroot Masala Dosa: ಪೌಷ್ಠಿಕ ಹಾಗೂ ಕೊಲೆಸ್ಟ್ರಾಲ್ ಇರದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆ ತುಂಬುವುದು ಮಾತ್ರವಲ್ಲದೆ,ತೂಕ ಹೆಚ್ಚಳವಾಗದಿರಲು ಸಹ ಕಾರಣವಾಗುತ್ತದೆ. ಓಟ್ಸ್ ಹಾಗೂ ಬೀಟ್ರೂಟ್ ಸೇವನೆ ಮಾಡುವುದರಿಂದ ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಬಹಳ ಉಪಯುಕ್ತವಾಗಿದೆ. ಇಲ್ಲಿದೆ ಈ ಬಗ್ಗೆ ಮಾಹಿತಿ.
ಇಂದು ಅನೇಕ ಮಂದಿ ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅನೇಕರು ವ್ಯಾಯಾಮ ಮಾಡುವುದು, ಜಿಮ್‍ಗೆ ಸೇರಿ ದೇಹ ದಂಡನೆ ಮಾಡುವುದು, ಡಯೆಟ್ ಮಾಡುವುದು ಇತ್ಯಾದಿಗಳತ್ತ ಮೊರೆ ಹೋಗುತ್ತಿದ್ದಾರೆ. ವಾರ ಪೂರ್ತಿ ದೇಹ ದಂಡಿಸಿ ವೀಕೆಂಡ್‍ನಲ್ಲಿ ಯಾರ್ರಾಬಿರ್ರಿ ತಿಂದರೆ ಮತ್ತೆ ತೂಕ ಹೆಚ್ಚಳವಾಗುತ್ತದೆ. ಇದರಿಂದ ತೂಕ ಇಳಿಕೆ ಪ್ರಯಾಣದಲ್ಲಿ ನಿಮ್ಮ ಪ್ರಯತ್ನಕ್ಕೆ ಹೊಡೆತ ಬೀಳುತ್ತದೆ. ಇನ್ನೂ ಕೆಲವರು ಅತ್ಯಂತ ಕಡಿಮೆ ಆಹಾರ ಸೇವಿಸುತ್ತಾರೆ. ಆದರೆ, ನಿಮ್ಮ ತೂಕವನ್ನು ಕಳೆದುಕೊಳ್ಳಲು ಕಡಿಮೆ ಆಹಾರವನ್ನು ಸೇವಿಸಿ ಹಸಿವಿನಿಂದ ಬಳಲುವುದು ಸರಿಯಲ್ಲ. ಪೌಷ್ಠಿಕ ಹಾಗೂ ಕೊಲೆಸ್ಟ್ರಾಲ್ ಇರದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆ ತುಂಬುವುದು ಮಾತ್ರವಲ್ಲದೆ, ತೂಕ ಹೆಚ್ಚಳವಾಗದಿರಲು ಸಹ ಕಾರಣವಾಗುತ್ತದೆ. ಓಟ್ಸ್ ಹಾಗೂ ಬೀಟ್ರೂಟ್ ಸೇವನೆ ಮಾಡುವುದರಿಂದ ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಬಹಳ ಉಪಯುಕ್ತವಾಗಿದೆ.
ತೂಕ ನಷ್ಟಕ್ಕೆ ಓಟ್ಸ್ ಸಹಕಾರಿ
ಓಟ್ಸ್ ನಲ್ಲಿ ಫೈಬರ್ ಅಂಶ ಇರುವುದರಿಂದ ಇದು ಹಸಿವನ್ನು ಕಡಿಮೆ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಹೆಚ್ಚು ಹೊತ್ತಿನ ಕಾಲ ಹೊಟ್ಟೆ ತುಂಬಿದ ಅನುಭವ ಇರುತ್ತದೆ. ಓಟ್ಸ್ ನಲ್ಲಿ ಸತು, ಮೆಗ್ನೀಸಿಯಮ್, ರಂಜಕ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ಫೈಬರ್ ಮತ್ತು ಬೀಟಾ-ಗ್ಲುಕನ್ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಡೆಸುತ್ತದೆ.
ತೂಕ ಇಳಿಕೆಯಲ್ಲಿ ಬೀಟ್ರೂಟ್ ಪಾತ್ರ
ಓಟ್ಸ್ ಜೊತೆಗೆ ಬೀಟ್ರೂಟ್ ಕೂಡ ತೂಕ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರಿಗೆ ಇದೊಂದು ಪರಿಪೂರ್ಣ ಆಹಾರ ಎಂದರೆ ತಪ್ಪಲ್ಲ. ಅಲ್ಲದೆ, ಬೀಟ್ರೂಟ್ ಹಿಮೋಗ್ಲೋಬಿನ್ ಕೊರತೆಯನ್ನು ನಿಭಾಯಿಸಲು ಕೂಡ ಸಹಾಯ ಮಾಡುತ್ತದೆ. ಇದನ್ನು ಸಲಾಡ್‌ಗಳಿಂದ ಸೂಪ್‌ಗಳವರೆಗೆ ಸವಿಯಬಹುದು. ಜೊತೆಗೆ ಓಟ್ಸ್ ಜೊತೆಗೆ ಬೀಟ್ರೂಟ್ ಸೇರಿಸಿ ಮಸಾಲಾ ದೋಸಾವನ್ನು ತಯಾರಿಸಿ ಸವಿಯಬಹುದು. ಹಾಗಿದ್ದರೆ ಓಟ್ಸ್-ಬೀಟ್ರೂಟ್ ಮಸಾಲಾ ದೋಸಾ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಓಟ್ಸ್ ಬೀಟ್ರೂಟ್ ಮಸಾಲಾ ದೋಸಾ ರೆಸಿಪಿ
ಟೋಸ್ಟ್ ಓಟ್ಸ್ ತೆಗೆದುಕೊಂಡು ಅದಕ್ಕೆ ಚಿರೋಟಿ ರವೆಯನ್ನು ಸೇರಿ ಮಿಶ್ರಣ ಮಾಡಿ. ಇನ್ನೊಂದೆಡೆ ಬೀಟ್ರೂಟ್ ಅನ್ನು ಕತ್ತರಿಸಿ ಅದನ್ನು ಬೇಯಿಸಿ. ಬೆಂದ ನಂತರ ಸ್ವಲ್ಪ ತಣ್ಣಗಾಗಲು ಬಿಟ್ಟು, ಮಿಕ್ಸಿಯಲ್ಲಿ ಗ್ರೈನ್ ಮಾಡಿ. ಈ ಬೀಟ್ರೂಟ್ ಪ್ಯೂರ್ ಗೆ ಓಟ್ಸ್-ರವೆಯ ಮಿಶ್ರಣ, ಮೊಸರು, ಉಪ್ಪು, ಮಸಾಲೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಪ್ಯಾನ್ ಅನ್ನು ಬಿಸಿ ಮಾಡಿ, ಬಿಸಿಯಾದ ಕೂಡಲೇ ದೋಸೆಯನ್ನು ಮಾಡಿ, ಅದು ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಚಟ್ನಿಯೊಂದಿಗೆ ಈ ದೋಸೆಯನ್ನು ಸವಿಯುವುದರಿಂದ ತುಂಬಾ ರುಚಿಕರವಾಗಿರುತ್ತದೆ. ಓಟ್ಸ್-ಬೀಟ್ರೂಟ್ ದೋಸೆಯು ಆರೋಗ್ಯದ ಜೊತೆಗೆ ಫಿಟ್ನೆಸ್ ಕಾಪಾಡುವಲ್ಲೂ ಸಹಕಾರಿಯಾಗಲಿದೆ.