ನಿಮ್ಮ ಮಕ್ಕಳಿಗೆ ರೈಸ್ ಐಟಮ್ ತುಂಬಾ ಇಷ್ಟನಾ? ಹಾಗಾದ್ರೆ ಸ್ವಲ್ಪ ಡಿಫರೆಂಟ್ ಆಗಿ ಸ್ವೀಟ್ ರೈಸ್ ಮಾಡಿ ಕೊಡಿ, ರೆಸಿಪಿ ತುಂಬಾ ಸುಲಭ ಕಣ್ರೀ
Sweet Rice: ಜೀರಾ ರೈಸ್, ಘೀ ರೈಸ್, ಫ್ರೈಡ್ ರೈಸ್ ಎಲ್ಲಾ ಗೊತ್ತು ಇದ್ಯಾವುದು ಹೊಸ ರೈಸ್ ಐಟಮ್ ಅಂತ ಯೋಚಿಸಬೇಡಿ. ಸಕ್ಕರೆ, ತೆಂಗಿನಕಾಯಿ ಮತ್ತು ಹಾಲು ಸೇರಿಸಿ ತಯಾರಿಸುವ ಸಿಂಪಲ್ ರೆಸಿಪಿ ಇದು. ಕೇಸರಿಯ ಘಮ ಇರುವ ಸಿಹಿ ಅನ್ನ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವಂತಹ ಅಡುಗೆ. (ಬರಹ: ಅರ್ಚನಾ ವಿ.ಭಟ್)
ಮಕ್ಕಳಿಗೆ ಹೊಸ ಹೊಸ ರುಚಿಗಳನ್ನು ಸವಿಯುವುದೆಂದರೆ ಎಲ್ಲಿಲ್ಲದ ಇಷ್ಟ. ನೀವು ಒಂದೇ ತರಹದ ಅಡುಗೆ ಮಾಡಿದರೆ ಮಕ್ಕಳು ಅದನ್ನು ತಿನ್ನುವುದಿಲ್ಲ. ಅದಕ್ಕಾಗಿ ಸ್ವಲ್ಪ ಟ್ವಿಸ್ಟ್ ಆಗಿ ಟೇಸ್ಟಿ ಆಗಿರುವಂತಹ ಹೊಸ ರೆಸಿಪಿ ಮಾಡಿ ಕೊಟ್ಟು ನೋಡಿ. ಅವರಿಗೆ ಇಷ್ಟವಾಗುವುದರ ಜೊತೆಗೆ ಮತ್ತೊಮ್ಮೆ ಸವಿಯಲು ಬಯಸುತ್ತಾರೆ. ಮಕ್ಕಳಿಗೆ ಇಷ್ಟವಾಗುವ ಆಹಾರಗಳಲ್ಲಿ ಅನ್ನದ ಅಡುಗೆಗಳು ಒಂದು. ಅನ್ನದಿಂದ ವೆರೈಟಿ ಅಡುಗೆಗಳನ್ನು ತಯಾರಿಸಬಹುದು. ಅವೆಲ್ಲವೂ ಸಖತ್ ಟೇಸ್ಟಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅನ್ನದಿಂದ ಫುಲಾವ್, ಜೀರಾ ರೈಸ್, ಘೀ ರೈಸ್, ಫ್ರೈಡ್ ರೈಸ್ ಮುಂತಾದವುಗಳನ್ನು ತಯಾರಿಸಲಾಗುತ್ತದೆ. ಅನ್ನದಿಂದ ಸ್ವೀಟ್ ರೈಸ್ ಕೂಡಾ ತಯಾರಿಸಬಹುದು. ಕೇರಳದಲ್ಲಿ ಹೆಚ್ಚಾಗಿ ಕಾಣಸಿಗುವ ಈ ಸಿಹಿ ಅನ್ನವನ್ನು ಸಕ್ಕರೆ, ತೆಂಗಿನಕಾಯಿ, ಹಾಲು ಮತ್ತು ಡ್ರೈ ಫ್ರುಟ್‌ಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಖಾದ್ಯ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಕೇಸರಿಯ ಘಮ ಹೊಂದಿರುವ ಈ ಅಡುಗೆಯಲ್ಲಿ ಸಿಹಿ, ಹಾಲು ಮತ್ತು ತೆಂಗಿನಕಾಯಿ ಹದವಾಗಿ ಬೆರೆತಿರುತ್ತದೆ. ರುಚಿಕರವಾದ ಸ್ವೀಟ್ ರೈಸ್ ಸುಲಭವಾಗಿ ತಯಾರಿಸಬಹುದು. ಇದು ಮಕ್ಕಳ ಬೆಳಗ್ಗಿನ ತಿಂಡಿ ಮತ್ತು ಲಂಚ್‌ಗೂ ಹೊಂದಿಕೆಯಾಗುತ್ತದೆ.
ಸ್ವೀಟ್ ರೈಸ್ ತಯಾರಿಸಲು ಬೇಕಾದ ಪದಾರ್ಥಗಳು
ಅಕ್ಕಿ - ಒಂದು ಕಪ್
ಹಾಲು - ಒಂದು ಕಪ್
ಕೇಸರಿ - ಎರಡು ದಳಗಳು
ಸಕ್ಕರೆ - ಕಾಲು ಕಪ್
ತೆಂಗಿನ ಹಾಲು - ಒಂದು ಕಪ್
ತುರಿದ ತೆಂಗಿನಕಾಯಿ - ನಾಲ್ಕು ಚಮಚ
ಒಣ ಹಣ್ಣುಗಳು - ಒಂದು ಕಪ್
ತುಪ್ಪ - ಎರಡು ಚಮಚ
ಸ್ವೀಟ್ ರೈಸ್ ಮಾಡುವ ವಿಧಾನ
1. ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ.
2. ಅದಕ್ಕೆ ಹಾಲು ಮತ್ತು ತೆಂಗಿನಕಾಯಿ ಹಾಲು ಸೇರಿಸಿ. ಸ್ವಲ್ಪ ನೀರು ಬೇಕಾದರೆ ಸೇರಿಸಿಕೊಳ್ಳಿ.
3. ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
4. ಅನ್ನ ಬೇಯುತ್ತಿರುವಾಗ ಅದಕ್ಕೆ ಹಾಲಿನಲ್ಲಿ ನೆನೆಸಿದ ಕೇಸರಿ ದಳ ಮತ್ತು ಸಕ್ಕರೆ ಸೇರಿಸಿ ಒಮ್ಮೆ ಮಿಕ್ಸ್ ಮಾಡಿ.
5. ಈಗ ಅದಕ್ಕೆ ತೆಂಗಿನ ತುರಿ ಸೇರಿಸಿ.
6. ಕೇಸರಿ ಹಾಕಿರುವುದರಿಂದ ಅನ್ನವು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಗ ಸ್ಟವ್ ಆಫ್ ಮಾಡಿ.
7. ಇನ್ನೊಂದು ಒಲೆಯ ಮೇಲೆ ಸಣ್ಣ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ.
8. ಗೋಡಂಬಿ, ಬಾದಾಮಿ, ಪಿಸ್ತಾ, ಒಣದ್ರಾಕ್ಷಿ ಸೇರಿಸಿ ತುಪ್ಪದಲ್ಲಿ ಫ್ರೈ ಮಾಡಿ.
9. ಅದನ್ನು ತಯಾರಿಸಿಟ್ಟುಕೊಂಡ ಅನ್ನದ ಮೇಲೆ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ.
10. ರುಚಿ ರುಚಿಯಾದ ಸ್ವೀಟ್ ರೈಸ್ ಸವಿಯಲು ರೆಡಿ.
11. ನಿಮಗೆ ಸಕ್ಕರೆ ಇಷ್ಟವಿಲ್ಲವೆಂದಾದರೆ ಅದರ ಬದಲಿಗೆ ಬೆಲ್ಲವನ್ನೂ ಸಹ ಸೇರಿಸಿಕೊಳ್ಳಬಹುದು. ಬೆಲ್ಲದಿಂದ ತಯಾರಿಸಿದ ಸಿಹಿ ಅನ್ನ ಆರೋಗ್ಯಕ್ಕೂ ಉತ್ತಮ.
ಇದರಲ್ಲಿ ಗೋಡಂಬಿ, ಬಾದಾಮಿ, ಪಿಸ್ತಾ ಮತ್ತು ಒಣದ್ರಾಕ್ಷಿಗಳಂತಹ ಅನೇಕ ಪೌಷ್ಟಿಕ ಆಹಾರಗಳನ್ನು ಸೇರಿಸಿರುವುದರಿಂದ ಆರೋಗ್ಯಕ್ಕೆ ಉತ್ತಮ. ಅವು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಇದನ್ನು ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ಮಾಡಿಕೊಡಿ. ಎಲ್ಲಾ ಪೌಷ್ಟಿಕಾಂಶಗಳು ಒಂದರಲ್ಲೇ ಸಿಗುವುದರಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ. ಖಂಡಿತವಾಗಿ ಮಕ್ಕಳು ಸ್ವೀಟ್ ರೈಸ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ.