ಭಾನುವಾರಕ್ಕೆ ಈ ತರಹ ಟೇಸ್ಟಿ ಚಿಕನ್ ಸಾಂಬಾರ್ ಟ್ರೈ ಮಾಡಿ: ಇದನ್ನು ಮಾಡುವುದು ಹೇಗೆ, ಇಲ್ಲಿದೆ ರೆಸಿಪಿ
ವಾರಪೂರ್ತಿ ತರಕಾರಿ ಊಟ ತಿಂದು ಬೇಸತ್ತಿದ್ದೀರಾ?ಭಾನುವಾರಕ್ಕೆ ಚಿಕನ್ ಮಾಡೋದಾ, ಮಟನ್ ಖಾದ್ಯ ಮಾಡೋದಾ ಅಂತಾ ಯೋಚನೆ ಮಾಡ್ತಿದ್ದೀರಾ. ಹಾಗಿದ್ದರೆ ಈ ಟೇಸ್ಟಿ ಚಿಕನ್ ರೆಸಿಪಿ ತಯಾರಿಸಿ, ಖಂಡಿತಾ ನಿಮಗೆ ಇಷ್ಟವಾಗುತ್ತೆ. ಈ ಚಿಕನ್ ರೆಸಿಪಿ ತಯಾರಿಸುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ.
ವೀಕೆಂಡ್ ಬಂತು ಅಂದ್ರೆ ಅದರಲ್ಲೂ ಭಾನುವಾರ ಬಂತು ಅಂದ್ರೆ ಬಹುತೇಕ ಎಲ್ಲಾ ಮಾಂಸಾಹಾರ ಪ್ರಿಯರ ಮನೆಯಲ್ಲಿ, ನಾನ್ ವೆಜ್ ಘಮ ಹರಡುತ್ತದೆ. ಚಿಕನ್, ಮಟನ್, ಮೀನು ಸೇರಿದಂತೆ ಬಗೆ-ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಬೆಂಗಳೂರಿನಲ್ಲಂತೂ ಬೆಳಗ್ಗೆ ಚಿಕನ್ ಬಿರಿಯಾನಿ ಘಮ ರಸ್ತೆ ತುಂಬಾ ಹರಡಿರುತ್ತದೆ. ಇನ್ನು ಅನ್ನ, ಮುದ್ದೆ, ಚಪಾತಿ, ರೊಟ್ಟಿಗಂತೂ ಸಾಂಬಾರ್ ಬೇಕೇ ಬೇಕು. ಚಿಕನ್ ಸಾಂಬಾರ್ ಜೊತೆ ಇವುಗಳನ್ನು ಸವಿದರೆ ಆ ರುಚಿಯ ಮಜಾವೇ ಬೇರೆ. ನಿಮಗೂ ಚಿಕನ್ ಸಾಂಬಾರ್ ಮಾಡಬೇಕು ಅಂತಾ ಆಸೆಯಾಗುತ್ತಿದೆಯಾ? ಹಾಗಿದ್ದರೆ ಇಲ್ಲಿ ನಾವು ತಿಳಿಸಿರುವ ರೀತಿ ಚಿಕನ್ ಸಾಂಬಾರ್ ಮಾಡಿ ಸವಿಯಿರಿ. ಖಂಡಿತಾ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ಹಾಗಿದ್ದರೆ ಈ ಟೇಸ್ಟಿ ಚಿಕನ್ ಸಾಂಬಾರ್ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್ ಸಾಂಬಾರ್ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಚಿಕನ್- 1 ಕೆ.ಜಿ, ಈರುಳ್ಳಿ- 2, ಟೊಮೆಟೊ- 1, ಶುಂಠಿ- 2 ಸಣ್ಣ ತುಂಡು, ಬೆಳ್ಳುಳ್ಳಿ- 10 ರಿಂದ 15 ಎಸಳು, ಚೆಕ್ಕೆ- ಸಣ್ಣ ತುಂಡು, ಲವಂಗ- 1, ಬ್ಯಾಡಗಿ ಮೆಣಸು- 15, ಖಾರದ ಮೆಣಸು- 4, ಕರಿಮೆಣಸು- ½ ಟೀ ಚಮಚ, ಕೊತ್ತಂಬರಿ ಬೀಜ- 3 ಟೀ ಚಮಚ, ಜೀರಿಗೆ- 1 ಟೀ ಚಮಚ, ಮೆಂತ್ಯ- 4 ರಿಂದ 5 ಕಾಳು, ಸೋಂಪು- 1 ಚಮಚ, ಗಸಗಸೆ- ¼ ಟೀ ಚಮಚ, ಹುಣಸೆಹುಳಿ- ಅರ್ಧ ನಿಂಬೆ ಗಾತ್ರದಷ್ಟು, ತೆಂಗಿನಕಾಯಿ- 1 ಕರಿಬೇವು ಸೊಪ್ಪು- 15 ಎಸಳಿನಷ್ಟು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಅರಶಿನ- 1 ಟೀ ಚಮಚ, ಅಡುಗೆ ಎಣ್ಣೆ- ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಇನ್ನೊಂದೆಡೆ 1 ಈರುಳ್ಳಿ ಮತ್ತು ಟೊಮೆಟೋವನ್ನು ಕತ್ತರಿಸಿ. ಜೊತೆಗೆ 1 ಸಣ್ಣ ತುಂಡು ಶುಂಠಿ ಹಾಗೂ 6 ಎಸಳಿನಷ್ಟು ಬೆಳ್ಳುಳ್ಳಿಯನ್ನು ಸಹ ಚಿಕ್ಕದಾಗಿ ಹೆಚ್ಚಿರಿ. ಈಗ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸ್ಟೌವ್ ಮೇಲೆ ಇಡಿ. ಅದು ಬಿಸಿಯಾದ ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ. ಈರುಳ್ಳಿ ಚೆನ್ನಾಗಿ ಫ್ರೈ ಆದ ನಂತರ ಟೊಮೆಟೋ ಸೇರಿಸಿ. ಜೊತೆಗೆ ಹೆಚ್ಚಿಟ್ಟ ಶುಂಠಿ-ಬೆಳ್ಳುಳ್ಳಿಯನ್ನು ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ತೊಳೆದಿಟ್ಟ ಕೋಳಿಮಾಂಸ ಹಾಕಿ, ಉಪ್ಪು, ಸ್ವಲ್ಪ ಅರಶಿನ ಪುಡಿ ಹಾಕಿ ಮಿಶ್ರಣ ಮಾಡಿ. ಒಂದು ತಟ್ಟೆಯನ್ನು ಮುಚ್ಚಿಟ್ಟು ಮಾಂಸ ಬೇಯಲು ಬಿಡಿ.
ಮಾಂಸ ಬೇಯುತ್ತಿರುವಾಗ, ಇನ್ನೊಂದು ಕಡೆ ಒಂದಿಡೀ ತೆಂಗಿನಕಾಯಿಯನ್ನು ತುರಿದು ಬಾಣಲೆಗೆ ಎಣ್ಣೆ ಹಾಕಿ ಬಾಡಿಸಿ. ಸ್ವಲ್ಪ ತೆಂಗಿನತುರಿ ಉಳಿಸಿಕೊಂಡು ಉಳಿದುದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ, ಅದರ ಹಾಲು ತೆಗೆದಿಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಬ್ಯಾಡಗಿ ಮೆಣಸು, ಖಾರದ ಮೆಣಸು, ಕರಿಮೆಣಸು, ಜೀರಿಗೆ, ಮೆಂತ್ಯ ಕಾಳು, ಕೊತ್ತಂಬರಿ ಬೀಜ, ಸೋಂಪು, ಚೆಕ್ಕೆ, ಲವಂಗ, ಗಸಗಸೆ, ಬೆಳ್ಳುಳ್ಳಿ, ಈರುಳ್ಳಿ, ಸ್ವಲ್ಪ ಕರಿಬೇವಿನ ಎಲೆ ಇವೆಲ್ಲವನ್ನೂ ಹುರಿಯಿರಿ. ಹುರಿದ ಇಷ್ಟೂ ಮಸಾಲೆಗಳಿಗೆ ಸ್ವಲ್ಪ ತುರಿದ ತೆಂಗಿನಕಾಯಿ ಹಾಕಿ ಮಿಕ್ಸಿಯಲ್ಲಿ ರುಬ್ಬಿ. ರುಬ್ಬುವಾಗ ನೀರು ಸೇರಿಸಬಹುದು ಅಥವಾ ಮಾಡಿಟ್ಟಿರುವ ತೆಂಗಿನ ಹಾಲನ್ನು ಸೇರಿಸಬಹುದು. ನುಣ್ಣಗೆ ರುಬ್ಬಿದ ಮಸಾಲೆಯನ್ನು ಬೆಂದಿರುವ ಚಿಕನ್‍ಗೆ ಹಾಕಿ ಮಿಕ್ಸಿ ಮಾಡಿ ಕುದಿಸಿ. ಚೆನ್ನಾಗಿ ಕುದಿದ ನಂತರ ತೆಂಗಿನಹಾಲನ್ನು ಸೇರಿಸಿ. ಇದು ಕುದಿದ ನಂತರ ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವಿನ ಎಲೆಗಳನ್ನು ಸೇರಿಸಿದರೆ ರುಚಿಕರವಾದ ಚಿಕನ್ ಕರಿ ಸಾಂಬಾರ್ ಸವಿಯಲು ಸಿದ್ಧ. ಇದನ್ನು ಇಡ್ಲಿ, ದೋಸೆ, ಅಕ್ಕಿ ರೊಟ್ಟಿ, ಅನ್ನದ ಜೊತೆ ಸವಿಯಬಹುದು. ಬಹಳ ರುಚಿಕರವಾಗಿರುತ್ತದೆ.