ರೋಟಿ, ಚಪಾತಿ ಜೊತೆ ನೆಂಜಿಕೊಳ್ಳಲು ಏನಾದ್ರೂ ಸೆಷ್ಪಲ್ ಮಾಡಬೇಕು ಅಂತಿದ್ರೆ ಮಶ್ರೂಮ್ ಮಸಾಲ ಕರಿ ಮಾಡಿ, ಇದರ ರುಚಿಯಂತೂ ಅದ್ಭುತ
ಮಶ್ರೂಮ್ ಖಾದ್ಯಗಳು ಯಾರಿಗೆ ಇಷ್ಟವಿಲ್ಲ ಹೇಳಿ. ಭಿನ್ನ ರುಚಿ ಹೊಂದಿರುವ ಮಶ್ರೂಮ್ ನಿಂದ ಬಗೆ ಬಗೆಯ ಭಕ್ಷ್ಯಗಳನ್ನು ತಯಾರಿಸಬಹುದು. ರೋಟಿ, ಚಪಾತಿ ಜೊತೆ ನೆಂಜಿಕೊಳ್ಳಲು ವಿಶೇಷವಾಗಿರುವ ರೆಸಿಪಿ ಮಾಡಬೇಕು ಅಂತಿದ್ರೆ ಮಶ್ರೂಮ್ ಮಸಾಲ ಮಾಡಬಹುದು. ಇದರ ರುಚಿಯಂತೂ ಅದ್ಭುತ. ಇದನ್ನ ಸುಲಭವಾಗಿ ಮನೆಯಲ್ಲೇ ಮಾಡೋದು ಹೇಗೆ ಹೇಗೆ ನೋಡಿ
ಮಶ್ರೂಮ್ ಹೆಸರು ಕೇಳಿದರೆ ಕೆಲವರ ಬಾಯಲ್ಲಿ ನೀರೂರುತ್ತದೆ. ಯಾಕೆಂದರೆ ಮಶ್ರೂಮ್ ನಿಂದ ತಯಾರಿಸುವ ಖಾದ್ಯಗಳು ಅಷ್ಟು ರುಚಿ, ಭಿನ್ನವಾಗಿರುತ್ತವೆ. ಇದರಿಂದ ಬಿರಿಯಾನಿ, ಮಂಚೂರಿಯನ್, ಮಶ್ರೂಮ್ ಚಿಲ್ಲಿ ಮುಂತಾದ ಬಗೆ ಬಗೆಯ ಖಾದ್ಯಗಳನ್ನ ತಯಾರಿಸಬಹುದು. ನೀವು ಹೋಟೆಲ್ ಗಳಲ್ಲಿ ಚಪಾತಿ ಅಥವಾ ರೋಟಿಗಳ ಜೊತೆ ನೆಂಜಕೊಳ್ಳಲು ಮಶ್ರೂಮ್ ಮಸಾಲ ಆರ್ಡರ್ ಮಾಡಿರಬಹುದು. ಅದನ್ನ ನೀವು ಮನೆಯಲ್ಲೂ ಮಾಡಿಕೊಳ್ಳಬಹುದು. ಅದೇ ರುಚಿ ಅದೇ ಸ್ವಾದವನ್ನ ಮನೆಯಲ್ಲೂ ಸವಿಯಬಹುದು. ಹಾಗಾದರೆ ಮಶ್ರೂಮ್ ಮಸಾಲಾ ಮಾಡುವುದು ಹೇಗೆ, ಅದನ್ನ ತಯಾರಿಸಲು ಏನೇನು ಬೇಕು ನೋಡಿ.
ಮಶ್ರೂಮ್ ಮಸಾಲ ಕರಿಗೆ ಬೇಕಾಗುವ ಸಾಮಗ್ರಿಗಳು
ಮಶ್ರೂಮ್ -200ಗ್ರಾಂ, ಮೊಸರು- ಅರ್ಧಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ -1ಚಮಚ, ಧನಿಯಾ ಪುಡಿ - 1ಚಮಚ, ಅರಿಶಿನ - ಕಾಲು ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಗರಂ ಮಸಾಲಾ - ಒಂದು ಚಮಚ, ಚಿಕನ್ ಮಸಾಲಾ - ಒಂದು ಚಮಚ, ಕೊತ್ತಂಬರಿ ಪುಡಿ - ಎರಡು ಚಮಚ, ಉಪ್ಪು - ರುಚಿಗೆ, ಅನಾನಸ್ ಮೊಗ್ಗು - ಒಂದು, ಲವಂಗ - ನಾಲ್ಕು, ಏಲಕ್ಕಿ - ಎರಡು, ದಾಲ್ಚಿನ್ನಿ - ಸಣ್ಣ ತುಂಡು, ಬಿರಿಯಾನಿ ಎಲೆ - ಎರಡು, ಎಣ್ಣೆ - ಸಾಕಷ್ಟು, ಜೀರಿಗೆ - ಅರ್ಧ ಚಮಚ
ಮಶ್ರೂಮ್ ಮಸಾಲಾ ಕರಿ ಮಾಡುವ ವಿಧಾನ
ಅಣಬೆಗಳನ್ನು ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿ. ಅದನ್ನು ಅಗಲವಾದ ಪಾತ್ರೆಯಲ್ಲಿ ನೀರು ತುಂಬಿ ಅದಕ್ಕೆ ಅರಿಸಿನ ಪುಡಿ ಹಾಕಿ ಅಣಬೆಯನ್ನು ಚೆನ್ನಾಗಿ ತೊಳೆಯಿರಿ. ನೀರೆಲ್ಲಾ ಹೊರ ಹಾಕಿ ಅಣಬೆ ಮಾತ್ರ ಇಡಿ. ಅದೇ ಪಾತ್ರೆಗೆ ಮೊಸರು, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಪುಡಿ, ಅರಿಶಿನ, ಜೀರಿಗೆ ಪುಡಿ, ಗರಂ ಮಸಾಲ, ಚಿಕನ್ ಮಸಾಲ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಪಕ್ಕಕ್ಕೆ ಇರಿಸಿ. ನಂತರ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ. ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ಹುರಿದ ಈರುಳ್ಳಿಯನ್ನು ತಣ್ಣಗಾಗಿಸಿ ಮತ್ತು ಮಿಕ್ಸ್‌ಗೆ ಸೇರಿಸಿ, ಮೃದುವಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮೊದಲು ಮ್ಯಾರಿನೇಟ್ ಮಾಡಿಟ್ಟುಕೊಂಡ ಅಣಬೆ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲೆಸಿ. ಇನ್ನೊಂದು ಹತ್ತು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಈಗ ಬಾಣಲೆಗೆ ಇನ್ನೂ ಸ್ವಲ್ಪ ಎಣ್ಣೆ ಸೇರಿಸಿ ಪುನಃ ಬಿಸಿ ಮಾಡಿ. ಬಿಸಿಯಾದ ಮೇಲೆ ಜೀರಿಗೆ, ಲವಂಗ, ಸೋಂಪು, ಏಲಕ್ಕಿ, ದಾಲ್ಚಿನ್ನಿ ಮತ್ತು ಬಿರಿಯಾನಿ ಎಲೆಗಳನ್ನು ಸೇರಿಸಿ ಮತ್ತು ಫ್ರೈ ಮಾಡಿ. ತಕ್ಷಣಕ್ಕೆ ಮ್ಯಾರಿನೇಟ್ ಮಾಡಿಟ್ಟ ಮಶ್ರೂಮ್ ಮಿಶ್ರಣ ಸೇರಿಸಿ. ಈ ಎಲ್ಲವನ್ನೂ ಮಿಶ್ರಣ ಮಾಡಿ. ಇದಕ್ಕೆ ಅಗತ್ಯವಿರುವಷ್ಟು ಉಪ್ಪು ಸ್ವಲ್ಪ ನೀರು ಸೇರಿಸಿ, ಚೆನ್ನಾಗಿ ಬೇಯಿಸಿ. ಈಗ ನಿಮ್ಮ ಮುಂದೆ ರುಚಿಯಾದ ಮಶ್ರೂಮ್ ಮಸಾಲ ಫ್ರೈ ಸವಿಯಲು ಸಿದ್ಧ.
ಈ ಮಶ್ರೂಮ್ ಮಸಾಲ ಕರಿಯನ್ನು ರೋಟಿ ಜೊತೆಗೆ ಮಾತ್ರವಲ್ಲ ಚಪಾತಿ, ಅನ್ನ, ದೋಸೆ ಜೊತೆಗೂ ನೆಂಜಿಕೊಂಡು ತಿನ್ನಬಹುದು. ಇದರ ರುಚಿ ನಿಜಕ್ಕೂ ಅದ್ಭುತ, ಈ ರೀತಿ ಮಶ್ರೂಮ್ ಮಸಾಲ ಕರಿ ಮಾಡಿದ್ರೆ ನಿಮ್ಮ ಮನೆಯವರು ಎರಡು ತುತ್ತು ಜಾಸ್ತಿ ತಿನ್ನೋದು ಪಕ್ಕಾ.
ಮಶ್ರೂಮ್ ಕೇವಲ ರುಚಿಗೆ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಅಣಬೆಗಳನ್ನು ತಿನ್ನುವುದರಿಂದ ವಿಟಮಿನ್ ಡಿ ಪಡೆಯಬಹುದು. ಇದು ಸೆಲೆನಿಯಮ್, ರೈಬೋಫ್ಲಾವಿನ್ ಮತ್ತು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ತೂಕ ನಷ್ಟಕ್ಕೂ ಅವು ತುಂಬಾ ಉಪಯುಕ್ತವಾಗಿವೆ. ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಕೆಲವು ರೀತಿಯ ರೋಗಗಳನ್ನು ತಡೆಗಟ್ಟುವಲ್ಲಿ ಅಣಬೆಗಳು ಸಹ ಸಹಾಯಕವಾಗಿವೆ.
ವಿಭಾಗ