ಬೆಳಗಿನ ಉಪಾಹಾರಕ್ಕೆ ಹೇಳಿ ಮಾಡಿಸಿದ ರೆಸಿಪಿ ಮೊಳಕೆ ಬರಿಸಿದ ರಾಗಿ ಉತ್ತಪ್ಪ; ಇದು ಹೆಲ್ತ್‌ಗಷ್ಟೇ ಅಲ್ಲ, ಟೇಸ್ಟ್‌ಗೂ ಬೆಸ್ಟ್
ಆರೋಗ್ಯದ ದೃಷ್ಟಿಯಿಂದ ರಾಗಿ ಸೇವನೆ ಬಹಳ ಉತ್ತಮ. ಅದರಲ್ಲೂ ಮೊಳಕೆ ಬರಿಸಿದ ರಾಗಿ ಮಧುಮೇಹಿಗಳಿಂದ ಹಿಡಿದು ಬಹುತೇಕ ಆರೋಗ್ಯ ಸಮಸ್ಯೆ ಇರುವವರಿಗೆ ದಿ ಬೆಸ್ಟ್ ಅಂತಲೇ ಹೇಳಬಹುದು. ಮೊಳಕೆ ಬರಿಸಿದ ರಾಗಿಯಿಂದ ವಿಶೇಷವಾದ ವೆಜ್ ಮಿಕ್ಸ್ ಉತ್ತಪ್ಪ ಮಾಡಬಹುದು, ಇದು ಹೆಲ್ತ್‌ಗಷ್ಟೇ ಅಲ್ಲ, ಟೇಸ್ಟ್‌ಗೂ ಬೆಸ್ಟ್.
ಮೊಳಕೆ ಬರಿಸಿದ ರಾಗಿಯಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸುವ ಟ್ರೆಂಡ್ ಸದ್ಯ ಚಾಲ್ತಿಯಲ್ಲಿದೆ. ಇಡಿ ರಾಗಿಗಿಂತ ಮೊಳಕೆ ಬರಿಸಿದ ರಾಗಿ ಆರೋಗ್ಯಕ್ಕೆ ಉತ್ತಮ ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಇದರ ಬಳಕೆಯ ಪ್ರಮಾಣವೂ ಹೆಚ್ಚಾಗಿದೆ. ಮೊಳಕೆ ಬರಿಸಿದ ರಾಗಿಯಿಂದ ಆರೋಗ್ಯಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ರುಚಿಕರವಾಗ ಉತ್ತಪ್ಪ ತಯಾರಿಸಬಹುದು. ಇದರೊಂದಿಗೆ ವಿವಿಧ ಬಗೆಯ ತರಕಾರಿಗಳನ್ನು ಸೇವಿಸುವ ಕಾರಣ ಇದನ್ನು ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳು ದುಪ್ಪಟ್ಟಾಗುತ್ತವೆ. ಹಾಗಾದರೆ ಮೊಳಕೆ ಬರಿಸಿದ ರಾಗಿ ಉತ್ತಪ್ಪ ತಯಾರಿಸುವುದು ಹೇಗೆ, ಇದಕ್ಕೆಲ್ಲಾ ಏನೆಲ್ಲಾ ಬೇಕು ನೋಡಿ.
ರಾಗಿ ಉತ್ತಪ್ಪ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಮೊಳಕೆ ಬರಿಸಿದ ರಾಗಿ – 1ಕಪ್, ಕೊತ್ತಂಬರಿ ಸೊಪ್ಪು – 1ಕಪ್, ಹಸಿಮೆಣಸು – 2, ಈರುಳ್ಳಿ – 1, ಟೊಮೆಟೊ – 1, ಅಕ್ಕಿಹಿಟ್ಟು – 2 ಚಮಚ, ಉಪ್ಪು – ರುಚಿಗೆ, ಮೊಸರು – 2 ಚಮಚ
ರಾಗಿ ಮೊಳಕೆ ಬರಿಸುವ ವಿಧಾನ: ಮೊದಲು ರಾಗಿಯನ್ನು ಚೆನ್ನಾಗಿ ತೊಳೆದು ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನೆನೆಸಿಡಿ. ನೀರನ್ನು ಸೋಸಿ, ಒಂದು ಪಾತ್ರೆಯಲ್ಲಿ ರಾಗಿ ಹಾಕಿ ಅದಕ್ಕೆ ತೆಳುವಾದ ಒದ್ದೆ ಬಟ್ಟೆಯಿಂದ ಮುಚ್ಚಿಡಿ. ಇದಾಗಿ 6 ಗಂಟೆ ಒಳಗೆ ರಾಗಿ ಮೊಳಕೆ ಬಂದಿರುತ್ತದೆ.
ರಾಗಿ ಉತ್ತಪ್ಪ ಮಾಡುವ ವಿಧಾನ
ಮಿಕ್ಸಿ ಜಾರಿನಲ್ಲಿ ಮೊಳಕೆ ಬರಿಸಿದ ರಾಗಿ, ಹಸಿಮೆಣಸು ಹಾಗೂ ಮೊಸರನ್ನು ಸೇರಿಸಿ ರುಬ್ಬಿಕೊಳ್ಳಿ. ನಂತರ ಇದನ್ನು ಐದಾರು ಗಂಟೆ ಹುದುಗಲು ಬಿಟ್ಟರೆ ಬೆಸ್ಟ್. ಸಮಯ ಇಲ್ಲ ಎಂದರೆ ಆ ಕ್ಷಣಕ್ಕೆ ಉಪ್ಪು ಹಾಕಿಯೂ ಉತ್ತಪ್ಪ ಮಾಡಿಕೊಳ್ಳಬಹುದು. ಪ್ಯಾನ್ ಬಿಸಿ ಮಾಡಿ ಎಣ್ಣೆ ಹಚ್ಚಿ. ನಂತರ ಹಿಟ್ಟನ್ನು ದಪ್ಪಕ್ಕೆ ಪ್ಯಾನ್ ಮೇಲೆ ಹರಡಿ, ಇದು ಯಾವುದೇ ಕಾರಣಕ್ಕೂ ಅತಿಯಾಗಿ ತೆಳ್ಳಗೆ ಇರಬಾರದು. ಅದರ ಮೇಲೆ ಈರುಳ್ಳಿ ಚೂರು, ಹೆಚ್ಚಿದ ಟೊಮೆಟೊ ಹಾಗೂ ಕೊತ್ತಂಬರಿ ಸೊಪ್ಪು ಹರಡಿ. ಎಣ್ಣೆಯ ಬದಲು ತುಪ್ಪ ಅಥವಾ ಬೆಣ್ಣೆ ಕೂಡ ಬಳಸಬಹುದು. ಈ ಉತ್ತಪ್ಪ ಅನ್ನು ಎರಡೂ ಕಡೆ ಬೇಯಿಸಿ, ನಂತರ ಇದನ್ನು ಚಟ್ನಿ ಅಥವಾ ಸಾಸ್ ಜೊತೆ ತಿನ್ನಬಹುದು.
ಮಧುಮೇಹ ಸಮಸ್ಯೆ ಇರುವವರಿಗೂ ಮೊಳಕೆ ಬರಿಸಿದ ರಾಗಿ ಬಹಳ ಉತ್ತಮವಾಗಿರುವ ಕಾರಣ ಇದನ್ನು ಬೆಳಗಿನ ಉಪಾಹಾರಕ್ಕೆ ಮಾಡಬಹುದು. ಸಾಸ್ ಜೊತೆ ನೀಡುವುದರಿಂದ ಮಕ್ಕಳಿಗೂ ಇಷ್ಟವಾಗುತ್ತೆ. ನಿಮಗೆ ಬೇಕೆಂದರೆ ಇದರ ಮೇಲೆ ಕ್ಯಾರೆಟ್ ತುರಿ ಕೂಡ ಹಾಕಬಹುದು.
ವಿಭಾಗ