ಕನ್ನಡ ಸುದ್ದಿ  /  ಜೀವನಶೈಲಿ  /  Sprouted Ragi: ಮೊಳಕೆ ಬರಿಸಿದ ರಾಗಿ ಸೇವನೆಯಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ; ಇದರ ಬಳಕೆ ಹೇಗೆ ನೋಡಿ

Sprouted Ragi: ಮೊಳಕೆ ಬರಿಸಿದ ರಾಗಿ ಸೇವನೆಯಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ; ಇದರ ಬಳಕೆ ಹೇಗೆ ನೋಡಿ

ರಾಗಿ ಸೇವನೆಯಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಪೌಷ್ಟಿಕಾಂಶಗಳ ಆಗರವಾಗಿರುವ ರಾಗಿಯನ್ನು ಮೊಳಕೆ ಬರಿಸಿ ಸೇವಿಸುವುದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಮೊಳಕೆ ಬರಿಸಿದ ರಾಗಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ, ಮಕ್ಕಳಿಗೆ ಇದನ್ನು ಯಾವ ನೀಡದಲ್ಲಿ ನೀಡಬಹುದು ಎಂಬಿತ್ಯಾದಿ ವಿವರ ಇಲ್ಲಿದೆ.

ಮೊಳಕೆ ಬರಿಸಿದ ರಾಗಿ ಸೇವನೆಯಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ
ಮೊಳಕೆ ಬರಿಸಿದ ರಾಗಿ ಸೇವನೆಯಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ

ಸಿರಿಧಾನ್ಯಗಳಲ್ಲಿ ರಾಗಿಗೆ ವಿಶೇಷ ಸ್ಥಾನವಿದೆ. ರಾಗಿಯು ವಿಶೇಷವಾದ ಸೂಪರ್‌ಫುಡ್‌ ಆಗಿದ್ದು, ಇದು ಹಲವು ರೀತಿಯಲ್ಲಿ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಬೇಸಿಗೆಯ ತಾಪ ನೀಗಲು ರಾಗಿ ಸೇವನೆ ಬೆಸ್ಟ್‌. ಮಕ್ಕಳ ಆರೋಗ್ಯಕ್ಕೂ ರಾಗಿ ಉತ್ತಮ ಎಂಬುದು ಸಾಬೀತಾಗಿದೆ. ಆರೋಗ್ಯಕ್ಕೆ ಅತೀ ಅಗತ್ಯವಾಗಿರುವ ಹಲವು ಪ್ರಮುಖ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಅದರಲ್ಲೂ ಮೊಳಕೆಯೊಡೆದ ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದನ್ನು ಮಕ್ಕಳ ಆಹಾರದೊಂದಿಗೂ ಸೇರಿಸಬಹುದು. ಇದನ್ನು ಪುಡಿ ಮಾಡಿ ಮಕ್ಕಳಿಗೂ ನೀಡಬಹುದು.

ಟ್ರೆಂಡಿಂಗ್​ ಸುದ್ದಿ

ಇಂದಿನ ಕಾಲದಲ್ಲಿ, ವಯಸ್ಕರಿಂದ ಹಿಡಿದು ಮಕ್ಕಳವರೆಗೆ ಪ್ರತಿಯೊಬ್ಬರಿಗೂ ಪೋಷಕಾಂಶಗಳು ಅತ್ಯಗತ್ಯ. ಅದನ್ನು ಪೂರೈಸುವಲ್ಲಿ ರಾಗಿಯು ನಿಮಗೆ ಸಹಾಯ ಮಾಡುತ್ತದೆ. ರಾಗಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು, ರಾಗಿ ಮೊಳಕೆಯ ಕೆಲವು ಪ್ರಮುಖ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.

ರಾಗಿ ಮೊಳಕೆಯ ಪ್ರಯೋಜನಗಳು

1. ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿದೆ: ಹಲವು ಪ್ರಮುಖ ಅಮೈನೋ ಆಮ್ಲಗಳು ರಾಗಿಯಲ್ಲಿ ಕಂಡುಬರುತ್ತವೆ. ಇದು ಉತ್ತಮ ಗುಣಮಟ್ಟದ ಪ್ರೊಟೀನ್‌ನ ಪರಿಣಾಮಕಾರಿ ಮೂಲವಾಗಿದೆ. ಇದು ಮೆಥಿಯೋನಿನ್, ಸಲ್ಫರ್ ಆಧಾರಿತ ಅಮೈನೋ ಆಮ್ಲ, ವ್ಯಾಲಿನ್ ಮತ್ತು ಐಸೊಲ್ಯೂಸಿನ್ ಅನ್ನು ಒದಗಿಸುತ್ತದೆ. ಇದು ಸ್ನಾಯು ಹಾಗೂ ಅಂಗಾಂಶಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಪುನರುಜ್ಜೀವನಗೊಳಿಸುತ್ತದೆ. ಇದರಲ್ಲಿರುವ ಥ್ರೆಯೋನೈನ್ ಹಲ್ಲು ಮತ್ತು ದಂತಕವಚದ ಸರಿಯಾದ ರಚನೆಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಮತ್ತು ವಸಡಿನ ಸಮಸ್ಯೆಯಿಂದ ಬಾಯಿಯನ್ನು ರಕ್ಷಿಸಲು ಕೂಡ ಇದು ಸಹಕಾರಿ.

2. ಗ್ಲುಟನ್ ಮುಕ್ತ ಆಹಾರ: ಗೋಧಿ ಭಾರತದಲ್ಲಿ ಅತಿ ಹೆಚ್ಚು ಜನರು ಬಳಸುವ ಆಹಾರವಾದರೂ ಕೂಡ ಇದರಲ್ಲಿ ಗ್ಲುಟೇನ್‌ ಅಂಶವಿದ್ದು, ಇದು ಆರೋಗ್ಯಕ್ಕೆ ಹಾನಿಕರ. ಗ್ಲುಟೇನ್‌ ಅಂಶವು ಹಲವರಿಗೆ ಅಲರ್ಜಿ ಉಂಟು ಮಾಡುತ್ತದೆ. ಆದರೆ ರಾಗಿಯು ಗ್ಲುಟೇನ್‌ ಮುಕ್ತವಾಗಿದೆ. ಸಾವಯವವಾಗಿ ಗ್ಲುಟನ್-ಮುಕ್ತವಾಗಿರುವ ರಾಗಿಯನ್ನು ಚಪಾತಿ, ದೋಸೆಗಳು ಮತ್ತು ಸಿಹಿತಿಂಡಿಗಳು ತಯಾರಿಸಲು ಗೋಧಿಯ ಬದಲಿಗೆ ಸುಲಭವಾಗಿ ಬಳಸಬಹುದು. ಉದರ ಸಮಸ್ಯೆ ಇರುವವರಿಗೆ ರಾಗಿಗಿಂತ ಗೋಧಿ ಬೆಸ್ಟ್‌.

3. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ: ರಾಗಿಯು ದೇಹಕ್ಕೆ ತ್ವರಿತ ಚೈತನ್ಯ ಒದಗಿಸುತ್ತದೆ. ಇದು ಹೆಚ್ಚಿನ ಕ್ಯಾಲೊರಿಗಳು ಹಾಗೂ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ಇದರಲ್ಲಿ ಫೈಟೇಟ್‌ಗಳು, ಟ್ಯಾನಿನ್‌ಗಳು, ಪಾಲಿಫಿನಾಲ್‌ನಂತಹ ಅಂಶಗಳಿದ್ದು ಇವು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಸಸ್ಯ ರಾಸಾಯನಿಕಗಳಾಗಿವೆ. ಮಧುಮೇಹದಿಂದ ಬಳಲುತ್ತಿರುವ ಜನರಲ್ಲಿ ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಇದು ಕಡಿಮೆ ಮಾಡುತ್ತದೆ. ಈ ಅಂಶಗಳು ಮಧುಮೇಹ ರೋಗಿಗಳಿಗೆ ವಿಶೇಷವಾದ ಸೂಪರ್‌ಫುಡ್‌ ಆಗಿವೆ. ಇದಲ್ಲದೆ, ರಾಗಿಯಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ಜೀರ್ಣಕ್ರಿಯೆ ಸುಧಾರಿಸಲು ಉತ್ತಮ. ಇದರಿಂದ ರಕ್ತದಲ್ಲಿನ ಸಕ್ಕರೆಯು ಇದ್ದಕ್ಕಿದ್ದಂತೆ ಹೆಚ್ಚಾಗುವುದಿಲ್ಲ.

4. ರಕ್ತಹೀನತೆ ನಿವಾರಣೆಗೂ ಉತ್ತಮ: ಕಬ್ಬಿಣಾಂಶದ ಕೊರತೆ ಹಾಗೂ ರಕ್ತಹೀನತೆಯ ಕಾರಣದಿಂದ ಪ್ರತಿ ವರ್ಷ ಅಸಂಖ್ಯಾತ ಭಾರತೀಯ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಬ್ಬಿಣಾಂಶ ಕೊರತೆ ಹಾಗೂ ರಕ್ತಹೀನತೆಯಿಂದ ತೀವ್ರ ಆಯಾಸ ಉಂಟಾಗುವುದು ಸಹಜ. ಇದು ಉತ್ಪಾದಕತೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ರಾಗಿಯು ಕಬ್ಬಿಣದ ಶಕ್ತಿ ಕೇಂದ್ರವಾಗಿದೆ, ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಹೊಂದಿರುವವರಿಗೆ ಇದು ವರವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ರಕ್ತಹೀನತೆ ಸಮಸ್ಯೆ ಇರುವವರು ರಾಗಿಯನ್ನು ಸೇವಿಸುವುದು ಸೂಕ್ತ.

5. ನರಮಂಡಲದ ಕಾರ್ಯವನ್ನು ಉತ್ತೇಜಿಸುತ್ತದೆ: ರಾಗಿಯಲ್ಲಿ ಹೆಚ್ಚಿನ ಮಟ್ಟದ ಅಮೈನೋ ಆಸಿಡ್ ಟ್ರಿಪ್ಟೊಫಾನ್ ಇದೆ, ಇದು ನರಗಳ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೆದುಳಿನಲ್ಲಿ ಮೆಮೊರಿ ಕೇಂದ್ರಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಮನಸ್ಸಿಗೆ ವಿಶ್ರಾಂತಿ ಮಾಡುತ್ತದೆ. ಟ್ರಿಪ್ಟೊಫಾನ್ ಸಿರೊಟೋನಿನ್ ಮಟ್ಟಗಳಿಗೆ ಸಮತೋಲನವನ್ನು ತರುತ್ತದೆ. ರಾಗಿ ಉತ್ತಮ ಮನಸ್ಥಿತಿಯನ್ನು ಕಾಪಾಡಿಕೊಳ್ಳುವ ಮೂಲಕ ಹಾಗೂ ಉತ್ತಮ ನಿದ್ರೆಯನ್ನು ಉತ್ತೇಜಿಸುವ ಮೂಲಕ ಆತಂಕ ಮತ್ತು ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

6. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ: ರಾಗಿಯಲ್ಲಿ ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಅಂಶ ಇರುವುದಿಲ್ಲ, ಆದ್ದರಿಂದ ರಾಗಿ ಹಿಟ್ಟಿನಿಂದ ಮಾಡಿದ ಭಕ್ಷ್ಯಗಳನ್ನು ಹೃದ್ರೋಗದಿಂದ ಬಳಲುತ್ತಿರುವವರು ಸುರಕ್ಷಿತವಾಗಿ ಸೇವಿಸಬಹುದು. ಹೆಚ್ಚುವರಿಯಾಗಿ, ಅವು ಆಹಾರದ ನಾರಿನಾಂಶ ಮತ್ತು ವಿಟಮಿನ್ B3 ಅಥವಾ ನಿಯಾಸಿನ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ, ಇದು ಎಚ್‌ಡಿಎಲ್‌ (ಉತ್ತಮ ಕೊಲೆಸ್ಟ್ರಾಲ್‌) ಮಟ್ಟವನ್ನು ಹೆಚ್ಚಿಸಲು ಮತ್ತು ಕೆಟ್ಟ LDL ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಅಪಧಮನಿಗಳಲ್ಲಿ ಪ್ಲೇಕ್ ಮತ್ತು ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ, ಹೃದಯ ಸ್ನಾಯುಗಳ ಕೆಲಸವನ್ನು ಸುಲಭಗೊಳಿಸುತ್ತದೆ, ಆ ಮೂಲಕ ಹೃದಯದ ಆರೋಗ್ಯದಲ್ಲಿ ಸುಧಾರಣೆಗೆ ಕಾರಣವಾಗುತ್ತದೆ.

7. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಪರಿಣಾಮಕಾರಿ: ರಾಗಿಯನ್ನು ಹಗಲಿನಲ್ಲಿ ನೀರಿನಲ್ಲಿ ನೆನೆಸಿ ರಾತ್ರಿಯಿಡೀ ಮೊಳಕೆಯೊಡೆಯಲು ಬಿಡಬೇಕು ಮತ್ತು ಮರುದಿನ ಬೆಳಿಗ್ಗೆ ಅವುಗಳನ್ನು ಸೇವಿಸುವುದರಿಂದ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯಕ್ಕೆ ಭಾರಿ ಪ್ರಯೋಜನಗಳನ್ನು ನೀಡುತ್ತದೆ. ರಾಗಿಯು ಕಬ್ಬಿಣ ಮತ್ತು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ ಮತ್ತು ಹಾಲು ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಗರ್ಭಿಣಿಯರು ಮತ್ತು ಯುವ ತಾಯಂದಿರಲ್ಲಿ ಹಾರ್ಮೋನ್ ಚಟುವಟಿಕೆಗಳನ್ನು ಸಮತೋಲನಗೊಳಿಸುತ್ತದೆ.

ರಾಗಿ ಮೊಳಕೆ ಬರಿಸುವ ವಿಧಾನ

ರಾಗಿಯನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ, ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ. ಅದನ್ನು ಮರುದಿನ ಹತ್ತಿ ಬಟ್ಟೆ ಮೇಲೆ ಹರಡಿ, ನೀರು ಇಳಿದು ಹೋಗುವಂತೆ ನೋಡಿಕೊಳ್ಳಿ. ಇದನ್ನು ಬಟ್ಟೆಯಲ್ಲಿ ಗಂಟುಹಾಕಿ 2 ದಿನ ಬಿಡಿ. ನಂತರ ತೆಗೆದು ನೋಡಿದರೆ ರಾಗಿ ಚೆನ್ನಾಗಿ ಮೊಳಕೆ ಬಂದಿರುತ್ತದೆ. ಈಗ ಇದನ್ನು ನೀವು ವಿವಿಧ ರೂಪದಲ್ಲಿ ಬಳಕೆ ಮಾಡಬಹುದು.

ಮೊಳಕೆ ಬರಿಸಿದ ರಾಗಿಯನ್ನು ಮಕ್ಕಳಿಗೆ ತಿನ್ನಿಸುವುದು ಹೇಗೆ?

ಮೊಳಕೆ ಬರಿಸಿದ ರಾಗಿಯನ್ನು ಮಕ್ಕಳ ಆಹಾರದಲ್ಲಿ ಸೇರಿಸಬೇಕು ಅಂದ್ರೆ ಮೊದಲು ಅದನ್ನು ಪುಡಿ ಮಾಡಬೇಕು. ಮೊದಲು ಮೇಲೆ ತಿಳಿಸಿದಂತೆ ರಾಗಿ ಮೊಳಕೆ ಬರಿಸಬೇಕು. ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಿ, ಸಂಪೂರ್ಣವಾಗಿ ಒಣಗಿದ ನಂತರ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ. ಇದನ್ನು ಹಾಲಿಗೆ ಬೆರೆಸಿ ಅಥವಾ ಡ್ರೈಫ್ರೂಟ್ಸ್‌ ಜೊತೆ ಬೆರೆಸಿ ಮಕ್ಕಳಿಗೆ ತಿನ್ನಿಸಿಬಹುದು.

ವಿಭಾಗ