ಚರ್ಮ, ಕೂದಲಿನ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುತ್ತೆ ತೆಂಗಿನ ಹಾಲು: ಇದರ ಅನುಕೂಲಗಳು, ಮಾಡುವ ವಿಧಾನದ ಬಗ್ಗೆ ಇಲ್ಲಿ ತಿಳಿದುಕೊಳ್ಳಿ
ತ್ವಚೆ ಹಾಗೂ ತಲೆಗೂದಲಿನ ಕಾಳಜಿ ಮಾಡುವವರಿಗೆ ತೆಂಗಿನ ಹಾಲು ಬೆಸ್ಟ್. ಇದನ್ನು ಚರ್ಮಕ್ಕೆ ಹಚ್ಚುವುದರಿಂದ ತ್ವಚೆ ಕಾಂತಿಯುತವಾಗಿ ಹೊಳೆಯುತ್ತದೆ ಹಾಗೂ ತಲೆಗೂದಲಿಗೆ ಹಚ್ಚುವುದರಿಂದಲೂ ಅದ್ಭುತ ಪ್ರಯೋಜನವನ್ನು ಇದು ನೀಡುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ತೆಂಗಿನಕಾಯಿಯನ್ನು ತುರಿದು ಅದನ್ನು ರುಬ್ಬಿ ಮಾಡುವಾಗ ಸಿಗುವ ಹಾಲನ್ನು ವಿವಿಧ ಭಕ್ಷ್ಯಗಳಿಗೆ ಬಳಸಲಾಗುತ್ತದೆ. ಪಾಯಸ, ಘೀ ರೈಸ್‍ನಿಂದ ಹಿಡಿದು ಚಿಕನ್ ಸಾಂಬಾರ್ ಗೂ ತೆಂಗಿನಕಾಯಿ ಹಾಲನ್ನು ಬಳಸಲಾಗುತ್ತದೆ. ಇದು ಕೇವಲ ರುಚಿಗೆ ಮಾತ್ರವಲ್ಲ, ಚರ್ಮ, ತಲೆಗೂದಲು ಹಾಗೂ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್‌ಗಳು, ಖನಿಜಗಳು ಸೇರಿದಂತೆ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನ ಹಾಲನ್ನು ಸೌಂದರ್ಯ ಹೆಚ್ಚಿಸಲು ಬಳಸಲಾಗುತ್ತದೆ. ತೆಂಗಿನ ಹಾಲಿನ ಐದು ಪ್ರಯೋಜನಗಳು ಮತ್ತು ಅದನ್ನು ಮನೆಯಲ್ಲಿಯೇ ಮಾಡುವ ಸುಲಭ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.
ತೆಂಗಿನ ಹಾಲಿನ ಐದು ಅದ್ಭುತ ಪ್ರಯೋಜನಗಳು
ಚರ್ಮವನ್ನು ಹೈಡ್ರೇಟ್ ಮಾಡುವಲ್ಲಿ ಸಹಕಾರಿ: ತೆಂಗಿನ ಹಾಲು ವಿಟಮಿನ್‌ಗಳು ಮತ್ತು ಕೊಬ್ಬಿನಾಮ್ಲಗಳಿಂದ ತುಂಬಿರುತ್ತದೆ. ಅದು ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಇ ಯ ಹೆಚ್ಚಿನ ಅಂಶವು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ತೆಂಗಿನ ಹಾಲನ್ನು ನಿಯಮಿತವಾಗಿ ಚರ್ಮಕ್ಕೆ ಹಚ್ಚುವುದರಿಂದ ಕಿರಿಕಿರಿಗೊಂಡ ಚರ್ಮವನ್ನು ಶಮನಗೊಳಿಸಲು ಮತ್ತು ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೇಗೆ ಬಳಸುವುದು: ತೆಂಗಿನ ಹಾಲನ್ನು ಮುಖಕ್ಕೆ ಮಾಸ್ಕ್‌ನಂತೆ ಹಚ್ಚಿಕೊಳ್ಳಿ. ಹಚ್ಚಿದ ಬಳಿಕ ಇದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ: ತೆಂಗಿನ ಹಾಲಿನಲ್ಲಿರುವ ಅಗತ್ಯ ಪೋಷಕಾಂಶಗಳಾದ ವಿಟಮಿನ್ ಬಿ, ಸಿ ಮತ್ತು ಇ ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ತೆಂಗಿನ ಹಾಲು ನೆತ್ತಿಯನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ತಲೆಹೊಟ್ಟು ಮತ್ತು ಶುಷ್ಕತೆಯನ್ನು ತಡೆಯುತ್ತದೆ.
ಹೇಗೆ ಬಳಸುವುದು: ತೆಂಗಿನ ಹಾಲನ್ನು ನೆತ್ತಿ ಮತ್ತು ಕೂದಲಿಗೆ ಮಸಾಜ್ ಮಾಡಿ. ಶಾಂಪೂವಿನಿಂದ ತೊಳೆಯುವ ಮೊದಲು 30 ನಿಮಿಷಗಳ ಕಾಲ ಅದನ್ನು ಹಾಗೆ ಬಿಡಿ.
ಜೀರ್ಣಕಾರಿ ಆರೋಗ್ಯವನ್ನು ಬೆಂಬಲಿಸುತ್ತದೆ: ತೆಂಗಿನ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಹೇಗೆ ಬಳಸುವುದು: ತೆಂಗಿನ ಹಾಲನ್ನು ಸ್ಮೂಥಿಗಳಲ್ಲಿ, ಸೂಪ್‌ಗಳಲ್ಲಿ ಅಥವಾ ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು.
ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ: ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‍ಗಳಲ್ಲಿ ಸಮೃದ್ಧವಾಗಿರುವ ತೆಂಗಿನ ಹಾಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ತೆಂಗಿನ ಹಾಲಿನಲ್ಲಿ ಕಂಡುಬರುವ ಲಾರಿಕ್ ಆಮ್ಲವು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಅದು ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಹೇಗೆ ಬಳಸುವುದು: ಪ್ರತಿದಿನ ಒಂದು ಲೋಟ ತೆಂಗಿನ ಹಾಲನ್ನು ಸೇವಿಸಬಹುದು. ಹಾಗೆಯೇ ಸೇವಿಸಲು ಇಷ್ಟವಾಗದಿದ್ದಲ್ಲಿ ಪಾಯಸ ತಯಾರಿಸಿ ಸೇವಿಸಬಹುದು.
ತ್ವಚೆ ಕಾಂತಿ ಹೆಚ್ಚಿಸಲು ಸಹಕಾರಿ: ತೆಂಗಿನ ಹಾಲಿನಲ್ಲಿರುವ ನೈಸರ್ಗಿಕ ಕೊಬ್ಬುಗಳು ಮತ್ತು ವಿಟಮಿನ್‌ಗಳು ಚರ್ಮಕ್ಕೆ ಆರೋಗ್ಯಕರ ಹೊಳಪನ್ನು ನೀಡುತ್ತದೆ. ಇದರಲ್ಲಿರುವ ಲಾರಿಕ್ ಆಮ್ಲವು ಮೊಡವೆ ಮತ್ತು ಚರ್ಮದ ಸೋಂಕನ್ನು ಎದುರಿಸಲು ಸಹಾಯ ಮಾಡುತ್ತದೆ. ಆದರೆ, ವಿಟಮಿನ್ ಸಿ ಮೈಬಣ್ಣವನ್ನು ಹೊಳಪು ಮಾಡಲು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೇಗೆ ಬಳಸುವುದು: ನೈಸರ್ಗಿಕ ಫೇಸ್ ಸ್ಕ್ರಬ್ ಅನ್ನು ತಯಾರಿಸಲು ತೆಂಗಿನ ಹಾಲನ್ನು ಸ್ವಲ್ಪ ಜೇನುತುಪ್ಪ ಮತ್ತು ಅರಿಶಿನದೊಂದಿಗೆ ಮಿಶ್ರಣ ಮಾಡಿ ತ್ವಚೆಗೆ ಹಚ್ಚಿ.
ಮನೆಯಲ್ಲಿ ತೆಂಗಿನ ಹಾಲು ಮಾಡುವ ಸರಳ ವಿಧಾನ
ಮನೆಯಲ್ಲಿ ತೆಂಗಿನ ಹಾಲು ತಯಾರಿಸುವುದು ತುಂಬಾನೇ ಸಿಂಪಲ್. ಏನೆಲ್ಲಾ ಬೇಕು, ಹೇಗೆ ಮಾಡುವುದು ಇಲ್ಲಿ ತಿಳಿಯಿರಿ.
ಬೇಕಾಗುವ ಪದಾರ್ಥಗಳು: ತುರಿದ ತೆಂಗಿನಕಾಯಿ- 1 ಕಪ್, ಬಿಸಿ ನೀರು- 2 ಕಪ್
ಮಾಡುವ ವಿಧಾನ: ತುರಿದ ತೆಂಗಿನಕಾಯಿಯನ್ನು ಮಿಕ್ಸಿ ಜಾರಿನಲ್ಲಿ ಹಾಕಿ. ಮಿಶ್ರಣವು ನಯವಾದ ನಂತರ ಬಿಸಿ ನೀರನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಇದನ್ನು ಸ್ಟ್ರೈನರ್ ಅಥವಾ ಬಟ್ಟೆ ಸಹಾಯದಿಂದ ಸೋಸಿಕೊಳ್ಳಿ. ತೆಂಗಿನಕಾಯಿ ಹಿಂಡು ಹಾಗೂ ಹಾಲು ಬೇರ್ಪಡುತ್ತದೆ. ಈ ಹಾಲನ್ನು ಸ್ವಚ್ಛವಾದ, ಗಾಳಿಯಾಡದ ಕಂಟೇನರ್‌ಗೆ ವರ್ಗಾಯಿಸಿ, ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ. ಇದನ್ನು 3 ರಿಂದ 4 ದಿನದವರೆಗೆ ಬಳಸಬಹುದು. ಚರ್ಮಕ್ಕೆ, ಕೂದಲಿಗೆ ಬಳಸಿ, ಪ್ರಯೋಜನ ಪಡೆಯಿರಿ.