ನೀವಿನ್ನೂ ಹೆನ್ನಾ ಪ್ಯಾಕ್ ಬಳಸ್ತಿಲ್ವಾ, ಕೂದಲು ಉದುರೋದು ತಪ್ಪುತ್ತೆ, ಶೈನಿಂಗೂ ಬರುತ್ತೆ, ಹೀಗೆ ಹತ್ತಾರು ಬೆನಿಫಿಟ್ಸ್ ಇವೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವಿನ್ನೂ ಹೆನ್ನಾ ಪ್ಯಾಕ್ ಬಳಸ್ತಿಲ್ವಾ, ಕೂದಲು ಉದುರೋದು ತಪ್ಪುತ್ತೆ, ಶೈನಿಂಗೂ ಬರುತ್ತೆ, ಹೀಗೆ ಹತ್ತಾರು ಬೆನಿಫಿಟ್ಸ್ ಇವೆ ನೋಡಿ

ನೀವಿನ್ನೂ ಹೆನ್ನಾ ಪ್ಯಾಕ್ ಬಳಸ್ತಿಲ್ವಾ, ಕೂದಲು ಉದುರೋದು ತಪ್ಪುತ್ತೆ, ಶೈನಿಂಗೂ ಬರುತ್ತೆ, ಹೀಗೆ ಹತ್ತಾರು ಬೆನಿಫಿಟ್ಸ್ ಇವೆ ನೋಡಿ

ಕೂದಲಿನ ಬಣ್ಣಕ್ಕಾಗಿ ಹೆನ್ನಾ ಹೇರ್‌ ಪ್ಯಾಕ್‌ (ಗೋರಂಟಿ) ಬಳಸುವುದು ಸಾಮಾನ್ಯ. ಆದರೆ ನೀವು ಹೆನ್ನಾ ಹೇರ್‌ ಪ್ಯಾಕ್‌ನೊಂದಿಗೆ ಕೆಲವು ಪದಾರ್ಥಗಳನ್ನು ಸೇರಿಸಿದರೆ, ಅದು ಕೂದಲು ಉದುರುವುದನ್ನು ಕಡಿಮೆ ಮಾಡುವುದಲ್ಲದೆ, ಬಣ್ಣದ ಜೊತೆಗೆ ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ. ಒಟ್ಟಾರೆ ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಹೇಗೆ ಎಂಬುದನ್ನು ತಿಳಿಯೋಣ.

ಹೆನ್ನಾ ಪ್ಯಾಕ್ ಬಳಸುವುದರಿಂದ ಕೂದಲು ಉದುರೋದು ತಪ್ಪುತ್ತೆ, ಶೈನಿಂಗೂ ಬರುತ್ತೆ, ಹೀಗೆ ಹತ್ತಾರು ಬೆನಿಫಿಟ್ಸ್. (ಸಾಂಕೇತಿಕ ಚಿತ್ರ)
ಹೆನ್ನಾ ಪ್ಯಾಕ್ ಬಳಸುವುದರಿಂದ ಕೂದಲು ಉದುರೋದು ತಪ್ಪುತ್ತೆ, ಶೈನಿಂಗೂ ಬರುತ್ತೆ, ಹೀಗೆ ಹತ್ತಾರು ಬೆನಿಫಿಟ್ಸ್. (ಸಾಂಕೇತಿಕ ಚಿತ್ರ) (Pexels / Freepik)

ಕೂದಲನ್ನು ಆರೋಗ್ಯವಾಗಿ ಇರಿಸಿಕೊಳ್ಳುವುದಕ್ಕಾಗಿ ಅನೇಕರು ತಮ್ಮ ಕೂದಲಿಗೆ ತಿಂಗಳಿಗೊಮ್ಮೆ ಹೆನ್ನಾ ಹೇರ್‌ ಪ್ಯಾಕ್ (ಗೋರಂಟಿ) ಬಳಸುತ್ತಾರೆ. ವಾಸ್ತವದಲ್ಲಿ ಈ ಹೆನ್ನಾ ಹೇರ್‌ ಪ್ಯಾಕ್‌ಗೆ ಕೆಲವು ಕಾಂಬಿನೇಷನ್‌ಗಳಿವೆ. ಆ ಕಾಂಬಿನೇಷನ್‌ನಲ್ಲಿ ಬಳಸುವುದರಿಂದ ಕೂದಲಿನ ಕಲರ್‌ ಮಾತ್ರವಲ್ಲದೆ, ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ. ಇಲ್ಲಿ ಹೆನ್ನಾ ಹೇರ್‌ ಪ್ಯಾಕ್ ಜೊತೆಗೆ ಕಾಂಬಿನೇಷನ್ ಪದಾರ್ಥದ ಪ್ರಯೋಜನವೂ ಕೂದಲಿಗೆ ಸಿಗುತ್ತದೆ ಎಂಬುದನ್ನು ಗಮನಿಸಬೇಕು.

ಹೆನ್ನಾ ಹೇರ್‌ ಪ್ಯಾಕ್ ಬಳಕೆ ಸ್ಕಾಲ್ಪ್‌ (ತಲೆಯ ಬುಡ)ಗೆ ಕೂಡಾ ಬಹಳ ಒಳ್ಳೆಯದು. ಇದು ತಂಪು ಅನುಭವ ನೀಡುತ್ತದೆ. ಜೊತೆಗೆ ಸ್ಕಾಲ್ಪ್‌ನಲ್ಲಿ ಗಾಯದ ಸಮಸ್ಯೆ, ತಲೆ ಹೊಟ್ಟು, ಕೆರೆತ ಸೇರಿ ಕೆಲವು ಫಂಗಲ್‌ ಸೋಂಕಿನಿಂದಲೂ ಇದು ರಕ್ಷಣೆ ನೀಡುತ್ತದೆ. ಕೂದಲು ಉದುರುವಿಕೆಯಿಂದ ಮತ್ತೆ ಬೆಳೆಯುವವರೆಗೆ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುವ ಕೆಲವು ಹೆನ್ನಾ ಹೇರ್ ಪ್ಯಾಕ್‌ಗಳನ್ನು ಪರಿಶೀಲಿಸೋಣ.

ಕೂದಲು ಉದುರುವಿಕೆ ತಡೆಗೆ ಹೆನ್ನಾ ಹೇರ್ ಪ್ಯಾಕ್‌

1) ಮೆಂತ್ಯ ಕಾಂಬಿನೇಷನ್‌ನ ಹೆನ್ನಾ ಹೇರ್‌ ಪ್ಯಾಕ್‌: ಹೆನ್ನಾ ಹಚ್ಚುವ ಮುನ್ನ ರಾತ್ರಿ ಎರಡು ಚಮಚ ಮೆಂತ್ಯವನ್ನು ನೀರಿನಲ್ಲಿ ನೆನೆಸಿಡಿ. ನೆನೆಸಿದ ಮೆಂತ್ಯವನ್ನು ಬೆಳಿಗ್ಗೆ ಒಂದು ಮಿಕ್ಸಿ ಜಾರ್‌ನಲ್ಲಿ ಹಾಕಿ. ಇದಕ್ಕೆ ಹೆನ್ನಾ ಪುಡಿಯನ್ನು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ. ಇದನ್ನು ನೀರಿನೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ. ಮೆಂತ್ಯವು ಕೂದಲಿನ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ.

2) ಮುಲ್ತಾನಿ ಮಣ್ಣು + ಹೆನ್ನಾ ಹೇರ್‌ ಪ್ಯಾಕ್‌ ಕಾಂಬಿನೇಷನ್‌: ಎರಡರಿಂದ ಮೂರು ಚಮಚ ಹೆನ್ನಾ ಹೇರ್ ಪ್ಯಾಕ್‌ ಪುಡಿಗೆ, ಅದೇ ಪ್ರಮಾಣದ ಮುಲ್ತಾನಿ ಮಣ್ಣನ್ನು ಸೇರಿಸಿ . ಅದಕ್ಕೆ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ಅದನ್ನು ತಲೆಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ತಲೆ ಕೂದಲು ತೊಳೆದುಕೊಳ್ಳಿ. ಮುಲ್ತಾನಿ ಮಣ್ಣು ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ.

3) ದಾಸವಾಳದೊಂದಿಗೆ ಹೆನ್ನಾ ಹೇರ್ ಪ್ಯಾಕ್‌: ಮಿಕ್ಸಿ ಜಾರ್‌ನಲ್ಲಿ 5 ಅಥವಾ 6 ದಾಸವಾಳದ ಎಲೆಗಳನ್ನು ಹಾಕಿ ಅದನ್ನು ಪುಡಿ ಮಾಡಿ. ಅದಕ್ಕೆ ಹೆನ್ನಾ ಪ್ಯಾಕ್‌ನಿಂದ ಒಮ್ಮೆ ಬಳಸುವುದಕ್ಕೆ ಬೇಕಾದ ಗೋರಂಟಿ ಪುಡಿ ಮತ್ತು ಎರಡು ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ ಮಿಕ್ಸ್‌ ಮಾಡಿ. ಸ್ವಲ್ಪ ಜಾರುವಂತೆ ಮಾಡಲು ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ. ಇದನ್ನು ಕೂದಲಿನ ಬುಡದಿಂದ ತುದಿವರೆಗೂ ಸವರಿ. ಒಂದು ಗಂಟೆಯ ನಂತರ ತೊಳೆದರೆ ಸಾಕು. ಇದರಿಂದ ಕೂದಲಿನ ಬುಡ ಗಟ್ಟಿಯಾಗುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

4) ಬಾಳೆಹಣ್ಣು ಮತ್ತು ಹೆನ್ನಾ ಹೇರ್‌ ಪ್ಯಾಕ್‌: 2 ಚಮಚ ಹೆನ್ನಾ ಹೇರ್ ಪ್ಯಾಕ್‌ (ಗೋರಂಟಿ) ಪುಡಿ, 2 ಚಮಚ ಮೊಸರು ಮತ್ತು 1 ಬಾಳೆಹಣ್ಣು ಬೇಕಾಗುತ್ತದೆ. ಮೊದಲು, ಒಂದು ಬಟ್ಟಲಿನಲ್ಲಿ ಮಾಗಿದ ಬಾಳೆಹಣ್ಣನ್ನು ಸ್ಮ್ಯಾಶ್‌ ಮಾಡಿ. ಇದಕ್ಕೆ ಗೋರಂಟಿ ಪುಡಿ ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ತಲೆಗೆ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ತೊಳೆದರೆ ಹೊಳೆಯುವ ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ.

ಹೆನ್ನಾ ಹೇರ್ ಪ್ಯಾಕ್‌ ಪ್ರಯೋಜನಗಳಿವು

ಸ್ಟ್ರೈಟ್‌ ಹಾಗೂ ಸಿಲ್ಕಿ ಹೇರ್‌ ಇಷ್ಟಪಡುವವರು ಇದನ್ನು ಬಳಸುತ್ತಿದ್ದು, ಹೆನ್ನಾ ಬಳಸುವುದರಿಂದ ನಿಮ್ಮ ಕೂದಲು ಹೊಳಪಿನೊಂದಿಗೆ ಕಂಗೊಳಿಸುತ್ತದೆ. ಅದೇ ರೀತಿ. ಕೂದಲು ಕವಲೊಡೆಯುವ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಸ್ಟ್ರೈಟ್‌ ಆಗುತ್ತದೆ.

ಇನ್ನು, ಹೆನ್ನಾ ಪ್ಯಾಕ್‌ ಕೂದಲಿನ ಪಿಹೆಚ್‌ ಮಟ್ಟವನ್ನು ಸಮ ಪ್ರಮಾಣದಲ್ಲಿ ಇರಿಸುತ್ತದೆ. ಕೂದಲಿನ ಆಳಕ್ಕೆ ಇಳಿದು ಸ್ಕಾಲ್ಪ್‌ನಿಂದ ಹೆಚ್ಚಿನ ಎಣ್ಣೆ ಸ್ರವಿಸುವಿಕೆಯನ್ನು ತಡೆಯುತ್ತದೆ.

ಇದೊಂದು ಗಮನದಲ್ಲಿಡಿ- ಹೆನ್ನಾ ಪ್ಯಾಕ್‌ ಬಳಸುವುದರಿಂದ ಪ್ರಯೋಜನಗಳ ಜತೆಗೆ ಕೆಲವು ಸೈಡ್‌ ಎಫೆಕ್ಟ್‌ ಕೂಡಾ ಇದೆ. ಬಳಸುವ ಮುನ್ನ ಪ್ಯಾಚ್‌ ಟೆಸ್ಟ್‌ ಮಾಡಿ ಬಳಸಿ. ಹೆನ್ನಾ ಬಳಸುವುದರಿಂದ ಕೆಲವರಿಗೆ ಶೀತ, ನೆಗಡಿ ಉಂಟಾಗಬಹುದು. ಸ್ಕಿನ್ ಅಲರ್ಜಿ ಕೂಡ ಆಗಬಹುದು. ಮಾರುಕಟ್ಟೆಯಿಂದ ಖರೀದಿಸುವುದಾದರೆ ಉತ್ತಮ ಗುಣಮಟ್ಟದ ಹೆನ್ನಾ ಪ್ಯಾಕ್ ಅನ್ನೇ ಖರೀದಿಸಿ.

Whats_app_banner