ಚಳಿಗಾಲದಲ್ಲಿ ಕಾಡುವ ಕೂದಲಿನ ಸಮಸ್ಯೆಗಳಿಗೆ ಕಿತ್ತಳೆ ಸಿಪ್ಪೆಯೇ ಪರಿಹಾರ; ಕೂದಲ ಆರೈಕೆಗೆ ಇದನ್ನು ಹೇಗೆಲ್ಲಾ ಬಳಸಬಹುದು ನೋಡಿ
ಚಳಿಗಾಲ ಆರಂಭವಾಗಿ ಕೆಲವು ದಿನಗಳು ಕಳೆದಿವೆ. ಈಗಾಗಲೇ ಕೂದಲು ಅತಿಯಾಗಿ ಉದುರೋದು, ರಫ್ ಅನ್ನಿಸೋದು, ಸಿಕ್ಕು ಉಂಟಾಗೋದು ಇಂತಹ ಸಮಸ್ಯೆಗಳು ಕಾಡೋಕೆ ಶುರು ಆಗಿದ್ಯಾ? ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಿತ್ತಳೆ ಸಿಪ್ಪೆಯಲ್ಲಿದೆ. ಚಳಿಗಾಲದಲ್ಲಿ ಕೂದಲ ಕಾಳಜಿಗೆ ಕಿತ್ತಳೆ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ನೋಡಿ.
ಕಿತ್ತಳೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಇದರಲ್ಲಿ ವಿಟಮಿನ್ ಸಿ, ಇ ಹಾಗೂ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿರುತ್ತದೆ. ಆದ್ದರಿಂದ ಕಿತ್ತಳೆ ಹಣ್ಣು ಹೆಚ್ಚು ಹೆಚ್ಚು ತಿನ್ನಬೇಕು ಎನ್ನುತ್ತಾರೆ, ಈ ಮಾರುಕಟ್ಟೆಯಲ್ಲಿ ಕಿತ್ತಳೆ ಹಣ್ಣಿಗೆ ಬರವಿಲ್ಲ. ನೀವು ತಿನ್ನೋಕೆ ಅಂತ ಕಿತ್ತಳೆ ಹಣ್ಣು ತಂದಿದ್ದರೆ ಅದರ ಸಿಪ್ಪೆಯನ್ನು ಹಾಗೆ ಸಂಗ್ರಹಿಸಿ ಇಟ್ಟುಕೊಳ್ಳಿ. ಹಣ್ಣಿನಷ್ಟೇ ಸಿಪ್ಪೆಯಿಂದಲೂ ಪ್ರಯೋಜನವಿದೆ. ಕಿತ್ತಳೆ ಸಿಪ್ಪೆಯು ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ. ಅದರಲ್ಲೂ ಚಳಿಗಾಲದಲ್ಲಿ ಎದುರಾಗುವ ವಿವಿಧ ರೀತಿ ಕೂದಲಿನ ಸಮಸ್ಯೆಗೆ ಕಿತ್ತಳೆ ಸಿಪ್ಪೆಯೇ ಮದ್ದು.
ಕಿತ್ತಳೆ ಸಿಪ್ಪೆಯಿಂದ ಕೂದಲ ಪೋಷಣೆ ಮಾಡಬಹುದು ನಿಜ. ಆದರೆ ಕೂದಲಿನ ಆರೈಕೆಗೆ ಇದನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎಂಬುದು ತಿಳಿದಿರಬೇಕು. ಹಾಗಾದರೆ ಕೂದಲ ಕಾಳಜಿಗೆ ಕಿತ್ತಳೆ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ನೋಡಿ. ಇದನ್ನು ಬಳಸಿದ ನಂತರ ಫಲಿತಾಂಶ ನೋಡಿದ್ರೆ ಖಂಡಿತ ನೀವು ಅಚ್ಚರಿ ಪಡ್ತೀರಿ.
ಕಿತ್ತಳೆ ಸಿಪ್ಪೆ ಹಾಗೂ ನಿಂಬೆರಸ
ಒಂದಿಷ್ಟು ಕಿತ್ತಳೆಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಈ ನೀರನ್ನು ಒಂದು ಪಾತ್ರೆಗೆ ಸೋಸಿ. ಇದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಪಿಎಚ್ ಮಟ್ಟ ಸುಧಾರಿಸಲು ಮತ್ತು ನೈಸರ್ಗಿಕ ಪರಿಮಳಕ್ಕಾಗಿ ಕೂದಲನ್ನು ಈ ನೀರಿನಿಂದ ತೊಳೆಯಿರಿ.
ಕಿತ್ತಳೆ ಮತ್ತು ಮೊಸರು ಹೇರ್‌ಮಾಸ್ಕ್
ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ, ಪುಡಿ ಮಾಡಿ. ಈ ಪುಡಿಯೊಂದಿಗೆ ಮೊಸರನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನು ಹೇರ್‌ಮಾಸ್ಕ್ ರೀತಿ ಕೂದಲಿಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತಲೆಸ್ನಾನ ಮಾಡಿ. ಇದು ಕೂದಲನ್ನು ನಯವಾಗಿಸಿ, ಬುಡದಿಂದಲೇ ಕೂದಲನ್ನು ಸದೃಢಗೊಳಿಸುತ್ತದೆ.
ಕಿತ್ತಳೆ ಸಿಪ್ಪೆ ಜೇನುತುಪ್ಪದ ಹೇರ್ ಕಂಡೀಷನರ್
ಒಣಗಿದ ಕಿತ್ತಳೆ ಸಿಪ್ಪೆಯ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಇದನ್ನು ಹೇರ್ ಕಂಡೀಷನರ್ ರೂಪದಲ್ಲಿ ಬಳಸಬಹುದು. ಕೂದಲು ಕಿರುಚೀಲಗಳನ್ನು ಪೋಷಿಸಲು ಹೇರ್ ಕಂಡಿಷನರ್ ಆಗಿ ಬಳಸಿ.
ಕಿತ್ತಳೆ ಸಿಪ್ಪೆ ಎಣ್ಣೆ
ಒಣಗಿದ ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯೊಂದಿಗೆ ಕುದಿಸಿ ಎಣ್ಣೆ ತಯಾರಿಸಿ. ಕೂದಲು ಹಾಗೂ ನೆತ್ತಿ ಬುಡ ಒಣಗುವುದನ್ನು ತಡೆಯಲು ತಲೆಸ್ನಾನಕ್ಕೂ ಅರ್ಧ ಗಂಟೆ ಮೊದಲು ಕೂದಲಿಗೆ ಹಚ್ಚಿ, ನಂತರ ಸ್ನಾನ ಮಾಡಿ.
ಕಿತ್ತಳೆ ಸಿಪ್ಪೆ, ಆಲೊವೆರಾ ಸೀರಮ್
ಸಿಪ್ಪೆಯ ಪುಡಿ, ಕಿತ್ತಳೆ ರಸ ಮತ್ತು ಅಲೋವೆರಾ ಜೆಲ್ ಈ ಮೂರನ್ನು ಒಟ್ಟಿಗೆ ಮಿಶ್ರಣ ಮಾಡಿ. ನೈಸರ್ಗಿಕ ಹೊಳಪನ್ನು ಪಡೆಯಲು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಇದು ಕೂದಲಿಗೆ ಸೀರಮ್ ರೀತಿ ಕೆಲಸ ಮಾಡುತ್ತದೆ.
ಕಿತ್ತಳೆ ಸಿಪ್ಪೆಯಲ್ಲಿ ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಇದು ಕೂದಲಿನ ಒಣ ಫಾಲಿಕಲ್ಸ್‌ಗಳನ್ನು ಪೋಷಿಸುತ್ತದೆ. ಆದರೆ ಕೂದಲಿಗೆ ಕಿತ್ತಳೆ ಸಿಪ್ಪೆ ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡುವುದು ಮರೆಯದಿರಿ. ನಿಮಗೆ ಯಾವುದೇ ರೀತಿ ಅಲರ್ಜಿಯಂತಹ ಸಮಸ್ಯೆ ಇದ್ದರೆ ಇದನ್ನು ಹಚ್ಚುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ವಿಭಾಗ