ನೇರಳೆ ಹಣ್ಣಿನಿಂದ ಆರೋಗ್ಯಕರ ಡಯೆಟ್ ಪ್ಲಾನ್; ಬರೀ ಹಣ್ಣು ತಿನ್ನೋ ಬದಲು ಈ ವಿಧಾನದಲ್ಲೂ ಹೊಟ್ಟೆಗಿಳಿಸಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  ನೇರಳೆ ಹಣ್ಣಿನಿಂದ ಆರೋಗ್ಯಕರ ಡಯೆಟ್ ಪ್ಲಾನ್; ಬರೀ ಹಣ್ಣು ತಿನ್ನೋ ಬದಲು ಈ ವಿಧಾನದಲ್ಲೂ ಹೊಟ್ಟೆಗಿಳಿಸಬಹುದು

ನೇರಳೆ ಹಣ್ಣಿನಿಂದ ಆರೋಗ್ಯಕರ ಡಯೆಟ್ ಪ್ಲಾನ್; ಬರೀ ಹಣ್ಣು ತಿನ್ನೋ ಬದಲು ಈ ವಿಧಾನದಲ್ಲೂ ಹೊಟ್ಟೆಗಿಳಿಸಬಹುದು

ಮಧುಮೇಹ ಚಿಕಿತ್ಸೆಗೆ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುವ ನೇರಳೆ ಹಣ್ಣು ಹಲವು ಆರೋಗ್ಯಕರ ಪ್ರಯೋಜನೆ ಹೊಂದಿವೆ. ಆಹಾರಕ್ರಮ ಅನುಸರಿಸುವವರು ಈ ಹಣ್ಣನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು. ತಜ್ಞರು ಕೆಲವೊಂದು ಡಯೆಟ್‌ ಪ್ಲಾನ್‌ ತಿಳಿಸಿದ್ದು, ಅದರ ವಿವರ ಇಲ್ಲಿದೆ.

ನೇರಳೆ ಹಣ್ಣಿನಿಂದ ಆರೋಗ್ಯಕರ ಡಯೆಟ್ ಪ್ಲಾನ್
ನೇರಳೆ ಹಣ್ಣಿನಿಂದ ಆರೋಗ್ಯಕರ ಡಯೆಟ್ ಪ್ಲಾನ್

ಮಳೆಗಾಲದಲ್ಲಿ ಹೇರಳವಾಗಿ ಸಿಗುವ ನೇರಳೆಹಣ್ಣು (Jamun Fruit), ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೆಲವು ಸೋಂಕುಗಳ ವಿರುದ್ಧ ಹೋರಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸೂಕ್ತ ನೈಸರ್ಗಿಕ ಆಹಾರ. ಮಧುಮೇಹದಿಂದಾಗಿ ನಾಲಿಗೆಗೆ ಸಿಹಿ ಕಡಿಮೆ ಉಣಿಸುವ ಜನರು ಕೂಡಾ ನೇರಳೆ ಕಂಡರೆ ಖುಷಿ ಪಡುತ್ತಾರೆ. ಈ ರುಚಿಕರ ಹಣ್ಣು ಮತ್ತು ಅದರ ಬೀಜವು ದೇಹದಲ್ಲಿ ಸಕ್ಕರೆ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ನೆರವಾಗುವ ಜಂಬೋಲಿನ್ ಎಂಬ ಸಂಯುಕ್ತವನ್ನು ಹೊಂದಿರುವುದರಿಂದ ನೇರಳೆಹಣ್ಣು ದೇಹಕ್ಕೆ ಒಳ್ಳೆಯದು. ಹೀಗಾಗಿ ಮಧುಮೇಹ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಈ ಹಣ್ಣನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ರಸಭರಿತ ಸಿಹಿ ಹಣ್ಣಿನಲ್ಲಿ ದೇಹಕ್ಕೆ ಬೇಕಾದ ಹಲವಾರು ಆರೋಗ್ಯಕರ ಅಂಶಗಳಿವೆ. ಉತ್ಕರ್ಷಣ ನಿರೋಧಕಗಳು, ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಬಿ6 ಹಾಗೂ ಮ್ಯಾಂಗನೀಸ್‌ನಿಂದ ತುಂಬಿದೆ. ಕಬ್ಬಿಣದ ಅಂಶ ಹೇರಳವಾಗಿರುವ ಹಣ್ಣು, ರಕ್ತವನ್ನು ಶುದ್ಧೀಕರಿಸುತ್ತದೆ.

ಪೌಷ್ಟಿಕತಜ್ಞರು ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯ ತರಬೇತುದಾರ ಅನುಪಮಾ ಮೆನನ್ ಅವರು ಎಚ್‌ಟಿ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ನೇರಳೆ ಹಣ್ಣಿನ ಪ್ರಯೋಜನಗಳ ಕುರಿತು ಮಾತನಾಡಿದ್ದಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಯಾವೆಲ್ಲಾ ರೀತಿಯಲ್ಲಿ ಹಣ್ಣು ಸೇವಿಸಬಹುದು ಎಂಬ ಕುರಿತು ವಿವರಿಸಿದ್ದಾರೆ.

ನೇರಳೆ ಹಣ್ಣಿನ ರಸ

ನೇರಳೆ ಹಣ್ಣಿನ ರಸ ಅಥವಾ ಸಿಂಪಲ್‌ ಜ್ಯೂಸ್‌ ಹೊಟ್ಟೆಗೆ ಸೇರಿಸಬಹುದು. ಒಂದು ಕಪ್‌ನಲ್ಲಿ ಸ್ವಲ್ಪ ನೀರಿಗೆ 1/4 ಕಪ್‌ ನೇರಳೆ ತಿರುಳನ್ನು ಸೇರಿಸಿ. ಸ್ವಲ್ಪ ಕಪ್ಪು ಉಪ್ಪು ಹಾಗೂ ರುಚಿಗೆ ತಕ್ಕಂತೆ ಜೇನುತುಪ್ಪವನ್ನು ಸೇರಿಸಿ ಒಟ್ಟಿಗೆ ಮಿಶ್ರಣ ಮಾಡಿ. ಈ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ. ಜೊತೆಗೆ ನಿಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ.

ನೇರಳೆ ಹಣ್ಣಿನ ಫಿಜ್

ನೇರಳೆ ಹಣ್ಣನ್ನು ಇನ್ನಷ್ಟು ಮಜಾ ಬರುವಂತೆ ರುಚಿಕರವಾಗಿ ತಿನ್ನಲು ಬಯಸಿದರೆ, ಈ ಐಡಿಯಾ ನಿಮಗಾಗಿ. ಒಂದು ಪಾತ್ರೆಗೆ ಸ್ವಲ್ಪ ನಿಂಬೆ ಸೋಡಾ ಮತ್ತು ಸೇಬಿನ ರಸವನ್ನು ಸೇರಿಸಿ. ಈಗ ನೇರಳೆ ಹಣ್ಣಿನ ತಿರುಳನ್ನು ಮಿಶ್ರಣಕ್ಕೆ ಸೇರಿಸಿ. ಇದು ಬಾಯಿಗೆ ರುಚಿ ನೀಡುವುದಲ್ಲದೆ ಜೀರ್ಣಕಾರಿ ಆರೋಗ್ಯಕ್ಕೂ ಒಳ್ಳೆಯದು.

ನೇರಳೆ ಹಣ್ಣು- ಚಿಯಾ ಪುಡ್ಡಿಂಗ್

ತೆಂಗಿನ ಹಾಲಿಗೆ ಸ್ವಲ್ಪ ಚಿಯಾ ಬೀಜಗಳು ಹಾಗೂ ಸ್ವಲ್ಪ ಜೇನುತುಪ್ಪ ಬೆರೆಸಿ ಸುಮಾರು 4 ಗಂಟೆಗಳ ಕಾಲ ಹಾಗೆಯೇ ಬಿಡಿ. ಚಿಯಾ ಬೀಜ ತುಸು ಉಬ್ಬುತ್ತದೆ. ಈಗ ನೇರಳೆ ಹಣ್ಣನ್ನು ಪ್ಯೂರಿ ಮಾಡಿಕೊಂಡು ಅದನ್ನು ಚಿಯಾ ಮಿಶ್ರಣದೊಂದಿಗೆ ಸೇರಿಸಿ. ನೇರಳೆ ಹಣ್ಣು ಮತ್ತು ಚಿಯಾ ಬೀಜಗಳ ಸಂಯೋಜಿತ ಪ್ರಯೋಜನ ನಿಮ್ಮ ದೇಹಕ್ಕೆ ಸಿಗುತ್ತದೆ.

ನೇರಳೆ ಹಣ್ಣು ಸಲಾಡ್

ಸಲಾಡ್ ಪ್ರಿಯರು ಈ ಹಣ್ಣುಗಳ ಸಲಾಡ್ ಮಾಡಿ ತಿನ್ನಬಹುದು. ನೇರಳೆ ಹಣ್ಣು ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದಲ್ಲದೆ, ನಿಮ್ಮ ಹಿಮೋಗ್ಲೋಬಿನ್ ಕೌಂಟ್ ಸುಧಾರಿಸುತ್ತದೆ.

ಇನ್ನಷ್ಟು ಆರೋಗ್ಯ ಸಲಹೆಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner