Amla Juice: ಶುಗರ್ ಕಂಟ್ರೋಲ್, ತೂಕ ಇಳಿಕೆ; ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರ ಉಪಯೋಗಗಳಿವು
ನೆಲ್ಲಿಕಾಯಿ ತಿನ್ನಲು ಕಹಿಯಾದರೂ, ಇದರ ಆರೋಗ್ಯ ಪ್ರಯೋಜನಗಳು ತುಂಬಾ ಸಿಹಿ. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಏನೇನು ಲಾಭಗಳಿವೆ ಎಂಬುದನ್ನು ನೀವು ತಿಳಿದರೆ, ನಿತ್ಯ ಇದನ್ನು ತಿನ್ನುವುದು ಖಚಿತ.
ನೆಲ್ಲಿಕಾಯಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಪ್ರಾಚೀನ ಕಾಲದಿಂದಲೂ ಇದನ್ನು ಔಷಧವಾಗಿ ಬಳಸಲಾಗುತ್ತಿದೆ. ನೆಲ್ಲಿಕಾಯಿ ರಸವನ್ನು ನೀವು ಕಚ್ಛಾ ನೆಲ್ಲಿಕಾಯಿ ತಿನ್ನುವುದರಿಂದಲೂ ಅಥವಾ ಜ್ಯೂಸ್ ಮಾಡಿಯಾದರೂ ಸೇವಿಸಬಹುದು. ನೆಲ್ಲಿಕಾಯಿಯನ್ನು ಜ್ಯೂಸ್ ಮಾಡಿ ಕುಡಿದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನೆಲ್ಲಿಕಾಯಿ ಜ್ಯೂಸ್ ಅನ್ನು ಯಾವಾಗ ಕುಡಿಯಬೇಕು ಎಂಬುದರ ಬಗ್ಗೆ ಅನೇಕರಿಗೆ ಗೊಂದಲವಿರಬಹುದು. ನೆಲ್ಲಿಕಾಯಿ ಜ್ಯೂಸ್ ಅನ್ನು ನೀವು ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ಹೀಗೆ ಯಾವುದೇ ಹೊತ್ತಿನಲ್ಲಿ ಕುಡಿಯಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತುಂಬಾ ಒಳ್ಳೆಯದು. ಅದರಲ್ಲಿಯೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತದೆ. ನೆಲ್ಲಿಕಾಯಿ ಜ್ಯೂಸ್ ಉಪಯೋಗಗಳು ಇಲ್ಲಿವೆ.
ಕರುಳಿನ ಆರೋಗ್ಯ ಕಾಪಾಡುತ್ತದೆ
ನೆಲ್ಲಿಕಾಯಿ ಜ್ಯೂಸ್ ಕರುಳಿನ ಚಲನೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಇದಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕಾರಿ
ಆಹಾರದಲ್ಲಿರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆಲ್ಲಿಕಾಯಿ ರಸ ಸಹಾಯ ಮಾಡುತ್ತದೆ. ಅದರಲ್ಲಿಯೂ ಮೂಳೆ ಮತ್ತು ಹಲ್ಲಿನ ಆರೋಗ್ಯಕ್ಕೆ ಅಗತ್ಯವಾಗಿರುವ ಕ್ಯಾಲ್ಸಿಯಂ ಅನ್ನು ನಮ್ಮ ದೇಹ ಹೀರಿಕೊಳ್ಳಲು ಸಹಕಾರಿಯಾಗಿದೆ.
ದೇಹವನ್ನು ಡಿಟಾಕ್ಸ್ ಮಾಡುತ್ತದೆ
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಸೇವನೆಯ ಮತ್ತೊಂದು ಪ್ರಯೋಜನವೆಂದರೆ ಅದು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಮೂತ್ರ ವಿಸರ್ಜನೆಯ ಮೂಲಕ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ದೇಹದಿಂದ ಹೆಚ್ಚುವರಿ ಉಪ್ಪು, ಯೂರಿಕ್ ಆಮ್ಲ ಮತ್ತು ಕಲ್ಲುಗಳನ್ನು ಹೊರಹಾಕಲು ಉಪಯುಕ್ತವಾಗಿದೆ. ಮೂತ್ರಪಿಂಡಗಳು ಮತ್ತು ಮೂತ್ರನಾಳಕ್ಕೆ ಇದು ತುಂಬಾ ಸಹಕಾರಿಯಾಗಿದೆ. ಮೂತ್ರನಾಳದ ಸೋಂಕನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಉರಿಯೂತವನ್ನು ಕಡಿಮೆ ಮಾಡುತ್ತದೆ
ನೆಲ್ಲಿಕಾಯಿ ನೈಸರ್ಗಿಕವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ನೆಲ್ಲಿಕಾಯಿ ಜ್ಯೂಸ್ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಇದು ದೇಹದ ಮೇಲೆ ಪರಿಣಾಮ ಬೀರುವ ಕೆಲವು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತದೆ. ರಕ್ತನಾಳಗಳಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ಈ ಮೂಲಕ ಸೋಂಕಿನಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಕೆಗೆ ಉಪಯುಕ್ತ
ನೆಲ್ಲಿಕಾಯಿ ಜ್ಯೂಸ್ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ತೂಕ ಇಳಿಸಲು ಸಹಾಯ ಮಾಡುತ್ತದೆ. ಉಳಿದಂತೆ ನೆಲ್ಲಿಕಾಯಿ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ಕೂಡ ನೆಲ್ಲಿಕಾಯಿ ಜ್ಯೂಸ್ ಸಹಾಯ ಮಾಡುತ್ತದೆ.
ಶುಗರ್ ನಿಯಂತ್ರಣ
ಮಧುಮೇಹ ಇದ್ದವರಿಗೆ ನೆಲ್ಲಿಕಾಯಿ ಜ್ಯೂಸ್ ಬಹಳ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೆಚ್ಚುವರಿ ಗ್ಲೂಕೋಸ್ ಅಂಶವನ್ನು ಬಳಸಿಕೊಳ್ಳಲು ದೇಹವನ್ನು ಉತ್ತೇಜಿಸುತ್ತದೆ ಹಾಗೂ ಚಯಾಪಚಯ ಶಕ್ತಿಯನ್ನು ಹೆಚ್ಚಿಸುತ್ತದೆ.
ಗಮನಿಸಿ: ನೆಲ್ಲಿಕಾಯಿ ಜ್ಯೂಸ್ ಮಧುಮೇಹಿಗಳಿಗೆ ಒಳ್ಳೆಯದು. ಆದರೆ ಮಧುಮೇಹಿಗಳು ವೈದ್ಯರು ಸೂಚಿಸುವ ಔಷಧಿಗಳೊಂದಿಗೆ ಈ ಜ್ಯೂಸ್ ಕುಡಿಯುವುದರಿಂದ ಸಮಸ್ಯೆ ಉಂಟಾಗಬಹುದು. ನೀವು ಶುಗರ್ ನಿಯಂತ್ರಿಸಲು ಮಾತ್ರೆ ಅಥವಾ ಇನ್ನಾವುದೇ ಔಷಧಿ ತೆಗೆದುಕೊಳ್ಳುತ್ತಿದ್ದರೆ ನಿಮ್ಮ ವೈದ್ಯರ ಸಲಹೆ ಪಡೆಯಿರಿ.