ಪೂಜೆಗಷ್ಟೇ ಸೀಮಿತವಲ್ಲ: ಒತ್ತಡ ನಿರ್ವಹಣೆಯಿಂದ ತ್ವಚೆಯ ಹೊಳಪಿನವರೆಗೆ ಕರ್ಪೂರದ ಪ್ರಯೋಜನಗಳಿವು
ಪೂಜೆಯಲ್ಲಿ ಬಳಸುವ ಕರ್ಪೂರವು ಆರೋಗ್ಯ ಮತ್ತು ತ್ವಚೆಗೂ ಪ್ರಯೋಜನಕಾರಿಯಾಗಿದೆ. ಇದನ್ನು ಸಾಂಪ್ರದಾಯಿಕ ಔಷಧ ಹಾಗೂ ಇತರೆ ಬಳಕೆಗಳಲ್ಲಿ ಶತಮಾನಗಳಿಂದ ಬಳಕೆ ಮಾಡಲಾಗುತ್ತಿದೆ. ಕರ್ಪೂರದ ನೀರಿನಿಂದ ಸ್ನಾನ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ಕರ್ಪೂರವು ನೈಸರ್ಗಿಕ ಸಂಯುಕ್ತವಾಗಿದ್ದು, ಇದನ್ನು ಸಾಂಪ್ರದಾಯಿಕ ಔಷಧ ಹಾಗೂ ಇತರೆ ಬಳಕೆಗಳಲ್ಲಿ ಶತಮಾನಗಳಿಂದ ಬಳಕೆ ಮಾಡಲಾಗುತ್ತಿದೆ. ಹಲವಾರು ಆರೋಗ್ಯ ಪ್ರಯೋಜನಗಳಿಗೆ ಕರ್ಪೂರವು ಹೆಸರುವಾಸಿಯಾಗಿದೆ. ನೋವು ನಿವಾರಕ ಮತ್ತು ಉರಿಯೂತದ ಪರಿಣಾಮಗಳಿಗೆ ಇದು ಪರಿಹಾರವಾಗಿದೆ. ಅಲ್ಲದೆ, ಸ್ನಾಯು ನೋವು ಮತ್ತು ಉಸಿರಾಟದ ಸಮಸ್ಯೆಗಳನ್ನು ಶಮನಗೊಳಿಸಲು ಕೂಡ ಕರ್ಪೂರವು ಪರಿಣಾಮಕಾರಿಯಾಗಿದೆ. ಕರ್ಪೂರವು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಕರ್ಪೂರದ ಬಿಲ್ಲೆಗಳಿಲ್ಲದ ಪೂಜಾ ಕೋಣೆಗಳೇ ಇಲ್ಲ ಎಂದು ಹೇಳಬಹುದು. ಪ್ರತಿಯೊಬ್ಬರು ಪೂಜಾ ಕೋಣೆಗಳಲ್ಲೂ ಕರ್ಪೂರವಿದೆ. ಪರಿಮಳಯುಕ್ತ ಕರ್ಪೂರವನ್ನು ಬೆಳಗಿಸಿದಾಗ ಮನೆಯ ತುಂಬಾ ಸುವಾಸನೆಭರಿತವಾಗುವುದು ಮಾತ್ರವಲ್ಲದೆ, ಸೊಳ್ಳೆಗಳ ಕಾಟಕ್ಕೂ ಪರಿಹಾರ ಪಡೆಯಬಹುದು. ಈ ಸಣ್ಣ ಬಿಳಿ ಬಣ್ಣದ ಬಿಲ್ಲೆಗಳು ಪೂಜೆಗೆ ಮಾತ್ರವಲ್ಲದೆ ಮೇಲೆ ತಿಳಿಸಿದಂತೆ ಆರೋಗ್ಯಕ್ಕೂ ಉಪಯುಕ್ತವಾಗಿವೆ. ಸ್ನಾನದ ನೀರಿನಲ್ಲಿ ಕರ್ಪೂರದ ಬಿಲ್ಲೆಯನ್ನು ನೆನೆಸಿ ಇಡಬಹುದು. ಈ ಚಿಕ್ಕ ಕೆಲಸದಿಂದ ಏನೆಲ್ಲಾ ಪ್ರಯೋಜನ ಪಡೆಯಬಹುದು ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ಕರ್ಪೂರದ ಆರೋಗ್ಯ ಪ್ರಯೋಜನಗಳು
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ: ಕರ್ಪೂರದಲ್ಲಿ ಆ್ಯಂಟಿಬಯೋಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದರ ಬಳಕೆಯಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಕರ್ಪೂರದ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಮೇಲಿನ ಸಣ್ಣ ಮೊಡವೆಗಳು, ತುರಿಕೆ, ದದ್ದುಗಳು ಅಥವಾ ಚರ್ಮದ ಸೋಂಕುಗಳನ್ನು ನಿವಾರಿಸಬಹುದು. ಇದಕ್ಕಾಗಿ ಸ್ನಾನದ ನೀರಿನಲ್ಲಿ ಎರಡು ಅಥವಾ ಮೂರು ಕರ್ಪೂರದ ಬಿಲ್ಲೆಗಳನ್ನು ಸೇರಿಸಿ, 10 ನಿಮಿಷಗಳ ಕಾಲ ಇರಿಸಿ. ಈ ನೀರಿನಿಂದ ಸ್ನಾನ ಮಾಡಿ. ಮೊದಲ ಬಾರಿಗೆ ಈ ನೀರಿನಿಂದ ಸ್ನಾನ ಮಾಡುವಾಗ ಬದಲಾವಣೆಯನ್ನು ಗಮನಿಸಬಹುದು.
ಆಯಾಸ, ಒತ್ತಡ ನಿವಾರಿಸುವಲ್ಲಿ ಪರಿಣಾಮಕಾರಿ: ಕರ್ಪೂರದ ಸುವಾಸನೆ ಅಂದರೆ ಬಹುತೇಕ ಮಂದಿ ಇಷ್ಟಪಡುತ್ತಾರೆ. ಇದರ ಪರಿಮಳವು ಮನಸ್ಸನ್ನು ಶಾಂತಗೊಳಿಸುತ್ತದೆ. ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಆಯಾಸವಾಗಿದ್ದರೆ, ರಾತ್ರಿ ಸ್ನಾನದ ನೀರಿನಲ್ಲಿ ಕರ್ಪೂರದ ಬಿಲ್ಲೆಯನ್ನು ನೆನೆಸಿಟ್ಟು ಸ್ನಾನ ಮಾಡಿ. ಇದರಿಂದ ಆಯಾಸ ಕಡಿಮೆಯಾಗುತ್ತದೆ. ದೇಹದ ಜೊತೆಗೆ ಇದರ ಪರಿಮಳವು ಮನಸ್ಸನ್ನು ಶಾಂತಗೊಳಿಸುತ್ತದೆ.
ತ್ವಚೆಗೆ ಸಿಗುತ್ತೆ ನೈಸರ್ಗಿಕ ಹೊಳಪು: ಕರ್ಪೂರ ನೈಸರ್ಗಿಕ ಸೌಂದರ್ಯ ಉತ್ಪನ್ನವಾಗಿ ಕೆಲಸ ಮಾಡುತ್ತದೆ. ಕರ್ಪೂರದ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಆಯುರ್ವೇದದ ಪ್ರಕಾರ ಸ್ನಾನದ ನೀರಿಗೆ ಸ್ವಲ್ಪ ಕರ್ಪೂರವನ್ನು ಸೇರಿಸುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗುವುದಲ್ಲದೆ ಕೆಲವೇ ದಿನಗಳಲ್ಲಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಹಾಗೆಯೇ ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಕರ್ಪೂರವನ್ನು ಪುಡಿ ಮಾಡಿ ಚೆನ್ನಾಗಿ ಕಲಸಿ ಚರ್ಮಕ್ಕೆ ಹಚ್ಚಿದರೆ ತ್ವಚೆಯು ಹೊಳೆಯುತ್ತದೆ. ಇದಲ್ಲದೆ ಕೂದಲಿನ ಎಣ್ಣೆಗೆ ಕರ್ಪೂರವನ್ನು ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚುವುದರಿಂದ ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ.
ನೋವು ನಿವಾರಕ: ತಲೆ ನೋವು, ಗಂಟಲು ನೋವಿನ ಸಮಸ್ಯೆ ಇದ್ದರೂ ಕರ್ಪೂರ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದು ಪ್ರಯೋಜನಕಾರಿ. ಸ್ನಾನದ ನೀರಿಗೆ ಎರಡರಿಂದ ಮೂರು ಕರ್ಪೂರ ಬಿಲ್ಲೆಗಳನ್ನು ಸೇರಿಸಿ. ನೋವನ್ನು ನಿವಾರಿಸಲು ಬೆಚ್ಚಗಿನ ನೀರನ್ನು ಬಳಸಬಹುದು. ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ತಲೆನೋವು ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ. ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಗುತ್ತದೆ.
ವಿಭಾಗ