Dry Fruits: ಸಂಪೂರ್ಣ ಆರೋಗ್ಯ ಪ್ರಯೋಜನ ಪಡಿಬೇಕು ಅಂದ್ರೆ ಒಣಹಣ್ಣುಗಳನ್ನು ಹೇಗೆ ಸೇವಿಸಬೇಕು; ಆಯುರ್ವೇದದ ಸಲಹೆ ಹೀಗಿದೆ
ಒಣಹಣ್ಣುಗಳಲ್ಲಿ ಅಗತ್ಯ ಪೋಷಕಾಂಶ ಹಾಗೂ ಶಕ್ತಿಯ ಮೂಲಗಳು ಸಮೃದ್ಧವಾಗಿರುವ ಕಾರಣ ಇದರ ಸೇವನೆ ದೇಹಕ್ಕೆ ಅತ್ಯಗತ್ಯ. ಬಾದಾಮಿ, ಗೋಡಂಬಿ, ಪಿಸ್ತಾ, ಖರ್ಜೂರ ಹೀಗೆ ಪ್ರತಿಹಣ್ಣುಗಳು ವಿವಿಧ ರೀತಿಯ ಪ್ರಯೋಜನಗಳನ್ನು ಹೊಂದಿವೆ. ಆದರೆ ಇವುಗಳ ಸಂಪೂರ್ಣ ಪ್ರಯೋಜನ ದೇಹಕ್ಕೆ ಸಿಗಲು ಇದನ್ನು ಸೇವಿಸುವ ಕ್ರಮವೂ ಮುಖ್ಯವಾಗುತ್ತದೆ. ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ನೋಡಿ.
ಒಣಹಣ್ಣುಗಳು ಅಥವಾ ಡ್ರೈಫ್ರೂಟ್ಸ್ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ಅದ್ಭುತ ಆರೋಗ್ಯ ಪ್ರಯೋಜನಗಳ ಕಾರಣದಿಂದ ಶತ ಶತಮಾನಗಳಿಂದಲೂ ಬಳಕೆಯಲ್ಲಿದೆ. ಖುಷಿ ಮುನಿಗಳು ಕೂಡ ಒಣಹಣ್ಣುಗಳ ಸೇವನೆಗೆ ಆದ್ಯತೆ ನೀಡಿದ್ದರು. ಆಯುರ್ವೇದ ಪ್ರಕಾರ ಭಾರತೀಯ ಸಮಗ್ರ ಔಷಧ ಪದ್ಧತಿಯಲ್ಲಿ ಒಣಹಣ್ಣುಗಳಿಗೆ ಅಗ್ರಸ್ಥಾನ ನೀಡಲಾಗಿದೆ. ಇವುಗಳನ್ನು ಶಕ್ತಿ ಮತ್ತು ಅಗತ್ಯ ಪೋಷಕಾಂಶಗಳ ಮೌಲ್ಯಯುತ ಮೂಲವೆಂದು ಪರಿಗಣಿಸಲಾಗಿದೆ.
ವಾತ, ಪಿತ್ತ ಮತ್ತು ಕಫದಂತಹ ದೋಷಗಳ ನಿವಾರಣೆಯ ಜೊತೆಗೆ ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಒಟ್ಟಾರೆ ಯೋಗಕ್ಷೇಮ ಸುಧಾರಿಸಲು ಇದು ಸಹಕಾರಿ.
ಒಣಹುಣ್ಣುಗಳ ಆಯುರ್ವೇದ ಗುಣಗಳಿವು
ಬಾದಾಮಿಯು ಪೋಷಕ ಗುಣಗಳನ್ನ ಹೊಂದಿದೆ. ಇದು ವಾತ ಪಿತ್ತ ದೋಪಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಜ್ಞಾಪಕಶಕ್ತಿ ಹಾಗೂ ಬುದ್ಧಿಶಕ್ತಿ ಹೆಚ್ಚಿಸುವ ಸಾಮರ್ಥ್ಯದಿಂದ ಹೆಸರುವಾಸಿಯಾಗಿದೆ.
ಖರ್ಜೂರವು ಸಿಹಿ ಅಂಶ ಇರುವ ಹಾಗೂ ದೇಹವನ್ನು ಬೆಚ್ಚಗಿಡುವ ಗುಣಗಳಿಂದ ಹೆಸರುವಾಸಿಯಾಗಿದೆ. ಇದು ಕೂಡ ವಾತ ಹಾಗೂ ಕಫದ ದೋಷಗಳನ್ನು ನಿವಾರಿಸುತ್ತದೆ. ಇದು ಶಕ್ತಿಯ ಅತ್ಯುತ್ತಮ ಮೂಲವಾಗಿದೆ. ಜೀರ್ಣಕ್ರಿಯೆ ಹೆಚ್ಚಲು ಕೂಡ ಇದು ಸಹಕಾರಿ.
ಒಣದ್ರಾಕ್ಷಿ ಪಿತ್ತ ಮತ್ತು ವಾತ ದೋಷಗಳಿಗೆ ಸೂಕ್ತವಾಗಿದೆ. ಇದು ದೇಹವನ್ನು ಸದೃಢಗೊಳಿಸುತ್ತದೆ ಹಾಗೂ ಚರ್ಮದ ಆರೋಗ್ಯ ಸುಧಾರಣೆಗೂ ಉತ್ತಮ. ಗೋಡಂಬಿಯು ದೇಹಕ್ಕೆ ಶಕ್ತಿ ಒದಗಿಸುವ ಜೊತೆಗೆ ಶೀತ ಪ್ರಕೃತಿಯನ್ನು ನಿವಾರಿಸುವ ಗುಣ ಹೊಂದಿದೆ.
ವಾಲ್‌ನಟ್ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಇದು ಮೆದುಳಿನ ಆರೋಗ್ಯ ಹಾಗೂ ಅರಿವಿನ ಕಾರ್ಯ ಹೆಚ್ಚಲು ಸಹಕಾರಿ. ಆದರೆ ಇದನ್ನು ಮಿತವಾಗಿ ಸೇವಿಸಬೇಕು ಎಂದು ಆಯುರ್ವೇದ ಹೇಳುತ್ತದೆ.
ಪಿಸ್ತಾವು ಪಿತ್ತ, ವಾತ ದೋಷ ನಿವಾರಿಸುವ ಜೊತೆಗೆ ಹೃದಯದ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ.
ರಾತ್ರಿಯಿಡಿ ಅವುಗಳನ್ನು ನೆನೆಸಿಡಿ
ಆಯುರ್ವೇದದ ಪ್ರಕಾರ ಒಣಹಣ್ಣುಗಳನ್ನು ರಾತ್ರಿ ಇಡಿ ನೆನೆಸಿಟ್ಟು ತಿನ್ನಬೇಕು. ಇದರಿಂದ ಅವುಗಳು ಚೆನ್ನಾಗಿ ಜೀರ್ಣವಾಗುತ್ತವೆ. ಬಾದಾಮಿ, ವಾಲ್‌ನಟ್ ಹಾಗೂ ಅಂಜೂರವನ್ನು ತಿನ್ನುವ ಮೊದಲು ತಪ್ಪದೇ ನೀರಿನಲ್ಲಿ ನೆನೆಸಬೇಕು.
ತಿನ್ನಲು ಸರಿಯಾದ ಸಮಯ
ಆಯುರ್ವೇದದ ಪ್ರಕಾರ ಒಣಹಣ್ಣುಗಳನ್ನು ನಿರ್ದಿಷ್ಟ ಸಮಯದಲ್ಲಿ ತಿನ್ನುವುದು ಮುಖ್ಯವಾಗುತ್ತದೆ. ಇವುಗಳನ್ನು ಹಗಲಿನ ವೇಳೆ ಅದರಲ್ಲೂ ಬೆಳಿಗ್ಗೆ ಅಥವಾ ಮಧ್ಯಾಹ್ನದ ವೇಳೆ ತಿನ್ನುವುದು ಸೂಕ್ತ ಎಂದು ಆಯುರ್ವೇದ ಹೇಳುತ್ತದೆ. ರಾತ್ರಿ ವೇಳೆ ಒಣಹಣ್ಣು ಸೇವನೆಗೆ ಕಡಿವಾಣ ಹಾಕಬೇಕು. ಇದು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು.
ಈ ಎಲ್ಲದರ ಜೊತೆಗೆ ಒಣಹಣ್ಣುಗಳಿಂದ ಗರಿಷ್ಟ ಪ್ರಯೋಜನಗಳನ್ನು ಪಡೆಯಲು ಇದನ್ನು ಹೇಗೆ ಸೇವಿಸಬೇಕು ನೋಡಿ.
ಆಹಾರಗಳೊಂದಿಗೆ ಸಂಯೋಜನೆ
ಒಣಹಣ್ಣುಗಳಿಂದ ಗರಿಷ್ಠ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಅವುಗಳನ್ನು ಕೆಲವು ಮಸಾಲೆಗಳು ಹಾಗೂ ಇತರ ಆಹಾರದೊಂದಿಗೆ ಸೇರಿಸಿ ತಿನ್ನಬೇಕು.
ಮಿತವಾಗಿ ಸೇವಿಸಿ
ಒಣಹಣ್ಣುಗಳು ಪೌಷ್ಟಿಕಾಂಶದ ಆಗರವಾಗಿದ್ದರು ಆಯುರ್ವೇದವು ಇದನ್ನು ಮಿತವಾಗಿ ಸೇವಿಸಬೇಕು ಎಂದು ಶಿಫಾರಸು ಮಾಡುತ್ತದೆ. ಅತಿಯಾದ ಸೇವನೆಯು ದೇಹದಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.
ಸಂಪೂರ್ಣವಾಗಿ ಅಗಿಯುವುದು
ಒಣಹಣ್ಣುಗಳನ್ನು ನೀವು ನೇರವಾಗಿ ಸೇವಿಸುತ್ತೀರಿ ಎಂದಾದರೆ ಅದನ್ನು ಚೆನ್ನಾಗಿ ಅಗಿಯಬೇಕು. ಅಗಿಯುವುದು ಜೀರ್ಣಕ್ರಿಯೆಯ ಮೊದಲ ಹಂತವಾಗಿದೆ.
ಹುರಿದು ತಿನ್ನದೇ ಇರುವುದು ಉತ್ತಮ
ಆಯುರ್ವೇದದ ಪ್ರಕಾರ ಒಣಹಣ್ಣುಗಳನ್ನು ಹರಿದು, ಉಪ್ಪು-ಮಸಾಲೆ ಸೇರಿಸಿ ತಿನ್ನುವುದಕ್ಕಿಂತ ಕಚ್ಚಾ ಒಣಹಣ್ಣುಗಳನ್ನು ತಿನ್ನುವುದು ಉತ್ತಮ. ಮಸಾಲೆ ಸೇರಿಸುವುದರಿಂದ ಒಣಹಣ್ಣುಗಳ ನೈಸರ್ಗಿಕ ಗುಣಗಳು ಬದಲಾಗಬಹುದು.
ವಿಭಾಗ