Monsoon Food: ಮಳೆಗಾಲದಲ್ಲಿ ಮಾಂಸಾಹಾರ ಏಕೆ ತಿನ್ನಬಾರದು? ಆರೋಗ್ಯದ ಮೇಲೇನು ಪರಿಣಾಮ? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  Monsoon Food: ಮಳೆಗಾಲದಲ್ಲಿ ಮಾಂಸಾಹಾರ ಏಕೆ ತಿನ್ನಬಾರದು? ಆರೋಗ್ಯದ ಮೇಲೇನು ಪರಿಣಾಮ? ಇಲ್ಲಿದೆ ಉತ್ತರ

Monsoon Food: ಮಳೆಗಾಲದಲ್ಲಿ ಮಾಂಸಾಹಾರ ಏಕೆ ತಿನ್ನಬಾರದು? ಆರೋಗ್ಯದ ಮೇಲೇನು ಪರಿಣಾಮ? ಇಲ್ಲಿದೆ ಉತ್ತರ

ಮಳೆಗಾಲದಲ್ಲಿ ಮಾಂಸಾಹಾರ ತಿನ್ನಬಾರದು ಅಂತ ಮನೆಯಲ್ಲಿ ಹೇಳಿರೋದನ್ನು ನೀವು ಕೇಳಿರ್ತೀರಿ. ಇದಕ್ಕೆ ಹಲವು ಕಾರಣಗಳಿವೆ. ನಾನ್ ವೆಜ್ ಪ್ರಿಯರಾಗಿದ್ದರೆ ಮಳೆಗಾಲದಲ್ಲಿ ಯಾಕೆ ತಿನ್ನಬಾರದು ಎಂಬುದನ್ನ ತಿಳಿಯಿರಿ.

ಮಳೆಗಾಲದಲ್ಲಿ ಮಾಂಸಾಹಾರ ಏಕೆ ತಿನ್ನಬಾರದು ಎಂಬುದನ್ನು ತಿಳಿಯಿರಿ
ಮಳೆಗಾಲದಲ್ಲಿ ಮಾಂಸಾಹಾರ ಏಕೆ ತಿನ್ನಬಾರದು ಎಂಬುದನ್ನು ತಿಳಿಯಿರಿ

ಬೆಂಗಳೂರು: ಮಾಂಸಾಹಾರ ಪ್ರಿಯರಿಗೆ ಯಾವ ಕಾಲವಾದರೆೇನು? ಅವರಿಗೆ ಮಾಸಾಲೆ ಇಲ್ಲದೆ ಊಟನೇ ಸೇರುವುದೇ ಇಲ್ಲ. ಮಳೆಗಾಲದಲ್ಲೂ (Monsoon) ಕೆಲವರು ನಾನ್ ವೆಜ್ (Non Veg) ಅನ್ನು ಹೆಚ್ಚಾಗಿ ತಿನ್ನುತ್ತಾರೆ. ಆದರೆ ಜೀರ್ಣಾಂಗ ವ್ಯವಸ್ಥೆ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಋತುವಿನ ಆಧಾರದ ಮೇಲೆ ಆಹಾರವನ್ನು ತೆಗೆದುಕೊಳ್ಳಬೇಕು. ಮಳೆಗಾಲದಲ್ಲಿ ಹೆಚ್ಚು ನಾನ್ ವೆಜ್ ತಿಂದರೆ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು (Health Problems) ಎದುರಿಸಬೇಕಾಗುತ್ತದೆ.

ಮಳೆಗಾಲದಲ್ಲಿ ಸಾಕಷ್ಟು ಮಂದಿ ಮೀನು ತಿನ್ನುತ್ತಾರೆ. ಆದರೆ ಮೀನುಗಳು ಇದೇ ಸಮಯದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಈ ವೇಳೆ ಮೀನಿನ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಬ್ಯಾಕ್ಟೀರಿಯಾಗಳು ಹಾಗೂ ಪಾಚಿ ಮೀನಿನ ದೇಹಕ್ಕೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಇಂತಹ ಮೀನುಗಳಿಂದ ಬಾಕ್ಟೀರಿಯಾಗಳು ಮನುಷ್ಯನಿಗೆ ಹರಡುವ ಸಾಧ್ಯತೆ ಇದೆ. ನೀವು ಮೀನು ತಿನ್ನಲೇಬೇಕೆಂದು ನಿರ್ಧಾರ ಮಾಡಿದರೆ ಮೀನು ಖರೀದಿಸುವಾಗ ಕೆಲವು ಪ್ರಮುಖ ವಿಷಯಗಳನ್ನು ಗಮನದಲ್ಲಿಟ್ಟಕೊಳ್ಳಬೇಕು. ಮೀನು ಖರೀದಿಸುವಾಗ ಅದು ತುಂಬಾ ಮೃದುವಾಗಿದೆಯೇ ಎಂಬುದನ್ನು ಒತ್ತಿ ನೋಡಬೇಕು. ಮೃದು ಅಥವಾ ಗಟ್ಟಿಯಾಗಿದೆಯೇ ಎಂದು ಪರಿಶೀಲಿಸಿ ಕಿವಿರುಗಳ ಬಣ್ಣವನ್ನು ಸಹ ನೋಡಬೇಕು.

ಮಳೆಗಾಲದಲ್ಲಿ ಮೀನುಗಳ ಕಿವಿರುಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ರೋಗಾಣುಗಳು ಹೇರಳವಾಗಿರುತ್ತವೆ. ಮೀನಿನ ಮೊಟ್ಟೆಯಲ್ಲಿರುವ ತೇವಾಂಶವು ಇವುಗಳ ಬೆಳವಣಿಗೆ ಹಾಗೂ ಹರಡುವಿಕೆಯನ್ನು ಉತ್ತೇಜಿಸುತ್ತದೆ.

ಇಂತಹ ಸಮಯದಲ್ಲಿ ಸಾಲ್ಮೊನೆಲ್ಲಾ ಮತ್ತು ಇ-ಕೋಲಿ ಸೋಂಕು ನಿಮಗೆ ತಗುಲುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಹೊಟ್ಟೆನೋವು, ಅಜೀರ್ಣ, ಫುಡ್ ಪಾಯಿಸನ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಇದಕ್ಕೆ ಪರ್ಯಾಯ ಎಂದರೆ ಮೊಟ್ಟೆ.

ನೀವು ಮೊಟ್ಟೆ ತಿನ್ನಬೇಕಾದರೂ ಅದರ ಗುಣಮಟ್ಟವನ್ನು ಪರಿಶೀಲಿಸಬೇಕು. ಮನೆಯಲ್ಲಿ ಬೇಯಿಸಿದ ಮೊಟ್ಟೆ ತಿನ್ನಬೇಕು. ಇದಕ್ಕೂ ಮುನ್ನ ಮೊಟ್ಟೆ ಫ್ರೆಶ್ ಇದೆಯೇ ಎಂದು ಪರೀಕ್ಷಿಸಿಲು ನೀರು ತುಂಬಿದ ಒಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಇಡಿ. ಅದು ಕೆಳಭಾಗಕ್ಕೆ ಹೋದರೆ ತಾಜಾವಾಗಿದೆ ಎಂದರ್ಥ. ಇಲ್ಲದಿದ್ದರೆ ಮೊಟ್ಟೆಯ ಗುಣಮಟ್ಟ ಸರಿ ಇಲ್ಲ ಎಂದರ್ಥ.

ಮೊಟ್ಟೆ ಹೊಡೆದಾಗ ಅದರಿಂದ ಕೆಟ್ಟ ವಾಸನೆ ಬಂದರೆ ಯಾವುದೇ ಕಾರಣಕ್ಕೂ ಅಂತಹ ಮೊಟ್ಟೆಯನ್ನು ಬಳಸಲೇ ಬೇಡಿ. ಇನ್ನ ಮೊಟ್ಟೆಯಲ್ಲಿರುವ ಹಳದಿ ಲೋಳೆ ಗಟ್ಟಿಯಾಗಿರಬೇಕು. ಆದಷ್ಟು ಹೊರಗಡೆ ನಾನ್ ವೆಜ್ ಊಟವನ್ನು ತಪ್ಪಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಮಾಂಸಕ್ಕಾಗಿ ಕೆಲವರು ಚಿಕನ್, ಮಟನ್ ಅಂಗಡಿಗೆ ಹೋಗುತ್ತಾರೆ. ಕೆಲವು ಅಂಗಡಿಗಳಲ್ಲಿ ತಾಜಾ ಮಾಂಸ ಸಿಗುವುದಿಲ್ಲ. ಕೆಲವೊಮ್ಮೆ ಸತ್ತ ಕೋಳಿ ಮಾಂಸ ಮಾರಾಟ ಮಾಡುವ ಸಾಧ್ಯತೆಗಳು ಇರುತ್ತವೆ. ಈ ಬಗ್ಗೆ ಜಾಗರೂಕರಾಗಿ ಮಾಂಸವನ್ನು ಖರೀದಿಸಬೇಕು.

ಕೋಳಿ ಮಾಂಸ ಖರೀದಿಸುವಾಗ ಅದರ ಮೇಲೆ ಕಲೆಗಳ ಅಥವಾ ಬಿಳಿ ಗೆರೆಗಳಿದ್ದರೆ ಅದು ರೋಗದ ಅಥವಾ ಸೋಂಕು ಹೊಂದಿದ್ದ ಕೋಳಿ ಎಂದರ್ಥ. ತಾಜಾ ಕೋಳಿ ಮಾಂಸ ಗಟ್ಟಿಯಾಗಿರುತ್ತದೆ, ಹೊಳೆಯುತ್ತದೆ. ಇನ್ನು ಮಾಂಸದ ವಿಚಾರದಲ್ಲಿ ಫ್ರೆಶ್ ಇದೆಯೇ ಅಂತ ತಳಿಯಲು ಮುಟ್ಟಿ ನೋಡಿ. ಮಾಂಸವು ಅಂಟಿಕೊಳ್ಳಬಾರದು.

ಅಂಗಡಿಯಲ್ಲಿ ಖರೀದಿಸುವ ಮಾಂಸವನ್ನು ಅಡುಗೆ ಮಾಡುವ ಮುನ್ನ ಅರಿಶಿನ ಮತ್ತು ಉಪ್ಪಿನೊಂದಿಗೆ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಮಾಂಸಕ್ಕೆ ಅಂಡಿಕೊಂಡಿರುವ ಎಲ್ಲಾ ಕೊಳಕು, ಅವಶೇಷಗಳನ್ನು ನೀರಿನಿಂದ ತೊಳೆಯಬೇಕು. ಆನಂತರ ಅಡುಗೆ ಮಾಡಲು ಬಳಸಬೇಕು.

ಮಳೆಗಾಲದಲ್ಲಿ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಡಿಮೆ ಇರುತ್ತದೆ. ಮೀನಿನಲ್ಲಿ ಹೆಚ್ಚಿನ ಫೈಬರ್ ಹಾಗೂ ಪ್ರೋಟೀನ್ ಅಂಶ ಇರುವ ಕಾರಣ ಮೀನು ತಿಂದ ನಂತರ ಜೀರ್ಣಿಸಿಕೊಳ್ಳಲು ಸಾಮಾನ್ಯ ಆಹಾರಕ್ಕಿಂತ ಕೆಲವು ಗಂಟೆಗಳು ಹೆಚ್ಚು ಹಿಡಿಯುತ್ತದೆ.

ಮಳೆಗಾಲದಲ್ಲಿ ಚಿಕನ್ ಮತ್ತು ಮಟನ್ ತಿನ್ನವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಮಾನ್ಸೂನ್‌ನಲ್ಲಿ ಮಾಂಸಾಹಾರ ಸೇವಿಸಿದರೆ ವಾಂತಿ, ವಾಕರಿಕೆಯಂತಹ ಸಮಸ್ಯೆಗಳು ಬರಬಹುದು. ಇದೇ ಕಾರಣಕ್ಕಾಗಿ ಈ ಋತುವಿನಲ್ಲಿ ಮಾಂಸಾಹಾರವನ್ನು ಕಡಿಮೆ ಮಾಡಿಕೊಂಡರೆ ಒಳ್ಳೆಯದು.

Whats_app_banner