Baking Soda: ಅಡುಗೆ ಸೋಡಾ ಬಳಸುತ್ತೀರಾ; ಅತಿಯಾಗಿ ಬಳಸಿದ್ರೆ ಅಪಾಯ ತಪ್ಪಿದ್ದಲ್ಲ ಅನ್ನೋದು ತಜ್ಞರ ಸಲಹೆ
Baking Soda: ದೋಸೆಹಿಟ್ಟು, ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಅಡುಗೆ ಸೋಡಾ ಹಾಗೂ ಇನೋವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಇದರ ನಿರಂತರ ಬಳಕೆ ಹಾಗೂ ಸೇವನೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ ಅತಿಯಾದ ಅಡುಗೆ ಸೋಡಾದ ಬಳಕೆ ಕೆಟ್ಟದ್ದು ಯಾಕೆ ನೋಡಿ.
ಅಡುಗೆ ಸೋಡಾ, ಸಾಮಾನ್ಯವಾಗಿ ಪ್ರತಿ ಅಡುಗೆಮನೆಯಲ್ಲೂ ಕಾಣ ಸಿಗುವ ವಸ್ತುವಿದು. ಸಾಮಾನ್ಯವಾಗಿ ಕೇಕ್, ಮಫಿನ್, ಬ್ರೆಡ್, ಕುಕ್ಕಿಸ್‌ನಂತಹ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇನ್ನು ದೋಸೆ, ಬನ್ಸ್‌ನಂತಹ ತಿನಿಸಿನ ಹಿಟ್ಟು ಹುದುಗುವ ಹಾಗೂ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದಲೂ ಈ ಅಡುಗೆ ಸೋಡಾವನ್ನು ಬಳಸಲಾಗುತ್ತದೆ. ಇತ್ತೀಚೆಗೆ ಅಡುಗೆ ಸೋಡಾಕ್ಕೆ ಪರ್ಯಾಯವಾಗಿ ಇನೋವನ್ನು ಕೂಡ ಬಳಸಲಾಗುತ್ತಿದೆ. ಹಿಟ್ಟು ಬೇಗನೆ ಹುದುಗುತ್ತದೆ ಎಂಬ ಉದ್ದೇಶದಿಂದ ಅಡುಗೆ ಸೋಡಾ ಹಾಗೂ ಇನೋವನ್ನು ಬಾಣಸಿಗರು ಹಾಗೂ ಮನೆಗಳಲ್ಲೂ ಬಳಸುತ್ತಾರೆ. ಆದರೆ ನಿರಂತರವಾಗಿ ಇದರ ಬಳಕೆ ಆರೋಗ್ಯಕ್ಕೆ ಉತ್ತಮವೇ ಇಲ್ಲ ಹಾನಿಕಾರವೇ ಎಂಬುದು ಪ್ರಶ್ನೆಯಾಗಿದೆ.
ಖ್ಯಾತ ಪೌಷ್ಟಿಕತಜ್ಞೆ ಜೂಹಿ ಕಪೂರ್ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಆಹಾರ ತಯಾರಿಕೆಯಲ್ಲಿ ಅಡುಗೆ ಸೋಡಾ ಅಥವಾ ಇನೋವನ್ನು ಬಳಸುವ ಪ್ರಮಾಣದ ಬಗ್ಗೆ ಎಚ್ಚರಿಸಿದ್ದರು. ಅಲ್ಲದೆ ಇದನ್ನು ಅತಿಯಾಗಿ ಹಾಗೂ ದೀರ್ಘಕಾಲದವರೆಗೆ ಬಳಸುವುದು ಹಾನಿಕಾರಕವಾಗಿದೆ.
ʼಅಡುಗೆ ಸೋಡಾದ ಅತಿಯಾದ ಬಳಕೆಯಿಂದ ರಕ್ತದಲ್ಲಿ ಪಿಎಚ್ ಮಟ್ಟವು ಏರಿಕೆಯಾಗುತ್ತದೆ. ದೇಹದಲ್ಲಿ ಪಿಎಚ್ ಪ್ರಮಾಣದಲ್ಲಿನ ವ್ಯತ್ಯಾಸವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ಕ್ಷಾರೀಯತೆಯ ಹೆಚ್ಚಳವು ಚಯಾಪಚಯ ಸಮಸ್ಯೆಗೆ ಕಾರಣವಾಗಬಹುದು. ಇದು ಮೂತ್ರಪಿಂಡದ ಕ್ರಿಯೆಯ ಮೇಲೆ ಪರಿಣಾಮ ಉಂಟು ಮಾಡುವುದಲ್ಲದೆ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವಂತೆ ಮಾಡಬಹುದು. ದೀರ್ಘಾವಧಿಯಲ್ಲಿ ಇದು ಮೂತ್ರಪಿಂಡ ವೈಫಲ್ಯ ಹಾಗೂ ಇತರ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಇದಲ್ಲದೆ ಸೋಡಿಯಂ ಬೈಕಾರ್ಬನೇಟ್ ದೇಹದ ಚಯಾಪಚಯ ಮತ್ತು ಸ್ನಾಯುವಿನ ಶರೀರಶಾಸ್ತ್ರ ಮೇಲೆ ಪರಿಣಾಮ ಬೀರಬಹುದುʼ ಎಂದು ಜೂಹಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ಈ ಕುರಿತು ದೆಹಲಿಯ ಪತರ್‌ಗಂಜ್‌ನ ಮ್ಯಾಕ್ಸ್ ಆಸ್ಪತ್ರೆಯ ಪೌಷ್ಟಿಕ ತಜ್ಞೆ ಜ್ಯೋತಿ ಖನಿಯೋಜ್ ಹೇಳುವುದು ಹೀಗೆ: ಅಡುಗೆ ಸೋಡಾವನ್ನು ಸೋಡಿಯಂ ಬೈಕಾರ್ಬನೇಟ್ ಎಂದು ಕರೆಯಲಾಗುತ್ತದೆ. ಇದನ್ನು ಸಾಂದರ್ಭಿಕವಾಗಿ ಚಿಟಿಕೆಯಷ್ಟು ಸೇವನೆ ಮಾಡಬಹುದು. ಆದರೆ ವಿಶ್ವ ಆರೋಗ್ಯ ಸಂಸ್ಥೆ ನಮ್ಮ ದೈನಂದಿನ ಬದುಕಿನಲ್ಲಿ ಅತಿಯಾಗಿ ಸೋಡಾ ಬಳಸುವುದು ಅಪಾಯ ಎನ್ನುವುದನ್ನು ಹೇಳಿದೆ. ಇದೇ ರೀತಿ ಹಣ್ಣಿನ ಉಪ್ಪು ಎಂದು ಕರೆಯುವ ಇನೋದಲ್ಲಿ ಶೇ 60ರಷ್ಟು ಸೋಡಿಯಂ ಪ್ರಮಾಣವಿದೆ. ಆ ಕಾರಣಕ್ಕೆ ಅಡುಗೆ ಸೋಡಾಕ್ಕಿಂತ ಇನೋ ಉತ್ತಮ. ದೋಸೆ ಹಿಟ್ಟು, ಕೇಕ್‌ನಂತರ ಬೇಕರಿ ಉತ್ಪನ್ನಗಳಿಗೆ ಅಡುಗೆ ಸೋಡಾದ ಬದಲು ಇನೋ ಬಳಸುವುದು ಉತ್ತಮ. ಆದರೆ ಇನೋವನ್ನು ಕೂಡ ನಿರಂತರವಾಗಿ ಸೇವಿಸುವುದು ಅಪಾಯಕಾರಿ. ಇನೋದಲ್ಲಿ ಅಂಟಾಸಿಡ್ ಅಂಶವಿದ್ದು, ಇದು ರಕ್ತದೊತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹಾಗಾಗಿ ಕೆಲವೊಮ್ಮೆ 5 ಗ್ರಾಂನಷ್ಟು ಇನೋವನ್ನು ಬಳಸಬಹುದು. ಆದರೆ ಇದನ್ನೂ ಕೂಡ ನಿರಂತರವಾಗಿ ಬಳಸುವುದು ಆರೋಗ್ಯಕ್ಕೆ ಅಪಾಯಕಾರಿ.
ಅತಿಯಾದ ಅಡುಗೆ ಸೋಡಾದ ಬಳಕೆಯಿಂದಾಗುವ ಅಪಾಯಗಳು
ಪೌಷ್ಟಿಕ ತಜ್ಞೆ ಸೋನಿಯಾ ಭಕ್ಷಿ ಅವರು ಇಲ್ಲಿ ಇನೋ ಅಥವಾ ಅಡುಗೆ ಸೋಡಾದ ಅತಿಯಾದ ಬಳಕೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.
* ಇನೋವನ್ನು ಪ್ರತಿದಿನ ಬಳಸುವುದರಿಂದ ಉಂಟಾಗುವ ಸಾಮಾನ್ಯ ಸಮಸ್ಯೆ ಎಂದರೆ ಅಧಿಕರಕ್ತದೊತ್ತಡ. ಇನೋ ಅಥವಾ ಅಡುಗೆ ಸೋಡಾದಲ್ಲಿ ಸೋಡಿಯಂ ಬೈಕಾರ್ಬೋನೇಟ್ ಪ್ರಮಾಣ ಹೆಚ್ಚಿದ್ದು ಇದು ರಕ್ತದೊತ್ತಡದ ಏರಿಕೆಗೆ ಕಾರಣವಾಗುತ್ತದೆ.
* ಎಲ್ಲಾ ರೀತಿಯ ಅಂಟಾಸಿಡ್ ಅಂಶಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ. ಇವುಗಳ ಅತಿ ಬಳಕೆಯಿಂದ ಮೂತ್ರಪಿಂಡದ ವೈಫಲ್ಯ ಮತ್ತು ಇತರ ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗಬಹುದು.
* ಸೋಡಾದಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶದ ಅಂಶಗಳಿಲ್ಲ. ಇದರಲ್ಲಿ ಫಾಸ್ಪರಿಕ್ ಆಮ್ಲವಿದ್ದು, ಅದು ಹೊಟ್ಟೆಯಲ್ಲಿರುವ ನೈಸರ್ಗಿಕ ಆಮ್ಲವನ್ನು ಕುಗ್ಗಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಹಾಗೂ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತದೆ. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಆಯಾಸ ಹಾಗೂ ನಿಶಕ್ತಿ ಉಂಟಾಗಬಹುದು.
* ಇದು ಫಾಸ್ಪರಿಕ್ ಅಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತದೆ.
* ಸೋಡಾದ ನಿರಂತರ ಬಳಕೆಯು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳುವುದಕ್ಕೆ ಅಡ್ಡಿ ಪಡಿಸುತ್ತದೆ. ಇದು ಆಸ್ಟಿಯೊಪೊರೋಸಿಸ್‌ನಂತಹ ತೊಂದರೆಗೆ ಕಾರಣವಾಗಬಹುದು.
ದೋಸೆ ಅಥವಾ ಯಾವುದೇ ಹಿಟ್ಟನ್ನು ಒಂದು ದಿನ ಮೊದಲೇ ತಯಾರಿಸಿ, ಅಡುಗೆಸೋಡ ಬಳಸದೇ ಒಂದು ರಾತ್ರಿ ಇಡುವುದು ಉತ್ತಮ.
ಹಿಟ್ಟು ಚೆನ್ನಾಗಿ ಹುದುಗಲು ಕೆಲವೊಂದು ಪರ್ಯಾಯಗಳನ್ನು ಮಾರ್ಗಗಳ ಬಗ್ಗೆಯೂ ಜೂಹಿ ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು. ಇವು ಹೀಗಿವೆ:
* ಉಪ್ಪು ಹಾಕುವುದರಿಂದ ಹಿಟ್ಟು ಸ್ವಲ್ಪ ಹುದುಗುತ್ತದೆ.
* ನೈಸರ್ಗಿಕವಾಗಿ ಹುದುಗುವಂತೆ ಮಾಡುವುದು ಉತ್ತಮ.
* ಕೇಕ್ ತಯಾರಿಸುವಾಗ ಮೊಟ್ಟೆ ಅಥವಾ ಅಗಸೆ ಜೆಲ್ ಅನ್ನು ಬಳಸಬಹುದು.
* ಬೇಕರಿ ಉತ್ಪನ್ನಗಳ ಹುದುಗುವಿಕೆಗೆ ಯೀಸ್ಟ್ ಬಳಸಬಹುದು.
ವಿಭಾಗ