Diabetes Medication: ಇದ್ದಕ್ಕಿದ್ದಂತೆ ಡಯಾಬಿಟಿಸ್‌ ಔಷಧಿ ನಿಲ್ಲಿಸಿದ್ರೆ ಏನಾಗುತ್ತೆ? ಮಧುಮೇಹಿಗಳು ತಪ್ಪದೇ ತಿಳಿಯಬೇಕಾದ ವಿಚಾರವಿದು-health tips diabetic problem what happens to the body when you suddenly stop taking diabetes medication rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Diabetes Medication: ಇದ್ದಕ್ಕಿದ್ದಂತೆ ಡಯಾಬಿಟಿಸ್‌ ಔಷಧಿ ನಿಲ್ಲಿಸಿದ್ರೆ ಏನಾಗುತ್ತೆ? ಮಧುಮೇಹಿಗಳು ತಪ್ಪದೇ ತಿಳಿಯಬೇಕಾದ ವಿಚಾರವಿದು

Diabetes Medication: ಇದ್ದಕ್ಕಿದ್ದಂತೆ ಡಯಾಬಿಟಿಸ್‌ ಔಷಧಿ ನಿಲ್ಲಿಸಿದ್ರೆ ಏನಾಗುತ್ತೆ? ಮಧುಮೇಹಿಗಳು ತಪ್ಪದೇ ತಿಳಿಯಬೇಕಾದ ವಿಚಾರವಿದು

ಭಾರತವು ಇತ್ತೀಚಿಗೆ ಕ್ಯಾನ್ಸರ್ ಮಾತ್ರವಲ್ಲ, ಮಧುಮೇಹದ ರಾಜಧಾನಿಯೂ ಅನ್ನಿಸಿಕೊಳ್ಳುತ್ತಿದೆ. ದಿನೇ ದಿನೇ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಡಯಾಬಿಟಿಸ್ ಸಮಸ್ಯೆ ಇರುವವರು ಇದ್ದಕ್ಕಿದ್ದಂತೆ ಔಷಧಿ ತೆಗೆದುಕೊಳ್ಳುವುದು ನಿಲ್ಲಿಸಿದ್ರೆ ಏನಾಗಬಹುದು? ಈ ಪ್ರಶ್ನೆಗೆ ತಜ್ಞರು ಏನಂತಾರೆ ನೋಡಿ.

ಮಧುಮೇಹ
ಮಧುಮೇಹ (PC: Canva)

ಮಧುಮೇಹ... ಭಾರತದಲ್ಲಿ ಹಲವು ಜನರನ್ನು ಬಿಡದೇ ಕಾಡುತ್ತಿರುವ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಾರತವು ಮಧುಮೇಹಿಗಳ ರಾಜಧಾನಿ ಎಂಬ ಕುಖ್ಯಾತಿಗೂ ಪಾತ್ರವಾಗಿದೆ. ಮಧುಮೇಹ ನಿಯಂತ್ರಣಕ್ಕೆ ಹಲವರು ಹಲವು ಕ್ರಮಗಳನ್ನು ಅನುಸರಿಸುತ್ತಾರೆ.

ಮಧುಮೇಹಕ್ಕೆ ಶಾಶ್ವತ ಪರಿಹಾರ ಇಲ್ಲ ಎಂದಾದರೂ ನಿಯಂತ್ರಣಕ್ಕೆ ಕ್ರಮಗಳಿವೆ. ಆದರೆ ಕೆಲವರು ಮಧುಮೇಹ ಕೊಂಚ ನಿಯಂತ್ರಣಕ್ಕೆ ಬಂತು ಎಂದಾಗ ಇದ್ದಕ್ಕಿದ್ದಂತೆ ಔಷಧಿಗಳನ್ನು ನಿಲ್ಲಿಸಿ ಬಿಡುತ್ತಾರೆ. ಹಾಗಾದರೆ ವೈದ್ಯರ ಬಳಿಗೆ ಹೋಗದೇ ನಿಮಗೆ ನೀವೇ ನಿರ್ಧಾರ ಮಾಡಿಕೊಂಡು ಔಷಧಿಗಳನ್ನು ನಿಲ್ಲಿಸುವುದು ಸರಿಯೇ, ಇದರಿಂದ ಏನೆಲ್ಲಾ ತೊಂದರೆಗಳಾಗಲಿವೆ. ಈ ಬಗ್ಗೆ ತಜ್ಞರು ಏನಂತಾರೆ ನೋಡಿ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಭಾರತದಲ್ಲಿ ಸುಮಾರು 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ಹಿಂದುಜಾ ಆಸ್ಪತ್ರೆಯ ಪಿ.ಡಿ ಡಯಾಬಿಟಾಲಜಿ ಸಲಹೆಗಾರ ಡಾ ಮನೋಜ್ ಚಾವ್ಲಾ. ಮಧುಮೇಹ ಎಂಬುದು ದೀರ್ಘಕಾಲದ ಸ್ಥಿತಿಯಾಗಿದ್ದು, ಜೀವನಶೈಲಿ ಬದಲಾವಣೆ, ನಿರಂತರ ಮೇಲ್ವಿಚಾರಣೆ ಮತ್ತು ಔಷಧಿಗಳ ಮೂಲಕ ಆರೈಕೆ ಸಾಧ್ಯವಾಗುತ್ತದೆ. ಒಂದು ವೇಳೆ ನೀವು ಈ ಕ್ರಮಗಳನ್ನು ಪಾಲಿಸದೇ ಇದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದರಿಂದ ಇದ್ದಕ್ಕಿದಂತೆ ರಕ್ತದ ಮಟ್ಟ ಏರಿಕೆಯಾಗಬಹುದು.

ಮಧುಮೇಹದ ಔಷಧಿ ನಿಲ್ಲಿಸಿದ್ರೆ ಏನಾಗುತ್ತೆ

ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆ (ಆರ್) ಆಂತರಿಕ ಔಷಧಗಳ ನಿರ್ದೇಶಕ ಡಾ.ರಾಜೀವ್ ಗುಪ್ತಾ ಅವರ ಪ್ರಕಾರ, ಮಧುಮೇಹ ಶಾಶ್ವತವಾಗಿ ಗುಣವಾಗಲು ಯಾವುದೇ ನಿರ್ದಿಷ್ಟ ಔಷಧಿ ಇಲ್ಲ. ಆದರೂ ಕೆಲವು ಪ್ರಕರಣಗಳಲ್ಲಿ ಮಧುಮೇಹಕ್ಕೆ ಗುಣವಾಗುತ್ತದೆ. ಅದು ಹೇಗೆ ಎಂದರೆ ಆರಂಭಿಕ ಹಂತದಲ್ಲೇ ಗುರುತಿಸಿ ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು, ತೂಕ ಕಡಿಮೆ ಮಾಡಿಕೊಳ್ಳುವುದು, ಸರಿಯಾದ ಆರೈಕೆ ಮತ್ತು ಶಿಫಾರಸು ಮಾಡಿದ ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣ ಮಾಡಬಹುದು. ಆದರೆ ಕೆಲವೊಮ್ಮೆ ಮಧುಮೇಹ ಲಕ್ಷಣ ರಹಿತವಾಗಿರುತ್ತದೆ. ಆಗ ರೋಗಿಗಳಲ್ಲಿ ತಾನು ಗುಣವಾಗಿದ್ದೇನೆ ಎನ್ನುವ ಭಾವನೆ ಮೂಡುತ್ತದೆ. ಆದರೆ ಯಾವುದೇ ಕಾರಣಕ್ಕೂ ಮಧುಮೇಹದ ಬಗ್ಗೆ ನೀವಾಗಿಯೇ ನಿರ್ಧಾರ ತೆಗೆದುಕೊಳ್ಳಬಾರದು. ನಿರಂತರವಾಗಿ ಔಷಧಿ ಸೇವಿಸದೇ ಇರುವುದು, ಇದ್ದಕ್ಕಿದ್ದಂತೆ ಮಧುಮೇಹ ಔಷಧಿ ಸೇವಿಸುವುದನ್ನು ಬಿಡುವುದರಿಂದ ಸೋಂಕಿನ ಅಪಾಯ ಹೆಚ್ಚಬಹುದು. ಇದು ಕೀಟೋಆಸಿಡೋಸಿಸ್‌ನಂತಹ ಗಂಭೀರ ಸಮಸ್ಯೆಯನ್ನು ಉಂಟು ಮಾಡಬಹುದು. ಕೀಟೋಆಸಿಡೋಸಿಸ್‌ ಎನ್ನುವುದು ರಕ್ತದಲ್ಲಿನ ಆಮ್ಲಗಳ ಶೇಖರಣೆಯಿಂದ ನಿರೂಪಿಸಲ್ಪಟ್ಟ ಮಾರಣಾಂತಿಕ ಸ್ಥಿತಿಯಾಗಿದೆ. ತಕ್ಷಣ ಚಿಕಿತ್ಸೆ ನೀಡದಿದ್ದಲ್ಲಿ ಕೋಮಾ ಸ್ಥಿತಿಗೆ ತಲುಪುವ ಸಾಧ್ಯತೆಯೂ ಇದೆ ಎಂದು ಡಾ. ಗುಪ್ತಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಧುಮೇಹದ ನಿಷ್ಕ್ರೀಯ ರೋಗಲಕ್ಷಣಗಳು ಟ್ರಿಕಿ ಆಗಿರಬಹುದು. ಇದು ಗಂಭೀರವಾಗುವವರೆಗೂ ಯಾವುದೇ ಸಮಸ್ಯೆಯನ್ನು ತಂದೊಡ್ಡುವುದಿಲ್ಲ, ಆದರೆ ಒಂದೇ ಬಾರಿಗೆ ಸಮಸ್ಯೆ ಹೆಚ್ಚುವಂತೆ ಮಾಡುತ್ತದೆ.

ಈ ಅಪಾಯಗಳು ಎದುರಾಗಬಹುದು ಎಚ್ಚರ

ಮಧುಮೇಹದ ಔಷಧಿಗಳನ್ನು ಇದ್ದಕ್ಕಿದ್ದ ಹಾಗೆ ನಿಲ್ಲಿಸುವುದು ಗ್ಲೈಸೆಮಿಕ್ ವ್ಯತ್ಯಾಸಕ್ಕೆ ಕಾರಣವಾಗಬಹುದು. ಇದರಿಂದ ಕುರುಡುತನ, ಮೂತ್ರಪಿಂಡ ವೈಫಲ್ಯ ಮತ್ತು ಕಾಲಿನ ಅಂಗಚ್ಛೇದನದಂತಹ ದೀರ್ಘಕಾಲೀನ ತೊಡಕುಗಳ ಸಾಧ್ಯತೆಯೂ ಹೆಚ್ಚಬಹುದು. ಸ್ನಾಯು ಮತ್ತು ತೂಕ ನಷ್ಟ, ನಿರ್ಜಲೀಕರಣ, ಆಯಾಸ, ಮತ್ತು ಸರಿಯಾಗಿ ಆರೈಕೆ ಮಾಡದೇ ಇರುವುದರಿಂದ ಔಷಧಿಗಳ ಪರಿಣಾಮ ಕಡಿಮೆಯಾಗುವ ಸಾಧ್ಯತೆಯೂ ಇದೆ.

ಇದಲ್ಲದೆ, ಸ್ಟ್ರೋಕ್ ಮತ್ತು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (ಹೃದಯಾಘಾತ) ನಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವು ಹೆಚ್ಚಾಗುವ ಸಾಧ್ಯತೆ ಇದೆ.

ಈ ಸಂಭಾವ್ಯ ಅಪಾಯಕಾರಿ ತೊಂದರೆಗಳನ್ನು ತಡೆಗಟ್ಟಲು ಸ್ಥಿರವಾದ ಚಿಕಿತ್ಸಾ ಯೋಜನೆಯೊಂದಿಗೆ ಮಧುಮೇಹವನ್ನು ನಿರ್ವಹಿಸುವುದು ಅತ್ಯಗತ್ಯ. ಸುರಕ್ಷಿತ ಮತ್ತು ಪರಿಣಾಮಕಾರಿ ಮಧುಮೇಹ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಔಷಧಿ ಕಟ್ಟುಪಾಡುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ಯಾವಾಗಲೂ ತಪ್ಪದೇ ವೈದ್ಯರೊಂದಿಗೆ ಸಮಾಲೋಚಿಸಿ ಎಂದು ಡಾ. ಚಾವ್ಲಾ ಹೇಳುತ್ತಾರೆ.

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಮೇಲ್ವಿಚಾರಣೆ ಮಾಡುವುದು, ಎಲ್ಲಾ ಸಮಯದಲ್ಲೂ ಔಷಧ ಹೊಂದಾಣಿಕೆ ಮತ್ತು ತೊಡಕುಗಳಿಗೆ ಸಕಾಲಿಕ ಸ್ಕ್ರೀನಿಂಗ್ ಕುರಿತು ಅವರ ಮಧುಮೇಹಶಾಸ್ತ್ರಜ್ಞರ ಸಲಹೆಯನ್ನು ಅನುಸರಿಸುವುದು ಮುಖ್ಯವಾಗಿದೆ.

ಮಧುಮೇಹ ಖಂಡಿತ ಸಾಮಾನ್ಯ ಸಮಸ್ಯೆಯಲ್ಲ. ರೋಗಲಕ್ಷಣಗಳು ನಿಯಂತ್ರಣಕ್ಕೆ ಬಂದ ತಕ್ಷಣ ಮಧುಮೇಹ ಕಡಿಮೆಯಾಯ್ತು ಎಂಬ ಅರ್ಥವೂ ಅಲ್ಲ. ಆ ಕಾರಣಕ್ಕೆ ಯಾವುದೇ ಕಾರಣಕ್ಕೂ ನೀವಾಗಿಯೇ ಔಷಧಿಯನ್ನು ನಿಲ್ಲಿಸಬೇಡಿ, ಇದರಿಂದ ಗಂಭೀರ ಸಮಸ್ಯೆಗಳನ್ನು ನೀವಾಗಿಯೇ ಮೈ ಮೇಲೆ ಎಳೆದು ಕಂಡಂತೆ ಆಗುತ್ತದೆ ನೆನಪಿರಲಿ.