ಲೈಂಗಿಕ ಆರೋಗ್ಯ ಸುಧಾರಣೆಯಿಂದ ಮಧುಮೇಹ ನಿಯಂತ್ರಣದವರೆಗೆ, ಖರ್ಜೂರ ಬೀಜದ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ
ಕನ್ನಡ ಸುದ್ದಿ  /  ಜೀವನಶೈಲಿ  /  ಲೈಂಗಿಕ ಆರೋಗ್ಯ ಸುಧಾರಣೆಯಿಂದ ಮಧುಮೇಹ ನಿಯಂತ್ರಣದವರೆಗೆ, ಖರ್ಜೂರ ಬೀಜದ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ

ಲೈಂಗಿಕ ಆರೋಗ್ಯ ಸುಧಾರಣೆಯಿಂದ ಮಧುಮೇಹ ನಿಯಂತ್ರಣದವರೆಗೆ, ಖರ್ಜೂರ ಬೀಜದ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ

ಇತ್ತೀಚಿನ ದಿನಗಳಲ್ಲಿ ಕೆಫಿನ್ ಅಂಶದಿಂದ ದೇಹಾರೋಗ್ಯಕ್ಕೆ ಹಾನಿ ಎಂಬ ಮಾತುಗಳು ಹೆಚ್ಚೇ ಕೇಳಿ ಬರುತ್ತಿವೆ. ಆ ಕಾರಣಕ್ಕೆ ಚಹಾ, ಕಾಫಿ ಹೆಚ್ಚು ಕುಡಿಯಬಾರದು ಎಂದು ಸಲಹೆ ನೀಡಲಾಗುತ್ತದೆ. ನೀವು ಕೆಫಿನ್ ಮುಕ್ತ ನೈಸರ್ಗಿಕ ಕಾಫಿ ಕುಡಿಯಲು ಬಯಸಿದರೆ ಕರ್ಜೂರ ಬೀಜದ ಕಾಫಿ ಕುಡಿಯಿರಿ. ಇದರಿಂದ ಆರೋಗ್ಯಕ್ಕೂ ನೂರಾರು ಪ್ರಯೋಜನಗಳಿವೆ. ಏನಿದು ಕರ್ಜೂರ ಬೀಜದ ಕಾಫಿ ಕಥೆ ನೋಡಿ.

ಖರ್ಜೂರ ಬೀಜದ ಕಾಫಿ
ಖರ್ಜೂರ ಬೀಜದ ಕಾಫಿ

ಕಾಫಿ ಕುಡಿಯುವುದರಿಂದ ದೇಹದಲ್ಲಿ ಚೈತನ್ಯ ಮೂಡುತ್ತದೆ. ಕಾಫಿಯು ಖಂಡಿತ ಆರೋಗ್ಯಕ್ಕೆ ಕೆಟ್ಟದಲ್ಲ, ಆದರೆ ಇದರಲ್ಲಿ ಕೆಫಿನ್ ಅಂಶ ಇರಬಾರದು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಳಜಿಯು ಹೆಚ್ಚುತ್ತಿದ್ದು ಕೆಫಿನ್ ಅಂಶ ಇರುತ್ತದೆ ಎನ್ನುವ ಕಾರಣಕ್ಕೆ ಚಹಾ ಹಾಗೂ ಕಾಫಿ ಸೇವನೆಗೆ ಕಡಿವಾಣ ಹಾಕಲಾಗುತ್ತಿದೆ. ಆದರೆ ನೀವು ಇದಕ್ಕೆ ಪರ್ಯಾಯವಾಗಿ ಕರ್ಜೂರ ಬೀಜದ ಕಾಫಿ ತಯಾರಿಸಬಹುದು.

ಇದೇನಪ್ಪಾ ಇದು, ಖರ್ಜೂರ ಬೀಜದ ಕಾಫಿ ಅಂತ ಅಂದುಕೊಳ್ತಾ ಇದ್ದೀರಾ, ಹೌದು ಕರ್ಜೂರ ಬೀಜದ ಕಾಫಿ ಕುಡಿಯುವುದರಿಂದಾಗುವ ಪ್ರಯೋಜನ ಕೇಳಿದ್ರೆ ನೀವು ಇನ್ ಮುಂದೆ ಖರ್ಜೂರ ತಿಂದ ಮೇಲೆ ಬೀಜವನ್ನು ಎಸೆಯುವುದೇ ಇಲ್ಲ. ಈ ಕಾಫಿಯ ರುಚಿ ಕೂಡ ಅದ್ಭುತ. ಹಾಗಾದರೆ ಕರ್ಜೂರ ಕಾಫಿ ಮಾಡುವುದು ಹೇಗೆ, ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಖರ್ಜೂರ ಬೀಜದ ಕಾಫಿ ಮಾಡುವುದು ಹೇಗೆ ನೋಡಿ

ಆರೋಗ್ಯ ಒಳ್ಳೆಯದು ಎಂಬ ಕಾರಣಕ್ಕೆ ನೀವು ಪ್ರತಿದಿನ ಕರ್ಜೂರ ತಿನ್ನುತ್ತಿದ್ದರೆ ಇನ್ನು ಮುಂದೆ ಅದರ ಬೀಜಗಳನ್ನು ಎಸೆಯಬೇಡಿ, ಸಂಗ್ರಹಿಸಿ ಇಡಿ. ಸಾಕಷ್ಟು ಖರ್ಜೂರ ಬೀಜಗಳನ್ನು ಸಂಗ್ರಹಿಸಿದ ಮೇಲೆ ಇದನ್ನು ಚೆನ್ನಾಗಿ ತೊಳೆದು ಒರೆಸಿ, ಒಣಗಿಸಿ. ಈ ಬೀಜವನ್ನು ಕಬ್ಬಿಣದ ಬಾಣಲಿಯಲ್ಲಿ ಹಾಕಿ ಚೆನ್ನಾಗಿ ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಬೀಜಗಳು ಚೆನ್ನಾಗಿ ಹುರಿದಿವೆ ಎನ್ನಿಸಿದ ಮೇಲೆ ಸ್ಟೌ ಆಫ್ ಮಾಡಿ. ತಣ್ಣದಾಗ ಮೇಲೆ ಮಿಕ್ಸಿಗೆ ಹಾಕಿ ನುಣ್ಣಗೆ ಕಾಫಿ ಪೌಡರ್‌ನಂತೆ ಪುಡಿ ಮಾಡಿಕೊಳ್ಳಿ. ಇದನ್ನು ಫಿಲ್ಟರ್ ಮಾಡಿ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ. ನಿಮಗೆ ಬೇಕು ಅನ್ನಿಸಿದಾಗೆಲ್ಲಾ ನೀರಿಗೆ ಹಾಕಿ ಕಾಫಿಯಂತೆ ಕುದಿಸಿ ಕುಡಿಯಿರಿ. ಕಾಫಿ ಪ್ರಿಯರಿಗೆ ಕರ್ಜೂರ ಬೀಜದ ಕಾಫಿ ಖಂಡಿತ ಇಷ್ಟವಾಗುತ್ತದೆ.

ಖರ್ಜೂರ ಬೀಜದ ಕಾಫಿಯ ಪ್ರಯೋಜನಗಳು

ತೂಕ ಇಳಿಕೆ: ಖರ್ಜೂರವು ನಮಗೆ ಪೂರ್ಣತೆಯ ಭಾವ ನೀಡುತ್ತದೆ, ಇದರಿಂದ ಹೊಟ್ಟೆ ತುಂಬಿದಂತಿರುತ್ತದೆ, ಹಾಗಾಗಿ ಪದೇ ಪದೇ ಹಸಿವಾಗುವುದು ಕಡಿಮೆಯಾಗುತ್ತದೆ. ಇದರಿಂದ ತೂಕ ಇಳಿಕೆ ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆ ಸುಧಾರಣೆ: ಆಹಾರದಲ್ಲಿ ಕಡಿಮೆ ಪ್ರಮಾಣದ ನಾರಿನಾಂಶ ಸೇವಿಸುವವರು ಖರ್ಜೂರ ಬೀಜದ ಕಾಫಿ ಕುಡಿಯುವುದು ಉತ್ತಮ. ಇದರಿಂದ ಹೊಟ್ಟೆಯಲ್ಲಿ ಫೈಬರ್ ಅಂಶ ಹೆಚ್ಚಾಗುತ್ತದೆ. ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ: ಖರ್ಜೂರದ ಬೀಜದ ಪುಡಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರಲ್ಲಿರುವ ಅಂಶಗಳು ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಕಾರ್ಯವನ್ನು ಸುಧಾರಿಸುತ್ತದೆ. ಇದರ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ಖರ್ಜೂರದ ಬೀಜದ ಪುಡಿಯು ಒಲಿಕ್ ಆಮ್ಲ, ಫೈಬರ್ ಮತ್ತು ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಖರ್ಜೂರದ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹದಲ್ಲಿ ಫ್ರಿ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ.

ಲೈಂಗಿಕ ಆರೋಗ್ಯಕ್ಕೆ ಪ್ರಯೋಜನಕಾರಿ: ಖರ್ಜೂರದಲ್ಲಿ ಆಲ್ಕಲಾಯ್ಡ್‌ಗಳು, ಸಪೋನಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಅಂಶಗಳಿದ್ದು ಪುರುಷರಲ್ಲಿ ಲೈಂಗಿಕ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ಮಹಿಳೆಯರಲ್ಲಿ ಡೋಪಮೈನ್ ಸ್ರವಿಸುವಿಕೆಯ ಮೂಲಕ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಖರ್ಜೂರವನ್ನು ತಿನ್ನುವುದರಿಂದ ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಲೈಂಗಿಕ ಆರೋಗ್ಯ ಸುಧಾರಿಸುತ್ತದೆ.

Whats_app_banner