ಚಹಾ ಸೇರಿ ಈ 3 ಆಹಾರ ಪದಾರ್ಥಗಳನ್ನ ಎಂದಿಗೂ ಪುನಃ ಬಿಸಿ ಮಾಡ್ಬೇಡಿ, ಇದರಿಂದ ಆರೋಗ್ಯ ಕೆಡೋದು ಖಂಡಿತ
ಕೆಲವು ಆಹಾರಗಳು ಮತ್ತು ಪಾನೀಯಗಳನ್ನು ಮತ್ತೆ ಬಿಸಿಮಾಡಿ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ವಿಶೇಷವಾಗಿ ಚಹಾ, ಅಡುಗೆ ಎಣ್ಣೆ, ಪಾಲಕ್ ಸೊಪ್ಪನ್ನು ಒಮ್ಮೆ ಬೇಯಿಯಿದ ನಂತರ ಮತ್ತೆ ಬಿಸಿ ಮಾಡಬಾರದು. ರುಚಿ ಮತ್ತು ಪೌಷ್ಟಿಕಾಂಶದ ಮೇಲೆ ಪರಿಣಾಮ ಬೀರುತ್ತವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಕೆಲವೊಮ್ಮೆ ನಾವು ತಯಾರಿಸಿದ ಆಹಾರ ಅಥವಾ ಪಾನೀಯವನ್ನು ಬಿಸಿ ಬಿಸಿಯಾಗಿ ಸವಿಯಲು ಸಾಧ್ಯವಾಗದೆ ತಣ್ಣಗಾಗಿಬಿಡುತ್ತವೆ. ಈ ವೇಳೆ, ಅವನ್ನು ಸೇವಿಸಲು ಮತ್ತೆ ಬಿಸಿ ಮಾಡುತ್ತೇವೆ. ಬಿಸಿಯಾದ ಆಹಾರ ಸೇವನೆ ಆರೋಗ್ಯಕರವೇನೋ ಹೌದು. ಆದರೆ ಒಮ್ಮೆ ಬೇಯಿಸಿ, ತಣ್ಣಗಾದ ನಂತರ ಮತ್ತೆ ಬಿಸಿ ಮಾಡುವುದರಿಂದ ಅನೇಕ ಅನಾನುಕೂಲತೆಗಳು ಉಂಟಾಗುತ್ತವೆ. ಪೌಷ್ಟಿಕ ತಜ್ಞೆಯೊಬ್ಬರು ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ರೀಲ್‍ನಲ್ಲಿ ವಿವರಿಸಿದ್ದಾರೆ. ಚಹಾ, ಎಣ್ಣೆ ಮತ್ತು ಪಾಲಕ್ ಸೊಪ್ಪನ್ನು ಒಮ್ಮೆ ಬೇಯಿಸಿದ ನಂತರ ಮತ್ತೆ ಏಕೆ ಬಿಸಿ ಮಾಡಬಾರದು ಎಂಬುದನ್ನು ವಿವರಿಸಿದ್ದಾರೆ. ಯಾಕೆ ಬಿಸಿ ಮಾಡಬಾರದು, ಇದನ್ನು ಬಿಸಿ ಮಾಡಿ ತಿಂದರೆ ಏನಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ..
ಚಹಾವನ್ನು ಮತ್ತೆ ಬಿಸಿ ಮಾಡುವುದು
ಕೆಲವರಿಗೆ ದಿನವಿಡೀ ಚಹಾ ಕೊಟ್ಟರೂ ಸವಿಯುತ್ತಲೇ ಇರುತ್ತಾರೆ. ಪದೇ ಪದೇ ಚಹಾ ಯಾರು ಮಾಡುವುದೆಂದು, ಒಮ್ಮೆಲೆ ಮಾಡಿಟ್ಟು, ಅದನ್ನು ಮತ್ತೆ ಬಿಸಿ ಮಾಡಿ ಕುಡಿಯುವವರು ಅನೇಕರಿದ್ದಾರೆ. ಆದರೆ, ಉತ್ತಮ ಆರೋಗ್ಯಕ್ಕಾಗಿ ಚಹಾವನ್ನು ಪದೇ ಪದೇ ಬಿಸಿ ಮಾಡಿ ಸೇವಿಸುವುದು ಸೂಕ್ತವಲ್ಲ.
ಪೋಷಕಾಂಶಗಳ ನಷ್ಟ: ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಉತ್ಕರ್ಷಣ ನಿರೋಧಕಗಳು, ವಿಶೇಷವಾಗಿ ಹಸಿರು ಚಹಾದ ಕ್ಯಾಟೆಚಿನ್‌ಗಳು ಕಡಿಮೆಯಾಗುತ್ತವೆ.
ಟ್ಯಾನಿನ್‌ಗಳ ರಚನೆ: ಚಹಾವನ್ನು ಮತ್ತೆ ಬಿಸಿ ಮಾಡಿದಾಗ, ಟ್ಯಾನಿನ್‌ಗಳ ಸಾಂದ್ರತೆಯು ಹೆಚ್ಚಾಗುತ್ತದೆ. ಇದು ಚಹಾವನ್ನು ಹೆಚ್ಚು ಕಹಿ ಮಾಡುತ್ತದೆ. ಟ್ಯಾನಿನ್‌ಗಳು ಹಾನಿಕಾರಕವಲ್ಲದಿದ್ದರೂ, ಅತಿಯಾದ ಸೇವನೆಯು ಕಬ್ಬಿಣದಂತಹ ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ.
ಸೂಕ್ಷ್ಮಜೀವಿಯ ಬೆಳವಣಿಗೆ: ಚಹಾವನ್ನು ಮತ್ತೆ ಬಿಸಿಮಾಡುವ ಮೊದಲು ಕೋಣೆಯ ಉಷ್ಣಾಂಶದಲ್ಲಿ ಹೆಚ್ಚು ಕಾಲ ಬಿಟ್ಟರೆ, ಅದು ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಸ್ಥಳವಾಗುತ್ತದೆ. ಅದರಲ್ಲೂ ಹಾಲು ಅಥವಾ ಸಕ್ಕರೆ ಇದ್ದರೆ ಇನ್ನೂ ಹೆಚ್ಚು ಹಾನಿಕಾರಕವಾಗಿ ಸಂಭವಿಸುತ್ತದೆ.
ಅಡುಗೆ ಎಣ್ಣೆಯನ್ನು ಮತ್ತೆ ಬಿಸಿ ಮಾಡುವುದು ಹಾನಿಕಾರಕ
ಹಾನಿಕಾರಕ ಸಂಯುಕ್ತಗಳು: ತೈಲವನ್ನು ಮತ್ತೆ ಬಿಸಿಮಾಡುವುದು, ವಿಶೇಷವಾಗಿ ಕೊಬ್ಬಿನಂಶವಿರುವ ಆಹಾರಗಳು (ಉದಾಹರಣೆಗೆ ಸಸ್ಯಜನ್ಯ ಎಣ್ಣೆಗಳು), ಆಲ್ಡಿಹೈಡ್‌ಗಳು ಮತ್ತು ಟ್ರಾನ್ಸ್ ಕೊಬ್ಬುಗಳಂತಹ ಹಾನಿಕಾರಕ ಸಂಯುಕ್ತಗಳನ್ನು ಸೃಷ್ಟಿಸುತ್ತದೆ. ಈ ಸಂಯುಕ್ತಗಳು ಕ್ಯಾನ್ಸರ್, ಹೃದ್ರೋಗ ಮತ್ತು ಇತರ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ.
ಆಕ್ಸಿಡೀಕರಣ: ಪದೇ ಪದೇ ಬಿಸಿ ಮಾಡಿದಾಗ ತೈಲಗಳು ಆಕ್ಸಿಡೀಕರಣಕ್ಕೆ ಒಳಗಾಗುತ್ತವೆ. ಇದು ಸ್ವತಂತ್ರ ರಾಡಿಕಲ್‍ಗಳ ರಚನೆಗೆ ಕಾರಣವಾಗುತ್ತದೆ. ಅವು ದೇಹದಲ್ಲಿನ ಆರೋಗ್ಯಕರ ಕೋಶಗಳನ್ನು ಹಾನಿಗೊಳಿಸುತ್ತವೆ. ಉರಿಯೂತದಂತಹ ವಿವಿಧ ರೋಗಗಳಿಗೆ ಕೊಡುಗೆ ನೀಡುತ್ತದೆ.
ಪಾಲಕ್ ಸೊಪ್ಪನ್ನು ಮತ್ತೆ ಬಿಸಿ ಮಾಡುವುದು ಹಾನಿಕಾರಕ
ನೈಟ್ರೇಟ್‌ಗಳು: ಪಾಲಕ್ ಸೊಪ್ಪು ನೈಟ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ಇವುಗಳನ್ನು ಮತ್ತೆ ಬಿಸಿ ಮಾಡಿದಾಗ ಇದು ನೈಟ್ರೈಟ್‌ಗಳಾಗಿ ಪರಿವರ್ತನೆಯಾಗುತ್ತದೆ. ದೀರ್ಘಾವಧಿಯ ಶೇಖರಣೆಯಿಂದ ನೈಟ್ರೇಟ್‌ಗಳು ನೈಟ್ರೊಸಮೈನ್‌ಗಳಾಗಿ ಬದಲಾಗಬಹುದು. ಇವುಗಳಲ್ಲಿ ಕೆಲವು ಕಾರ್ಸಿನೋಜೆನಿಕ್ ಎಂದು ತಿಳಿದುಬಂದಿದೆ.
ಪೋಷಕಾಂಶಗಳ ನಷ್ಟ: ಪಾಲಕ್ ಸೊಪ್ಪನ್ನು ಮತ್ತೆ ಬಿಸಿ ಮಾಡುವುದರಿಂದ ಕೆಲವು ಜೀವಸತ್ವಗಳಂತಹ ಸೂಕ್ಷ್ಮ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗಬಹುದು (ಉದಾಹರಣೆಗೆ ವಿಟಮಿನ್ ಸಿ ಮತ್ತು ಫೋಲೇಟ್).
ಒಟ್ಟಿನಲ್ಲಿ ಅಡುಗೆ ಎಣ್ಣೆ, ಚಹಾ ಮತ್ತು ಪಾಲಕ್ ಸೊಪ್ಪನ್ನು ಮತ್ತೆ ಬಿಸಿ ಮಾಡುವುದರಿಂದ ಹಾನಿಕಾರಕ ಸಂಯುಕ್ತಗಳು ಉಂಟಾಗುತ್ತವೆ. ಹೀಗಾಗಿ ಈ ಮೂರನ್ನು ಸಾಧ್ಯವಾದಷ್ಟು ಮತ್ತೆ ಬಿಸಿ ಮಾಡದಿರಿ.
ವಿಭಾಗ