ಅನಾರೋಗ್ಯಕರ ಆಹಾರ ಪದಾರ್ಥಗಳ ಪಟ್ಟಿ ಬಿಡುಗಡೆಗೊಳಿಸಿದ ವಿಶ್ವ ಆರೋಗ್ಯ ಸಂಸ್ಥೆ: ದಿನನಿತ್ಯ ಬಳಕೆಯ ವಸ್ತುಗಳೇ ಅಪಾಯಕಾರಿ
ವಿಶ್ವ ಆರೋಗ್ಯ ಸಂಸ್ಥೆಯು ಅನಾರೋಗ್ಯಕರ ಆಹಾರ ಪದಾರ್ಥಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆಶ್ಚರ್ಯಕರ ವಿಚಾರ ಏನೆಂದರೆ ಈ ಪಟ್ಟಿಯಲ್ಲಿ ನಾವು ದಿನನಿತ್ಯ ಅಡುಗೆ ಮನೆಯಲ್ಲಿ ಬಳಕೆ ಮಾಡುವ ವಸ್ತುಗಳೇ ಅಗ್ರಗಣ್ಯ ಸ್ಥಾನ ಪಡೆದಿವೆ. ಸಕ್ಕರೆ,ಕಾಫಿಯಂತಹ ಪದಾರ್ಥಗಳು ಜೀವಕ್ಕೆ ಅಪಾಯಕಾರಿ ಎಂದು ಡಬ್ಲ್ಯುಎಚ್ಓ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಮತ್ತೊಮ್ಮೆ ಅನಾರೋಗ್ಯಕರ ಆಹಾರಗಳ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕೆಲವೊಂದು ಆಹಾರಗಳು ಹಾಗೂ ಪಾನೀಯಗಳ ಸೇವನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಪಟ್ಟಿಯಲ್ಲಿ ಕೇವಲ ಜಂಕ್ ಫುಡ್‍ಗಳು ಮಾತ್ರವಲ್ಲದೆ ನಾವು ದಿನನಿತ್ಯ ಬಳಕೆ ಮಾಡುವ ಆಹಾರಗಳು ಸಹ ಸ್ಥಾನ ಪಡೆದಿರುವುದು ಆತಂಕಕಾರಿ ವಿಚಾರವಾಗಿದೆ. ಈ ಪಟ್ಟಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡುತ್ತಿದ್ದಂತೆಯೇ ನಾವು ಎಷ್ಟೆಲ್ಲ ಅನಾರೋಗ್ಯಕರ ಆಹಾರಗಳನ್ನು ಸೇವಿಸುತ್ತಿದ್ದೇವೆ ಎಂಬ ಯೋಚನೆ ಆರಂಭಗೊಂಡಿರುವುದಂತೂ ಸತ್ಯ. ಹಾಗಾದರೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆಗೊಳಿಸಿರುವ ಆ ಪಟ್ಟಿಯಲ್ಲಿ ಇರುವ ಕೆಟ್ಟ ಆಹಾರಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ :
ಸಕ್ಕರೆ: ವಿಶ್ವ ಆರೋಗ್ಯ ಸಂಸ್ಥೆಯು ಸ್ಥೂಲಕಾಯ ಹಾಗೂ ಮಧುಮೇಹದಂತಹ ಮಾರಕ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿರುವ ಸಕ್ಕರೆಯನ್ನು ಅತ್ಯಂತ ಅಪಾಯಕಾರಿ ಪದಾರ್ಥವೆಂದು ಪಟ್ಟಿ ಮಾಡಿದೆ. ಮನುಷ್ಯನ ಯಕೃತ್ತು ಹಾಗೂ ಜೀರ್ಣಕ್ರಿಯೆ ವ್ಯವಸ್ಥೆಗೆ ಸಕ್ಕರೆ ಬಹುದೊಡ್ಡ ಮಟ್ಟದಲ್ಲಿ ಪೆಟ್ಟು ನೀಡುತ್ತದೆ. ಸಕ್ಕರೆ ತಿನ್ನಲೇಬಾರದು ಎಂದಲ್ಲ ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ, ಅವಶ್ಯಕತೆ ಇದ್ದರೆ ಮಾತ್ರ ಸೇವಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.
ಕರಿದ ಆಹಾರ ಪದಾರ್ಥಗಳು: ಎಣ್ಣೆಯಲ್ಲಿ ಕರಿದ ಪದಾರ್ಥಗಳಲ್ಲಿ ಕೊಬ್ಬು ಅತೀ ಹೆಚ್ಚು ಪ್ರಮಾಣದಲ್ಲಿ ಇರುವುದರಿಂದ ಇದು ದೇಹದಲ್ಲಿ ಕೊಬ್ಬು ಶೇಖರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊತ್ತು ತರುತ್ತದೆ. ಸ್ಥೂಲಕಾಯದ ಸಮಸ್ಯೆಗೆ ಕರಿದ ಆಹಾರ ಪದಾರ್ಥಗಳ ಸೇವನೆ ಕೂಡ ಪ್ರಮುಖ ಕಾರಣವಾಗಿದೆ.
ಪಾಸ್ತಾ ಹಾಗೂ ಬ್ರೆಡ್: ಸಂಸ್ಕರಿಸಿ ಇರಿಸಲಾದ ಕಾರ್ಬೋಹೈಡ್ರೇಟ್ ಪದಾರ್ಥಗಳನ್ನು ವಿಶ್ವದ ಅತ್ಯಂತ ಅನಾರೋಗ್ಯಕರ ಆಹಾರ ಎಂದು ಪರಿಗಣಿಸಲಾಗಿದೆ. ಬ್ರೆಡ್‍ಗಳು, ಪಾಸ್ತಾ ಹಾಗೂ ಸಕ್ಕರೆಯಂಶಯುಕ್ತ ಸಂಸ್ಕರಿಸಿದ ಆಹಾರಗಳೆಲ್ಲವೂ ಈ ಸಾಲಿಗೆ ಸೇರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತದೆ. ಹೀಗಾಗಿ ಸಂಸ್ಕರಿಸಿದ ಆಹಾರಗಳನ್ನು ತ್ಯಜಿಸಿ ತಾಜಾ ಆಹಾರಗಳನ್ನು ಸೇವನೆ ಮಾಡಬೇಕು.
ಕಾಫಿ: ಜಗತ್ತಿನಲ್ಲಿ ಕಾಫಿ ಪ್ರಿಯರು ಬಹಳಷ್ಟು ಮಂದಿಯಿದ್ದಾರೆ. ಕಾಫಿಯಲ್ಲಿ ಕೆಫಿನ್ ಅಂಶ ಸಮೃದ್ಧವಾಗಿರುತ್ತದೆ. ಇದು ತಲೆನೋವು, ನಿದ್ರಾಹೀನತೆ, ಖಿನ್ನತೆ, ಅಧಿಕ ರಕ್ತದೊತ್ತಡ ಹಾಗೂ ಆಯಾಸ ಸೇರಿದಂತೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅಲ್ಲದೆ ಅಧಿಕ ರಕ್ತದೊತ್ತಡ ಹಾಗೂ ಹೃದಯ ರಕ್ತನಾಳ ಸಂಬಂಧಿ ಸಮಸ್ಯೆಗಳಿಗೂ ಕಾಫಿ ಸೇವನೆ ಕಾರಣ ಎಂದು ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ: Child Health: ನೂಡಲ್ಸ್‌ನಿಂದ ಪಿಜ್ಜಾದವರೆಗೆ ಮಕ್ಕಳ ಆರೋಗ್ಯ ಕೆಡಿಸುವ 10 ಜನಪ್ರಿಯ ಜಂಕ್ ಫುಡ್‌ಗಳಿವು
ಆಲೂಗಡ್ಡೆ ಚಿಪ್ಸ್: ಆಲೂಗಡ್ಡೆ ಚಿಪ್ಸ್ ಹಾಗೂ ಮೈಕ್ರೋವೇವ್ ಪಾಪ್ಕಾರ್ನ್ ಗಳಂತಹ ಸಂಸ್ಕರಿಸಿದ ತಿಂಡಿಗಳನ್ನು ಸೇವನೆ ಮಾಡದಿರುವುದೇ ಒಳ್ಳೆಯದು. ಇವುಗಳು ಕೆಟ್ಟ ಕೊಬ್ಬನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುತ್ತದೆ.
ಸಂಸ್ಕರಿಸಿದ ಮಾಂಸಗಳು: ಸಂಸ್ಕರಿಸಿದ ಮಾಂಸಗಳನ್ನು ಎಂದಿಗೂ ಸೇವನೆ ಮಾಡಬಾರದು. ಇವುಗಳಲ್ಲಿ ಸೋಡಿಯಂ ಹಾಗೂ ನೈಟ್ರೇಟ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ.
ಚೀಸ್: ಬಹುತೇಕರು ಇಷ್ಟಪಡುವ ಚೀಸ್‍ನಂತಹ ಕೊಬ್ಬಿನಂಶ ಅಧಿಕವಾಗಿರುವ ಡೈರಿ ಉತ್ಪನ್ನಗಳನ್ನು ಸೇವಿಸಬಾರದು. ಇವುಗಳು ಹೃದ್ರೋಗ ಹಾಗೂ ಸ್ಥೂಲಕಾಯದಂತಹ ಅಪಾಯಕಾರಿ ಕಾಯಿಲೆಗಳನ್ನು ತಂದೊಡ್ಡುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿದೆ.
ವಿಭಾಗ