Remedies for Throat Pain: ಗಂಟಲು ನೋವಿನಿಂದ ಕಿರಿಕಿರಿ ಆಗ್ತಿದ್ಯಾ... ಈ ಮನೆಮದ್ದುಗಳನ್ನು ಬಳಸಿ ಸಮಸ್ಯೆಯಿಂದ ಶೀಘ್ರ ವಿಮುಕ್ತಿ ಪಡೆಯಿರಿ
ನಿಮ್ಮ ಪ್ರತಿದಿನದ ಆಹಾರದಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಶೀತ ಮತ್ತು ಜ್ವರಕ್ಕೆ ಕಾರಣವಾಗುವ ವೈರಸ್‌ಗಳನ್ನು ತಡೆಯಬಹುದು. ಬೆಳ್ಳುಳ್ಳಿ ಎಸಳನ್ನು 10-15 ನಿಮಿಷಗಳ ಕಾಲ ದವಡೆಯಿಂದ ಜಗಿದು ರಸವನ್ನು ನುಂಗಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.
ಕೆಲವು ದಿನಗಳಿಂದ H3N2 ಪ್ರಕರಣಗಳು ಹೆಚ್ಚಾಗುತ್ತಿವೆ. ಜ್ವರ, ಕೆಮ್ಮು, ನೆಗಡಿ, ತಲೆ ನೋವು ಗಂಟಲು ನೋವು ಇದರ ಲಕ್ಷಣಗಳಾಗಿವೆ. ಜ್ವರ, ಕೆಮ್ಮಿನಿಂದ ಬಳಲುವ ಜನರಿಗೆ ಗಂಟಲು ನೋವು ಮತ್ತಷ್ಟು ಕಿರಿಕಿರಿ ನೀಡುತ್ತದೆ. ಏನಾದರೂ ತಿನ್ನಲು, ಕುಡಿಯಲು ಬಹಳ ಕಷ್ಟವಾಗುತ್ತದೆ. ಆದರೆ ನೀವು ಮನೆಯಲ್ಲೇ ಈ ನೋವಿಗೆ ಪರಹಾರ ಕಂಡುಕೊಳ್ಳಬಹುದು.
ಕೆಲವೊಂದು ಮನೆ ಮದ್ದುಗಳನ್ನು ಬಳಸಿ ನೀವು ಗಂಟಲು ನೋವು ಹಾಗೂ ಕೆಮ್ಮನ್ನು ಸುಲಭವಾಗಿ ನಿವಾರಿಸಬಹುದು. ಜ್ವರದ ಹೊರತಾಗಿ, ಆಸಿಡ್ ರಿಫ್ಲಕ್ಸ್‌ನಿಂದ ಉಂಟಾಗುವ ಗಂಟಲು ನೋವು, ಇತರ ಉದರ ಸಂಬಂಧಿ ಸಮಸ್ಯೆಗಳು, ಬಿ-ಕಾಂಪ್ಲೆಕ್ಸ್‌ನಂತಹ ಖನಿಜಗಳ ಕೊರತೆ, ವಿಟಮಿನ್ ಕೊರತೆ, ಫೋಲಿಕ್ ಆಮ್ಲದ ಕೊರತೆ, ಕಬ್ಬಿಣದ ಕೊರತೆಯನ್ನು ಈ ಸಲಹೆಗಳೊಂದಿಗೆ ಪರಿಣಾಮಕಾರಿಯಾಗಿ ನಿವಾರಿಸಬಹುದು.
ಜೇನುತುಪ್ಪ
ಗಂಟಲು ನೋವನ್ನು ಶಮನಗೊಳಿಸಲು ಜೇನುತುಪ್ಪವು ಅದ್ಭುತ ಮನೆ ಮದ್ದಾಗಿದೆ. ಗಂಟಲು ನೋವು ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಜೇನುತುಪ್ಪ ರಾಮಬಾಣ ಎಂದೇ ಹೇಳಬಹುದು. ಜೇನುತುಪ್ಪದಲ್ಲಿರುವ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಗಂಟಲು ನೋವನ್ನು ಶಮನಗೊಳಿಸುತ್ತದೆ. ಒಂದು ಚಮಚ ಶುಂಠಿ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಚೆನ್ನಾಗಿ ಬೆರೆಸಿ ಬೆಳಗ್ಗೆ ಸಂಜೆ ಸೇವಿಸುತ್ತಾ ಬಂದರೆ ಗಂಟಲು ನೋವು ಬೇಗ ಗುಣವಾಗುತ್ತದೆ. ಜೇನುತುಪ್ಪವು ಶ್ವಾಸನಾಳದಲ್ಲಿ ಸಂಗ್ರಹವಾದ ಲೋಳೆ (ಕಫ)ಯನ್ನು ಕರಗಿಸುತ್ತದೆ.
ಉಪ್ಪು ನೀರು
ಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರೆಸಿ ಗಂಟಲವರೆಗೆ ಗಾರ್ಗ್ಲಿಂಗ್ ಮಾಡಿದರೆ ಕೂಡಾ ಕಫ ಹಾಗೂ ಗಂಟಲು ನೋವು ಕಡಿಮೆ ಆಗುತ್ತದೆ. ಇದು ಗಂಟಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಗಂಟಲು ನೋವು ಬೇಗ ಗುಣವಾಗುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ಚಮಚ ಉಪ್ಪನ್ನು ಸೇರಿಸಿ ಅದು ಕರಗಿದ ನಂತರ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಕಡಿಮೆಯಾಗಿ ಗಂಟಲು ಸ್ವಚ್ಛವಾಗುತ್ತದೆ. ನೀವು ಗಂಟಲು ನೋವಿನಿಂದ ಬಳಲುತ್ತಿದ್ದರೆ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿ. ನೀವು ತಡೆಯುವಷ್ಟು ಬಿಸಿ ನೀರು ಬಳಸಿ, ಪುಡಿ ಉಪ್ಪಿನ ಬದಲಿಗೆ ಹರಳು ಉಪ್ಪು ಬಳಸಿದರೆ ಸೂಕ್ತ.
ಅಡುಗೆ ಸೋಡಾ
ಅಡುಗೆ ಸೋಡಾವನ್ನು ಉಪ್ಪು ನೀರಿನೊಂದಿಗೆ ಬೆರೆಸಿ ಬಾಯಿ (ಗಂಟಲವರೆಗೂ ನೀರು ಹೋಗುವಂತೆ ಮುಕ್ಕಳಿಸಿ, ಆದರೆ ನುಂಗಬೇಡಿ) ಮುಕ್ಕಳಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ. ಬೇಕಿಂಗ್ ಸೋಡಾ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಯೀಸ್ಟ್ ಮತ್ತು ಕಫದ ಬೆಳವಣಿಗೆಯನ್ನು ತಡೆಯುತ್ತದೆ. ಒಂದು ಕಪ್ ಬಿಸಿ ನೀರಿಗೆ, 1/4 ಟೀಸ್ಪೂನ್ ಅಡುಗೆ ಸೋಡಾ, 2 ಚಿಟಿಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಗಾರ್ಗ್ಲ್ ಮಾಡಿದರೆ ಖಂಡಿತ ಗಂಟಲು ನೋವಿನಿಂದ ಶೀಘ್ರ ಪರಿಹಾರ ದೊರೆಯುತ್ತದೆ.
ಚಾಮಂತಿ ಟೀ
ಚಾಮಂತಿಯಲ್ಲಿರುವ ಉರಿಯೂತ ನಿವಾರಕ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ ಹೋರಾಡುತ್ತವೆ. ನೀವು ಗಂಟಲು ನೋವಿನಿಂದ ಬಳಲುತ್ತಿದ್ದರೆ, ಪ್ರತಿದಿನ ಎರಡು ಕಪ್ ಕ್ಯಾಮೊಮೈಲ್ ಟೀ ಕುಡಿಯಿರಿ. ಇದರಿಂದ ನೀವು ಬೇಗನೆ ಗಂಟಲು ನೋವಿನಿಂದ ಹೊರ ಬರುತ್ತೀರಿ. ಕ್ಯಾಮೊಮೈಲ್ ಅಥವಾ ಚಾಮಂತಿ ಚಹಾವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕುದಿಯುವ ನೀರಿಗೆ ಚಾಮಂತಿ ಎಲೆಗಳನ್ನು ಹಾಕಿ ಸ್ಟೀಮ್ ತೆಗೆದುಕೊಂಡರೆ ಕೂಡಾ ಗಂಟಲು ನೋವು ಮತ್ತು ಶೀತ ಲಕ್ಷಣಗಳು ಕಡಿಮೆಯಾಗುತ್ತವೆ. ಕ್ಯಾಮೊಮೈಲ್ ಟೀ ನಿಮಗೆ ಸೂಪರ್ ಮಾರ್ಕೆಟ್‌ಗಳಲ್ಲಿ ದೊರೆಯುತ್ತದೆ.
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತಾರೆ. ಕಫಕ್ಕೆ ಕೂಡಾ ಇದು ಪರಿಹಾರ ಒದಗಿಸುತ್ತದೆ. ಆಪಲ್ ಸೈಡರ್ ವಿನೆಗರ್‌ನ ಆಮ್ಲ ಗುಣಲಕ್ಷಣಗಳು ಬ್ಯಾಕ್ಟೀರಿಯಾ ಹರಡುವಿಕೆಯನ್ನು ತಡೆಯುತ್ತದೆ. ಒಂದು ಕಪ್ ನೀರಿಗೆ 1-2 ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಗಂಟೆಗೊಮ್ಮೆ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಬೇಗ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿ ಆ್ಯಂಟಿಮೈಕ್ರೊಬಿಯಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆರ್ಗನೊಸಲ್ಫರ್ ರಾಸಾಯನಿಕವಾಗಿರುವ ಆಲಿಸಿನ್, ಸೋಂಕು ನಿವಾರಕ, ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ನಿವಾರಕ ಮತ್ತು ವೈರಸ್ ವಿರೋಧಿ ಗುಣಗಳನ್ನು ಹೊಂದಿದೆ. ನಿಮ್ಮ ಪ್ರತಿದಿನದ ಆಹಾರದಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಶೀತ ಮತ್ತು ಜ್ವರಕ್ಕೆ ಕಾರಣವಾಗುವ ವೈರಸ್‌ಗಳನ್ನು ತಡೆಯಬಹುದು. ಬೆಳ್ಳುಳ್ಳಿ ಎಸಳನ್ನು 10-15 ನಿಮಿಷಗಳ ಕಾಲ ದವಡೆಯಿಂದ ಜಗಿದು ರಸವನ್ನು ನುಂಗಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.
ಕಾಳು ಮೆಣಸು
ಕಾಳುಮೆಣಸು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಕಾಳುಮೆಣಸಿನಲ್ಲಿರುವ ಪೆಪ್ಪರಿನ್ ತಮ್ಮ ಲಾರ್ವಾ ಹಂತದಲ್ಲಿ ರೋಗವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಶಕ್ತಿಯನ್ನು ಹೊಂದಿದೆ. ಒಂದು ಕಪ್ ನೀರಿಗೆ ಅರ್ಧ ಚಮಚ ಕಾಳುಮೆಣಸಿನ ಪುಡಿ ಸೇರಿಸಿ ಕುದಿಸಿ. ಇದರೊಂದಿಗೆ ಸ್ವಲ್ಪ ಬೆಲ್ಲ ಸೇರಿಸಿ ಬಿಸಿ ಬಿಸಿಯಾಗಿ ಕುಡಿದರೆ ಗಂಟಲಿನಲ್ಲಿ ಕಫ ಕಡಿಮೆಯಾಗಿ ನೋವು ಕೂಡಾ ಶಮನವಾಗುತ್ತದೆ.
ಏನೇ ಸಣ್ಣ ಪುಟ್ಟ ಸಮಸ್ಯೆ ಬಂದರೂ ನೀವು ವೈದ್ಯರ ಬಳಿ ಹೋಗುವ ಮುನ್ನ ಮನೆ ಮದ್ದು ಟ್ರೈ ಮಾಡಬಹುದು. ಒಂದು ವೇಳೆ ನಿಮಗೆ ಪರಿಹಾರ ಕಾಣದಿದ್ದಲ್ಲಿ ನಂತರ ವೈದ್ಯರನ್ನು ಸಂಪರ್ಕಿಸಿ.
ವಿಭಾಗ