ನೈಜೀರಿಯಾ ಅಂದರೆ ಗೋಡಂಬಿ, ಶುಂಠಿ ಹಾಗೂ ಕನ್ನಡ ಸಂಘ, ದುರ್ಗಾ ಪೂಜೆ: ಶ್ರೀಹರ್ಷ ದ್ವಾರಕನಾಥ್ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ನೈಜೀರಿಯಾ ಅಂದರೆ ಗೋಡಂಬಿ, ಶುಂಠಿ ಹಾಗೂ ಕನ್ನಡ ಸಂಘ, ದುರ್ಗಾ ಪೂಜೆ: ಶ್ರೀಹರ್ಷ ದ್ವಾರಕನಾಥ್ ಬರಹ

ನೈಜೀರಿಯಾ ಅಂದರೆ ಗೋಡಂಬಿ, ಶುಂಠಿ ಹಾಗೂ ಕನ್ನಡ ಸಂಘ, ದುರ್ಗಾ ಪೂಜೆ: ಶ್ರೀಹರ್ಷ ದ್ವಾರಕನಾಥ್ ಬರಹ

ಆಫ್ರಿಕಾದ ದೊಡ್ಡ ದೇಶಗಳಲ್ಲಿ ಒಂದಾದ ನೈಜೀರಿಯಾದಲ್ಲಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿಯೇ ಇದ್ದಾರೆ. ಅಲ್ಲಿಯೂ ಪ್ರತಿವರ್ಷ ರಾಜ್ಯೋತ್ಸವ, ದಸರಾ ಉತ್ಸವಗಳನ್ನು ಆಚರಿಸುತ್ತಾರೆ. ಈ ಎಲ್ಲ ಅಂಶಗಳೊಂದಿಗೆ ನೈಜೀರಿಯಾದ ಗೆಳೆಯರಿಗೆ ಮೈಸೂರು ಪಾಕ್ ಕೊಟ್ಟಾಗ ಬಂದ ಅಪರೂಪದ ಪ್ರತಿಕ್ರಿಯೆಯನ್ನೂ ಅನಿವಾಸಿ ಕನ್ನಡಿಗ ಶ್ರೀಹರ್ಷ ದ್ವಾರಕನಾಥ್ ಇಲ್ಲಿ ದಾಖಲಿಸಿದ್ದಾರೆ.

ನೈಜೀರಿಯಾ ದೇಶ ನೀವಂದುಕೊಂಡಂತೆ ಅಲ್ಲ.. ಶ್ರೀಹರ್ಷ ದ್ವಾರಕಾನಾಥ್‌ ಲೇಖನ
ನೈಜೀರಿಯಾ ದೇಶ ನೀವಂದುಕೊಂಡಂತೆ ಅಲ್ಲ.. ಶ್ರೀಹರ್ಷ ದ್ವಾರಕಾನಾಥ್‌ ಲೇಖನ

ಕನ್ನಡಿಗರಿಗೆ ಮತ್ತೆ ವಂದನೆ, ಅಭಿನಂದನೆ. ಡಾ ಬ್ರೋ ಯೂಟ್ಯೂಬ್ ಚಾನೆಲ್ ಕಂಟೆಂಟ್‌ನಲ್ಲಿ ನೈಜೀರಿಯಾ ಬಗೆಗಿನ ವಿಡಿಯೊ ಕುರಿತು ನಾನು ಬರೆದ ಲೇಖನಕ್ಕೆ ಸಿಕ್ಕ ಸ್ಪಂದನೆ ನಾನು ಆಲೋಚಿಸುವಂತೆ ಮಾಡಿದೆ. ಅದೇ ವೇಳೆ ನನಗೆ ಯಾಕೆ ಬೇಕಿತ್ತು ಇಲ್ಲದ ಉಸಾಬರಿ ಅಂತಲೂ ಅನಿಸಿದೆ. ಆದರೆ ನಮಗೆ ಅನಿಸಿದ್ದು ಸರಿಯೋ ತಪ್ಪೋ ಎಂಬ ವಿವೇಚನೆಯನ್ನು ದೊಡ್ಡ ಸಂಖ್ಯೆಯಲ್ಲಿ ಇರುವಂಥ ಓದುಗರಿಗೆ ಬಿಟ್ಟು, ಮುಂದುವರಿಯಬೇಕು ಅಂತ ತೀರ್ಮಾನಿಸಿದ್ದರಿಂದ ನೈಜೀರಿಯಾ ಬಗ್ಗೆ ಇನ್ನೂ ಕೆಲವು ವಿವರಗಳನ್ನು ನಿಮ್ಮೆಲ್ಲರ ಜೊತೆಗೆ ಹಂಚಿಕೊಳ್ಳಲು ಇದನ್ನು ಬರೆಯುತ್ತಿದ್ದೇನೆ.

ಇಲ್ಲಿನ ಬ್ಯಾಂಕ್, ಇಲ್ಲಿನ ತರಕಾರಿ ಮಾರ್ಕೆಟ್, ನಾನು ಕೆಲಸ ಮಾಡುವ ಹೋಟೆಲ್ಲಿಗೆ ಉದ್ಯೋಗಕ್ಕಾಗಿ ಬರುವ ಸ್ಥಳೀಯರು, ಲಾಗೋಸ್ ನಗರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಭಾರತೀಯರು ಹಾಗೂ ಇಲ್ಲಿಗೆ ವ್ಯವಹಾರ- ವ್ಯಾಪಾರದ ಉದ್ದೇಶದಿಂದ ಭಾರತದಿಂದ ಬರುವಂಥ ವರ್ತಕರು- ಉದ್ಯಮಿಗಳು ಹೀಗೇ ನಾನಾ ವರ್ಗದ- ಹಿನ್ನೆಲೆಯ ಜನರನ್ನು ನೋಡುವ ಅವಕಾಶ ನನಗಿದೆ. ಆ ಅನುಭವದ ಆಧಾರದಲ್ಲಿ ನೈಜೀರಿಯಾ ಬಗ್ಗೆ ಕೆಲವು ವಿಚಾರಗಳನ್ನು ನಿಮ್ಮ ಜೊತೆಗೆ ಹೇಳಿಕೊಳ್ಳುತ್ತಿದ್ದೇನೆ. ಇದು ನನ್ನ ಸೀಮಿತ ತಿಳಿವಳಿಕೆ ವ್ಯಾಪ್ತಿಯ ಕಥನಗಳು. ಇವನ್ನೆಲ್ಲ ಒಪ್ಪುವುದು- ಬಿಡುವುದು ನಿಮಗೆ ಬಿಟ್ಟ ವಿಷಯ. ಇದೇ ಅಂತಿಮ ಸತ್ಯ ಅಂತ ಹೇಳುವ ಪ್ರವಚನದ ಧಾಟಿ ನನ್ನದಲ್ಲ.

ನೈಜೀರಿಯಾದ ಬಹುತೇಕ ಜನರಿಗೆ ಇಂಗ್ಲಿಷ್ ಬರುತ್ತದೆ. ತುಂಬ ಕಡಿಮೆ ಸಂಬಳಕ್ಕೆ ಉದ್ಯೋಗ ಮಾಡುತ್ತಾರೆ. ಒಂದೋ ಇಲ್ಲಿ ಅತಿ ಶ್ರೀಮಂತರು ಕಾಣುವುದಕ್ಕೆ ಸಿಗುತ್ತಾರೆ, ಇಲ್ಲದಿದ್ದರೆ ಕಡು ಬಡವರನ್ನು ನೋಡುತ್ತೀರಿ. ಈ ಜನರು ಸಂಭ್ರಮ ಪಡುವುದು ಹೇಗೆ ಗೊತ್ತಾ? ಕೋಕೋ ಕೋಲಾ ಖರೀದಿಸಿ, ಅದನ್ನು ಕುಡಿಯುವುದು ಅಂದರೆ ಸಂತೋಷ ಇಲ್ಲಿನವರಿಗೆ. ಲೈಂಗಿಕತೆಯ ವಿಚಾರಕ್ಕೆ ಮಡಿವಂತಿಕೆ ಏನಿಲ್ಲ. ಗಂಡುಮಕ್ಕಳಿರಲಿ, ಹೆಣ್ಣುಮಕ್ಕಳಿರಲಿ ತಲೆಯ ಮೇಲೆ ಕೂದಲು ಇರುವುದಿಲ್ಲ.

ತಲೆಕೂದಲು ಹೆಚ್ಚಿದ್ದರೆ ಹೆಚ್ಚು ಗೌರವ

ತಲೆಕೂದಲು ಹೆಚ್ಚು ಬೆಳೆಯುವುದಿಲ್ಲ. ಇವರಿಗೆ ಅದು ಬಹಳ ಮುಜುಗರ ತರುವ ವಿಷಯ. ಆದ್ದರಿಂದ ಇಲ್ಲಿನ ಹೆಣ್ಣುಮಕ್ಕಳು ಹೆಚ್ಚಾಗಿ ವಿಗ್ ಬಳಸುತ್ತಾರೆ. ತಲೆ ತುಂಬ ಕೂದಲಿರುವ ವ್ಯಕ್ತಿಗಳನ್ನು ನೋಡಿದಾಗ ಬೆರಗಾಗುತ್ತಾರೆ, ತಮಗೆ ಹೀಗೆ ಕೂದಲು ಇಲ್ಲವಲ್ಲ ಎಂದು ಬೇಸರವನ್ನೂ ಪಡುತ್ತಾರೆ. ಆದರೆ ದೈಹಿಕವಾಗಿ ಬಹಳ ಬಲಶಾಲಿಯಾದ ಜನ ಇವರು. ಕಟ್ಟುಮಸ್ತಾಗಿ ಇರುತ್ತಾರೆ.

ಕಡುಬಡತನ ಎಂಬುದು ಇಲ್ಲಿನ ಜನರನ್ನು ಜರ್ಝರಿತರನ್ನಾಗಿ ಮಾಡಿದೆ. ಕಳ್ಳತನ, ಅಪಹರಣ, ಕೊಲೆ- ಸುಲಿಗೆ ಇಂಥವು ಜಾಸ್ತಿ ಇವೆ. ಇಲ್ಲಿ ಪೊಲೀಸನವರು ಸಹ ತುಂಬ ಧೈರ್ಯದಿಂದ ಕೆಲಸ ಮಾಡುವುದು ಕಷ್ಟಸಾಧ್ಯ. ಇಲ್ಲಿನ ಜನ ಮಾಟ- ಮಂತ್ರ, ವಾಮಾಚಾರ ಇಂಥವನ್ನು ನಂಬುತ್ತಾರೆ. ಅದು ಇಲ್ಲಿನ ಸ್ಥಳೀಯ ವಿಧಾನದಲ್ಲಿ ಅಂದುಕೊಳ್ಳಿ. ಇಲ್ಲಿನ ರಸ್ತೆಗಳ ಮೇಲೆ ನೀವು ಜಗತ್ತಿನ ಅತ್ಯಂತ ದುಬಾರಿ, ವಿಲಾಸಿ ಕಾರುಗಳನ್ನು ಅದೆಷ್ಟು ಬೇಕಾದರೂ ನೋಡಬಹುದು. ಅದರಲ್ಲೂ ಲಾಗೋಸ್‌ನಲ್ಲಿ ನಾನು ಇರುವುದರಿಂದ ಎಂಥೆಂಥ ಕಾರುಗಳನ್ನು ಈ ರಸ್ತೆಗಳ ಮೇಲೆ ನೋಡಿದ್ದೇನೋ! ಈ ದೇಶದಲ್ಲಿ ಕಚ್ಚಾ ತೈಲಕ್ಕೇನೂ ಕೊರತೆ ಇಲ್ಲ. ಆದರೆ ಸಂಸ್ಕರಣೆ ಮಾಡುವುದಕ್ಕೆ ಬೇಕಾದ ತಂತ್ರಜ್ಞಾನ ಇವರ ಹತ್ತಿರ ಇಲ್ಲ. ಇಲ್ಲಿಯೂ ಚೀನಾದವರು ರಸ್ತೆ, ಸೇತುವೆ ಅಂಥದ್ದು ಏನೇನೋ ಮಾಡಿಕೊಟ್ಟಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳು ಕೂಡ ಯಥೇಚ್ಛವಾಗಿವೆ.

ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಣೆ

ಭಾರತೀಯರು ತಮ್ಮ ವ್ಯವಹಾರ- ವ್ಯಾಪಾರದ ಉದ್ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರ್ತಾರೆ ಹಾಗೂ ಇಲ್ಲಿ ಇದ್ದಾರೆ. ಪ್ರತಿ ವರ್ಷ ಇಲ್ಲಿ ಕನ್ನಡ ರಾಜ್ಯೋತ್ಸವ ಮಾಡಲಾಗುತ್ತದೆ. ಅಷ್ಟು ಸಂಖ್ಯೆಯಲ್ಲಿ ಕನ್ನಡಿಗರು ಸಹ ಇದ್ದಾರೆ.

ಇಲ್ಲಿ ಉದ್ಯೋಗಕ್ಕಾಗಿ ಬಂದಿರುವ ಭಾರತೀಯರು, ಅದರಲ್ಲೂ ಉನ್ನತ ಹುದ್ದೆಯಲ್ಲಿ ಇರುವ ಭಾರತೀಯರು ತಮಗೆ ಗನ್ ಮ್ಯಾನ್ ಇಟ್ಟುಕೊಳ್ಳದೆ ಹೊರಗೆ ಓಡಾಡುವುದು ಕಡಿಮೆ. ಅದಕ್ಕೆ ಕಾರಣ ಏನೆಂದರೆ, ಅಂಥವರನ್ನು ಅಪಹರಣ ಮಾಡಿ, ಆಯಾ ಕಂಪನಿಗಳವರಿಂದ ಹಣ ವಸೂಲಿ ಮಾಡುವ ಜನರು ಇದ್ದಾರೆ. ಅದೇ ರೀತಿ ತುಂಬ ನಂಬಿಕೆಯಿಂದ ಭಾರತೀಯ ಅಧಿಕಾರಿಗಳ ಮನೆಗಳಲ್ಲಿ ಕೆಲಸ ಮಾಡಿಕೊಂಡು ಇರುವವರು ಸಹ ಇದ್ದಾರೆ. ಆದರೆ ಸ್ಥಳೀಯರನ್ನು ನಂಬುವುದು ಸವಾಲು ಎನ್ನುವ ಭಾರತೀಯರು ಹೆಚ್ಚೆಚ್ಚು ಸಿಗುತ್ತಾರೆ. ಇದು ಒಂದು ಮಾನಸಿಕ ಸ್ಥಿತಿ ಎಂಬುದು ನನ್ನ ಅನಿಸಿಕೆ. ಏಕೆಂದರೆ ಬಡತನ ಇರುವ ಕಡೆ ನಂಬಿಕೆ ಇಡುವ ಶ್ರೀಮಂತರು ಬಹಳ ಕಡಿಮೆ ಇರುತ್ತಾರೆ. ಉದಾಹರಣೆಗೆ ಮನೆಯಲ್ಲಿನ ಬೆಲೆಬಾಳುವ ವಸ್ತುಗಳೇನಾದರೂ ಕಳುವಾದರೆ ನೇರವಾಗಿ ಗುಮಾನಿಗೆ ಬೀಳುವವರು ಸಣ್ಣ ಸಂಬಳಕ್ಕೆ ಕೆಲಸ ಮಾಡುವ ಮನೆಗೆಲಸದವರೇ.

ಭಾರತದಿಂದ ಇಲ್ಲಿಗೆ ಬಟ್ಟೆ, ಔಷಧ, ಮೊಟ್ಟೆ, ಆಹಾರ ಪದಾರ್ಥಗಳು ಇತ್ಯಾದಿಗಳು ಆಮದು ಆಗುತ್ತವೆ. ಅಲ್ಲಿಂದ ಇಲ್ಲಿಗೆ ಬಂದು, ಉದ್ಯಮ- ವ್ಯವಹಾರ ಮಾಡುವವರು ಸಹ ಭಾರತದಿಂದಲೇ ಉದ್ಯೋಗಕ್ಕೆ ಜನರನ್ನು ಕರೆಸಿಕೊಳ್ಳುವುದಕ್ಕೆ ಆದ್ಯತೆ ಕೊಡುತ್ತಾರೆ. ಅದರಲ್ಲೂ ಮೇಲ್ ಸ್ತರದ ಉದ್ಯೋಗಗಳಿಗೆ ಭಾರತದಿಂದಲೇ ಕರೆಸಿಕೊಳ್ಳುತ್ತಾರೆ. ಸಂಬಳ ಸಹ ನೇರವಾಗಿ ಭಾರತದ ಬ್ಯಾಂಕ್ ಗಳಿಗೆ ಹಾಕುವುದಕ್ಕೆ ಆದ್ಯತೆ ಕೊಡುತ್ತಾರೆ. ಸ್ಥಳೀಯ ಬ್ಯಾಂಕ್ ಗಳಿಂದ ಜಗತ್ತಿನ ಬೇರೆ ಭಾಗಗಳಿಗೆ ಹಣ ವರ್ಗಾವಣೆ ಮಾಡುವುದಕ್ಕೋ ಇಲ್ಲಿ ಖಾತೆ ತೆರೆದು, ಹಣ ಇಡುವುದಕ್ಕೋ ಬೇರೆ ದೇಶಗಳಿಂದ ಬಂದ ಜನರು ಇಷ್ಟಪಡುವುದಿಲ್ಲ.

ಕಳೆದ ಕೆಲವು ತಿಂಗಳಿಂದ ಅಮೆರಿಕದ ಡಾಲರ್ ವಿರುದ್ಧ ಸ್ಥಳೀಯ ಕರೆನ್ಸಿ ‘ನೈರಾ’ ಕುಸಿಯುತ್ತಲೇ ಇದೆ. ಹಣದುಬ್ಬರವೂ ಜಾಸ್ತಿ ಇದೆ. ಆದರೆ ಈ ದೇಶ ಸಂಪನ್ಮೂಲಗಳ ದೃಷ್ಟಿಯಲ್ಲಿ ಬಹಳ ಶ್ರೀಮಂತವಾದದ್ದು. ಲೆಬನಾನ್ ನಂಥ ದೇಶಗಳಿಂದ ಬಂದು ಇಲ್ಲಿ ಕೆಲಸ ಮಾಡುವ ಜನರು ಸಹ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಅಂದ ಹಾಗೆ ಇಲ್ಲಿ ಶುಂಠಿ ಚೆನ್ನಾಗಿ ಸಿಗುತ್ತದೆ. ಅದೇ ರೀತಿ ತುಂಬ ಒಳ್ಳೆ ಕ್ವಾಲಿಟಿ ಗೋಡಂಬಿ ಕೇಜಿಗೆ ಅರು ನೂರು ರೂಪಾಯಿಗೆ ಸಿಕ್ಕಿಬಿಡುತ್ತದೆ. ಪೆಟ್ರೋಲ್ ಲೀಟರ್ ಗೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಅರವತ್ತು ರೂಪಾಯಿ.

ನೈಜೀರಿಯಾ ಗೆಳೆಯರಿಗೆ ಮೈಸೂರು ಪಾಕ್ ವಿತರಣೆ

ಕೀನ್ಯಾದಲ್ಲಿ ಪ್ರವಾಸೋದ್ಯಮ ಆದಾಯ ತರುವಂಥದ್ದು. ಆದರೆ ನೈಜೀರಿಯಾದಲ್ಲಿ ಆ ಥರದ್ದು ಏನೂ ಇಲ್ಲ. ಬೆಂಗಳೂರಿನಲ್ಲಿ ಆಫ್ರಿಕಾ ಖಂಡದ ಯಾವುದೇ ದೇಶದ ಡ್ರಗ್ ಪೆಡ್ಲರ್ ಸಿಕ್ಕರೂ ನೈಜೀರಿಯನ್ ಅಂದುಬಿಡ್ತಾರೆ. ಇದು ಹೇಗೆ ಗೊತ್ತಾ? ಉತ್ತರ ಭಾರತದಲ್ಲಿ ದಕ್ಷಿಣ ರಾಜ್ಯದ ಯಾರನ್ನೇ ಕಂಡರೂ ‘ಮದ್ರಾಸಿ’ ಅನ್ನುವ ಹಾಗೆ. ಮುಂದಿನ ದಶಕಗಳಲ್ಲಿ ನೈಜೀರಿಯಾ ದೇಶವು ಹೂಡಿಕೆಗೆ ಉತ್ತಮ ಸ್ಥಳ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ. ಅದಕ್ಕೆ ಇಲ್ಲಿ ಸಾಕ್ಷ್ಯಗಳು ಸಹ ಸಿಗುತ್ತವೆ. ಅಂದ ಹಾಗೆ ಐಫೋನ್‌ಗಳ ಬೆಲೆ ಭಾರತಕ್ಕಿಂತ ಇಲ್ಲಿ ಕಡಿಮೆ. ನಾನು ಇಲ್ಲಿಯೇ ಖರೀದಿ ಮಾಡಿದ್ದು.

ಈ ಸಲ ರಜಾ ಸಲುವಾಗಿ ಬೆಂಗಳೂರಿಗೆ ಬಂದಿದ್ದಾಗ ಗಾಂಧೀಬಜಾರಿನ ಲಕ್ಷ್ಮೀವೆಂಕಟೇಶ್ವರ ಸ್ವೀಟ್ಸ್ ನಿಂದ ಮೈಸೂರ್ ಪಾಕ್ ಇಲ್ಲಿಗೆ ತಗೊಂಡು ಬಂದಿದ್ದೆ. ಇಲ್ಲಿ ನನ್ನ ಜೊತೆಗೆ ಕೆಲಸ ಮಾಡುವವರು ಬಹಳ ಖುಷಿಯಾಗಿ ತಿಂದರು. ಇನ್ನು ನಮ್ಮೆ ಷೆಫ್ (ಅಡುಗೆ ಮೇಲ್ವಿಚಾರಕರು) ನೈಜೀರಿಯಾದಿಂದ ಗೋಡಂಬಿ ಹತ್ತು ಕೇಜಿ ತಗೊಂಡು ಹೋಗಿ ಅಂದಿದ್ದರು, ಅಷ್ಟು ತಗೊಂಡು ನಾನೇನು ಮಾಡಲಿ ಅಂತ ಸುಮ್ಮನಾಗಿದ್ದೆ. ಈ ದೇಶದ ಬಗ್ಗೆ ಇನ್ನೊಂದಿಷ್ಟು ಬರೆಯಬೇಕು ಅಂತ ಈಗ ಅನ್ನಿಸ್ತಿದೆ.

ನೈಜೀರಿಯಾದಲ್ಲಿ ಮಹಾನವಮಿ ಸಂಭ್ರಮ
ನೈಜೀರಿಯಾದಲ್ಲಿ ಮಹಾನವಮಿ ಸಂಭ್ರಮ

ಬರಹ: ಶ್ರೀಹರ್ಷ ದ್ವಾರಕನಾಥ್, ಲಾಗೋಸ್, ನೈಜೀರಿಯಾ

Whats_app_banner