Money Matter: ದುಡ್ಡನ್ನು ಹೇಗೆಲ್ಲಾ ಮಾಡ್ಬೋದು? ಇಲ್ಲಿವೆ ಹಣ ಸೇವಿಂಗ್ಸ್ ಮಾಡೋಕೆ ಗೋಲ್ಡನ್ ಟಿಪ್ಸ್​-how to make money and savings in your life here are golden tips to save money finance tips in kannada prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Money Matter: ದುಡ್ಡನ್ನು ಹೇಗೆಲ್ಲಾ ಮಾಡ್ಬೋದು? ಇಲ್ಲಿವೆ ಹಣ ಸೇವಿಂಗ್ಸ್ ಮಾಡೋಕೆ ಗೋಲ್ಡನ್ ಟಿಪ್ಸ್​

Money Matter: ದುಡ್ಡನ್ನು ಹೇಗೆಲ್ಲಾ ಮಾಡ್ಬೋದು? ಇಲ್ಲಿವೆ ಹಣ ಸೇವಿಂಗ್ಸ್ ಮಾಡೋಕೆ ಗೋಲ್ಡನ್ ಟಿಪ್ಸ್​

How To Make Money and Savings: ನಮ್ಮೆಲ್ಲರಿಗೂ ಬೇಕಿರುವ ಮತ್ತು ಬೇಕಾದ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಹಣ ಅಗತ್ಯ. ಹಾಗಾದರೆ ಅದನ್ನು ಉಳಿಸಿಕೊಳ್ಳುವುದು, ಹೇಗೆಲ್ಲಾ ಹಣ ಮಾಡಬಹುದು ಎಂಬುದಕ್ಕೆ ಇಲ್ಲಿದೆ ಕೆಲವೊಂದಿಷ್ಟು ಸಲಹೆ.

ದುಡ್ಡನ್ನು ಹೇಗೆಲ್ಲಾ ಮಾಡ್ಬೋದು? ಇಲ್ಲಿವೆ ಹಣ ಸೇವಿಂಗ್ಸ್ ಮಾಡೋಕೆ ಗೋಲ್ಡನ್ ಟಿಪ್ಸ್​
ದುಡ್ಡನ್ನು ಹೇಗೆಲ್ಲಾ ಮಾಡ್ಬೋದು? ಇಲ್ಲಿವೆ ಹಣ ಸೇವಿಂಗ್ಸ್ ಮಾಡೋಕೆ ಗೋಲ್ಡನ್ ಟಿಪ್ಸ್​

Money Matters: ಎಲ್ಲರೂ ಕಷ್ಟಪಟ್ಟು ದುಡಿಯುವುದು ತಮ್ಮ ಜೀವನದ ಗುರಿ ಮತ್ತು ಕನಸು ಈಡೇರಿಸಿಕೊಳ್ಳಲು. ತಮ್ಮ ಜೀವನಶೈಲಿ ಬದಲಿಸಿಕೊಳ್ಳಲು. ಆದರೆ, ಸಂಬಂಳ ಬಂತೆಂದರೆ ಇಎಂಐ, ಲೋನ್ ಕಟ್ಟು, ರೇಷನ್, ಅದು-ಇದು ಎಂದು ಖರ್ಚಿನ ಮೇಲೆ ಖರ್ಚು ಬರುತ್ತಿರುತ್ತದೆ. ಹೀಗಾಗಿ, ಮಧ್ಯಮ ವರ್ಗದವರ ಕನಸು ಆರಕ್ಕೇರದ, ಮೂರಕ್ಕಿಳಿಯದ ಪರಿಸ್ಥಿತಿ ಆಗಿದೆ. ಮಧ್ಯಮ ವರ್ಗದವರ ಕನಸು ಯಾವಾಗಲೂ ಶ್ರೀಮಂತರಿಗಿಂತ ದೊಡ್ಡದು. ಯಾವಾಗಲೂ ಐಷರಾಮಿ ಜೀವನ ನಡೆಸಬೇಕು ಎನ್ನುವ ಬಯಕೆಯಲ್ಲೇ ಹಗಲಿರುಳು ಕೆಲಸ ಮಾಡಿ ತಮ್ಮ ಜೀವನ ಸಾಗಿಸುತ್ತಾರೆ. ಆದರೆ ಸಂಪಾದಿಸಿದ ಹಣ ಹೇಗೆ ಖರ್ಚು ಮಾಡಬೇಕು ಎನ್ನುವುದೇ ತಿಳಿದಿರಲ್ಲ. ಹೇಗೆ ದುಡ್ಡು ಉಳಿಸಬೇಕು ಎನ್ನುವ ಐಡಿಯಾವೂ ಇರುವುದಿಲ್ಲ. ಅಂತಹವರಿಗಾಗಿ ಇಲ್ಲಿವೆ ಗೋಲ್ಡನ್ ಟಿಪ್ಸ್.

ಮಿತಿಗಿಂತ ಖರ್ಚು ಬೇಡ

ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ಗಾದೆ ಮಾತು ಎಲ್ಲರಿಗೂ ನೆನಪಾಗಬೇಕು. ನಿಮ್ಮ ಪರಸ್ಪರರ ಜೀವನಶೈಲಿ ಚೆನ್ನಾಗಿದೆ ಎನ್ನುವ ಕಾರಣಕ್ಕೆ ನೀವು ಸಹ ಅಂತಹದ್ದೇ ಕನಸು ಕಾಣುತ್ತೀರಿ. ಆದರೆ ಆ ಕನಸು ಈಡೇರಿಸಿಕೊಳ್ಳಲು ನಿಮ್ಮ ಮಿತಿಗಿಂತಲೂ ಹಣ ವ್ಯಯಿಸುತ್ತಿದ್ದೀರಿ. ದುಡ್ಡಿದೆ ಎಂದು ತಮ್ಮ ಮಿತಿಗಿಂತಲೂ ಹೆಚ್ಚು ಖರ್ಚು ಮಾಡಬಾರದು. ಅಗತ್ಯಕ್ಕೆ ತಕ್ಕಂತೆ ಬಳಸಿ, ಉಳಿಸಿದ್ದನ್ನು ಕೂಡಿಡಬೇಕು.

ಸಮಯ ನಿರ್ವಹಣೆ

ಕೆಲವೊಬ್ಬರು ಟೈಮಿದೆ ಬಿಡು, ಮಾಡೋಣ ಎನ್ನುವ ಮಾತನ್ನು ಹೇಳುವುದನ್ನು ನಾವು ಕೇಳಿದ್ದೇವೆ. ಇದು ದೊಡ್ಡ ತಪ್ಪು. ನೀವು ಅಂದುಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ ಮುಗಿಸಬೇಕು. ಸಮಯ ಎಂಬುದು ಬಂಗಾರದ ಬೆಳೆ, ಅದಕ್ಕೆ ನಾವು ಕೊಡುವ ಗೌರವವೇ, ನಮ್ಮ ಮುಂದಿನ ದಿನಗಳಲ್ಲಿ ತಲೆ ಎತ್ತಿ ಮೆರೆಸುವಂತೆ ಮಾಡುತ್ತದೆ. ಹಾಗಾಗಿ ಯಾವುದೇ ವಿಷಯದಲ್ಲಿ, ಕೆಲಸದಲ್ಲಿ ಸಮಯವನ್ನು ಎಂದೂ ವ್ಯರ್ಥ ಮಾಡಬೇಡಿ.

ಸೋಮಾರಿತನ ಬಿಡಬೇಕು

ಒಂದಷ್ಟು ಮಂದಿ ತಮಗೆ ದುಡ್ಡೂ ಬೇಕು, ಜೊತೆಗೆ ಆರಾಮಾಗಿಯೂ ಇರಬೇಕು ಎಂಬ ಕಲ್ಪನೆಯೊಂದಿಗೆ ಬದುಕುತ್ತಿದ್ದಾರೆ. ಆದರೆ, ಕಷ್ಟ ಪಟ್ಟು ಕೆಲಸ ಮಾಡಲು ಮುಂದಾಗುವುದಿಲ್ಲ. ಇದು ತುಂಬಾ ದೊಡ್ಡ ತಪ್ಪು. ಇದ್ದಲ್ಲಿಗೇ ದುಡ್ಡು ಬರಬೇಕು ಎಂಬ ಭಾವನೆ ಅವರದ್ದು. ಇದನ್ನೇ ಸೋಮಾರಿತನ ಎನ್ನುತ್ತಾರೆ. ನಾವು ಎಂದು ಕಷ್ಟಪಟ್ಟು ಕೆಲಸ ಮಾಡುತ್ತೇವೋ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಹಾಗಾಗಿ ಸೋಮಾರಿತನ ಮೊದಲು ಬಿಟ್ಟು ಶ್ರಮವಹಿಸಿ.

ಬರೀ ವೇತನೇ ಸಾಲದು

ಉದ್ಯೋಗ ಮಾಡಿಕೊಂಡು ಬರುವ ವೇತನದಲ್ಲೇ ಜೀವನ ನಡೆಸೋಣ ಎನ್ನುವುದು ದೊಡ್ಡ ಮೂರ್ಖತನ. ನೀವು ವೇತನದಿಂದ ನೀವಷ್ಟೇ ಸುಖ-ನೆಮ್ಮದಿ ಕಾಣಲಿದ್ದೀರಿ. ಆದರೆ ನಿಮ್ಮ ಮಕ್ಕಳು ಅಥವಾ ನಿಮ್ಮ ಭವಿಷ್ಯವೇ ಉತ್ತಮವಾಗಿ ರೂಪುಗೊಳ್ಳುವುದಿಲ್ಲ. ನಿಮಗೂ ವಯಸ್ಸು ಆದಂತೆ ದುಡಿಯುವ ಶಕ್ತಿ ಕಡಿಮೆಯಾಗುತ್ತದೆ. ಆಗ ಎಲ್ಲಿಂದ ದುಡ್ಡು ಬರಲು ಸಾಧ್ಯ ಹೇಳಿ? ಬರಿ ವೇತನದ ಮೇಲೆಯೇ ಬದುಕು ಸಾಗಿಸುವ ಬದಲು, ಚಿಕ್ಕಪುಟ್ಟ ಬಿಸಿನೆಸ್ ಆರಂಭಿಸಬೇಕು. ಇಂತಹದ್ದೇ ಎಂದು ಏನಿಲ್ಲ. ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ತಕ್ಕಂತೆ ವ್ಯವಹಾರ ನಡೆಸಬೇಕು. ಹಾಗಂತ ಸಾಲ ಮಾಡಿ ಅಲ್ಲ.

ಬೇಕಾಬಿಟ್ಟಿ ಖರ್ಚು ಮೊದಲು ಬಿಡಿ

ಇಲ್ಲಿನ ಮೊದಲು ಬಲಿಪಶುಗಳು ಬೇರೆ ಯಾರೂ ಅಲ್ಲ, ಯುವಕರು. ಭವಿಷ್ಯದ ಅರಿವೇ ಇಲ್ಲದೆ ತಾನು ದುಡಿದಿದ್ದನ್ನು ಬೇಕಾಬಿಟ್ಟಿ ಖರ್ಚು ಮಾಡಿಬಿಡುತ್ತಾರೆ. ಶಾಪಿಂಗ್, ಕ್ರೆಡಿಟ್ ಕಾರ್ಡ್, ಔಟಿಂಗ್, ದುಂದು ವೆಚ್ಚ.. ಹೀಗೆ ಪ್ರತಿಯೊಂದಕ್ಕೂ ಖರ್ಚು ಮಾಡಿ ಎಂಜಾಯ್ ಮಾಡುತ್ತಾರೆ. ಸೇವಿಂಗ್ಸ್ ಎಂಬುದನ್ನೇ ಮಾಡದೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಖಾಲಿ ಜೇಬನ್ನಿಟ್ಟುಕೊಂಡು ಕೊರಗುತ್ತಾರೆ. ಖರ್ಚು ಮಾಡಬೇಕು, ಅಂದರೆ ನಿಮ್ಮ ಅಗತ್ಯ ಏನಿದೆಯೋ ಅದಕ್ಕಷ್ಟೆ. ಒಂದು ವೇಳೆ ಖರ್ಚು ಮಾಡದಿದ್ದರೆ ಜಿಪುಣ ಎನ್ನುತ್ತಾರೆ. ಆದರೆ ಅಂತಹವರೇ ಮುಂದೇ ದುಡ್ಡಿನ ರಾಜರಾಗುತ್ತಾರೆ ಎನ್ನುವುದು ಮರೆಯಬೇಡಿ.

ನೆರೆಹೊರೆಯವರಿಂದ ಪಾಠ ಕಲಿಯಿರಿ

ನಿಮ್ಮ ನೆರೆಹೊರೆಯವರಿಂದಲೂ ನೀವು ಪಾಠ ಕಲಿಯಬೇಕು. ಏಕೆಂದರೆ ಅವರು ಬೆಳೆಯುತ್ತಿದ್ದಾರೆ, ಅವರು ಚೆನ್ನಾಗಿ ದುಡ್ಡು ಮಾಡುತ್ತಿದ್ದಾರೆ, ಹೇಗೆ? ಯಾವ ಮಾರ್ಗ ಎಂಬುದನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳಬೇಕು. ಇಲ್ಲವೇ ಅವರ ನಡೆ ನುಡಿ, ಅವರ ಹಣ ಖರ್ಚು ಮಾಡುವ ವಿಧಾನ, ಅವರ ಕಷ್ಟ-ಕಾರ್ಪಣ್ಯ ಎಲ್ಲವನ್ನೂ ಅಚ್ಚುಕಟ್ಟಾಗಿ ಗಮನಿಸಿ. ನೀವು ಅವರಂತಾಗಲೂ ಯೋಜನೆ ರೂಪಿಸಿ. ಆಗ ನಿಮ್ಮ ಕೈಯಲ್ಲೂ ದುಡ್ಡು ಹರಿದಾಡದಿದ್ದರೆ ಕೇಳಿ.

ವೇತನದಲ್ಲಿ ಉಳಿತಾಯ ಅಗತ್ಯ

ನಿಮಗೆ ಬರುವ ವೇತನದಲ್ಲಿ ಉಳಿತಾಯ ಮಾಡುವುದು ಅಗತ್ಯ. ಮನೆಯ ಖರ್ಚು, ತಿಂಗಳ ಖರ್ಚು, ನಿಮಗೆ, ಕುಟುಂಬಕ್ಕೆ ಎಷ್ಟು ಬೇಕು? ಬೇಕು-ಬೇಡಗಳ ಆಲೋಚನೆ ನಡೆಸಿ ಉಳಿತಾಯ ನಡೆಸಬೇಕು. ಅಂದರೆ ನಿಮ್ಮ ವೇತನದಲ್ಲಿ ಶೇ 25ರಷ್ಟು ಉಳಿಸಬೇಕು. ಇದು ಪ್ರತಿ ತಿಂಗಳಿಗೂ ಹೆಚ್ಚಾಗಬೇಕು. ನಿಮ್ಮ ಖರ್ಚಿನ ಮಿತಿ ಇರಲಿ. ಎಷ್ಟು ಉಳಿತಾಯ ಮಾಡುತ್ತೀರೋ ಅದೇ ನಿಮ್ಮ ಕಷ್ಟದಲ್ಲಿ ಕೈ ಹಿಡಿಯಲಿದೆ. 

ಪ್ರತಿಷ್ಠೆ ಕೈ ಬಿಡಿ

ನೀವು ಆಯಾ ತಿಂಗಳಿಗೆ ಸಂಬಂಧಿಸಿ ಒಂದು ಬಜೆಟ್ ಸಿದ್ದಪಡಿಸಿ. ಹಾಗಂತ ಪ್ರತಿ ತಿಂಗಳು ಒಂದೇ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೆಚ್ಚು ಕಡಿಮೆ ಖರ್ಚಿ ಇದ್ದೇ ಇರುತ್ತದೆ. ಒಂದು ನಿರ್ದಿಷ್ಟ ಬಜೆಟ್ ಫಿಕ್ಸ್ ಮಾಡಿಕೊಂಡರೆ, ಖರ್ಚಿನ ಮೇಲೆ ಹಿಡಿತ ಸಿಗುತ್ತದೆ. ಅಯ್ಯೋ ಯಾರೋ ಏನೋ ಅಂದುಕೊಳ್ಳುತ್ತಾರೆ? ನಮಗೆ ಪ್ರತಿಷ್ಠೆ ಮುಖ್ಯ ಎನ್ನುವುದು ದೊಡ್ಡ ತಪ್ಪು. ನಿಮ್ಮ ಪ್ರತಿಷ್ಠೆ ಕೈಬಿಡಿ. ದುಡ್ಡಿನ ಅವಶ್ಯಕತೆ ಇದ್ದಾಗ ಯಾರೋ ನಿಮಗೆ ಸಹಾಯ ಮಾಡೋದಿಲ್ಲ. ನಾವು ಕೂಡಿಟ್ಟ ದುಡ್ಡೇ ನಮ್ಮನ್ನು ರಕ್ಷಿಸುತ್ತದೆ.

ನಮಗೆ ಸಾಕಪ್ಪ ಅನ್ನೋ ಅಹಂ ಬೇಡ

ಕೆಲವರು ಕಷ್ಟಪಟ್ಟು ದುಡಿತಾರೆ, ಉತ್ತಮವಾಗಿ ಉಳಿತಾಯ ಕೂಡ ಮಾಡಿರುತ್ತಾರೆ. ಅವರಲ್ಲಿ ಸಾಕಷ್ಟು ಹಣವೂ ಇರುತ್ತದೆ. ಹೀಗಿದ್ದಾಗ ದುಡ್ಡಿದೆ ಅನ್ನೋ ಅಹಂಗೆ ಗುರಿಯಾಗಿ ಕೆಲಸ ಅಥವಾ ಇನ್ನಿತರ ಸೇವೆಗಳಿಗೆ ದೂರವಾಗಿ ಸೋಮಾರಿಗಳಾಗುತ್ತಾರೆ. ಇದು ಮುಂದೊಂದಿನ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ.

ಬೆಳಿಗ್ಗೆ ಬೇಗ ಏಳಬೇಕು, ಪ್ರಯತ್ನ ನಡೆಸಬೇಕು

ಇದು ಅತಿ ಮುಖ್ಯವಾದ ಅಂಶ. ನಾವು ಬೆಳಿಗ್ಗೆ ಬೇಗ ಏಳಬೇಕು. ಏಕೆಂದರೆ ನಾವು ಏನೇ ಮಾಡಲು ಸಮಯ ಎಂಬುದು ಹೆಚ್ಚಾಗಿ ಸಿಗುತ್ತದೆ. ಏನು ಮಾಡಬಹುದು ಎಂಬುದನ್ನು ಯೋಚಿಸಲು ಇದೇ ಉತ್ತಮ ಸಮಯ. ಸದಾ ಪಾಸಿಟಿವ್ ಆಗಿರಬೇಕು. ಜೊತೆಗೆ ಹೆಚ್ಚಿನ ಪ್ರಯತ್ನ ನಡೆಸಬೇಕು. ವ್ಯಾಯಾಯ, ಧ್ಯಾನ.. ಹೀಗೆ ಉತ್ತಮ ಆರೋಗ್ಯಕ್ಕೂ ನಾವು ಕಸರತ್ತು ನಡೆಸಬೇಕು.

ಶ್ರೀಮಂತರು, ಶ್ರೀಮಂತರಾಗಿಯೇ ಇರೋದು ಯಾಕೆ?

ಶ್ರೀಮಂತರೇ ಹೆಚ್ಚು ದುಡ್ಡು ಮಾಡೋದು ಯಾಕೆ? ಈ ಪ್ರಶ್ನೆ ಪ್ರತಿ ಮಧ್ಯಮ ವರ್ಗದ ಜನರಲ್ಲೂ ಕಾಡುತ್ತಿರುತ್ತದೆ. ಅವರು ತಮ್ಮಲ್ಲಿರುವ ಹಣವನ್ನು ಸುಮ್ಮನೆ ಇಟ್ಟುಕೊಳ್ಳುವುದಿಲ್ಲ. ಏನಾದರೂ ಒಂದು ಬಿಸಿನೆಸ್ ಮಾಡುತ್ತಾರೆ, ಹೂಡಿಕೆ ಮಾಡುತ್ತಾರೆ, ಪ್ರಸ್ತುತ ಟ್ರೆಂಡ್ ಏನಿದೆ? ಏನು ಮಾಡಿದರೆ ಜನರು ಇಷ್ಟಪಡುತ್ತಾರೆ ಎನ್ನುವುದರ ಕುರಿತು ಪರಿಶೋಧಿಸಿ ಅದರ ಮೇಲೆ ಬಂಡವಾಳ ಹೂಡುತ್ತಾರೆ. ಇದು ರೂಪಾಯಿಗೆ ರೂಪಾಯಿ ಲಾಭ ತಂದುಕೊಡುತ್ತದೆ. ಇನ್ವೆಸ್ಟ್ ಮೇಲೆ ಇನ್ವೆಸ್ಟ್ ಮಾಡುತ್ತಲೇ ಇರುತ್ತಾರೆ. ಇದೇ ಕಾರಣಕ್ಕೆ ದುಡ್ಡು ಅವರಿಂದ ದೂರ ಹೋಗುವುದಿಲ್ಲ.

ಹೂಡಿಕೆ ಮಾಡುವುದು ಅನಿವಾರ್ಯ

ನಿಮ್ಮಲ್ಲಿರುವ ಹಣವನ್ನು ಹೂಡಿಕೆ ಮಾಡಬೇಕು, ಹಾಗಂತ ಎಲ್ಲವನ್ನೂ ಅಲ್ಲ. ಶೇ 50ರಷ್ಟು ಭಾಗ. ಹೂಡಿಕೆಗೆ ವಿವಿಧ ಮಾರ್ಗಗಳಿವೆ. ಷೇರು ಮಾರುಕಟ್ಟೆ, ಚಿನ್ನಾಭರಣ, ಕೃಷಿ, ಸೈಟ್, ಜಮೀನು, ಬ್ಯಾಂಕುಗಳಲ್ಲಿ ಎಫ್​ಡಿ, ಆರ್​​ಡಿ.. ಹೀಗೆ ಪ್ರತಿಯೊಂದರಲ್ಲೂ ಹೂಡಿಕೆ ಮಾಡಬಹುದು. ಆದರೆ ನೀವು ಯಾವ ವಿಭಾಗದಲ್ಲಿ ಪಂಟರ್ ಎಂಬುದನ್ನು ಆಧರಿಸಿ ಹೂಡಿಕೆ ಮಾಡಬೇಕು. ಆದರೆ ಇಲ್ಲಿ ಸಾಕಷ್ಟು ಅಧ್ಯಯನ, ಸಂಶೋಧನೆ, ಯಾವುದು ಉತ್ತಮ, ಯಾವುದು ಲಾಭ ತರುತ್ತದೆ.. ಹೀಗೆ ಪ್ರತಿಯೊಂದನ್ನು ಯೋಚಿಸಿಯೇ ಮುಂದಿನ ನಿರ್ಧಾರ ಕೈಗೊಳ್ಳಬೇಕು.

ಶಿಸ್ತು, ತಾಳ್ಮೆ, ಸಂಯಮ

ಈ ಮೇಲೆ ಹೇಳಿದ್ದೆಲ್ಲಾ ಒಂದು ತಕ್ಕಡಿಯಲ್ಲಿ ತೂಗಿದರೆ, ಶಿಸ್ತು-ತಾಳ್ಮೆ-ಸಂಯಮ ಇವು ಮೂರು ಒಂದು ತಕ್ಕಡಿಯಲ್ಲಿ ತೂಗುತ್ತವೆ. ಮಾಡುವ ಕೆಲಸದಲ್ಲಿ ಇವು ಮೂರನ್ನು ಅಳವಡಿಸಿಕೊಂಡರೆ ನಿಮ್ಮ ಭವಿಷ್ಯವು ಬಂಗಾರವಾಗುತ್ತದೆ. ಇವತ್ತು ಉಳಿತಾಯ ಮಾಡಿದ ನಾಳೆಯೇ ದೊಡ್ಡದಾಗಬೇಕು ಅಂದರೆ ಆಗದು, ಅದಕ್ಕೆ ತಾಳ್ಮೆ ಬೇಕು. ಮತ್ತು ಆ ಹಣವನ್ನು ಕೂಡಿಡುವ ಶಿಸ್ತನ್ನೂ ಸರಿಯಾಗಿ ಪಾಲಿಸಬೇಕು. ಇದೆನ್ನೆಲ್ಲಾ ಮಾಡಲು ಸಂಯಮ ಇರಬೇಕು. ಹೀಗಿದ್ದಾಗ ಮಾತ್ರ ನಿಮ್ಮ ದುಡ್ಡು ಎರಡುಪಟ್ಟು ಆಗಲು ಸಾಧ್ಯ.

ಹಣ ಸಂಪಾದಿಸಲು ಒಳ್ಳೆಯ ಮಾರ್ಗಗಳನ್ನು ಹುಡುಕಬೇಕೇ ಹೊರತು ಕೆಟ್ಟ ದಾರಿಗಳನ್ನಲ್ಲ. ಕೆಟ್ಟ ದಾರಿಯಲ್ಲಿ ಸಂಪಾದಿಸಿದ ದುಡ್ಡು ಎಂದೂ ಶಾಶ್ವತವಲ್ಲ.. ನೆನಪಿರಲಿ.

mysore-dasara_Entry_Point