Post Office Schemes: ಮನೆಯಲ್ಲೇ ಕೂತು ತಿಂಗಳಿಗೆ 20,000 ಗಳಿಸಬೇಕಾ; ಹಾಗಿದ್ದರೆ ಇಲ್ಲಿ ಹೂಡಿಕೆ ಮಾಡಿ!
Post Office Schemes: ನಿವೃತ್ತಿಯ ವಯಸ್ಸಿನಲ್ಲಿ ಹಣಕಾಸಿನ ಸಮಸ್ಯೆ ಎದುರಾಗಬಾರದೇ? ಹಾಗಿದ್ದರೆ ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿ. ಇಲ್ಲಿ ಬ್ಯಾಂಕ್ ಎಫ್‌ಡಿಗಿಂತಲೂ ಹೆಚ್ಚು ಬಡ್ಡಿ ಸಿಗುತ್ತದೆ.
ಪ್ರತಿಯೊಬ್ಬರೂ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸಲು ಬಯಸುತ್ತಾರೆ. ಆದರೆ ಕೆಲವರಿಗೆ ಅದು ಸಾಧ್ಯವಾಗಲ್ಲ. ತಮ್ಮ ಜೀವನದುದ್ದಕ್ಕೂ ದುಡಿದು ವೃದ್ಧಾಪ್ಯದಲ್ಲಿ ಹಣವನ್ನು ಕೂಡಿಡುವುದೇ ದೊಡ್ಡ ಸಾಹಸ. ಹೀಗಾಗಿ ಇನ್ನೊಬ್ಬರ ಮೇಲೆ ಆಧಾರವಾಗುವ ಅನಿವಾರ್ಯ ಎದುರಾಗುತ್ತದೆ. ಇದು ಸಾಕಷ್ಟು ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಅಂತಹ ಸಮಸ್ಯೆ ಎದುರಾಗಬಾರದು ಅಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ವೃದ್ಧಾಪ್ಯದಲ್ಲಿ ಕೂತಲ್ಲೇ ತಿಂಗಳಿಗೆ 20 ಸಾವಿರ ಪಡೆಯಿರಿ.
ವೃದ್ಧಾಪ್ಯದಲ್ಲಿ ಇನ್ನೊಬ್ಬರ ಆಧಾಯದ ಮೇಲೆ ಆಧಾರವಾಗದೆ, ನಿಯಮಿತ ಆದಾಯ ಗಳಿಸಬೇಕು ಅಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಅದೇ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್. ಇದು ವಿಶೇಷವಾಗಿ ಹಿರಿಯ ನಾಗರಿಕರಿಗೆ ಮಾಡಲಾದ ಉಳಿತಾಯ ಯೋಜನೆ. ಈ ಹೂಡಿಕೆಯ ಮೇಲಿನ ವಾರ್ಷಿಕ ಬಡ್ಡಿಯು ಶೇ 8.2. ಇದು ಬ್ಯಾಂಕ್ ಎಫ್‌ಡಿಗಿಂತಲೂ ಹೆಚ್ಚು. ಈ ಯೋಜನೆಯ ಅವಧಿ ಎಷ್ಟು? ಎಷ್ಟು ರೂಪಾಯಿ ಹೂಡಿಕೆ ಮಾಡಬೇಕು? ಯಾವ ವಯಸ್ಸಿನಲ್ಲಿ ಕಟ್ಟಬೇಕು? ಇಲ್ಲಿದೆ ಮಾಹಿತಿ
1000 ರೂಪಾಯಿಗಳಿಂದ ಹೂಡಿಕೆ ಪ್ರಾರಂಭಿಸಿ
ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಬಹುದಾದ ಅತ್ಯುತ್ತಮ ಯೋಜನೆಗಳಲ್ಲಿ ಹಿರಿಯ ನಾಗರಿಕ ಉಳಿತಾಯ ಯೋಜನೆಯೂ ಒಂದು. ಇದರಲ್ಲಿ ಖಾತೆ ತೆರೆದು 1,000 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು. ಅಲ್ಲದೆ, ಗರಿಷ್ಠ ಹೂಡಿಕೆ ಮಿತಿಯನ್ನು 30 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ. ಈ ಯೋಜನೆಯು ನಿವೃತ್ತಿಯ ನಂತರ ಆರ್ಥಿಕವಾಗಿ ಸಮೃದ್ಧವಾಗಿ ಉಳಿಯಲು ನೆರವಾಗುತ್ತದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಯಾವುದೇ ವ್ಯಕ್ತಿ ಅಥವಾ ಸಂಗಾತಿಯೊಂದಿಗೆ ಜಂಟಿ ಖಾತೆಯನ್ನು ತೆರೆಯಬಹುದು.
ಸ್ಕೀಮ್‌ನ ಮೆಚ್ಯೂರಿಟಿ ಅವಧಿಯು 5 ವರ್ಷಗಳು
ಈ ಸ್ಕೀಮ್‌ನಲ್ಲಿ 5 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಆದಾಗ್ಯೂ, ಈ ಅವಧಿಯ ಮೊದಲು ಈ ಖಾತೆಯನ್ನು ಮುಚ್ಚಿದ್ದರೆ, ನಿಯಮಗಳ ಪ್ರಕಾರ ಖಾತೆದಾರರು ದಂಡ ಪಾವತಿಸಬೇಕಾಗುತ್ತದೆ. ಯಾವುದೇ ಹತ್ತಿರದ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಬಹುದು. ಖಾತೆ ತೆರೆಯುವ ಸಮಯದಲ್ಲಿ ವಿಆರ್‌ಎಸ್ ತೆಗೆದುಕೊಳ್ಳುವ ವ್ಯಕ್ತಿಯ ವಯಸ್ಸು 55 ವರ್ಷಕ್ಕಿಂತ ಹೆಚ್ಚು ಮತ್ತು 60 ವರ್ಷಕ್ಕಿಂತ ಕಡಿಮೆ ಇರುವಂತೆ, ನಿವೃತ್ತ ರಕ್ಷಣಾ ಸಿಬ್ಬಂದಿಯ ವಯಸ್ಸು 50 ವರ್ಷಕ್ಕಿಂತ ಹೆಚ್ಚು ಮತ್ತು 60 ವರ್ಷಕ್ಕಿಂತ ಕಡಿಮೆ ಇರಬಹುದು, ಆದಾಗ್ಯೂ, ಇದಕ್ಕಾಗಿ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಬ್ಯಾಂಕ್ ಎಫ್‌ಡಿಗಿಂತಲೂ ಹೆಚ್ಚಿನ ಆದಾಯ
ಒಂದೆಡೆ, ಪೋಸ್ಟ್ ಆಫೀಸ್ ಹಿರಿಯ ನಾಗರಿಕ ಉಳಿತಾಯ ಯೋಜನೆಗೆ ಶೇ 8.2ರಷ್ಟು ಬಡ್ಡಿ ನೀಡಲಾಗುತ್ತಿದೆ. ಆದರೆ ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರಿಗೆ ಎಫ್‌ಡಿ ಮಾಡಲು ಶೇ 7 ರಿಂದ ಶೇ 7.75ರಷ್ಟು ಬಡ್ಡಿ ಒದಗಿಸುತ್ತಿವೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಐದು ವರ್ಷಗಳ ಎಫ್‌ಡಿಯಲ್ಲಿ ಹಿರಿಯ ನಾಗರಿಕರಿಗೆ ಶೇಕಡಾ 7.50, ಐಸಿಐಸಿಐ ಬ್ಯಾಂಕ್ ಶೇಕಡಾ 7.50, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಶೇ 7 ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ವಾರ್ಷಿಕ 7.50ರಷ್ಟು ಬಡ್ಡಿ ನೀಡುತ್ತಿದೆ.
1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳು
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಖಾತೆದಾರರೂ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತಾರೆ. ಹಿರಿಯ ನಾಗರಿಕರ ಯೋಜನೆಯಲ್ಲಿ ಹೂಡಿಕೆ ಮಾಡುವ ವ್ಯಕ್ತಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಮೊತ್ತ ಪಾವತಿಸಲಾಗುತ್ತದೆ. ಇದರಲ್ಲಿ ಪ್ರತಿ ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಜನವರಿ ತಿಂಗಳ ಮೊದಲ ದಿನದಂದು ಬಡ್ಡಿಯನ್ನು ಪಾವತಿಸಲಾಗುತ್ತದೆ.
ಮೆಚ್ಯೂರಿಟಿ ಅವಧಿಯು ಪೂರ್ಣಗೊಳ್ಳುವ ಮೊದಲು ಖಾತೆದಾರನು ಮರಣ ಹೊಂದಿದರೆ, ನಂತರ ಖಾತೆಯನ್ನು ಮುಚ್ಚಲಾಗುತ್ತದೆ. ಅದರ ಸಂಪೂರ್ಣ ಮೊತ್ತವನ್ನು ನಾಮಿನಿಗೆ ಹಸ್ತಾಂತರ ಮಾಡಲಾಗುತ್ತದೆ. ಹೂಡಿಕೆದಾರರು ಸರ್ಕಾರಿ ಯೋಜನೆಯಲ್ಲಿ 1,000 ರೂಪಾಯಿಯಿಂದ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಗರಿಷ್ಠ 30 ಲಕ್ಷ ರೂ. ಠೇವಣಿ ಮೊತ್ತವನ್ನು 1,000 ರೂಪಾಯಿ ಗುಣಕಗಳಲ್ಲಿ ನಿರ್ಧರಿಸಲಾಗುತ್ತದೆ. ತಿಂಗಳಿಗೆ 20,000 ಗಳಿಸುವುದೇಗೆ ಎಂದರೆ, 8.2 ಶೇಕಡಾ ಬಡ್ಡಿಯಲ್ಲಿ, ಒಬ್ಬ ವ್ಯಕ್ತಿಯು ಐದು ವರ್ಷಗಳ ಕಾಲ 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಅವರು 2.46 ಲಕ್ಷ ವಾರ್ಷಿಕ ಬಡ್ಡಿಯನ್ನು ಪಡೆಯುತ್ತಾರೆ. ಇದು ಮಾಸಿಕ 20,000 ರೂಪಾಯಿ ಆದಾಯ ನೀಡುತ್ತದೆ.