ಕನ್ನಡ ಪುಸ್ತಕಗಳಿಗೂ ರಿವ್ಯೂಸ್‌ ಕೊಡಲು ಶುರು ಮಾಡಿ, ಆಗ ಒಳ್ಳೆಯ ಪುಸ್ತಕಗಳು ತಾನಾಗಿಯೇ ಕಣ್ಣಿಗೆ ಕಾಣಿಸಲಾರಂಭಿಸುತ್ತವೆ; ಮಧು ವೈಎನ್‌ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಕನ್ನಡ ಪುಸ್ತಕಗಳಿಗೂ ರಿವ್ಯೂಸ್‌ ಕೊಡಲು ಶುರು ಮಾಡಿ, ಆಗ ಒಳ್ಳೆಯ ಪುಸ್ತಕಗಳು ತಾನಾಗಿಯೇ ಕಣ್ಣಿಗೆ ಕಾಣಿಸಲಾರಂಭಿಸುತ್ತವೆ; ಮಧು ವೈಎನ್‌ ಬರಹ

ಕನ್ನಡ ಪುಸ್ತಕಗಳಿಗೂ ರಿವ್ಯೂಸ್‌ ಕೊಡಲು ಶುರು ಮಾಡಿ, ಆಗ ಒಳ್ಳೆಯ ಪುಸ್ತಕಗಳು ತಾನಾಗಿಯೇ ಕಣ್ಣಿಗೆ ಕಾಣಿಸಲಾರಂಭಿಸುತ್ತವೆ; ಮಧು ವೈಎನ್‌ ಬರಹ

ಮಧು ವೈೆೆಎನ್‌ ಬರಹ: ಸಿನಿಮಾಗಳ ಬಗ್ಗೆ ಹೇಗೆ ಎರ್ರಾಬಿರ್ರಿ ಬರಿತೀರೋ, ಹೇಗೆ ಸಿನಿಮಾ ಆರ್‌ಸಿಬಿ ಉಳಿವು ಉಳಿವು ನಿಮ್ಮದೇ ಬದುಕಿನ ಅಂಗವಾಗಿದೆಯೋ ಹಾಗೆ ನೀವು ಓದಿದ ಪುಸ್ತಕಗಳ ಬಗ್ಗೆ ಹೆಚ್ಚು ಹೆಚ್ಚು ಬರೆಯುತ್ತಾ ಹೋಗಿ. ಕನ್ನಡ ಪುಸ್ತಕಗಳಿಗೂ ರಿವ್ಯೂಸ್ ಕೊಡಲು ಶುರು ಮಾಡಿ. ಆಗ ಒಳ್ಳೆಯ ಪುಸ್ತಕಗಳು ಮೇಲೆ ತೇಲುತ್ತವೆ. ನಿಮಗೆ ಕಾಣಿಸಲಾರಂಭಿಸುತ್ತವೆ.

ಕನ್ನಡ ಪುಸ್ತಕಗಳಿಗೂ ರಿವ್ಯೂಸ್‌ ಕೊಡಲು ಶುರು ಮಾಡಿ
ಕನ್ನಡ ಪುಸ್ತಕಗಳಿಗೂ ರಿವ್ಯೂಸ್‌ ಕೊಡಲು ಶುರು ಮಾಡಿ (PC: Canva)

ಪುಸ್ತಕ ಸಂತೆಯಂತಹ ಕಾರ್ಯಕ್ರಮ ಆಯೋಜನೆ, ಪುಸ್ತಕ ಪ್ರಚಾರದ ವಿಚಾರ, ದರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪುಸ್ತಕಗಳಿಗೆ ದರ ಹೆಚ್ಚಾಗುತ್ತಿದೆ, ಹೊಸ ಪುಸ್ತಕಗಳಲ್ಲಿ ಕಂಟೆಂಟ್ ಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ತಾವು ಬರೆದ ಪುಸ್ತಕಗಳ ಬಗ್ಗೆ ತಾವೇ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡು ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಲೇಖಕರು ಎಂಬ ಮಾತು ಕೇಳಿ ಬರುತ್ತಿದೆ. ಈ ವಿಚಾರದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಮಧು ವೈಎನ್‌. ಅವರ ಬರಹವನ್ನು ನೀವೂ ಓದಿ.

ಮಧು ವೈಎನ್ ಬರಹ

ಪುಸ್ತಕಸಂತೆಯ ಬಗ್ಗೆಯೂ ಸೇರಿದಂತೆ ಇತ್ತೀಚೆಗೆ ಅಲ್ಲಲ್ಲಿ ಪುಸ್ತಕ ಪ್ರಚಾರ ವಿಚಾರ, ದರ ಮುಂತಾಗಿ ಚರ್ಚೆಗಳು ಎದ್ದಿರುವುದರಿಂದ ನನ್ನ ಕೆಲವು ಅನಿಸಿಕೆಗಳು.

1. ಪ್ರಚಾರ: ನಮ್ಮ ಕನ್ನಡದ ಹಿರಿಯ ಮೇರು ಸಾಹಿತಿಗಳು ಆಚರಿಸುತ್ತಿದ್ದ ಸಭ್ಯತೆಗಳು ಅವು ಅವರ ಕಾಲಕ್ಕೆ ಸೂಕ್ತವಾಗಿದ್ದವು. ನಾವಿಂದು ಫ್ರೀ-ಮಾರ್ಕೆಟ್ ವ್ಯವಸ್ಥೆಯಲ್ಲಿದ್ದೇವೆ. ಆದ್ದರಿಂದ ನಾನು ಅದನ್ನು ತಿರಸ್ಕರಿಸ್ತೀನಿ ಇದನ್ನು ತಿರಸ್ಕರಿಸ್ತೀನಿ, ಕಣ್ಮರೆಯಾಗ್ತೀನಿ, ಜಂಗುಳಿಯಿಂದ ದೂರ ಉಳಿತೀನಿ- ಇವು ತಪ್ಪಲ್ಲ, ಆದರೆ ಈ ಕಾಲದ ಸಭ್ಯತೆಗಳಲ್ಲ. ಸಾಮಾಜಿಕ ವ್ಯವಸ್ಥೆಗಳು ಬದಲಾಗ್ತಿದ್ದಂತೆ ಜನರ ಜೀವನಕ್ರಮ ಬದಲಾಗುತ್ತದೆ. ಹಾಗೆ ಸಾರ್ವಜನಿಕ ಚೌಕಟ್ಟುಗಳೂ ಸಹ. ನಾನು ನೇರ ನಿಂತು ಪುಸ್ತಕ ಮಾರಿಲ್ಲ, ಇದು ಕೊಳ್ಳಿ ಎಂದು ಕೇಳಿಲ್ಲ. ಆದರೆ ಹಾಗೆ ಮಾರುವುವವರನ್ನು ಮನಸಾರೆ ಪ್ರೋತ್ಸಾಹಿಸುತ್ತೇನೆ. ರಿಡಿಕ್ಯೂಲ್ ಮಾಡುವವರನ್ನು ತಪ್ಪು ಎನ್ನುತ್ತೇನೆ. ಭಾರತೀಯ ಸಮಾಜದಲ್ಲಿ ಅಪ್ಪ ಮಗನ್ನ ಒಪ್ಪದೇ ಒಳಗೊಳಗೇ ಕೊರಗಿ ಸೊರಗುವ ಅನೇಕ ಕಥೆಗಳನ್ನು ನಾವು ಓದಿದ್ದೇವೆ. ಸಾಹಿತ್ಯವಲಯದ ಕೊರಗುವಿಕೆ ಹಾಗೆ ಧ್ವನಿಸುತ್ತದೆ. ಗಮನಿಸಿದ್ದಲ್ಲಿ ನನ್ನ ಪುಸ್ತಕ ಬಿಡುಗಡೆಯ ಸಂದರ್ಭಗಳಲ್ಲಿ ಇದನ್ನು ಯಾಕೆ ಓದಬೇಕು ಎಂದು ಒಂದು ಎಜುಕೇಟಿವ್ ಪೋಸ್ಟ್ ಮಾಡಿರ್ತೇನೆ. ಇದೇನಿದು ಲೇಖಕನೇ ತನ್ ಪುಸ್ತಕ ಯಾಕೆ ಒದ್ಬೇಕು ಅಂತ ಬರೆಯೊ ಕಾಲ ಬಂತಲ್ಲಾ ಅನಿಸಬಹುದು. ಇದೆಲ್ಲವೂ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುವ ರೀತಿ. ಕಾರ್ಪೊರೇಟ್ ಆಫೀಸುಗಳಲ್ಲಿ ಪ್ರತಿ ವರ್ಷ ಅಪ್ರೈಸಲ್ ವರದಿ ಸಲ್ಲಿಸುತ್ತೇವೆ. ಕಳೆದ ವರ್ಷ ಏನೆಲ್ಲ ಉತ್ತಮ ಸಾಧನೆ ಮಾಡಿದೆ ನಾನು ಎಂದು ನಾವೇ ಪಟ್ಟಿ ಮಾಡಬೇಕು. ಇದು ನಂಗೆ ಈಗಲೂ ಕಷ್ಟ. ಮಾಡ್ಬೇಕು ಮಾಡ್ತೇವೆ.

2. ವಿಚಾರ: ಹೊಸ ಪುಸ್ತಕಗಳಲ್ಲಿ ಕಂಟೆಂಟ್ ಇಲ್ಲ ಎಂಬ ಕೂಗು ಇದೆ. ಇದೂ ಸಹ ಮುಕ್ತ ಮಾರುಕಟ್ಟೆಯ ಫಲ. ಫ್ರೀ ಮಾರ್ಕೆಟ್ ಎಲ್ಲವನ್ನೂ ಯಥೇಚ್ಛಗೊಳಿಸುತ್ತದೆ. ಹೇರಳ ಉತ್ಪಾದನೆ, ಹೇರಳ ಬಳಕೆಯನ್ನು ಪ್ರೇರಪಿಸುತ್ತದೆ. ಅನ್ನ, ಹಣ, ಪ್ಲಾಸ್ಟಿಕ್ಕು, ವಾಹನಗಳು, ಸಿನಿಮಾಗಳು- ಎಲ್ಲವೂ ಚೆಲ್ಲಾಡುತ್ತವೆ. ಪುಸ್ತಕಗಳೊಂದೇ ಅಲ್ಲ. ಆದ್ದರಿಂದ ಇದರಲ್ಲಿ ಉತ್ತಮವಾದುದನ್ನೇ ಹೇಗೆ ಗುರುತಿಸುವುದು, ಹೇಗೆ ಆಯ್ಕೆಗಳನ್ನು ಚಿಕ್ಕದುಗೊಳಿಸುವುದು ಎಂದು ಯೋಚಿಸಬೇಕು. ಹಳೆಯ ಸಿಸ್ಟಂ ಇದಕ್ಕಾಗಿ ಪ್ರಶಸ್ತಿಗಳನ್ನು ಇಟ್ಟಿತ್ತು. ಪ್ರಶಸ್ತಿ ಬಂದ ಪುಸ್ತಕ ಎಂದರೆ ಓದಬಹುದಾದ ಎಂಬ ವಿಶ್ವಾಸ ಜನರಲ್ಲಿತ್ತು. ಹೊಸ ಸಿಸ್ಟಂನಲ್ಲಿ ಪ್ರಶಸ್ತಿ ಮಾನದಂಡವಲ್ಲ. ಯಾರಿಗಾದರೂ ಇದು ಕಾಂಟ್ರವರ್ಸಿ ಅನಿಸಿದರೂ ಚಿಂತೆಯಿಲ್ಲ. ಇದೇ ಕಹಿ ಸತ್ಯ . ಹೊಸ ಮಾರುಕಟ್ಟೆಯಲ್ಲಿ ಜನಾಭಿಪ್ರಾಯವೇ(ರಿವ್ಯೂಸ್ ಅಂತಾರಲ್ಲ) ಮಾರ್ಗಸೂಚಿ. ಆದರೆ ಈ ಮಾರ್ಗ ವಾಮಮಾರ್ಗವಾದಾಗ ಏನು ಮಾಡುವುದು? ಉತ್ಪ್ರೇಕ್ಷಿತ ಪ್ರಚಾರ, ಆಮಿಶಗಳಿಂದ ಹುಟ್ಟಿದ ಅಭಿಪ್ರಾಯ, ಸ್ನೇಹ, ದಾಕ್ಷಿಣ್ಯದಿಂದ ಬರುವ ವಿಮರ್ಶೆ ಇದನ್ನು ಹೋಗಲಾಡಿಸುವುದು ಹೇಗೆ? ಆಗಲ್ಲ. ಇದಕ್ಕಿರುವ ಒಂದೇ ಪರಿಹಾರವೆಂದರೆ ಕಸಕ್ಕಿಂತ ರಸ ಹೆಚ್ಚಿಸುವುದು. ನೂರು ಇಂಥ ಅಭಿಪ್ರಾಯಗಳು ಬಂದಲ್ಲಿ ಸಾವಿರ ಹತ್ತು ಸಾವಿರ ನೈಜ ಅಭಿಪ್ರಾಯಗಳು ದಾಖಲಾಗಬೇಕು. ಇಂಗ್ಲೀಷಿನಲ್ಲಿ ಗೂಡ್ ರೀಡ್ಸ್ ಇದೆ. ಕನ್ನಡದವರೂ ಇಂಥ ಪ್ಲಾಟ್ ಫಾರಂಗೆ ಶಿಫ್ಟಾಗಬೇಕು. ಫೇಸ್‌ಬುಕ್‌ನಲ್ಲಿ ಇನ್‌ಸ್ಟಾದಲ್ಲಿ ಬರುವ ಅಭಿಪ್ರಾಯ ಚದುರಿಹೋಗುತ್ತವೆ. ಎಲ್ಲರೂ ಒಂದು ವಿಶ್ವಾಸಮಯ ಪ್ಲಾಟ್ ಫಾರಂ ಬಳಸುವುದೇ ನಿಮಗೆ ನೀವೇ ಕಂಡುಕೊಳ್ಳುವ ಪರಿಹಾರ.

3. ದರ: ಒಂದು ಪುಸ್ತಕದ ದರ ನೂರು ರೂಪಾಯಿ ಇದ್ದಲ್ಲಿ ಪ್ರಕಾಶಕ ಅದನ್ನು 50 ರೂಪಾಯಿಗೆ ಡಿಸ್ಟ್ರಿಬ್ಯೂಟರಿಗೆ ಮಾರುತ್ತಾನೆ. ಡಿಸ್ಟ್ರಿಬ್ಯೂಟರ್‌ 10-15 ರೂಪಾಯಿ ಇಟ್ಟುಕೊಂಡು 60-65 ರೂಪಾಯಿಗಳಿಗೆ ಅಂಗಡಿಗಳಿಗೆ ಮಾರುತ್ತಾನೆ. ಅಂಗಡಿಯವ ಶೇ 10-15 ಡಿಸ್ಕೌಂಟ್ ಇಟ್ಟು 80-90 ರೂಪಾಯಿಗಳಿಗೆ ಓದುಗರಿಗೆ ಮಾರುತ್ತಾನೆ. ಪ್ರಕಾಶಕನಿಗೆ ಬಂದ 50 ರೂಪಾಯಿಯಲ್ಲಿ 5೦ ರೂಪಾಯಿಗಳು ಪ್ರೊಡಕ್ಷನ್ ವೆಚ್ಛ ತಗುಲುತ್ತದೆ. ಪ್ರಿಂಟಿಂಗು, ಎಡಿಟಿಂಗು, ಕವರ್, ಪ್ರೂಫ್ ರೀಡಿಂಗು ಇತ್ಯಾದಿಯಾಗಿ. ಇನ್ನು ಇಪ್ಪತ್ತು ರೂಪಾಯಿಗಳಲ್ಲಿ ಹತ್ತು ತಾನಿಟ್ಟುಕೊಂಡು ಇನ್ನತ್ತು ಲೇಖಕನಿಗೆ ಕೊಡುತ್ತಾನೆ, ಕೊಡಬೇಕು. ಇದು ಸ್ಥೂಲವಾದ ಲೆಕ್ಕಾಚಾರ. ಇದರಲ್ಲೇ ಸ್ವಲ್ಪ ಏರುಪೇರು ಮಾಡಿಕೊಂಡು ಲಾಭಗಳನ್ನು ಅತ್ತಿತ್ತ ಹಂಚಿಕೊಳ್ಳುವುದು ಆಗುತ್ತದೆ. ಪ್ರಕಾಶಕನೇ ಮಾರಾಟಗಾರನಾಗಿದ್ದರೆ ಅಂಗಡಿಯ ಮತ್ತು ಡಿಸ್ಟ್ರಿಬ್ಯೂಟರಿನ ಲಾಭ ಆತನಿಗೇ ಸಿಗುತ್ತದೆ. ಡಿಸ್ಟ್ರಿಬ್ಯೂಟರು ಮಾರಿದ್ದಲ್ಲಿ ಅಂಗಡಿಯ ಲಾಭ ಆತನಿಗೇ ಉಳಿಯುತ್ತದೆ. ಆದ್ದರಿಂದ ಇಲ್ಲಿ ಓದುಗರಿಗೆ ತುಸು ಹೊರೆ ಅನಿಸ್ತಿದ್ದರೂ ಮಾರ್ಕೆಟ್ಟು ಹಂಚಿಕೆ ಇರುವುದೇ ಹಾಗೆ. ಕನ್ನಡದಲ್ಲಿ ಸಪ್ಲೈ ಚೈನ್ ಎಂಬುದು ಇನ್ನಷ್ಟು ಸಮರ್ಪಕವಾಗಿದ್ದಲ್ಲಿ ಈ ವೆಚ್ಛವನ್ನು ಕಡಿಮೆ ಮಾಡುತ್ತಾ ಹೋಗಬಹುದು. ಓದುಗರು ಹೆಚ್ಚಾದಾಗ ಇನ್ನಷ್ಟು ಕಡಿಮೆ ಮಾಡಬಹುದು. ಉದಾಹರಣೆಗೆ ಮೇಲೆ ಹೇಳಿದ ಉತ್ಪಾದನಾ ವೆಚ್ಚ 1000 ಪ್ರತಿಗಳಿಗೆ. ಹತ್ತು ಸಾವಿರ ಪ್ರತಿ ಎಂದಾದಾಗ ಅದು 25 ರೂಪಾಯಿಗೆ ಇಳಿಯುತ್ತದೆ.

ಆದ್ದರಿಂದ ನೀವು ಹೇಗೆ ಸಿನಿಮಾಗಳ ಬಗ್ಗೆ ಎರ್ರಾಬಿರ್ರಿ ಬರಿತೀರೋ, ಹೇಗೆ ಸಿನಿಮಾಗಳ ಆರ್‌ಸಿಬಿಗಳ ಅಳಿವು ಉಳಿವು ನಿಮ್ಮದೇ ಬದುಕಿನ ಅಂಗವಾಗಿದೆಯೋ ಹಾಗೆ ನೀವು ಓದಿದ ಪುಸ್ತಕಗಳ ಬಗ್ಗೆ ಹೆಚ್ಚು ಹೆಚ್ಚು ಬರೆಯುತ್ತಾ ಹೋಗಿ. ಅಭಿಪ್ರಾಯ ದಾಖಲಿಸುತ್ತಾ ಹೋಗಿ. ನೋಡಿ ಈಗ ನೀವು ಒಂದು ಅಂಗಡಿಗೆ ಹೋಗಬೇಕೆಂದರೆ ಏನು ನೋಡುತ್ತೀರಾ? ಗೂಗಲ್ ಮ್ಯಾಪ್‌ನಲ್ಲಿನ ರಿವ್ಯೂಸ್ ಅಲ್ವಾ. ಅದನ್ನೆಲ್ಲ ಯಾರು ಕೊಟ್ಟಿರ್ತಾರೆ? ನಿಮ್ಮಂಥದೇ ಇನ್ಯಾರೋ ಗ್ರಾಹಕರು. ಹಾಗೆ ನೀವೂ ಸಹ ಅಂಗಡಿಗಳಿಗೆ ಗೂಗಲ್ ಮ್ಯಾಪ್ ರಿವ್ಯೂಸ್ ಕೊಡಿ. ಸಿನಿಮಾಗಳಿಗೆ ಕೊಡಿ. ಅಂತೆಯೇ ಕನ್ನಡ ಪುಸ್ತಕಗಳಿಗೂ ರಿವ್ಯೂಸ್ ಕೊಡಲು ಶುರು ಮಾಡಿ. ಆಗ ವ್ಯವಸ್ಥೆ ತಾನಾಗೇ ಅಡ್ಜಸ್ಟ್ ಆಗುತ್ತದೆ. ಒಳ್ಳೆಯ ಪುಸ್ತಕಗಳು ಮೇಲೆ ತೇಲುತ್ತವೆ. ನಿಮಗೆ ಕಾಣಿಸಲಾರಂಭಿಸುತ್ತವೆ.

ನವೆಂಬರ್ 20ರಂದು ಮಧು ಈ ಪೋಸ್ಟ್ ಹಾಕಿದ್ದು, ಇದನ್ನು ಈಗಾಗಲೇ ಹಲವರು ವೀಕ್ಷಿಸಿದ್ದಾರೆ. ಕೆಲವರು ಲೈಕ್ ಮಾಡಿದ್ದರು, ಇನ್ನೂ ಕೆಲವರು ಕಾಮೆಂಟ್ ಮಾಡುವ ಮೂಲಕ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 

ಮಧು ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು 

ವೀರಕಪುತ್ರ ಎಂ ಶ್ರೀನಿವಾಸ ಅವರ ಕಾಮೆಂಟ್‌: ಅದೇ ಸಮಸ್ಯೆ… ಪುಸ್ತಕ ಓದುವುದು ಸಿನಿಮಾ ನೋಡಿದಷ್ಟು ಸಲೀಸಲ್ಲ. ಅದಕ್ಕೊಂದು ಧ್ಯಾನಸ್ಥ ಸ್ಥಿತಿ ಬೇಕು. ಸಮಯ ಬೇಕು! ಅದು ಸಾಧ್ಯವಾಗುತ್ತಿಲ್ಲ ಎಂಬುದೇ ಸಮಸ್ಯೆ. ಸಿನಿಮಾ ನೋಡುವುದು ಮತ್ತು ಅದರ ರಿವ್ಯೂ ಬರೆಯುವುದು ಹೆಚ್ಚುಗಾರಿಕೆ ಮತ್ತು ಸುಲಭವೂ ಆಗಿದೆ. ಅದಕ್ಕೆ ಸಿಗುವ ಅಟೆನ್ಶನ್, ಲೈಕ್ಸ್, ಶೇರ್ ಸಹ ಹೆಚ್ಚೇ! ಆದ್ರೆ ಪುಸ್ತಕ ಅಂದ ಕೂಡಲೇ ಅದು ಕಡಿಮೆಯಾಗಿಬಿಡುತ್ತೆ. ಅದೂ ಸಹ ಒಂದು ಸಮಸ್ಯೆ. ಆಮೇಲೆ, ಒಂದು ಕಾಲಕ್ಕೆ ಬುಕ್ ಮೈ ಶೋ ರೇಟಿಂಗ್ ನಂಬಿ ಸಿನಿಮಾ ನೋಡುತ್ತಿದ್ದೆವು. ಆದರೀಗ ಅದೂ ಕೂಡ ಫೇಯ್ಡ್ ಆಗಿದೆ. ಆಮೇಲೆ ಫೇಸ್ಬುಕ್ಕಿನಲ್ಲಿ ಕೆಲವು ಒಳ್ಳೆ ಬರಹಗಾರರ ರಿವ್ಯೂ ನಂಬಿ ಹೋಗುತ್ತಿದ್ದೆವು. ಆದರೆ ಸಿನಿಮಾದವರು ಅಂತಹವರನ್ನು ತಮ್ಮ ಆಪ್ತರನ್ನಾಗಿಸಿಕೊಂಡು ಅವರನ್ನೂ ಕೆಡಿಸಿಬಿಟ್ಟರು. ಈಗ ಅವರೂ ಕೂಡ ಆಪ್ತಬಳಗದ ಸಿನಿಮಾಗಳಿಗೆ ಮಾತ್ರ ಬರೀತಾರೆ! ಅಂದರೆ, ಯಾವುದೇ ಪ್ಲಾಟ್ ಫಾರ್ಮ್ ಬಂದರೂ ಅದನ್ನು ಭ್ರಷ್ಟಗೊಳಿಸುವಷ್ಟು ಶಕ್ತಿ ನಮಗಿದೆ ಅನ್ನೋದು ಹೆಚ್ಚು ಆತಂಕದ ವಿಷ್ಯ. ಇದು ಪುಸ್ತಕಲೋಕವನ್ನೂ ಬಿಡಲ್ಲ! ಕನ್ನಡ ಪುಸ್ತಕೋದ್ಯಮ ಇನ್ನೈದು ವರ್ಷದಲ್ಲಿ ಬಹಳ ದೊಡ್ಡ ಎತ್ತರವೇರುತ್ತೆ. ಅದಕ್ಕೂ ಮುಂಚೆ, ನಾವು ಕಳಪೆಯನ್ನು ಫಿಲ್ಟರ್ ಮಾಡುವ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು.

ಸುರೇಶ್ ಮಹರ್ಷಿ ಅವರು ಕಾಮೆಂಟ್ ಮಾಡಿರುವುದು ಹೀಗೆ: ಹೌದು. ಈ ರೀತಿ ಮಾರಾಟವಾಗುತ್ತಿರುವುದನ್ನು ನೋಡಿ "ಗುಣಮಟ್ಟ" ಎಂಬ ಹೆಸರಿನಲ್ಲಿ ಮೂಗು ಮುರಿಯಲು ಸುರಿಯಲು ಸುರು ಮಾಡಿದವರ ಬಗ್ಗೆ ವಾರ್ತೆಗಳು ಬರುತ್ತಿವೆ ! ಆದರೆ ಅದನ್ನು ನಿರ್ಧರಿಸುವವರು ನಾವು ಅಂದರೆ ಓದುಗರು !! ನಮಗೆ ಸತ್ಯವಾಗಿಯೂ ಇದುವರೆಗೂ ಕನ್ನಡದಲ್ಲಿ ಮುದ್ರಣವಾದ ಪುಸ್ತಕಗಳು ಎಷ್ಟು ಸಂಖ್ಯೆಯಲ್ಲಿ ಮಾರಾಟವಾದವು ಮತ್ತು ಆಗುತ್ತವೆ ಅಂತಾ ಗೊತ್ತೇ ಇಲ್ಲ! ಈಗ ನೀವೆಲ್ಲಾ ಹೇಳುವುದನ್ನು ಕೇಳಿದರೆ ಭಯವೂ ಬೇಸರವೂ ಆಗುತ್ತಿದೆ. ಲಕ್ಷಗಳ ಸಂಖ್ಯೆಯಲ್ಲಾದರೂ ಮಾರಾಟವಾಗುತ್ತವೆ ಅಂದುಕೊಂಡಿದ್ದೆವು ! ಮತ್ತು ಈ ಜನಪ್ರಿಯ ಸಾಹಿತ್ಯ ಮತ್ತು ಗಂಭೀರ ಸಾಹಿತ್ಯ ಮತ್ತು ಇತರೆ ಅಂತಾ ಮೊದಲೂ ಜಗಳಗಳಿದ್ದಂತೆ ನೆನಪು. ಆದರೆ ಒಂದು ಕಂದಮ್ಮನನ್ನು ಮಾತಾಡಿಸುವಂತೆ ಒಂದು ದೊಡ್ಡ ಮಗುವನ್ನು ಯಾರೂ ಮಾತನನಾಡಿಸರು ! ಹಾಗಾದ್ದರಿಂದ ಜನಪ್ರಿಯ ಎಂದ ತಕ್ಷಣ ಕಳಪೆ ಬಳಪೆ ಎಂಬ ವರ್ಗೀಕರಣ ದಯವಿಟ್ಟು ಹೋಗಬೇಡಿ ಸರ್ . ಇದಿನ್ನೂ ಪ್ರಾರಂಭವಾಗಿದೆ ಅಷ್ಟೇ. ಅದೇನು ಬರೆದು ಕೊಡುತ್ತಾರೋ ಕೊಡಲಿ. ಹೇಗೂ ನೀವೂ ಇದ್ದೀರಿ ಎಲ್ಲ ಕನ್ನಡ ಜೀವಗಳಿಗಳಿಗೂ ಸಂತೆಯ ಮೂಲೆಯೊಂದು ಮಣೆ ಇರಲಿ!

ಕರ್ನಲ್ ಡಾ. ಶ್ರೀಧರ ಅವರ ಅಭಿಪ್ರಾಯ ಹೀಗಿದೆ: ಕನ್ನಡದ ಆದ್ಯ ಕಾದಂಬರಿಕಾರ ಶ್ರೀ ಗಳಗನಾಥರು ಕೂಡ ಇದೇ ರೀತಿ ಮನೆ ಮನೆಗೆ ಪುಸ್ತಕಗಳನ್ನು ಹೊತ್ತು ಇದು ಮಾರಿದ್ದಾರೆ ಎಂದು ಕೇಳಿದ್ದೇವೆ. ಮಾರ್ಕೆಟಿಂಗ್ ಮಾಡದಿದ್ದರೆ ಯಾವುದೇ ಪ್ರಾಡಕ್ಟ್ ಗೆ ಬೇಡಿಕೆ ಇರುವುದಿಲ್ಲ. ಹಾಗೆಯೇ ಎಲ್ಲಾ ಓದುಗರಿಗೂ ಎಲ್ಲಾ ರೀತಿಯ ಪುಸ್ತಕಗಳು ಇಷ್ಟವಾಗಬೇಕೆಂದೇನಿಲ್ಲ. ಕೆಲವರಿಗೆ ಸಾಮಾಜಿಕ ಕಾದಂಬರಿಗಳಲ್ಲಿ ಕೆಲವರಿಗೆ ಐತಿಹಾಸಿಕ ಕಾದಂಬರಿಗಳಲ್ಲಿ ಮತ್ತು ಹಲವರಿಗೆ ಸೈನ್ಸ್ ಫಿಕ್ಷನ್ ಇರುವಂತಹ ಕಾದಂಬರಿಗಳಲ್ಲಿ ಆಸಕ್ತಿ ಇರಬಹುದು. ಹಾಗಾಗಿ ಒಂದು ಹೊಸ ಪುಸ್ತಕದ ಬಗ್ಗೆ ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಓದಿ ತಿಳಿಯುವಾಗ ಆ ಹಳೆಯ ಓದುಗರ ಹಿನ್ನೆಲೆಯನ್ನು ತಿಳಿದಿರಬೇಕಾಗುತ್ತದೆ. ಆದರೆ ಇದು ಕಷ್ಟ ಸಾಧ್ಯ. ಹಾಗಾಗಿ ಕೆಲವೊಮ್ಮೆ ರಿವ್ಯೂ ನೋಡಿ ನಾವು ಕೊಂಡ ಪುಸ್ತಕಗಳು ನಮಗೆ ಕೆಲವೊಮ್ಮೆ ನಿರಾಸೆ ಉಂಟು ಮಾಡುವುದರಲ್ಲಿ ಆಶ್ಚರ್ಯವಿಲ್ಲ. ಇಷ್ಟೆಲ್ಲ ಇದ್ದರೂ ಕನ್ನಡ ಪುಸ್ತಕಗಳ ಮಾರಾಟವಾಗಬೇಕಾದರೆ ಒಂದು ರೀತಿಯ ಸಮೂಹ ಸನ್ನಿ ಉಂಟುಮಾಡುವ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಇದು ಕೇವಲ ವ್ಯಾಪಾರಿಗಳ ತಂತ್ರ ಎಂದು ಅಲ್ಲಗಳೆಯಬೇಕಾಗಿಲ್ಲ. ಬದಲಾದ ಕಾಲಕ್ಕೆ ಬದಲಾಗುವ ತಂತ್ರಗಳನ್ನು ಅನುಸರಿಸಲೇಬೇಕು. ಕೊನೆಯ ಪರಿಣಾಮವಾಗಿ ಕನ್ನಡ ಪುಸ್ತಕಗಳು ಹೆಚ್ಚು ಮಾರಾಟವಾದರೆ ಅದು ಕನ್ನಡಕ್ಕೇ ಲಾಭ ಎಂದು ನನ್ನ ಅಭಿಪ್ರಾಯ.

ಶ್ರೀನಿವಾಸ ದೇಶಪಾಂಡೆ ಅವರ ಕಾಮೆಂಟ್‌: ಒಂದು ಒಳ್ಳೆಯ ಪುಸ್ತಕ ಪ್ರಜ್ಞಾ ವಲಯದಲ್ಲಿ ಅದು ಯಾವ ಕಾರಣಕ್ಕೆ ಒಳ್ಳೆಯದು ಎಂಬ ಚರ್ಚೆಗೆ ಒಳಗಾಗಬೇಕು. ಸಮಕಾಲೀನ ಹಾಗೂ ಹಿರಿಯ ಲೇಖಕರು ಹೊಸ ಕೃತಿಯ ಇತಿಮಿತಿಗಳ ಬಗ್ಗೆ ಮಾತನಾಡಬೇಕು. ಹಿಂದೆ ಈ ಕೆಲಸ ಆಗುತ್ತಿತ್ತು. ಬೇಂದ್ರೆಯವರ, ಅಡಿಗರ ಕೃತಿ ಬಗ್ಗೆ ಅನಂತಮೂರ್ತಿ, ಆಮೂರ್, ಕುರ್ತಕೋಟಿಯಂತವರು ಮಾತನಾಡುತ್ತಿದ್ದರು. ಅವರು ನಮಗೆ ತೋರುಗಂಬವಾಗಿದ್ದರು. ಲಂಕೇಶ್ ನಮ್ಮ ಓದನ್ನು ತಿದ್ದಿದರು. ಕೊಳ್ಳುಬಾಕರಿಗಾಗಿ ಸಂತೆ ಎಲ್ಲ ಮಾಲ್ಗಳಲ್ಲೂ ನಿತ್ಯ ನಡೆಯುತ್ತೆ. ಬೇಕಾದದ್ದು ಒಂದು ವಸ್ತುವಾದರೆ, ಬೇಡದ್ದು ಹನ್ನೊಂದು ಬಂದಿರುತ್ತೆ..ನಾವೀಗ ವ್ಯವಹರಿಸುತ್ತಿರುವುದು ಸಾಹಿತ್ಯದ ವಲಯದಲ್ಲಿ ಆದುದರಿಂದ ಮಾರುವವರು, ಕೊಳ್ಳುವವರು ಮತ್ತು ಆಯೋಜಿಸುವವರು ಗುಣಮಟ್ಟದ ಮಾನದಂಡ ಹೊಂದಿದರೆ ಜೊಳ್ಳು ಕಮ್ಮಿಯಾಗಬಹುದು.ಆಯ್ಕೆದಾರರ ಅಭಿರುಚಿ ಮುಖ್ಯ ಇಲ್ಲಿ.

Whats_app_banner