ಆದಷ್ಟೂ ಬೇಗ ಮತ್ತೆ ಸಿಗು ಓ ಗೆಳತಿ; ನೋವಿಗೆ ಹೆಗಲಾಗಿ, ನಲಿವಿಗೆ ಜೊತೆಯಾದ ಸ್ನೇಹಿತೆಗೊಂದು ಒಲವಿನ ಒಲೆ; ಮೇದಿನಿ ಕೆಸವಿನಮನೆ ಬರಹ-international friendship day 2024 opinion on friend a note about friend story of two friends real friendship meaning ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆದಷ್ಟೂ ಬೇಗ ಮತ್ತೆ ಸಿಗು ಓ ಗೆಳತಿ; ನೋವಿಗೆ ಹೆಗಲಾಗಿ, ನಲಿವಿಗೆ ಜೊತೆಯಾದ ಸ್ನೇಹಿತೆಗೊಂದು ಒಲವಿನ ಒಲೆ; ಮೇದಿನಿ ಕೆಸವಿನಮನೆ ಬರಹ

ಆದಷ್ಟೂ ಬೇಗ ಮತ್ತೆ ಸಿಗು ಓ ಗೆಳತಿ; ನೋವಿಗೆ ಹೆಗಲಾಗಿ, ನಲಿವಿಗೆ ಜೊತೆಯಾದ ಸ್ನೇಹಿತೆಗೊಂದು ಒಲವಿನ ಒಲೆ; ಮೇದಿನಿ ಕೆಸವಿನಮನೆ ಬರಹ

ನಮ್ಮ ಬದುಕಿನಲ್ಲಿ ಬಂದ ಸ್ನೇಹಿತೆ/ಸ್ನೇಹಿತರೆಲ್ಲರೂ ಕೊನೆವರೆಗೂ ಜೊತೆಯಾಗಿ ಇರುವುದಿಲ್ಲ. ಆದರೆ ಕೆಲವೊಮ್ಮೆ ಬಾಲ್ಯದ ಸ್ನೇಹಿತರು ಸದಾ ನಮ್ಮೊಂದಿಗೆ ನಮ್ಮ ಬದುಕಿಗೆ ಭಾಗವಾಗಿ ಇರುತ್ತಾರೆ. ಇಂತಹ ಅಪರೂಪದ ಸ್ನೇಹಿತೆಗೆ ಸ್ನೇಹಿತರ ದಿನದ ಸಂದರ್ಭ ಒಲವಿನೋಲೆ ಬರೆಯುವ ಮೂಲಕ ನೆನಪಿಸಿಕೊಂಡಿದ್ದಾರೆ ಮೇದಿನಿ ಕೆಸವಿನಮನೆ.

ಆದಷ್ಟೂ ಬೇಗ ಮತ್ತೆ ಸಿಗು ಓ ಗೆಳತಿ; ನೋವಿಗೆ ಹೆಗಲಾಗಿ, ನಲಿವಿಗೆ ಜೊತೆಯಾದ ಸ್ನೇಹಿತೆಗೊಂದು ಒಲವಿನ ಒಲೆ; ಮೇದಿನಿ ಕೆಸವಿನಮನೆ ಬರಹ
ಆದಷ್ಟೂ ಬೇಗ ಮತ್ತೆ ಸಿಗು ಓ ಗೆಳತಿ; ನೋವಿಗೆ ಹೆಗಲಾಗಿ, ನಲಿವಿಗೆ ಜೊತೆಯಾದ ಸ್ನೇಹಿತೆಗೊಂದು ಒಲವಿನ ಒಲೆ; ಮೇದಿನಿ ಕೆಸವಿನಮನೆ ಬರಹ

ಹೇಗಿರುವೆ? ಇವತ್ತು ಸ್ನೇಹಿತರ ದಿನವಂತೆ. ಅದಕ್ಕಾಗಿ ಒಂದು ಶುಭಾಶಯ ಕೋರುವ ನೆಪದಲ್ಲಿ ಪತ್ರ ಬರೆಯೋಣವೆನಿಸಿತು.

ನೆನಪಾಗುತ್ತದೆಯಾ ನಿನಗೆ ನಮ್ಮ ಆ ದಿನಗಳು? ಇಡೀ ದಿನ ಜೊತೆಗಿದ್ದರೂ ಸಂಜೆ ಮನೆಗೆ ಹೋಗುವಾಗ ಬ್ಯಾಗನಲ್ಲಿಟ್ಟು ಕಳಿಸುತ್ತಿದ್ದ ಪತ್ರಗಳು? ಅದೆಷ್ಟು ಪತ್ರಗಳು! ನೋಟ್‌ ಬುಕ್ಕಿನ ಹಾಳೆಗಳನ್ನೆಲ್ಲಾ ಹರಿದು ಬರೆಯುತ್ತಿದ್ದ ವಿಷಯಗಳು. ಆ ಗುಟ್ಟುಗಳು, ಖುಷಿ–ದುಃಖಗಳನ್ನು ತುಂಬಿಸಿ ರವಾನಿಸಿಕೊಳ್ಳುತ್ತಿದ್ದ ದಿನಗಳು ಹಾಗೆಯೇ ಕಣ್ಮುಂದೆ ಬರುತ್ತಿವೆ ನೋಡು. ಹಾಗೆ ನಾವು ಮತ್ತೆ ನಾಲ್ಕೆಂಟು ಪುಟಗಟ್ಟಲೆ ಪತ್ರ ಬರೆದುಕೊಳ್ಳುತ್ತೇವಾ? ಅಂಥದ್ದೊಂದು ದಿನ ಬಂದರೆ ಎಷ್ಟು ಚಂದ ಅಲ್ಲವೇನೆ?

ಯಾವಾಗ ನಮ್ಮ ಸ್ನೇಹ ಆರಂಭವಾಯಿತೋ, ಒಂದೇ ತರಗತಿ, ಒಂದೇ ಬೆಂಚು, ಹಾಜರಾತಿ ಪುಸ್ತಕದಲ್ಲೂ ಮೇಲೆ ಕೆಳಗಿನ ಹೆಸರು, ಜೊತೆಗೆ ನೋಡಲೂ ಸರಿಸುಮಾರು ಒಂದೇ ರೀತಿ ಇದ್ದ ನಾವು! ಶಿಕ್ಷಕರು ಅದೆಷ್ಟು ಸಾವಿರ ಬಾರಿ ನಮ್ಮಿಬ್ಬರ ಹೆಸರನ್ನು ಅದಲು ಬದಲು ಮಾಡಿ ಕರೆಯುತ್ತಿದ್ದರೋ, ಹಾಜರಿ ಕೂಗಿದಾಗ ಎಷ್ಟು ಬಾರಿ ನನ್ನ ಹೆಸರಿಗೆ ನೀನು, ನಿನ್ನ ಹೆಸರಿಗೆ ನಾನು ಎಸ್ಸಾ.....ರ್ ಎಂದು ಕೂಗಿದೆವೋ ಏನೋ...

ಕಾಲ ಉರುಳಿತಾ? ನಾವು ಬೆಳೆದೆವಾ? ನಮ್ಮ ಸ್ನೇಹ?! ಅದು ನಮಗಿಂತ ವೇಗವಾಗಿ, ಗಟ್ಟಿಯಾಗಿ ಬೆಳೆಯಿತಲ್ಲವೇನೆ? ನಾವು ಕಳೆದ ಕಾಲದೊಂದಿಗೆ ಅದೆಷ್ಟೋ ಹೊಸಬರು ಸಣ್ಣ ಜರಿಯಂತೆ ಬಂದರು, ಜೊತೆ ನಿಂತರು, ಅಷ್ಟೇ ವೇಗವಾಗಿ ಬಿಟ್ಟೂಹೋದರು. ಆದರೆ ನಮ್ಮೊಳಗಿನ ಸ್ನೇಹದೊರತೆ ಬತ್ತಲೇ ಇಲ್ಲ. ಹರಿಯುವ ತೊರೆ, ಸಿಹಿನೀರಿನ ಹಳ್ಳವಾಗಿ ಪ್ರವಹಿಸುತ್ತಲೇ ಇದೆ. ಯಾವ ಪ್ರವಾಹದ ಭಯವಿಲ್ಲದೇ!

ಹಂಚಿಕೊಂಡ ಖುಷಿಯ ದಿನಗಳು, ಹೆಗಲು ತಬ್ಬಿ ಬಿಕ್ಕಿಬಿಕ್ಕಿ ಅತ್ತ ಕ್ಷಣಗಳು, ಕೈ ಹಿಡಿದುಕೊಂಡು ಮೈಲುಗಟ್ಟಲೆ ಸಾಗಿದ ದಿನಗಳು, ಗಂಟೆಗಟ್ಟಲೆ ಕೂತು ಆಡಿದ ಮಾತುಗಳು, ಮಾತಾಡುತ್ತಲೇ ಬೆಳಕು ಕಂಡ ಅಸಂಖ್ಯ ರಾತ್ರಿಗಳು! ಓಹ್, ಅದೆಷ್ಟು ಬೇಗ ಸಮಯ ಸರಿದು ಹೋಯಿತೇ.

ಇಬ್ಬರ ಬದುಕು ಕವಲಾಗಿ ಅಲ್ಲಲ್ಲಿ ಮತ್ತೆ ಸೇರುತ್ತಾ, ಒಡನಾಡುತ್ತಾ ಸಾಗುತ್ತಿರುವ ಈ ಬದುಕಿನಲ್ಲಿ ನಿನ್ನ ಸ್ನೇಹ ಅಮೂಲ್ಯ. ಇಂದು ಫ್ರೆಂಡ್‌ಶಿಪ್ ಡೇ ಎಂದು ಕರೆಯುತ್ತಾರೆ. ನಮ್ಮ ಸ್ನೇಹಕ್ಕೆ ಇಂತದ್ದೊಂದು ದಿನ ನೆಪ ಮಾತ್ರ. ನಮ್ಮ ಜಗಳ, ಸಿಟ್ಟು, ಪ್ರೀತಿ, ಕಾಳಜಿಗೆ ಒಂದು ದಿನ ಸಾಕಾಗುತ್ತದೆಯಾ? ತಿಂಗಳಾನುಗಟ್ಟಲೆ ಮಾತಾಡದಿದ್ದರೂ, ಒಮ್ಮೆ ಹಲೋ ಎಂದೊಡನೆ, ಯಾವತ್ತೋ ನಿಲ್ಲಿಸಿದ್ದ ಮಾತಿನಿಂದಲೇ ಮತ್ತೆ ಮಾತುಕತೆ ಶುರುಮಾಡುವ ಅಪೂರ್ವ ಬಾಂಧವ್ಯಕ್ಕೆ ಯಾವ ಹೆಸರು ಇಡುವುದು?

ಸ್ನೇಹವೆಂದರೆ ನೀನು, ನನ್ನ ಸಿಟ್ಟು, ಅಳು, ಹಟ, ಪ್ರೀತಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಹುಟ್ಟು ಗೆಳತಿ ನೀನು. ಪ್ರತಿ ಹೆಜ್ಜೆಯನ್ನೂ ಸಂಭ್ರಮಿಸುವ ಬಂಧು ನೀನು.

ಈ ಮಳೆಗಾಲ ಮುಗಿಯುವುದರೊಳಗೆ ಬಾರೆ, ಇಬ್ಬರೇ ಕೂತು ಮಾತಾಡುತ್ತಲೇ ಬೆಳಗು ಮಾಡೋಣ. ಮತ್ತೆ ಹೈಸ್ಕೂಲಿನ ದಿನಗಳಿಗೆ ಹೋಗೋಣ, ಕಾಲೇಜಿನ ಅಂಗಳದಲ್ಲಿ ಜಗಳವಾಡಿ, ಮತ್ತೆ ಗಾಂಧಿಪಾರ್ಕಿನಲ್ಲಿ ಕೂತು ಕಣ್ಣೊರೆಸಿಕೊಂಡು ಹಗುರಾಗೋಣ. ಸಾಧ್ಯವಾದರೆ ಹಾಫ್ ಪ್ಲೇಟು ಗೋಬಿ ಮಂಚೂರಿ, ಒಂದು ಪ್ಲೇಟು ಪಾನಿಪುರಿಯೊಂದಿಗೆ ದಿನ ಕಳೆಯೋಣ.

ನಿನ್ನ ನಿರೀಕ್ಷೆಯಲ್ಲಿ,

ಮೇದಿನಿ ಕೆಸವಿನಮನೆ