Friendship Day: ಸ್ನೇಹದ ಬಂಧ ನೂರ್ಕಾಲ ಉಳಿಸಿಕೊಳ್ಳುವುದು ಸುಲಭವಲ್ಲ; ಗೆಳೆತನ ಬಾಳಿಕೆ ಬರಲು ನೆರವಾಗುವ 8 ಅಂಶಗಳಿವು -ಮನದ ಮಾತು-column friendship day 2024 how to nurture friendship for long term how to care friends with love and empathy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Friendship Day: ಸ್ನೇಹದ ಬಂಧ ನೂರ್ಕಾಲ ಉಳಿಸಿಕೊಳ್ಳುವುದು ಸುಲಭವಲ್ಲ; ಗೆಳೆತನ ಬಾಳಿಕೆ ಬರಲು ನೆರವಾಗುವ 8 ಅಂಶಗಳಿವು -ಮನದ ಮಾತು

Friendship Day: ಸ್ನೇಹದ ಬಂಧ ನೂರ್ಕಾಲ ಉಳಿಸಿಕೊಳ್ಳುವುದು ಸುಲಭವಲ್ಲ; ಗೆಳೆತನ ಬಾಳಿಕೆ ಬರಲು ನೆರವಾಗುವ 8 ಅಂಶಗಳಿವು -ಮನದ ಮಾತು

ಭವ್ಯಾ ವಿಶ್ವನಾಥ್: ತೀರ್ಪು ನೀಡುವ ಸ್ವಭಾವವು ಸ್ನೇಹಕ್ಕೆ ಎಂದಿಗೂ ಒಳ್ಳೆಯದಲ್ಲ. ಇನ್ನೊಬ್ಬರು ಸದಾ ನಿಮ್ಮ ಮೂಗಿನ ನೇರಕ್ಕೆ ಬದುಕಲು ಸಾಧ್ಯವಿಲ್ಲ. ನಮ್ಮ ಸ್ನೇಹಿತರ ನಡೆನುಡಿ, ಸ್ವಭಾವ, ಸೌಂದರ್ಯ, ಸ್ಥಾನಮಾನ, ಅಭಿಪ್ರಾಯ, ನಂಬಿಕೆ, ದೃಷ್ಟಿಕೋನವನ್ನು ಗೌರವಿಸಬೇಕು. ಸ್ನೇಹ ಬಂಧ ಹೆಚ್ಚಿಸಲು ತಿಳಿದಿರಬೇಕಾದ 8 ಟಿಪ್ಸ್‌ ಇಲ್ಲಿದೆ.

 ಸ್ನೇಹದ ಬಂಧ ನೂರ್ಕಾಲ ಉಳಿಸಿಕೊಳ್ಳುವುದು ಸುಲಭವಲ್ಲ; ಗೆಳೆತನ ಬಾಳಿಕೆ ಬರಲು ನೆರವಾಗುವ 8 ಅಂಶಗಳಿವು -ಮನದ ಮಾತು
ಸ್ನೇಹದ ಬಂಧ ನೂರ್ಕಾಲ ಉಳಿಸಿಕೊಳ್ಳುವುದು ಸುಲಭವಲ್ಲ; ಗೆಳೆತನ ಬಾಳಿಕೆ ಬರಲು ನೆರವಾಗುವ 8 ಅಂಶಗಳಿವು -ಮನದ ಮಾತು

ಫ್ರೆಂಡ್‌ಶಿಪ್ ಡೇ ಎಂದ ತಕ್ಷಣ ನೆನಪಾಗುವುದು ನಮ್ಮ ಆತ್ಮೀಯ ಸ್ನೇಹಿತರು. ವಿಷೇಷವಾಗಿ ಬಾಲ್ಯದ ಸ್ನೇಹಿತರು. ಬಾಲ್ಯದ ಸ್ನೇಹದಲ್ಲಿ ಯಾವುದೇ ಮುಖವಾಡಗಳಾಗಲಿ ಅಥವಾ ಕಲ್ಮಶಗಳಾಗಲಿ ಇರುವುದಿಲ್ಲ. ಸ್ನೇಹದಲ್ಲಿ ಯಾವುದೇ ಲಾಭ ಅಥವಾ ನಷ್ಟಗಳನ್ನು ಪರಿಗಣಿಸದೇ ಸ್ನೇಹ ಒಂದೇ ಕೇಂದ್ರಿಕೃತವಾಗಿದ್ದು ಮುಗ್ಧತೆಯಿಂದ ಕೂಡಿರುತ್ತದೆ. ಬಹುತೇಕ ವ್ಯಕ್ತಿಗಳ ಬದುಕಿನಲ್ಲಿ ಬಾಲ್ಯ ಸ್ನೇಹಿತರ ಪಾತ್ರ ಮತ್ತು ಪಾಲು ಬಹಳ ಮಹತ್ವವಾದುದು. ಈ ಸ್ಥಾನವನ್ನು ಭವಿಷ್ಯದಲ್ಲಿ ಮತ್ತೊಬ್ಬರಿಂದ ತುಂಬಲು ಸಾಧ್ಯವಿಲ್ಲ. ಆದ್ದರಿಂದಲೇ ಬಾಲ್ಯ ಸ್ನೇಹದ ನೆನಪುಗಳು ಅಮರ. ನಮ್ಮ ಜೀವನದ ಬಾಲ್ಯದ ದಿನಗಳಿಂದ ಇಳಿ ವಯಸ್ಸಿನವರೆಗೂ ಸ್ನೇಹದ ಮಹತ್ವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕುಟುಂಬ, ಹಣ, ವಿದ್ಯೆ, ಆರೋಗ್ಯದಷ್ಟೇ ಸ್ನೇಹವೂ ಕೂಡ ಮುಖ್ಯ. ಎಲ್ಲ ಹಂತಗಳಲ್ಲೂ ಇವೆಲ್ಲವೂ ಇದ್ದು ಒಳ್ಳೆಯ ಸ್ನೇಹವಿಲ್ಲದಿದ್ದರೆ ಬದುಕು ಅಪೂಣ೯ವೆನ್ನಿಸುತ್ತದೆ ಮತ್ತು ಒಂಟಿತನವೂ ಕಾಡುತ್ತದೆ. ನಮ್ಮ ಅಂತರಾಳವನ್ನು ಅಥ೯ ಮಾಡಿಕೊಳ್ಳುವ ಸಾಧ್ಯತೆ ಸ್ನೇಹಿತರಿಗೆ ಹೆಚ್ಚು.

1) ಸಂಖ್ಯೆಗಿಂತಲೂ ಸ್ವಭಾವ ಮುಖ್ಯ

ಸಾವಿರ ಮಂದಿ ಸ್ನೇಹಿತರನ್ನು ಸಂಪಾದಿಸುವುದರ ಬದಲು ಸಂಪಾದಿಸಿದ ಒಂದೇ ಒಂದು ಸ್ನೇಹ ಸಾವಿರ ಕಾಲ ಇರುವಂತೆ ಮಾಡುವುದು ಒಂದು ದೊಡ್ಡ ಕಲೆ. ಈ ಕಲೆಯನ್ನು ಮೈಗೂಡಿಸಿಕೊಳ್ಳುವುದು ಸಹ ಜೀವನ ಕೌಶಲ್ಯವೆನ್ನಬಹುದು. ಒಂದು ಆತ್ಮೀಯ ಸ್ನೇಹವಿದ್ದರೆ ಮನಸ್ಸಿಗೆ ಆನೆಯ ಬಲವಿದ್ದಂತೆ. ಬದುಕಿನಲ್ಲಿ ಏನೇ ಏರಿಳಿತವಾದರೂ ಸರಿ, ವ್ಯಕ್ತಿಯು ಸ್ನೇಹದ ಬೆಂಬಲವನ್ನು ಬಳಸಿಕೊಂಡು ಎದುರಿಸುತ್ತಾನೆ.

ನಮ್ಮ ಬದುಕಿನ ಚಿಕ್ಕಪುಟ್ಟ ಆಗುಹೋಗುಗಳು, ಕಷ್ಟಸುಖಗಳನ್ನು ಹಂಚಿಕೊಳ್ಳಲು ಸ್ನೇಹತರಿರಬೇಕು. ಆಗಲೇ ಮನಸ್ಸು ಹಗುರವಾಗುವುದು. ಇನ್ನು ಕುಟುಂಬ, ಹಣ, ವಿದ್ಯೆ, ಆರೋಗ್ಯದಷ್ಟೇ ಮುಖ್ಯ ಸ್ನೇಹವೂ ಕೂಡ. ಹಣ, ಅಂತಸ್ತು, ಸೋಲು, ಗೆಲುವುಗಳ ಜೊತೆಯಲ್ಲಿ ಆಧಾರ ಸ್ತಂಭದಂತೆ ನಿಲ್ಲುವ ಸ್ನೇಹವನ್ನು ಸಂಪಾದನೆ ಮಾಡುವುದು ಸುಲಭವಲ್ಲ, ಕಷ್ಟಪಟ್ಚು ಸಂಪಾದಿಸಿ ಕಟ್ಟುವ ಅನುಬಂಧವೇ ಸ್ನೇಹ. “We must earn friendship” ಅಂದರೆ ಸ್ನೇಹವನ್ನು ಗಳಿಸಬೇಕು.

2) ಇರುವಂತೆ ಒಪ್ಪಿಕೊಳ್ಳುವುದೇ ನಿಜವಾದ ಸ್ನೇಹ

ಒಳ್ಳೆಯ ಸ್ನೇಹವೆಂದರೆ ನಾವು ಆ ಒಂದು ಸ್ನೇಹದಲ್ಲಿ ನಮ್ಮತನವನ್ನು ಬದಲು ಮಾಡಿಕೊಳ್ಳದೆ, ಕಳೆದುಕೊಳ್ಳದೇ, ಇದ್ದ ಹಾಗೆಯೇ ನಿಸ್ಸಂಕೋಚ, ನಿಭ೯ಯದಿಂದ ಇರಬಹುದಾದಂತಹ ಒಂದು ವಿಶೇಷ ಸ್ನೇಹ. ನಮ್ಮ ಮನಸ್ಥಿತಿಯನ್ನು ಸುಧಾರಿಸುವಂತಹ ವ್ಯಕ್ತಿ. ನಮ್ಮ ಆಸ್ತಿ, ಅಂತಸ್ತು ಪ್ರತಿಭೆ ಅಧಿಕಾರ ಯಾವುದನ್ನು ಪರಿಗಣಿಸದೆ, ಲಾಭ-ನಷ್ಟಗಳಲ್ಲಿ ಸದಾ ನಮ್ಮೊಡನೆ ಇರುವವರೆೇ ನಿಜವಾದ ಸ್ನೇಹಿತರು. ನಮ್ಮಲ್ಲಿ ಒಂದು ಪಕ್ಷ ಹಣ ಅಧಿಕಾರ ಹೆಸರು ಇದ್ದರೂ ಸಹ ಅದರ ದುರುಪಯೋಗ (exploit) ಮಾಡಿಕೊಳ್ಳದಿರುವುದು ಪ್ರಾಮಾಣಿಕ ಸ್ನೇಹದ ಲಕ್ಷಣ.

3) ದಿಢೀರ್ ಫ್ರೆಂಡ್‌ಶಿಪ್ (Instant friendship)

ಇತ್ತೀಚಿನ ದಿನಗಳಲ್ಲಿ ಸ್ನೇಹವು ಸಾಮಾಜಿಕ ಜಾಲತಾಣಗಳಲ್ಲಿ (instant) ದಿಢೀರನೆ ಸಂಭವಿಸುವುದನ್ನು ನಾವು ನೋಡಬಹುದು. ಬಹುತೇಕವಾಗಿ ಇಂತಹ ಸ್ನೇಹದ ಉದ್ದೇಶ ತೋರಾಣಿಕೆ ಆಗಿರುತ್ತದೆ. ದೀಘ೯ ಕಾಲದವರೆಗೆ ಇಂಥ ಸ್ನೇಹ ಉಳಿಯುವುದು ಅಪರೂಪ. ಇಂಥ ಸ್ನೇಹವು ಆಡಂಬರ, ಸ್ಪರ್ಧಾತ್ಮಕ, ಅಸೂಯೆ ಮತ್ತು ದುರುಪಯೋಗಗಳಿಂದ ಕೂಡಿರುವ ಸಾಧ್ಯತೆ ಹೆಚ್ಚು. ಭದ್ರತೆಯು ಸಹ ಸವಾಲಾಗಿರುತ್ತದೆ.

4) ನಮ್ಮ ಸ್ನೇಹಿತರು ನಮ್ಮ ಕನ್ನಡಿ

ಸಾಮಾನ್ಯವಾಗಿ ನಾವೆಲ್ಲರೂ ಸಹ ಒಳ್ಳೆಯ ಸ್ನೇಹಿತರು ಬೇಕೆಂಬ ಅಪೇಕ್ಷೆಯಲ್ಲೇ ಇರುತ್ತೇವೆ. ಆದರೆ ಇದರ ಜೊತೆಜೊತೆಯಲ್ಲೇ ನಾನು ಸಹ ಒಳ್ಳೆಯ ಸ್ನೇಹಿತೆ/ತನಾಗಬೇಕೆಂದು ಪ್ರಯತ್ನಿಸುವುದು ಕಡಿಮೆ. ನಮ್ಮ ಸ್ನೇಹಿತರು ನಮ್ಮ ವ್ಯಕ್ತಿತ್ವದ , ನಡೆನುಡಿಗಳ ಪ್ರತಿಬಿಂಬಿಸುವ ಕನ್ನಡಿಯಾಗಿರುತ್ತಾರೆ. ನಾವು ಉದಾರ ಮತ್ತು ವಿಶಾಲ ಮನಸ್ಸಿನವರಾಗಿದ್ದು, ಪ್ರಾಮಾಣಿಕತೆ, ಆದಶ೯ ಪಾಲಿಸದವರಾಗಿದ್ದು, ಸಹಾನುಭೂತಿ, ವಿನಯ, ಸಹಾಯಕದವರಾಗಿದ್ದರೆ ನಮ್ಮ ಸ್ನೇಹಿತರು ಕೂಡ ಈ ಗುಣಗಳನ್ನೇ ಪ್ರತಿಬಿಂಬಿಸುತ್ತಾರೆ. ನಮ್ಮ ಪಾಸಿಟಿವ್ ಮನಸ್ಥಿತಿಯನ್ನು ಅನುಕರಿಸುವ, ಅನುಸರಿಸುವ ಸಾಧ್ಯತೆಯೂ ಇರುತ್ತದೆ. ಇನ್ನು ನಮ್ಮಲ್ಲಿ ಕೆಟ್ಟ ಗುಣಗಳಿದ್ದರೆ (ಸ್ವಾಥ೯, ಅಹಂ, ಮೋಸ ವಂಚನೆ) ನಮ್ಮ ಸ್ನೇಹಿತರಲ್ಲಿಯೂ ಈ ಗುಣಗಳನ್ನು ನಾವು ನೋಡಬಹುದು. ಅಂದರೆ ನಮ್ಮ ಗುಣ ಮತ್ತು ನಂಬಿಕೆಯ ಅನುಸಾರ ನಾವು ಸ್ನೇಹಿತರನ್ನು ಆಯ್ಕೆ ಮಾಡುತ್ತೇವೆ.

5) ಪರವಾಗಿಲ್ಲ ಬಿಡು, ಕ್ಷಮಿಸುವ ಕಲೆ ರೂಢಿಸಿಕೊಳ್ಳಿ (the art of Forgiveness)

ಸಣ್ಣಪುಟ್ಚ ಮನಸ್ತಾಪಗಳು, ಭಿನ್ನಾಭಿಪ್ರಾಯಗಳು ಸ್ನೇಹದಲ್ಲಿ ಪದೇಪದೆ ಉದ್ಭವಿಸುತ್ತಿರುತ್ತವೆ. ಇದರ ಕುರಿತು ಆಗಾಗ ಈ ಕುರಿತು ಮುಕ್ತವಾಗಿ ಮಾತನಾಡಿಕೊಳ್ಳಬೇಕು. ಒಬ್ಬರು ಮತ್ತೊಬ್ಬರನ್ನು ತಿದ್ದಿಕೊಂಡು, ಕ್ಷಮಿಸಿ ಸ್ನೇಹವನ್ನು ಮುಂದುವರೆಸುವುದು ಉತ್ತಮ. ಇಲ್ಲವಾದರೆ ಸಣ್ಣಪುಟ್ಟ ಅಸಮಾಧಾನಗಳೇ ಹೆಮ್ಮರವಾಗಿ ಸ್ನೇಹಿತರನ್ನು ಶಾಶ್ವತವಾಗಿ ದೂರಮಾಡುತ್ತದೆ. ‘It’s ok’ ನನ್ನ ಗೆಳತಿ / ಗೆಳೆಯ ತಾನೆ, ಕ್ಷಮಿಸಿಬಿಡೋಣ ಎನ್ನುವ ಮನೋಭಾವನೆ ಎರಡು ಕಡೆಯಿಂದ ಇದ್ದರೆ ಮಾತ್ರ ಸ್ನೇಹಾನುಬಂಧ ಶಾಶ್ವತವಾಗುತ್ತದೆ. ಯಾವುದೇ ಕಾರಣಕ್ಕೂ ಸ್ವಾಥ೯ ಮತ್ತು ಅಹಂ (ನಾನು ಸರಿ, ನನ್ನದೇ ಸರಿ) ಎನ್ನುವ ಮನೋಭಾವಕ್ಕೆ ಸ್ನೇಹದಲ್ಲಿ ಜಾಗ ಕೊಡಬಾರದು.

6) ತೀರ್ಪುಗಾರರಾಗಬೇಡಿ

ತೀರ್ಪು ನೀಡುವ ಸ್ವಭಾವವು ಸ್ನೇಹಕ್ಕೆ ಎಂದಿಗೂ ಒಳ್ಳೆಯದಲ್ಲ. ಇನ್ನೊಬ್ಬರು ಸದಾ ನಿಮ್ಮ ಮೂಗಿನ ನೇರಕ್ಕೆ ಬದುಕಲು ಸಾಧ್ಯವಿಲ್ಲ. ನಮ್ಮ ಸ್ನೇಹಿತರ ನಡೆನುಡಿ, ಸ್ವಭಾವ, ಸೌಂದರ್ಯ, ಸ್ಥಾನಮಾನ, ಅಭಿಪ್ರಾಯ, ನಂಬಿಕೆ, ದೃಷ್ಟಿಕೋನವನ್ನು ಗೌರವಿಸಬೇಕು ಮತ್ತು ಇದ್ದ ಹಾಗೆಯೇ ಒಪ್ಪಿಕೊಳ್ಳಬೇಕು. ಅದರ ಕುರಿತು ಹಣೆಪಟ್ಚಿ ಹಚ್ಚುವುದು ಅಥವಾ ತೀಪು೯ ನೀಡುವುದು ಸರಿಯಲ್ಲ.

ತಿದ್ದುವುದು ಉದ್ದೇಶವಿದ್ದರೂ ಕೂಡ ಮೊದಲು ಅವರ ಭಾವನೆಯನ್ನು ಗೌರವಿಸಿ, ನಿಧಾನವಾಗಿ ಅವರಿಗೆ ಮನವರಿಕೆ ಮಾಡಿಕೊಡುವುದು ಒಳ್ಳೆಯದು. ಸ್ನೇಹಿತರ ಬಗ್ಗೆ ಕೀಳು ಮನೋಭಾವನೆ ಬೆಳೆಸಿಕೊಳ್ಳುವುದು, ಅಧಿಕಾರ ಚಲಾಯಿಸುವುದು ಆರೋಗ್ಯಕರ ನಡವಳಿಕೆಯಲ್ಲ.

7) ಸ್ನೇಹಿತರು ನಮ್ಮ ಶಿಲ್ಪಿಗಳು (Inspire, motivate, mentor)

ನಮ್ಮಸ್ನೇಹಿತರು ನಮಗೆ ಮಾಗ೯ದಶ೯ನ , ಸ್ಪೂತಿ೯ ಮತ್ತು ಪ್ರೇರಣೆ ನೀಡುವಂತೆ ಇರಬೇಕು. ನಮ್ಮ ಸ್ನೇಹಿತರು ಕಲ್ಲನ್ನು ಕೆತ್ತುವ ಶಿಲ್ಪಿಯ ತರಹ, ನಮ್ಮ ಸರಿ-ತಪ್ಪು ಗುರುತಿಸಿ ಸರಿಯಾದ ಮಾಗ೯ವನ್ನು ತೋರಿಸಿ, ಪ್ರೇರೇಪಿಸಿ, ನಮ್ಮ ನೋವುಗಳನ್ನು ಆಲಿಸಿ, ಸುಧಾರಿಸಿ ನಮ್ಮನ್ನು ಬದುಕಿನಲ್ಲಿ ಉಚ್ಚ ಸ್ಥಾನಕ್ಕೆ ಕರೆದುಕೊಂಡು ಹೋಗುವರಾಗಿರಬೇಕು. 'ಸಹವಾಸದಿಂದ ಕೆಟ್ಟು ಹೋದರು' ಎನ್ನುವ ಪಟ್ಟವನ್ನು ಪಡೆಯುವಂಥವರನ್ನು ಸ್ನೇಹಿತರಾಗಿ ಸ್ವೀಕರಿಸಬಾರದು.

8) ನಮ್ಮೊಳಗಿರುವ ಗೆಳತಿ /ಗೆಳೆಯನನ್ನು ಎಂದಿಗೂ ಮರೆಯಬೇಡಿ

ಕೊನೆಯದಾಗಿ, ಪ್ರತಿ ವ್ಯಕ್ತಿಯಲ್ಲೂ ಒಬ್ಬ ಒಳ್ಳೆಯ ಗೆಳತಿ / ಗೆಳೆಯ ಅಡಗಿರುತ್ತಾರೆ. ನಮ್ಮೊಳಗೆ ಅಡಗಿ ಕುಳಿತಿರುವ ಆ ಸ್ನೇಹವನ್ನು ನಾವು ಕಂಡುಕೊಳ್ಳಬೇಕು. ನಮಗೆ ನಾವೇ ಮೊದಲ ಬೆಸ್ಟ್‌ ಫ್ರೆಂಡ್ ಆಗಬೇಕು. ನನ್ನೊಳಗಿರುವ ಸ್ವ-ಅರಿವು, ಪ್ರೀತಿ, ಅನುಬಂಧ, ಸ್ಪೂತಿ೯, ಆತ್ಮವಿಶ್ವಾಸ, ಒಳ್ಳೆಯ ವಿಚಾರ ಧಾರೆಗಳು, ಮೌಲ್ಯಗಳೇ ನಮ್ಮೊಳಗಿರುವ ಸ್ನೇಹಿತರು. ಈ ಸ್ನೇಹಿತರು ನಮ್ಮನ್ನು ಒಟ್ಟಾರೆ ಬೆಳೆಸುತ್ತಾರೆ, ಮಾಗ೯ದಶ೯ನ ಹಾಗೂ ಮಾನಸಿಕ ಬೆಂಬಲವನ್ನು ನೀಡುತ್ತಾರೆ. ಇದನ್ನು ಗುರುತಿಸುವ ದೃಷ್ಟಿಕೋನ, ಸಾಮರ್ಥ್ಯ ನಮ್ಮದಾಗಿರಬೇಕು.

ಫ್ರೆಂಡ್ ಶಿಪ್ ಡೇ ಬಂತು, ನನಗೆ ಒಳ್ಳೆಯ ಸ್ನೇಹಿತರಿಲ್ಲವೆಂದು ಬೇಸರವಾಗುವುದರ ಬದಲು, ನಿಮ್ಮಲ್ಲೆ ಇರುವ ಆ ಸ್ನೇಹಿತೆ / ಸ್ನೇಹಿತನನ್ನು ಒಮ್ಮೆ ಗುರುತಿಸಿ, ಪೋಷಿಸಿ. ಹೀಗೆ ಮಾಡಿದರೆ, 'ನಾನು ಒಂಟಿ, ನನ್ನನ್ನು ಯಾರೂ ಪ್ರೀತಿಸುವವರಿಲ್ಲ, ಅರ್ಥ ಮಾಡಿಕೊಳ್ಳುವವರಿಲ್ಲ' ಎಂದು ಕೊರಗುವುದು ತಪ್ಪುತ್ತದೆ.

ಎಲ್ಲ ಓದುಗರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು. happy friendship day 🙂

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.