ಸ್ನೇಹಿತರಲ್ಲಿ ಈ ಗುಣಗಳಿದ್ದರೆ ನೀವು ನಿಜಕ್ಕೂ ಲಕ್ಕಿ, ಕೇರ್ ಮಾಡುವ ಗೆಳೆಯರನ್ನು ಎಂದಿಗೂ ಕಳೆದುಕೊಳ್ಳಬೇಡಿ: ಸುಮಾ ಕಂಚಿಪಾಲ್ ಬರಹ-friendship day 2024 what is real friendship explains kannada blog writer suma kanchipal importance of friends in life ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ನೇಹಿತರಲ್ಲಿ ಈ ಗುಣಗಳಿದ್ದರೆ ನೀವು ನಿಜಕ್ಕೂ ಲಕ್ಕಿ, ಕೇರ್ ಮಾಡುವ ಗೆಳೆಯರನ್ನು ಎಂದಿಗೂ ಕಳೆದುಕೊಳ್ಳಬೇಡಿ: ಸುಮಾ ಕಂಚಿಪಾಲ್ ಬರಹ

ಸ್ನೇಹಿತರಲ್ಲಿ ಈ ಗುಣಗಳಿದ್ದರೆ ನೀವು ನಿಜಕ್ಕೂ ಲಕ್ಕಿ, ಕೇರ್ ಮಾಡುವ ಗೆಳೆಯರನ್ನು ಎಂದಿಗೂ ಕಳೆದುಕೊಳ್ಳಬೇಡಿ: ಸುಮಾ ಕಂಚಿಪಾಲ್ ಬರಹ

ಇಂದು ಸ್ನೇಹಿತರ ದಿ‌ನ. ನೀವು ನಿಮ್ಮ ಅಪರೂಪದ ಸ್ನೇಹಿತರ ಜೊತೆ ಮಾತಾಡದೇ ತುಂಬಾ ದಿನವಾಗಿದ್ದರೆ ಅವರಿಗೊಂದು ಕಾಲ್ ಮಾಡಿ. ನಿಮಗೀಗ ಹೊಸ ಸ್ನೇಹಿತರು ಸಿಕ್ಕಿದ್ದರೆ ಅವರ ಬಗ್ಗೆಯೂ ಮಾತಾಡಿ. ಒಂದೊಳ್ಳೆ ದಿನವನ್ನು ನಿಮ್ಮ ರಿಯಲ್ ಫ್ರೆಂಡ್ ಜೊತೆ ಕಳೆಯಿರಿ.

ಗೆಳತಿ, ಗೆಳೆಯರೊಂದಿಗೆ ಲೇಖಕಿ ಸುಮಾ ಕಂಚಿಪಾಲ್
ಗೆಳತಿ, ಗೆಳೆಯರೊಂದಿಗೆ ಲೇಖಕಿ ಸುಮಾ ಕಂಚಿಪಾಲ್

ಗೆಳೆತನ ಎಂದರೆ ಅದೊಂದು ಸುಂದರ ಸಂಬಂಧ. ಇನ್ನೊಬ್ಬ ಆಡಿದ ಮಾತಿನಿಂದ ಅವನು ಇಷ್ಟೇ ಎಂದು ನಿರ್ಧರಿಸದೆ ಅವರ ಜೀವನಕ್ಕೆ ಅನುಕೂಲವಾಗುವ ರೀತಿಯಲ್ಲಿ ತನ್ನಿಂದ ಏನಾಗುತ್ತದೆಯೋ ಅದೆಲ್ಲ ಸಹಾಯವನ್ನು ಮಾಡುವವನೇ ನಿಜವಾದ ಸ್ನೇಹಿತ. ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಸ್ನೇಹಿತರು ಇದ್ದೇ ಇರುತ್ತಾರೆ.

ಗೆಳೆಯರೆಂದರೆ ಹೇಗಿರಬೇಕು?

ಗೆಳೆಯ ಎನ್ನುವವನು ಹೇಗಿರಬೇಕು ಎಂದರೆ ನಿಮ್ಮ ಖುಷಿ ದುಃಖ ಹಾಗೂ ನೆಮ್ಮದಿಯಲ್ಲಿ ಸಮನಾಗಿ ಜೊತೆಯಾಗಿರುವವನಾಗಿರಬೇಕು. ಅವನು ಹೆಚ್ಚಿಗೆ ಮಾತನಾಡದೆ ನೀವು ಹೇಳಿದ್ದನ್ನ ಆಲಿಸುವವನು ಒಳ್ಳೆಯ ಮಿತ್ರ ಎನಿಸಿಕೊಳ್ಳುತ್ತಾನೆ. ಅಂತಹ ಮಿತ್ರರನ್ನು ಹೊಂದಿದ್ದರೆ ನೀವು ಖಂಡಿತ ಅದೃಷ್ಟವಂತರು ಎಂದೇ ಹೇಳಬಹುದು. ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ನೋವನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳಲು ತುಡಿಯುತ್ತಾ ಇರುತ್ತಾರೆ. ಆದರೆ ಇನ್ನೊಬ್ಬರನ್ನು ಆಲಿಸುವ ಕಿವಿಗಳು ಕಡಿಮೆಯಾಗುತ್ತಾ ಬಂದಿದೆ.

ನಿಮ್ಮ ಗೆಳೆಯರಲ್ಲಿ ಈ ಗುಣವಿದೆಯಾ?

ಸತ್ಯ ಹಾಗೂ ಪ್ರಾಮಾಣಿಕ ಸ್ನೇಹಿತರು ಸಿಕ್ಕುವುದು ಅತಿ ವಿರಳ. ಆ ರೀತಿ ಸ್ನೇಹಿತರು ನಿಮಗೆ ಸಿಕ್ಕಿದ್ದಾರೆ ಎಂದರೆ ಎಂದಿಗೂ ಅವರನ್ನು ಕಳೆದುಕೊಳ್ಳಬೇಡಿ. ಯಾವುದೇ ಮುಚ್ಚುಮರೆ ಇಲ್ಲದೆ ನೀವು ಹೇಳಿದ ಎಲ್ಲ ಸಂಗತಿಗಳನ್ನು ಆಲಿಸಿ ಇನ್ನೊಬ್ಬರ ಮುಂದೆ ನಿಮ್ಮನ್ನು ಹಂಗಿಸಿ ಮಾತಾಡದೇ ನಿಮ್ಮೊಂದಿಗೆ ಆಪ್ತವಾಗಿ ನಡೆದುಕೊಳ್ಳುವ ಗುಣವೇ ಸ್ನೇಹ.

ಪ್ರತ್ಯುಪಕಾರ ಬಯಸದ ಜೀವ

ಸ್ನೇಹಿತ ಅಥವಾ ಸ್ನೇಹಿತೆ ಎಂದಿಗೂ ನಿಮ್ಮಿಂದ ಯಾವುದೇ ಉಪಕಾರವನ್ನು ಬಯಸುವುದಿಲ್ಲ. ಉದಾಹರಣೆಗೆ ತನಗೆ ಮಗಳೇ ಇಲ್ಲದ ಒಬ್ಬಳು ಇನ್ಬೊಬ್ಬ ಸ್ನೇಹಿತೆಗಾಗಿ ಅವಳ ಮಗಳನ್ನು ತನ್ನ ಮಗಳಂತೆ ನೋಡಿಕೊಂಡು ಅವಳ ಬೇಕು ಬೇಡಗಳೆಲ್ಲವನ್ನೂ ನೋಡಿಕೊಳ್ಳುತ್ತಾಳೆ. ಅಥವಾ ನೀವು ದೂರ ಹೊರಟಿದ್ದೀರಿ ಎಂದಾದರೆ ಅವಶ್ಯಕತೆ ಏನಿದೆ ಎಂಬುದನ್ನು ಅರಿತುಕೊಂಡು ಸಹಾಯ ಮಾಡುತ್ತಾರೆ. ಹೀಗೆ ಬೆನ್ನೆಲುಬಾಗಿ ನಿಂತು ಪ್ರತ್ಯುಪಕಾರ ಬಯಸದೇ ಇರುವವರೆ ನಿಜವಾದ ಸ್ನೇಹಿತರು. ಅವರು ನಿಮಗೆ ಒಳಿತನ್ನೇ ಮಾಡುತ್ತಾರೆ.

ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲುವವರು

ನೀವು ನಿಮ್ಮ ಜೀವನದಲ್ಲಿ ಏನೋ ಕಲಿಯಬೇಕು ಅಥವಾ ಮನೆ ನಿರ್ಮಾಣ ಮಾಡಬೇಕು, ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಬೇಕು, ಜಮೀನು ಖರೀದಿಸಬೇಕು, ಅರ್ಜೆಂಟಾಗಿ ಏನೋ ಆಗೋಗಿದೆ ಅಥವಾ ನಿಮ್ಮ ಮನಸಿಗೆ ನೆಮ್ಮದಿಯೇ ಇಲ್ಲ ಎಂದಿಟ್ಟುಕೊಳ್ಳಿ ಆ ಸಮಯದಲ್ಲಿ ನಿಮಗೆ ಮಾನಸಿಕ, ಆರ್ಥಿಕ, ಸಾಮಾಜಿಕವಾಗಿ ತನ್ನ ಕೈಲಾದ ಸಂಪೂರ್ಣ ಸಹಾಯ ಹಸ್ತ ಚಾಚಿ ನಿಮ್ಮನ್ನು ಸಮಸ್ಯೆಯಿಂದ ಪಾರು ಮಾಡುವವನೇ ನಿಜವಾದ ಸ್ನೇಹಿತ.

ಎಲ್ಲರ ಜೀವನದುದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಇನ್ನೊಬ್ಬನ ಸಹಾಯವನ್ನು ಪಡೆಯಲೇಬೇಕಾದ ಸಂದರ್ಭ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾರು ನಿಮ್ಮ ಜೊತೆಯಾಗುತ್ತಾರೋ ಅವರೇ ಆಪ್ತ ಸ್ನೇಹಿತರು‌. ಸ್ನೇಹಿತರಾಗುವುದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ವಯಸ್ಸು ಅಂತಸ್ತಿನ ಹಂಗುಗಳನ್ನು ಮೀರಿ ಬೆಳೆಯುವ ಸುಂದರ ಸಂಬಂಧವೇ ಸ್ನೇಹ.

ಇಂದು ಸ್ನೇಹಿತರ ದಿ‌ನ. ನೀವು ನಿಮ್ಮ ಅಪರೂಪದ ಸ್ನೇಹಿತರ ಜೊತೆ ಮಾತಾಡದೇ ತುಂಬಾ ದಿನವಾಗಿದ್ದರೆ ಅವರಿಗೊಂದು ಕಾಲ್ ಮಾಡಿ. ನಿಮಗೀಗ ಹೊಸ ಸ್ನೇಹಿತರು ಸಿಕ್ಕಿದ್ದರೆ ಅವರ ಬಗ್ಗೆಯೂ ಮಾತಾಡಿ. ಒಂದೊಳ್ಳೆ ದಿನವನ್ನು ನಿಮ್ಮ ರಿಯಲ್ ಫ್ರೆಂಡ್ ಜೊತೆ ಕಳೆಯಿರಿ.

ಸುಮಾ ಕಂಚಿಪಾಲ್ ಪರಿಚಯ
ಬ್ಲಾಗ್ ಬರಹಗಳ ಮೂಲಕ ಹರೆಯದ ಮನಸ್ಸುಗಳ ಭಾವುಕ ಲೋಕವನ್ನು ಕಟ್ಟಿಕೊಡುವ ಸುಮಾ ಕಂಚಿಪಾಲ್ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದವರು. ಅವರ ಹಲವು ಬರಹಗಳು ಮುಖ್ಯ ವಾಹಿನಿಯ ಜಾಲತಾಣಗಳು ಮತ್ತು ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ‘ಸುಕಂ’ ಹೆಸರಿನ ಅವರ ಬ್ಲಾಗ್‌ನಲ್ಲಿ ಆಗಾಗ ಬರಹಗಳನ್ನು ಪ್ರಕಟಿಸುತ್ತಿರುತ್ತಾರೆ.