Filter Coffee: ವಿಶ್ವದ 10 ಬೆಸ್ಟ್‌ ಕಾಫಿಗಳಲ್ಲಿ ಭಾರತದ ಫಿಲ್ಟರ್‌ ಕಾಫಿಗೆ 2ನೇ ಸ್ಥಾನ; ಈ ಕಾಫಿ ವೈಶಿಷ್ಟ್ಯ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Filter Coffee: ವಿಶ್ವದ 10 ಬೆಸ್ಟ್‌ ಕಾಫಿಗಳಲ್ಲಿ ಭಾರತದ ಫಿಲ್ಟರ್‌ ಕಾಫಿಗೆ 2ನೇ ಸ್ಥಾನ; ಈ ಕಾಫಿ ವೈಶಿಷ್ಟ್ಯ ಹೀಗಿದೆ

Filter Coffee: ವಿಶ್ವದ 10 ಬೆಸ್ಟ್‌ ಕಾಫಿಗಳಲ್ಲಿ ಭಾರತದ ಫಿಲ್ಟರ್‌ ಕಾಫಿಗೆ 2ನೇ ಸ್ಥಾನ; ಈ ಕಾಫಿ ವೈಶಿಷ್ಟ್ಯ ಹೀಗಿದೆ

ಭಾರತದ ಫಿಲ್ಟರ್‌ ಕಾಫಿಗೆ ವಿಶ್ವದ ಬೆಸ್ಟ್‌ ಕಾಫಿಗಳಲ್ಲಿ ಸ್ಥಾನ ಸಿಕ್ಕಿದೆ. ಪ್ರಪಂಚದಾದ್ಯಂತ ಸಿಗುವ 10 ಅತ್ಯುತ್ತಮ ಕಾಫಿಗಳಲ್ಲಿ ಭಾರತದ ಫಿಲ್ಟರ್‌ ಕಾಫಿ 2ನೇ ಸ್ಥಾನ ಗಳಿಸಿದೆ. ಈ ಸುದ್ದಿಯನ್ನು ಕೇಳಿದ ಮೇಲೆ ಕಾಫಿ ಪ್ರಿಯರು ಇನ್ನೊಂದು ಕಪ್‌ ಕಾಫಿ ಎಕ್ಸ್ಟ್ರಾ ಕುಡಿಯೋದು ಪಕ್ಕಾ ಅನ್ಸುತ್ತೆ.

ವಿಶ್ವದ 10 ಬೆಸ್ಟ್‌ ಕಾಫಿಗಳಲ್ಲಿ ಭಾರತದ ಫಿಲ್ಟರ್‌ ಕಾಫಿಗೆ 2ನೇ ಸ್ಥಾನ
ವಿಶ್ವದ 10 ಬೆಸ್ಟ್‌ ಕಾಫಿಗಳಲ್ಲಿ ಭಾರತದ ಫಿಲ್ಟರ್‌ ಕಾಫಿಗೆ 2ನೇ ಸ್ಥಾನ

ಪ್ರಪಂಚದಾದ್ಯಂತ ಹಲವು ಜನರ ಬೆಳಗು ಆರಂಭವಾಗುವುದು ಸ್ವಾದಭರಿತ ಕಾಫಿಯಿಂದ. ಕಾಫಿ ಲಕ್ಷಾಂತರ ಮಂದಿಯ ಜೀವನ ಸಂಗಾತಿ ಎಂಬಂತಾಗಿರುವುದು ಸುಳ್ಳಲ್ಲ, ಯಾಕೆಂದರೆ ಕೆಲವರಿಗೆ ಬೆಳಗೆದ್ದ ತಕ್ಷಣ ಕಾಫಿ ಕುಡಿದಿಲ್ಲ ಅಂದ್ರೆ ಪ್ರಪಂಚವನ್ನೇ ಕಳೆದುಕೊಂಡ ಭಾವ ಆವರಿಸುವುದ ಸುಳ್ಳಲ್ಲ. ಕಾಫಿ ಭಾರತದಲ್ಲಿ ಅಧಿಕವಾಗಿ ಬೆಳೆದರೂ ಕೂಡ ಪ್ರಪಂಚದಾದ್ಯಂತ ಕಾಫಿ ಪ್ರಿಯರು ಹಲವರಿದ್ದಾರೆ. ಅದರಲ್ಲೂ ಫಿಲ್ಟರ್‌ ಕಾಫಿ ಕುಡಿತಾ ಇದ್ರೆ ಆಹಾ, ಸ್ವರ್ಗ ಸುಖ ಎನ್ನಿಸುವುದು ಸುಳ್ಳಲ್ಲ. ಅದೆಲ್ಲಾ ಸರಿ ಕಾಫಿ ಬಗ್ಗೆ ಇಷ್ಟೆಲ್ಲಾ ಮಾತು ಯಾಕೆ ಅಂತೀರಾ, ಖಂಡಿತ ವಿಷ್ಯಾ ಇದೆ. ಭಾರತದ ಫಿಲ್ಟರ್‌ ಕಾಫಿ ಈಗ ವಿಶ್ವದ ಬೆಸ್ಟ್‌ ಕಾಫಿಗಳಲ್ಲಿ 2ನೇ ಸ್ಥಾನ ಪಡೆದಿದೆ.

ಆಹಾರಗಳ ಗುಣಮಟ್ಟ ಹಾಗೂ ಜನಪ್ರಿಯತೆಯನ್ನು ಗುರುತಿಸಿ ಗೌರವಿಸುವ ಟೇಸ್ಟ್‌ ಅಟ್ಲಾಸ್‌ ಇದೀಗ ವಿಶ್ವದ 10 ಅತ್ಯುತ್ತಮ ಕಾಫಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆಫೆ ಕ್ಯೂಬಾನೊ ಅಗ್ರಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿದೆ ಭಾರತದ ಫಿಲ್ಟರ್‌ ಕಾಫಿ.

ʼಭಾರತದ ಫಿಲ್ಟರ್‌ ಕಾಫಿಯು ವಿಶಿಷ್ಟ ಪರಿಮಳದ ಕಾಫಿ ಬೀಜಗಳಿಂದ ತಯಾರಾಗುತ್ತದೆ. ಇದನ್ನು ದಕ್ಷಿಣ ಭಾರತದ ಕಾಫಿತೋಟಗಳಲ್ಲಿ ಬೆಳೆಯುವ ಅರೇಬಿಕಾ ಹಾಗೂ ರೋಬಸ್ಟಾ ಎರಡನ್ನೂ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಇದನ್ನು ಹುರಿದು ಪುಡಿ ಮಾಡಿ ತಯಾರಿಸುವ ಫಿಲ್ಟರ್‌ ಕಾಫಿ ರುಚಿ ಭಿನ್ನವಾಗುತ್ತಿರುತ್ತದೆʼ ಎಂದು ಇಂಡಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಬಾಣಸಿಗರೊಬ್ಬರು ತಿಳಿಸಿದ್ದಾರೆ.

ಆದರೆ ಬೇರೆ ಕಾಫಿಗಳಿಗೆ ಹೋಲಿಸಿದರೆ ಭಾರತದ ಫಿಲ್ಟರ್‌ ಕಾಫಿಯು ಹೆಚ್ಚು ಕೆಫಿನ್‌ ಅಂಶವನ್ನು ಹೊಂದಿರುತ್ತದೆ ಎಂಬುದು ಕೂಡ ಸುಳ್ಳಲ್ಲ.

ಫಿಲ್ಟರ್‌ ಕಾಫಿ ಬೇರೆ ಕಾಫಿಗಳಿಗೆ ಹೋಲಿಸಿದರೆ ಕೊಂಚ ಕಹಿರುಚಿ ಹೊಂದಿರುತ್ತದೆ. ಆದರೆ ಇದರ ಪರಿಮಳ, ಸ್ವಾದ ನಿಜಕ್ಕೂ ಅದ್ಭುತ. ಫಿಲ್ಟರ್‌ ಕಾಫಿ ತಯಾರಿಸಲು ಸಮಯವೂ ಕೊಂಚ ಹೆಚ್ಚು ಬೇಕು. ಇದು ಹಾಲು, ಸಕ್ಕರೆ, ಕಾಫಿಪುಡಿ ಮಿಶ್ರಣ ಮಾಡಿ ಕುದಿಸಿ ತಯಾರಿಸುವ ಫಿಲ್ಟರ್‌ ಕಾಫಿಗಳಿಂದಲೇ ಕೆಲವು ಹೋಟೆಲ್‌ಗಳು ಫೇಮಸ್‌ ಆಗಿವೆ.

ಫಿಲ್ಟರ್‌ ಕಾಫಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ಹೃದ್ರೋಗದ ಅಪಾಯವನ್ನ ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕಾಫಿ ಇತಿಹಾಸ

17ನೇ ಶತಮಾನದವರೆಗೆ ಕಾಫಿಯನ್ನು ಅರೇಬಿಯಾದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಅದನ್ನು ಹುರಿದ ಅಥವಾ ಬೇಯಿಸಿದ ರೂಪದಲ್ಲಿ ಬೇರೆ ದೇಶಗಳಲ್ಲಿ ರಪ್ತು ಮಾಡಲಾಗುತ್ತಿತ್ತು. ಅರೇಬಿಯನ್‌ ಕಾಪಿ ಏಕಸ್ವಾಮ್ಯವನ್ನು ರಕ್ಷಿಸಲು ಕಚ್ಚಾ ಕಾಫಿ ಬೀಜಗಳನ್ನು ಆ ದೇಶದಿಂದ ಹೊರ ತರುವುದಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಇತಿಹಾಸಗಳ ಪ್ರಕಾರ ಸೂಪಿ ಬಾಬಾ ಬುಡನ್‌ ಅವರು ಮೆಕ್ಕಾ ತೀರ್ಥಯಾತ್ರೆಗೆ ಹೋದಾಗ 7 ಕಾಫಿ ಬೀಜಗಳನ್ನು ರಹಸ್ಯವಾಗಿ ತಂದು ಚಿಕ್ಕಮಗಳೂರಿನ ಬೆಟ್ಟಗಳಲ್ಲಿ ನೆಟ್ಟರು. ಅಲ್ಲಿನ ವಾತಾವರಣಕ್ಕೆ ಕಾಫಿಗಿಡಗಳು ಚೆನ್ನಾಗಿ ಬೆಳೆಯಿತು. ಮುಂದೆ ಬಾಬಾ ಬುಡನ್‌ ಅವರಿಂದ ಪ್ರಪಂಚದಾದ್ಯಂತ ಕಾಫಿ ಬೆಳೆ ಬೆಳೆಯಲು ಸಾಧ್ಯವಾಯಿತು ಎಂಬ ಮಾತಿದೆ. ಹಿಂದೆಲ್ಲಾ ಕಾಫಿಗೆ ಬೆಲ್ಲ ಅಥವಾ ಜೇನುತುಪ್ಪ ಹಾಕಿ ತಯಾರಿಸುತ್ತಿದ್ದರು. 1900ರಿಂದ ಸಕ್ಕರೆ ಹಾಕಿ ಕಾಫಿ ಮಾಡುವ ಅಭ್ಯಾಸ ರೂಢಿಯಾಯಿತು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner