ವರ್ಷಕ್ಕಾಗುವಷ್ಟು ತಯಾರಿಸಿದ ಉಪ್ಪಿನಕಾಯಿಗೆ ಬೂಸ್ಟ್‌ ಹಿಡಿಯುತ್ತಿದೆಯೇ? ಈ ಟಿಪ್ಸ್ ಫಾಲೊ ಮಾಡಿ, ಬಹುಕಾಲ ಬಾಳಿಕೆ ಬರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ವರ್ಷಕ್ಕಾಗುವಷ್ಟು ತಯಾರಿಸಿದ ಉಪ್ಪಿನಕಾಯಿಗೆ ಬೂಸ್ಟ್‌ ಹಿಡಿಯುತ್ತಿದೆಯೇ? ಈ ಟಿಪ್ಸ್ ಫಾಲೊ ಮಾಡಿ, ಬಹುಕಾಲ ಬಾಳಿಕೆ ಬರುತ್ತೆ

ವರ್ಷಕ್ಕಾಗುವಷ್ಟು ತಯಾರಿಸಿದ ಉಪ್ಪಿನಕಾಯಿಗೆ ಬೂಸ್ಟ್‌ ಹಿಡಿಯುತ್ತಿದೆಯೇ? ಈ ಟಿಪ್ಸ್ ಫಾಲೊ ಮಾಡಿ, ಬಹುಕಾಲ ಬಾಳಿಕೆ ಬರುತ್ತೆ

ಬೇಸಿಗೆಯಲ್ಲಿ, ಮಾವಿನ ಕಾಯಿಯ ಸೀಸನ್‌ ಪ್ರಾರಂಭವಾಗುತ್ತಿದ್ದಂತೆ ಉಪ್ಪಿನಕಾಯಿ ಮಾಡಲು ತಯಾರಾಗುತ್ತಾರೆ. ವರ್ಷಪೂರ್ತಿ ಸಾಕಾಗುಷ್ಟು ತಯಾರಿಸಿದ ಉಪ್ಪಿನಕಾಯಿಯನ್ನು ಬೂಸ್ಟ್‌ ಬರದಂತೆ ರಕ್ಷಿಸುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಇಲ್ಲಿದೆ ಟಿಪ್ಸ್‌. ಇದನ್ನು ಫಾಲೊ ಮಾಡಿ, ಊಟದ ರುಚಿ ಹೆಚ್ಚಿಸುವ ಉಪ್ಪಿನಕಾಯಿ ಬಹುಕಾಲ ಬಾಳಿಕೆ ಬರುವಂತೆ ರಕ್ಷಿಸಿ.

ಉಪ್ಪಿನಕಾಯಿಗೆ ಬೂಸ್ಟ್‌ ಬರದಂತೆ ರಕ್ಷಿಸಲು ಟಿಪ್ಸ್‌
ಉಪ್ಪಿನಕಾಯಿಗೆ ಬೂಸ್ಟ್‌ ಬರದಂತೆ ರಕ್ಷಿಸಲು ಟಿಪ್ಸ್‌ (PC: Freepik)

ಬೇಸಿಗೆಯಲ್ಲಿ ಬೆವರಿಳಿಸುವ ಹವಾಮಾನ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ತೇವಾಂಶದಿಂದ ಕೂಡಿರುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಹೆಚ್ಚು ಮಳೆಯಾಗಿ ಎಲ್ಲಡೆ ತೇವಾಂಶ ಹೆಚ್ಚಾಗಿರುತ್ತದೆ. ತೇವಾಂಶದಿಂದ ಕೂಡಿರುವ ಹವಾಮಾನ ಅಕ್ಟೋಬರ್‌ ಕೊನೆಯವರೆಗೂ ಮುಂದುವರಿಯುತ್ತದೆ. ಅಂತಹ ದಿನಗಳಲ್ಲಿ ಅಡುಗೆಮನೆಯ ಆಹಾರ ಪದಾರ್ಥಗಳನ್ನು ರಕ್ಷಿಸಿಟ್ಟುಕೊಳ್ಳುವುದೇ ಒಂದು ದೊಡ್ಡ ಸಾಹಸದ ಕೆಲಸ. ತೇವಾಂಶದಿಂದ ಹುಳು ಹಿಡಿದು ಕಾಳು, ಬೇಳೆ, ಅಕ್ಕಿ ಹೀಗೆ ಎಲ್ಲವೂ ಹಾಳಾಗುತ್ತವೆ. ಉಪ್ಪಿನಕಾಯಿ, ತೊಕ್ಕುಗಳಿಗಂತೂ ಬೂಸ್ಟ್‌ ಬರುವುದು ಸಾಮಾನ್ಯ. ಊಟದ ರುಚಿ ಹೆಚ್ಚಿಸಿಕೊಳ್ಳಬೇಕೆಂದು ಬೇಸಿಗೆಯ ದಿನಗಳಲ್ಲಿ ಕಷ್ಟಪಟ್ಟು ತಯಾರಿಸಿದ ಉಪ್ಪಿನಕಾಯಿ ಅದೆಷ್ಟೇ ಜೋಪಾನ ಮಾಡಿದರೂ ತೇವಾಂಶದಿಂದ ಹಾಳಾದರೆ ಎಲ್ಲರಿಗೂ ಬೇಸರವಾಗುತ್ತದೆ. ಉಪ್ಪಿನಕಾಯಿ ಹಾಳಾಗಲು ಬಹು ಮುಖ್ಯ ಕಾರಣವೆಂದರೆ ಶಿಲೀಂದ್ರಗಳ ಬೆಳವಣಿಗೆ. ತೇವಾಂಶ ಜಾಸ್ತಿಯಿದ್ದಾಗ ಅವುಗಳ ಬೆಳವಣಿಗೆ ಇನ್ನೂ ಹೆಚ್ಚು. ಹಾಗಾಗಿ ಉಪ್ಪಿನಕಾಯಿಯಂತಹ ಆಹಾರ ಪದಾರ್ಥಗಳನ್ನು ಕೆಡದಂತೆ ಸಂರಕ್ಷಿಸಲು ಜಾಣತನ ಬೇಕು. ಅದಕ್ಕಾಗಿ ಇಲ್ಲಿ ಕೆಲವು ಟಿಪ್ಸ್‌ ಹೇಳಲಾಗಿದೆ. ಅದನ್ನು ಪಾಲಿಸಿ, ನೀವು ತಯಾರಿಸಿದ ಉಪ್ಪಿನಕಾಯಿಯನ್ನು ಬಹಳ ದಿನಗಳವರೆಗೆ ರಕ್ಷಿಸಿಕೊಳ್ಳಿ.

ಉಪ್ಪಿನಕಾಯಿಗೆ ಬೂಸ್ಟ್‌ ಹಿಡಿಯುವುದನ್ನು ತಪ್ಪಿಸಲು ಈ ಸಲಹೆಗಳನ್ನು ಪಾಲಿಸಿ

ಉಪ್ಪಿನಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ. ಊಟಕ್ಕೆ ಉಪ್ಪಿನಕಾಯಿಯಿಲ್ಲ ಎಂದರೆ ಆ ಊಟ ಸಪ್ಪೆ ಎನಿಸುತ್ತದೆ. ಉಪ್ಪಿನಕಾಯಿಯಲ್ಲಿ ಹಲವು ವಿಧಗಳಿವೆ. ಮಾವಿನಕಾಯಿ, ನಿಂಬೆಕಾಯಿ, ಶುಂಠಿ, ಬೆಳ್ಳುಳ್ಳಿಯಿಂದೆಲ್ಲಾ ಉಪ್ಪಿನಕಾಯಿ ತಯಾರಿಸುತ್ತಾರೆ. ಆದರೆ ಹೆಚ್ಚಾಗಿ ಎಲ್ಲರೂ ಇಷ್ಟಪಡುವ ಉಪ್ಪಿನಕಾಯಿ ಎಂದರೆ ಅದು ಮಾವಿನಕಾಯಿ ಉಪ್ಪಿನಕಾಯಿ. ಬೇಸಿಗೆಯಲ್ಲಿ ಮಾತ್ರ ಸಿಗುವ ಮಾವಿನ ಮಿಡಿಯಿಂದ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಹದವಾಗಿ ಬೆರೆಸಿದ ಮಸಾಲೆಗಳಿಂದ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಹಾಗೆ ತಯಾರಿಸಿದ ಉಪ್ಪಿನಕಾಯಿಗೆ ಬೂಸ್ಟ್‌ ಹಿಡಿಯದಂತೆ ಈ ರೀತಿಯಾಗಿ ಶೇಖರಿಸಿಟ್ಟುಕೊಳ್ಳಿ.

- ಬೇಸಿಗೆಯಲ್ಲಿ ತಯಾರಿಸಿದ ಉಪ್ಪಿನಕಾಯಿಯನ್ನು ಒಣಗಿದ, ಗಾಳಿಯಾಡದ ಡಬ್ಬ ಅಥವಾ ಗಾಜಿನ ಭರಣಿಯಲ್ಲಿ ಸಂಗ್ರಹಿಸಿ. ಡಬ್ಬಿ ಅಥವಾ ಭರಣಿಗೆ ಸ್ವಚ್ಛ ಬಟ್ಟೆಯನ್ನು ಸುತ್ತಿ. ಅದನ್ನು ಕವರ್‌ನಲ್ಲಿ ಕಟ್ಟಿ ತೇವಾಂಶ ಕಡಿಮೆ ಇರುವ ಜಾಗದಲ್ಲಿಡಿ.

- ಉಪ್ಪಿನಕಾಯಿ ಡಬ್ಬವನ್ನು ನೆಲದ ಮೇಲೆ ಇಡಬೇಡಿ. ಕಪಾಟಿನಲ್ಲಿ ಅಥವಾ ಎತ್ತರದ ಜಾಗದಲ್ಲಿಡಿ.

- ಉಪ್ಪಿನಕಾಯಿಯನ್ನು ಡಬ್ಬದಿಂದ ತೆಗೆದುಕೊಳ್ಳುವಾಗ ಒದ್ದೆಯಾದ ಚಮಚ ಬಳಸಬೇಡಿ. ಬದಲಿಗೆ ಚಮಚವನ್ನು ಒಂದೆರಡು ನಿಮಿಷ ಬಿಸಿ ಮಾಡಿ, ಆರಿದ ನಂತರ ಅದರಿಂದ ಉಪ್ಪಿನಕಾಯಿ ತೆಗೆಯಿರಿ.

- ಪ್ರತಿಬಾರಿ ದೊಡ್ಡ ಡಬ್ಬದಲ್ಲಿರುವ ಉಪ್ಪಿನಕಾಯಿಯನ್ನೇ ಬಳಸುವುದರ ಬದಲಿಗೆ ಚಿಕ್ಕ ಡಬ್ಬದಲ್ಲಿ ಒಂದು ವಾರಕ್ಕೆ ಸಾಕಾಗುವಷ್ಟನ್ನು ಮಾತ್ರ ತೆಗೆದಿರಿಸಿಕೊಳ್ಳಿ.

- ಬೇಸಿಗೆಯಲ್ಲಿ ತಯಾರಿಸಿದ ಉಪ್ಪಿನಕಾಯಿಯನ್ನು ಒಂದೇ ಡಬ್ಬದಲ್ಲಿ ಇಡಬೇಡಿ. ಎರಡು ಅಥವಾ ಮೂರು ಡಬ್ಬದಲ್ಲಿ ಶೇಖರಿಸಿ. ಒಂದೊಂದಾಗಿ ಬಳಸುತ್ತಾ ಬನ್ನಿ. ಒಮ್ಮೆಲೇ ಎಲ್ಲವನ್ನು ಬಳಸಬೇಡಿ.

- ಉಪ್ಪಿನಕಾಯಿಯ ಮೇಲೆ ಬಿಸಿಮಾಡಿದ ಸಾಸಿವೆ ಎಣ್ಣೆ ಹಾಕಿಡಿ. ಎಣ್ಣೆಯು ಪ್ರಿಸರ್ವೇಟಿವ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ವರ್ಷಗಟ್ಟಲೆ ಉಪ್ಪಿನಕಾಯಿಯನ್ನು ಕೆಡದಂತೆ ಸಂಗ್ರಹಿಸಿಡಬಹುದು.

Whats_app_banner