ಮಂಡಕ್ಕಿ ಬಹುಕಾಲ ಗರಿಗರಿಯಾಗಿರಬೇಕು ಅಂದ್ರೆ ಏನು ಮಾಡಬೇಕು: ಈ ಟಿಪ್ಸ್ ಫಾಲೊ ಮಾಡಿ
ಚಟ್‌ಪಟಾ ದೇಸಿಸ್ನಾಕ್ಸ್ ಅಂದ್ರೆ ಥಟ್ ಅಂತ ನೆನಪಿಗೆ ಬರೋದು ಮಂಡಕ್ಕಿ. ನಾಲಿಗೆಯ ರುಚಿ ಹೆಚ್ಚಿಸುವ ಮಸಾಲಾ ಮಂಡಕ್ಕಿ, ಒಗ್ಗರಣೆ ಮಂಡಕ್ಕಿ, ಸುಸಲಾ ಎಲ್ಲವೂ ಮಂಡಕ್ಕಿಯಿಂದಲೇ ತಯಾರಾದ್ರೂ ರುಚಿ ಮಾತ್ರ ಬೇರೆಬೇರೆ. ಸಂಜೆಯ ಚಹಾಕ್ಕೆ ಜೊತೆಯಾಗುವ ಮಂಡಕ್ಕಿ ಗರಿಗರಿಯಾಗಿದ್ರೆ ಮಾತ್ರ ರುಚಿ ಹೆಚ್ಚು. ಹಾಗಾಗಿ ಮಂಡಕ್ಕಿ ಗರಗರಿಯಾಗಿರಲು ಈ ಟಿಪ್ಸ್ ಫಾಲೊ ಮಾಡಿ.
ಭೇಲ್ಪುರಿ, ಚುರ್‌ಮುರಿ, ಮುರ್‌ಮುರಾ, ಜಲ್ಮುರಿ ಎಂದೆಲ್ಲಾ ಕರೆಯುವ ಮಂಡಕ್ಕಿ ಸಂಜೆಯ ಚಹಾಕ್ಕೆ ಪರ್ಫೆಕ್ಟ್ ಮ್ಯಾಚ್ ಅನ್ನಬಹುದು. ಮಳೆ ಇರಲಿ, ಚಳಿ ಇರಲಿ ಅಥವಾ ಬೇಸಿಗೆಯ ಸುಡು ಬಿಸಿಲೇ ಇರಲಿ, ಸಿಹಿ, ಹುಳಿ, ಖಾರ ಹದವಾಗಿ ಬೆರೆತಿರುವ ಮಂಡಕ್ಕಿ ಸವಿಯುತ್ತಲೇ ಆಹಾ! ಎಂಥ ರುಚಿ ಎನ್ನುವ ಉದ್ಘಾರ ಬರದೇ ಇರದು. ಮಂಡಕ್ಕಿಯ ಗಮ್ಮತ್ತು ಹಾಗಿದೆ. ಕೆಲವರು ವಾರಕ್ಕಾಗುವಷ್ಟು ಒಗ್ಗರಣೆ ಮಂಡಕ್ಕಿ ಮಾಡಿ ಡಬ್ಬದಲ್ಲಿ ತುಂಬಿಸಿಟ್ಟರೆ ಇನ್ನು ಕೆಲವರು ಸುಸಲಾ ಮಾಡಿ ಒಂದೋ, ಎರಡೋ ಮಿರ್ಚಿ ಜೊತೆಗೆ ಸವಿಯುತ್ತಾರೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಂಡಕ್ಕಿ ಇದ್ದೇ ಇರುತ್ತದೆ. ದಿಢೀರ್ ಎಂದು ಬರುವ ಅತಿಥಿಗಳಿಗೆ ಸತ್ಕಾರ ಮಾಡಲು ಸಹ ಮಂಡಕ್ಕಿ ಸಹಾಯ ಮಾಡುತ್ತದೆ. ಅದಕ್ಕೇ ಇರಬೇಕು ಖರೀದಿಸುವಾಗ ಸ್ವಲ್ಪ ಹೆಚ್ಚೇ ಖರೀದಿಸಿ ಮನೆಯಲ್ಲಿ ತಂದು ಇಟ್ಟುಕೊಳ್ಳುವುದು. ಆದರೆ ಹಾಗೆ ಖರೀದಿಸಿ ತಂದ ಮಂಡಕ್ಕಿ ಸ್ವಲ್ಪ ದಿನ ಗರಿಗರಿಯಾಗಿದ್ದರೆ ಕ್ರಮೇಣ ಮೆತ್ತಗಾಗುತ್ತಾ ಬರುತ್ತದೆ. ಆಗ ಅದರಲ್ಲಿ ಮಾಡಿದ ಸವಿರುಚಿಗಳು ರುಚಿ ಕಳೆದುಕೊಂಡು ಸಪ್ಪೆ ಎನಿಸುತ್ತದೆ. ಹಾಗಾಗಿ ಮಂಡಕ್ಕಿಯನ್ನು ಗರಿಗರಿಯಾಗಿ ಇಟ್ಟಿಕೊಳ್ಳಲು ಹರಸಾಹಸ ಪಡುವವರಿದ್ದಾರೆ. ಅದಕ್ಕಾಗಿ ಇಲ್ಲಿ ಕೆಲವು ಟಿಪ್ಸ್ ಹೇಳಲಾಗಿದೆ. ಅವುಗಳನ್ನು ಪಾಲಿಸಿದರೆ ನೀವು ಖರೀದಿಸಿ ತಂದ ಮಂಡಕ್ಕಿಯನ್ನು ಬಹುಕಾಲ ಗರಿಗರಿಯಾಗಿರುವಂತೆ ಇಟ್ಟುಕೊಳ್ಳಬಹುದು.
ಮಂಡಕ್ಕಿ ಬಹುಕಾಲ ಗರಿಗರಿಯಾಗಿಡಲು ಟಿಪ್ಸ್
ಸರಿಯಾಗಿ ಪ್ಯಾಕ್ ಮಾಡಿ ಇಡಿ: ಅಂಗಡಿಯಿಂದ ಖರೀದಿಸಿ ತಂದ ಮಂಡಕ್ಕಿಯನ್ನು ಸರಿಯಾಗಿ ಪ್ಯಾಕ್ ಮಾಡಿ ಇಡಿ. ಲೀಟರ್ ಅಥವಾ ಪಾವ್ ಲೆಕ್ಕದಲ್ಲಿ ತಂದ ಮಂಡಕ್ಕಿಯನ್ನು ಫುಡ್ ಗ್ರೇಡ್ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ, ರಬ್ಬರ್ ಬ್ಯಾಂಡ್ ಅಥವಾ ಸ್ಟೆಪ್ಲರ್ ಪಿನ್ ಹಾಕಿ ಇಡಿ. ಹೀಗೆ ಮಾಡುವುದರಿಂದ ಮಂಡಕ್ಕಿ ಬಹಳ ದಿನಗಳವರೆಗೆ ಗರಿಗರಿಯಾಗಿರುತ್ತದೆ.
ಏರ್‌ಟೈಟ್ ಡಬ್ಬದಲ್ಲಿ ಹಾಕಿಡಿ: ಮಂಡಕ್ಕಿಯನ್ನು ಗರಗರಿಯಾಗಿ ಇಟ್ಟುಕೊಳ್ಳಬೇಕೆಂದರೆ ಅದನ್ನು ಏರ್‌ಟೈಟ್ ಡಬ್ಬದಲ್ಲಿ ಹಾಕಿಡಿ. ಆದರೆ ಹಾಗೆ ಹಾಕಿಡುವ ಮೊದಲು ಡಬ್ಬವನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿಟ್ಟು ತೇವಾಂಶ ಇಲ್ಲವೆಂದು ಖಚಿತ ಪಡಿಸಿಕೊಂಡ ಮೇಲೆ ಹಾಕಿಡಿ. ತೇವಾಂಶ ಇದ್ದರೆ ಏರ್‌ಟೈಟ್ ಡಬ್ಬದಲ್ಲಿ ಹಾಕಿಟ್ಟರೂ ಅದು ಬೇಗನೆ ಮೆತ್ತಗಾಗುತ್ತದೆ.
ಇದನ್ನೂ ಓದಿ: ಹೊಸ ರುಚಿಯ ಚಿತ್ರಾನ್ನ ತಿನ್ಬೇಕು ಅಂತಿದ್ರೆ ಕಾಯಿ ಜೀರಿಗೆ ಚಿತ್ರಾನ್ನ ಮಾಡ್ಕೊಳ್ಳಿ, ಹೆಸರು ಡಿಫ್ರೆಂಟ್ ರುಚಿಯೂ ಭಿನ್ನ
ಬೇರೆ ವಸ್ತುಗಳ ಜೊತೆ ಇಡಬೇಡಿ: ನಮ್ಮಲ್ಲಿ ಹಲವರಿಗೆ ಒಂದು ದೊಡ್ಡ ಡಬ್ಬದಲ್ಲಿ ಎಲ್ಲವನ್ನೂ ಚೀಲಗಳ ಸಮೇತ ಇಡುವ ಅಭ್ಯಾಸವಿರುತ್ತದೆ. ನಿಮಗೂ ಆ ಅಭ್ಯಾಸವಿದ್ದರೆ ಖಂಡಿತ ಇಂದೇ ಬದಲಾಯಿಸಿ. ಅದರಲ್ಲೂ ಸಕ್ಕರೆ, ಬೆಲ್ಲದಂತಹ ಸಿಹಿ ವಸ್ತುಗಳ ಜೊತೆ ಮಂಡಕ್ಕಿ ಚೀಲವನ್ನು ಇಟ್ಟರೆ, ಗರಿಗರಿಯಾಗಿರುವ ಮಂಡಕ್ಕಿ ಬಹಳ ಬೇಗನೆ ಮೆತ್ತಗಾಗುತ್ತದೆ. ಹಾಗಾಗಿ ಮಂಡಕ್ಕಿಯೊಂದಕ್ಕೆ ಬೇರೆ ಡಬ್ಬ ಮಾಡಿ.
ಫ್ರಿಜರ್‌ನಲ್ಲೂ ಇಡಬಹುದು: ಮಂಡಕ್ಕಿ ಗರಗರಿಯಾಗಿರಲು ಫ್ರೀಜರ್‌ನಲ್ಲೂ ಇಡಬಹುದು. ಆದರೆ ಹಾಗೆ ಇಡುವ ಮೊದಲು ಅದನ್ನು ಏರ್‌ಟೈಟ್ ಬಾಕ್ಸ್‌ನಲ್ಲಿ ಹಾಕಿ ಇಡಿ. ಅಥವಾ ಜಿಪ್ ಇರುವ ಬ್ಯಾಗ್‌ನಲ್ಲಿ ಇಡಬಹುದು. ಇದರಿಂದ ತಿಂಗಳುಗಟ್ಟಲೆ ಮಂಡಕ್ಕಿ ತಾಜಾ ಇರುವುದರ ಜೊತೆಗೆ ಗರಗರಿಯಾಗಿರುತ್ತದೆ.
ಇದನ್ನೂ ಓದಿ: Korean Fried Rice: ಡಿಫ್ರೆಂಟ್ ರುಚಿಯ ಫ್ರೈಡ್ ರೈಸ್ ತಿನ್ನಬೇಕು ಅಂತಿದ್ರೆ, ಕೊರಿಯನ್ ಎಗ್ ಫ್ರೈಡ್ ರೈಸ್ ಟ್ರೈ ಮಾಡಿ, ರೆಸಿಪಿ ಇಲ್ಲಿದೆ
ಈ ಟಿಪ್ಸ್ ಮರೆಯಲೇ ಬೇಡಿ
ಡಬ್ಬದಿಂದ ಮಂಡಕ್ಕಿಯನ್ನು ತೆಗೆದುಕೊಳ್ಳುವಾಗ ನೀರು ತಾಗಿರುವ ಕೈಗಳಿಂದ ಅಥವಾ ನೀರು ತಾಗಿರುವ ಚಮಚದಿಂದ ತೆಗೆಯಬೇಡಿ. ಹಾಗೆ ಮಾಡಿದರೆ ತೇವಾಂಶ ಉಳಿದ ಮಂಡಕ್ಕಿಗೂ ತಗಲುತ್ತದೆ. ಇದರಿಂದ ಡಬ್ಬದಲ್ಲಿ ಉಳಿದ ಮಂಡಕ್ಕಿ ಬಹಳ ಬೇಗನೆ ಮೆತ್ತಗಾಗುತ್ತದೆ. ಸಾಧ್ಯವಾದರೆ ಮಂಡಕ್ಕಿಯನ್ನು ಎರಡು ಅಥವಾ ಮೂರು ಚಿಕ್ಕ ಚಿಕ್ಕ ಕವರ್‌ಗಳಲ್ಲಿ ಶೇಖರಿಸಿ ಸೀಲ್ ಮಾಡಿ ಇಟ್ಟುಕೊಳ್ಳಿ. ನಿಮಗೆ ಬೇಕಾದಾಗ ಒಂದೊಂದೇ ಪ್ಯಾಕೆಟ್ ಬಳಸಬಹುದು. ಇದರಿಂದ ಎಲ್ಲಾ ಮಂಡಕ್ಕಿ ಒಮ್ಮೆಲೇ ಹಾಳಾಗುವುದಿಲ್ಲ.
ವಿಭಾಗ