ಬೆಳಗ್ಗೆ ಮಾಡಿದ ಚಪಾತಿ ಮಧ್ನಾಹ್ನ ಲಂಚ್ ಬಾಕ್ಸ್‌ನಲ್ಲಿ ತಿನ್ನುವಾಗ ಗಟ್ಟಿಯಾಗಿರುತ್ತಾ: ಚಪಾತಿ ಮೃದುವಾಗಿರಲು ಇಲ್ಲಿದೆ ಟಿಪ್ಸ್
ಚಪಾತಿ ತಯಾರಿಸದ ಭಾರತೀಯ ಅಡುಗೆ ಮನೆಗಳು ಇರುವುದು ತೀರಾ ಕಡಿಮೆ ಎನ್ನಬಹುದು. ಅಷ್ಟು ಜನಪ್ರಿಯವಾಗಿರುವ ಈ ಚಪಾತಿ ಮಾಡುವುದು ತುಂಬಾನೇ ಸುಲಭ. ಆದರೆ, ಬಿಸಿ ಬಿಸಿ ತಿನ್ನುವಾಗ ಮೃದುವಾಗಿರುವ ಚಪಾತಿ ಸ್ವಲ್ಪ ಸಮಯದ ನಂತರ ಗಟ್ಟಿಯಾಗಿಬಿಡುತ್ತದೆ. ದೀರ್ಘಕಾಲದವರೆಗೆ ಚಪಾತಿಯನ್ನು ಮೃದುವಾಗಿರಿಸುವುದು ಹೇಗೆ?ಈ ಟಿಪ್ಸ್ ಅನುಸರಿಸಿ:
ಭಾರತೀಯ ಉಪಖಂಡದಿಂದ ಹುಟ್ಟಿಕೊಂಡ ಜನಪ್ರಿಯ ಖಾದ್ಯವಾದ ಚಪಾತಿಯನ್ನು ಗೋಧಿ ಹಿಟ್ಟು, ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತಯಾರಿಸಲಾಗುತ್ತದೆ. ಗೋಧಿ ಹಿಟ್ಟನ್ನು ನಾದಿ 10 ನಿಮಿಷ ಹಾಗೆಯೇ ಬಿಟ್ಟು ನಂತರ ಸಣ್ಣ-ಸಣ್ಣ ಉಂಡೆಗಳಾಗಿ ತೆಗೆದುಕೊಂಡು ಲಟ್ಟಣಿಗೆಯಲ್ಲಿ ಲಟ್ಟಿಸಿ, ತವಾದಲ್ಲಿ ಬೇಯಿಸಿದರೆ ಚಪಾತಿ ಸವಿಯಲು ಸಿದ್ಧ. ಇದನ್ನು ಯಾವುದೇ ಗ್ರೇವಿ ಜೊತೆ ಸವಿಯಬಹುದು. ಭಾರತೀಯರ ಬಹುತೇಕ ಮನೆಗಳಲ್ಲಿ ಚಪಾತಿಯನ್ನು ಬೆಳಗ್ಗೆ ತಿಂಡಿಯಾಗಿ ಅಥವಾ ಮಧ್ಯಾಹ್ನದ ಊಟವಾಗಿ ಹಾಗೂ ರಾತ್ರಿಯ ಊಟವಾಗಿಯೂ ಸೇವಿಸಲಾಗುತ್ತದೆ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಕೂಡ ಡಯೆಟ್‌ಗಾಗಿ ಚಪಾತಿಯನ್ನು ಸೇವಿಸುತ್ತಾರೆ. ಆದರೆ, ಬಹುತೇಕ ಮಂದಿ ಎದುರಿಸುವ ಸಮಸ್ಯೆ ಏನೆಂದರೆ ಚಪಾತಿ ಮಾಡಿಟ್ಟು ಒಂದು ಅರ್ಧ ಗಂಟೆಯಾಗುತ್ತಲೇ ಗಟ್ಟಿಯಾಗುವುದು ಅಥವಾ ನಾರಿನಂತಾಗುವ ಸಮಸ್ಯೆ ಎದುರಾಗುತ್ತದೆ.
ಬಿಸಿ ಬಿಸಿ ತಿನ್ನುವಾಗ ಮೆತ್ತಗೆ ಇರುವ ಚಪಾತಿ ತಣ್ಣಗಾಗುತ್ತಲೇ ಗಟ್ಟಿಯಾಗಿ ಬಿಡುತ್ತದೆ. ಮಧ್ಯಾಹ್ನದ ಊಟದ ಬಾಕ್ಸ್‌ಗೆ ತೆಗೆದುಕೊಂಡು ಹೋದವರ ಕಷ್ಟ ತಿಂದವರಿಗೇ ಗೊತ್ತು. ಚಪಾತಿ ಮೃದುವಾಗಿದ್ದರೆ ಮಾತ್ರ ತಿನ್ನಲೂ ಕೂಡ ಖುಷಿಯೆನಿಸುತ್ತದೆ. ನೀವು ಮಾಡುವ ಚಪಾತಿ ಕೂಡ ಗಟ್ಟಿಯಾಗಿರುತ್ತಾ. ಮೃದುವಾದ ಮತ್ತು ನಯವಾದ ಚಪಾತಿಗಳನ್ನು ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.
ಮೃದುವಾದ ಮತ್ತು ನಯವಾದ ಚಪಾತಿಗಳನ್ನು ಮಾಡಲು ಅನುಸರಿಸಬೇಕಾದ ಸಲಹೆಗಳು ಇಲ್ಲಿವೆ
ಐಸ್ ನೀರಿನಿಂದ ಹಿಟ್ಟನ್ನು ಬೆರೆಸಿಕೊಳ್ಳಿ: ಚಪಾತಿಯನ್ನು ದೀರ್ಘಕಾಲದವರೆಗೆ ಮೃದುವಾಗಿಡಲು ಬಯಸಿದರೆ, ಹಿಟ್ಟನ್ನು ಬೆರೆಸುವ ಮೊದಲು, ಒಂದು ದೊಡ್ಡ ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ 6 ರಿಂದ 7 ಐಸ್ ತುಂಡುಗಳನ್ನು ಹಾಕಿಡಿ. ನಂತರ ಈ ಐಸ್ ನೀರಿನಿಂದ ಹಿಟ್ಟನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಐಸ್ ನೀರಿನಿಂದ ಹಿಟ್ಟನ್ನು ಬೆರೆಸುವುದರಿಂದ ಚಪಾತಿಯು ಮೃದುವಾಗಿರುತ್ತದೆ. ಹಿಟ್ಟನ್ನು ಚೆನ್ನಾಗಿ ನಾದಿದ ನಂತರ, ಅದನ್ನು ಒದ್ದೆಯಾದ ಹತ್ತಿ ಬಟ್ಟೆಯಿಂದ ಮುಚ್ಚಿಡಿ. ಹೀಗೆ ಮಾಡುವುದರಿಂದ ಚಪಾತಿಯು ಮೃದು ಮತ್ತು ನಯವಾಗಿ ಆಗುತ್ತವೆ.
ಹಿಟ್ಟನ್ನು ಜರಡಿ ಹಿಡಿಯಿರಿ: ನೀವು ಮಾಡುವ ಚಪಾತಿಯು ತುಂಬಾ ಗಟ್ಟಿಯಾಗಿದ್ದರೆ ಮತ್ತು ದಪ್ಪವಾಗಿದ್ದರೆ, ಗೋಧಿ ಹಿಟ್ಟನ್ನು ಬೆರೆಸುವ ಮೊದಲು ಹಿಟ್ಟನ್ನು ಜರಡಿ ಹಿಡಿಯಿರಿ. ಇದು ಹಿಟ್ಟಿನ ದಪ್ಪ ಮತ್ತು ಒರಟಾದ ಭಾಗವನ್ನು ಪ್ರತ್ಯೇಕಿಸುತ್ತದೆ. ಇದರಿಂದ ಚಪಾತಿಯು ಮೃದುವಾಗುತ್ತದೆ.
ಉಗುರುಬೆಚ್ಚನೆಯ ನೀರಿಗೆ ಉಪ್ಪು ಸೇರಿಸಿ ಹಿಟ್ಟನ್ನು ಕಲಸಿ: ಉಗುರುಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಹಿಟ್ಟನ್ನು ಚೆನ್ನಾಗಿ ಕಲಸಿ. ಗೋಧಿ ಹಿಟ್ಟನ್ನು ತುಂಬಾ ಚೆನ್ನಾಗಿ ನಾದಬೇಕು. ಇದು ಚಪಾತಿಯನ್ನು ದೀರ್ಘಕಾಲದವರೆಗೆ ಮೃದುವಾಗಿರಿಸುತ್ತದೆ. ಗೋಧಿ ಹಿಟ್ಟನ್ನು ಚೆನ್ನಾಗಿ ಬೆರೆಸಿದ ನಂತರ ಅದರ ಮೇಲೆ ಸ್ವಲ್ಪ ತುಪ್ಪವನ್ನು ಅನ್ವಯಿಸಿ, 10 ರಿಂದ 15 ನಿಮಿಷಗಳ ಕಾಲ ಹಾಗೆಯೇ. ಹೀಗೆ ಮಾಡುವುದರಿಂದ ಚಪಾತಿ ಮೃದುವಾಗುತ್ತದೆ.
ರ್ಯಾಪರ್ ನಲ್ಲಿ ಸುತ್ತಿ: ಗೋಧಿ ಹಿಟ್ಟನ್ನು ಚೆನ್ನಾಗಿ ಕಲಸಿ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಚಪಾತಿ ಮೃದುವಾಗಿ ಬರಲು ಹಿಟ್ಟನ್ನು ಎಷ್ಟು ಚೆನ್ನಾಗಿ ಬೆರೆಸಿದ್ದೇವೆ ಅನ್ನುವುದು ಕೂಡ ಮುಖ್ಯ. ಬಳಿಕ ಲಟ್ಟಣಿಗೆಯಲ್ಲಿ ಚಪಾತಿ ಲಟ್ಟಿಸಿ ಅದನ್ನು ಬೇಯಿಸಿ, ತಣ್ಣಗಾದ ನಂತರ ರ್ಯಾಪರ್‌ನಲ್ಲಿ ಸುತ್ತಿಡಿ. ಇದರಿಂದ ಚಪಾತಿ ದೀರ್ಘಕಾಲದವರೆಗೆ ಮೃದುವಾಗಿರುತ್ತದೆ.
ವಿಭಾಗ