ನಮ್ಮೂರ ಮಾರುಕಟ್ಟೆಯಲ್ಲಿ ಚೀನೀ ಬೆಳ್ಳುಳ್ಳಿ ಹಾವಳಿ, ಭಾರತ- ಚೀನಾ ಬೆಳ್ಳುಳ್ಳಿಗೆ ವ್ಯತ್ಯಾಸ ಗುರುತಿಸುವುದು ಹೇಗೆ
ಕನ್ನಡ ಸುದ್ದಿ  /  ಜೀವನಶೈಲಿ  /  ನಮ್ಮೂರ ಮಾರುಕಟ್ಟೆಯಲ್ಲಿ ಚೀನೀ ಬೆಳ್ಳುಳ್ಳಿ ಹಾವಳಿ, ಭಾರತ- ಚೀನಾ ಬೆಳ್ಳುಳ್ಳಿಗೆ ವ್ಯತ್ಯಾಸ ಗುರುತಿಸುವುದು ಹೇಗೆ

ನಮ್ಮೂರ ಮಾರುಕಟ್ಟೆಯಲ್ಲಿ ಚೀನೀ ಬೆಳ್ಳುಳ್ಳಿ ಹಾವಳಿ, ಭಾರತ- ಚೀನಾ ಬೆಳ್ಳುಳ್ಳಿಗೆ ವ್ಯತ್ಯಾಸ ಗುರುತಿಸುವುದು ಹೇಗೆ

ಚೀನಾ ಉತ್ಪನ್ನಗಳು ಎಂದರೆ ಹುಷಾರು ಎನ್ನುವ ಸ್ಥಿತಿ ಜಗತ್ತಿನಾದ್ಯಂತ ಇದೆ. ಈಗ ಬೆಳ್ಳುಳ್ಳಿ ವಿಚಾರದಲ್ಲೂ ಇದು ಹೆಚ್ಚು ಚರ್ಚೆಯಲ್ಲಿದೆ. ಚೀನಾ ಬೆಳ್ಳುಳ್ಳಿ ಏಕೆ ಬಳಸಬಾರದು. ವ್ಯತ್ಯಾಸ ಕಂಡು ಹಿಡಿಯುವುದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಇಲ್ಲಿದೆ ಭಾರತ ಹಾಗೂ ಚೀನಾ ಬೆಳ್ಳುಳ್ಳಿ ನಡುವಿನ ವ್ಯತ್ಯಾಸ
ಇಲ್ಲಿದೆ ಭಾರತ ಹಾಗೂ ಚೀನಾ ಬೆಳ್ಳುಳ್ಳಿ ನಡುವಿನ ವ್ಯತ್ಯಾಸ

ಎಲೆಕ್ಟ್ರಾನಿಕ್‌ ಉತ್ಪನ್ನಗಳು, ಆಟಿಕೆಗಳು ಆಯಿತು. ಭಾರತ ಹಾಗೂ ಚೀನಾ ನಡುವೆ ಬೆಳ್ಳುಳ್ಳಿ ಸಮರ ನಡೆದಿದೆ. ಅದೂ ಚೀನಾದ ಬೆಳ್ಳುಳ್ಳಿಯನ್ನು ದಶಕದ ಹಿಂದೆಯೇ ಭಾರತದ ಮಾರುಕಟ್ಟೆಯಲ್ಲಿ ನಿಷೇಧ ಮಾಡಿದ್ದರೂ ಈಗಲೂ ಆ ದೇಶದ ಬೆಳ್ಳುಳ್ಳಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಒಮ್ಮೆಗೆ ನೋಡಿದರೆ ಚೀನಾ ಬೆಳ್ಳುಳ್ಳಿ ಯಾವುದು, ಭಾರತದ ಬೆಳ್ಳುಳ್ಳಿ ಎನ್ನುವುದು ಯಾವುದು ಎನ್ನುವುದು ತಿಳಿಯದಷ್ಟರ ಮಟ್ಟಿಗೆ ಎರಡೂ ಉತ್ಪನ್ನಗಳಿವೆ. ಆದರೆ ಬೆಳ್ಳುಳ್ಳಿಯ ಸುವಾಸನೆ, ಗಾತ್ರ, ಬಣ್ಣವನ್ನು ಗಮನಿಸಿ ಇದು ಯಾವ ದೇಶದ ಬೆಳ್ಳುಳ್ಳಿ ಎಂದು ನಿಖರವಾಗಿ ಹೇಳಬಹುದು. ಕೊಂಚ ಸಮಯ ತೆಗೆದುಕೊಂಡು ಖರೀದಿಸಿದರೆ ನಮ್ಮ ದೇಶದ ಬೆಳ್ಳುಳ್ಳಿಯನ್ನು ಮಾರುಕಟ್ಟೆಯಲ್ಲಿ ಖರೀದಿಸಬಹುದು.

ಬೆಳ್ಳುಳ್ಳಿ ದರ ದುಬಾರಿಯಾಗಿದ್ದು ಕೆಜಿ ಬೆಳ್ಳುಳ್ಳಿ ಬೆಲೆಯೇ ಮೂರು ನೂರು ದಾಟಿದೆ. ಮಾರುಕಟ್ಟೆಯಲ್ಲಿ ಸಿಹಿತಿಂಡಿ, ಹಾಲಿನ ಹೊರತಾಗಿ, ಬೆಳ್ಳುಳ್ಳಿಯಲ್ಲಿಯೂ ಕಲಬೆರಕೆ ಕಂಡುಬಂದಿದೆ. ಸಾಮಾನ್ಯವಾಗಿ ಇದನ್ನು ಚೀನೀ ಅಥವಾ ಚೀನಾ ಬೆಳ್ಳುಳ್ಳಿ ಎಂದು ಕರೆಯಲಾಗುತ್ತದೆ.

2014 ರಲ್ಲಿಯೇ ಇದನ್ನು ನಿಷೇಧಿಸಲಾಗಿದ್ದರೂ, ಭಾರತೀಯ ಮಾರುಕಟ್ಟೆಗಳಿಗೆ ಪ್ರವೇಶಿಸುತ್ತಿದೆ. ವರದಿಗಳ ಪ್ರಕಾರ, ಬೆಳ್ಳುಳ್ಳಿ ದರ ಜಾಸ್ತಿ ಆಗಿರುವುದನ್ನು ಗಮನಿಸಿ ಕೆಲ ಬೆಳ್ಳುಳ್ಳಿ ಸಗಟು ವ್ಯಾಪಾರಸ್ಥರು ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಟ್ಟು ಮಾರಾಟ ಮಾಡುತ್ತಿದ್ದಾರೆ.

ಆರೋಗ್ಯಕ್ಕೆ ಹಾನಿಕಾರಕ ಎನ್ನಲಾದ ಈ ಚೀನಾದ ಬೆಳ್ಳುಳ್ಳಿಯ ಮಾರಾಟ ಕೆಲವು ಮಾರುಕಟ್ಟೆಗಳಲ್ಲಿ ವ್ಯಾಪಾರವಾಗುತ್ತಿದೆ. ಅದು ಬಹಳಷ್ಟು ಮಾರುಕಟ್ಟೆ ಸೇರಿ ನಮ್ಮೂರಿನ ಮಾರುಕಟ್ಟೆಗೂ ಬಂದಿರಲೂ ಬಹುದು.

ಭಾರತ ಮತ್ತು ಚೀನಾ ಬೆಳ್ಳುಳ್ಳಿ ವ್ಯತ್ಯಾಸಗಳು

ಎರಡೂ ರೀತಿಯ ಬೆಳ್ಳುಳ್ಳಿ ಮಾರುಕಟ್ಟೆಗಳಲ್ಲಿ ಲಭ್ಯವಿದ್ದರೂ, ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಅತ್ಯಗತ್ಯ. ಇದನ್ನು ಹೀಗೆ ಮಾಡಬಹುದು.

  • ಗಾತ್ರ ಮತ್ತು ಬಣ್ಣ

ಚೀನೀ ಬೆಳ್ಳುಳ್ಳಿ ಚಿಕ್ಕದಾಗಿರುತ್ತದೆ, ತಿಳಿ ಬಿಳಿ ಮತ್ತು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಮತ್ತೊಂದೆಡೆ, ಭಾರತೀಯ ಬೆಳ್ಳುಳ್ಳಿ ದೊಡ್ಡದಾಗಿರುತ್ತದೆ. ಬಣ್ಣವೂ ಅಪ್ಪಟ ಬಿಳಿಯಾಗಿರುತ್ತದೆ.

  • ಸುವಾಸನೆ ಮತ್ತು ಪರಿಮಳ

ಭಾರತೀಯ ಬೆಳ್ಳುಳ್ಳಿ ಘಾಟು ಸುವಾಸನೆಯನ್ನು ಹೊಂದಿರುತ್ತದೆ. ನಮ್ಮ ಬೆಳ್ಳುಳ್ಳಿ ಕಾಳು ಹಿಚುಕಿದರೆ ರಸ ಬರುತ್ತದೆ. ಅದರ ಘಾಟು ಕೂಡ ಜೋರಾಗಿಯೇ ಇರುತ್ತದೆ. ಅದೇ ಚೀನಾ ಬೆಳ್ಳುಳ್ಳಿ ಹೆಚ್ಚು ಸೌಮ್ಯವಾದ ಪರಿಮಳವನ್ನು ಹೊಂದಿರುತ್ತದೆ. ವಾಸನೆಯಿಂದಲೂ ಇದನ್ನು ಖಚಿತಪಡಿಸಿಕೊಳ್ಳಬಹುದು. ಈ ಅಂಶ ಆಧರಿಸಿ ಬೆಳ್ಳುಳ್ಳಿ ಖರೀದಿಸುವಾಗ ಜಾಗರೂಕರಾಗಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಸೇವನೆ ಆರೋಗ್ಯಕ್ಕೆ ಹಾನಿಕಾರಕ

ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಚೀನಾದ ಬೆಳ್ಳುಳ್ಳಿ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಕ್ಯಾನ್ಸರ್ ಕಾರಕ ಮತ್ತು ವಿಷಕಾರಿ ಎಂದು ತಜ್ಞರು ಹೇಳುತ್ತಾರೆ. ದೀರ್ಘಕಾಲದ ವರೆಗೆ ಈ ರೀತಿಯ ಬೆಳ್ಳುಳ್ಳಿ ಬಳಸಿದ್ದೇ ಆದಲ್ಲಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಸಂಶೋಧನೆಗಳಿಂದಲೂ ದೃಢ ಪಟ್ಟಿದೆ. ಚೀನಾದ ಬೆಳ್ಳುಳ್ಳಿಯನ್ನು ಆರು ತಿಂಗಳವರೆಗೆ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಲು ಮೀಥೈಲ್ ಬ್ರೋಮೈಡ್ ಹೊಂದಿರುವ ಶಿಲೀಂಧ್ರನಾಶಕದೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಚೀನೀ ಬೆಳ್ಳುಳ್ಳಿಯನ್ನು ಹಾನಿಕಾರಕ ಕ್ಲೋರಿನ್ ಬಳಸಿ ಬಿಳುಪುಗೊಳಿಸಲಾಗುತ್ತದೆ ಎನ್ನಲಾಗಿದೆ. ಹಾಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಮಾನ್ಯವಾಗಿ ಚೀನೀ ಬೆಳ್ಳುಳ್ಳಿ ಬೆಳೆಯುವ ಸಮಯದಲ್ಲಿ ಇವುಗಳಿಗೆ ಕೀಟನಾಶಕ ಮತ್ತು ರಾಸಾಯನಿಕಗಳನ್ನು ಭಾರೀ ಪ್ರಮಾಣದಲ್ಲಿ ಬಳಸಲಾಗುತ್ತದೆ. ಈ ಸಂಯುಕ್ತಗಳು ಗ್ರಾಹಕರ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಆದರೆ ನಮ್ಮ ಭಾರತೀಯ ಬೆಳ್ಳುಳ್ಳಿ ಕಡಿಮೆ ಪ್ರಮಾಣದ ರಾಸಾಯನಿಕಗಳು ಮತ್ತು ರಸಗೊಬ್ಬರಗಳನ್ನು ಬಳಸಿಕೊಂಡು ಬೆಳೆಯಲಾಗುತ್ತದೆ.

ಚೀನಾ ಬೆಳ್ಳುಳ್ಳಿ ನಿಷೇಧ ಏಕೆ ?

ಚೀನಾವು ಅತಿ ಹೆಚ್ಚು ಬೆಳ್ಳುಳ್ಳಿಯನ್ನು ಉತ್ಪಾದನೇ ಮಾಡುತ್ತದೆ. ಅವುಗಳನ್ನು ಆಧುನಿಕ ಕೃಷಿ ತಂತ್ರಗಳನ್ನು ಬಳಸಿಕೊಂಡು ಬೆಳೆಯಲಾಗುತ್ತದೆ. ಇದರಲ್ಲಿ ರಾಸಾಯನಿಕಗಳು ಮತ್ತು ಕೀಟನಾಶಕಗಳ ಬಳಕೆ ಹೆಚ್ಚಾಗಿರುತ್ತದೆ. ಹಾಗಾಗಿ ಕೃಷಿ ಪದ್ಧತಿಗಳು ಚೀನಾದ ಬೆಳ್ಳುಳ್ಳಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕಾರಣದಿಂದ 2014 ರಲ್ಲಿಯೇ ಭಾರತ ಇದರ ಆಮದನ್ನು ನಿಷೇಧಿಸಿದೆ. ಇದರ ಹೊರತಾಗಿಯೂ, ನೇಪಾಳ, ಮ್ಯಾನ್ಮಾರ್, ಭೂತಾನ್ ಕಳ್ಳ ಮಾರ್ಗವಾಗಿ ಭಾರತದ ಹಲವು ರಾಜ್ಯಗಳಿಗೆ ಚೀನಾ ಬೆಳ್ಳುಳ್ಳಿ ಬರುತ್ತಲೇ ಇದೆ. ವಿಚಕ್ಷಣೆ ನಡುವೆಯೂ ನಿಂತಿಲ್ಲ.

Whats_app_banner