ಶಾಲಾ ಪ್ರತಿಭಾ ಕಾರಂಜಿ ಪ್ಲಾಸ್ಟಿಕ್ ಇಲ್ಲದ ಕಾರ್ಯಕ್ರಮವಾಗಲಿ; ಪರಿಸರ ರಕ್ಷಣೆ ಆದ್ಯತೆ ಇರಲಿ -ಅರವಿಂದ ಸಿಗದಾಳ್
ಶಾಲೆಗಳ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್, ಪೇಪರ್ ಲೋಟ-ಪ್ಲೇಟ್-ಚಮಚ, ಪ್ಲಾಸ್ಟಿಕ್ ಬಾಟಲ್ನ ನೀರು, ಅತಿಥಿಗಳಿಗೆ ಪ್ಲಾಸ್ಟಿಕ್ ರ್ಯಾಪರ್ನಲ್ಲಿ ಸುತ್ತಿದ ಹೂಗುಚ್ಚ, ಹಣ್ಣಿನ ಬುಟ್ಟಿ, ಏಕ ಬಳಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಮೊಮೆಂಟೋಗಳನ್ನು ಬಳಸಬಾರದೆಂದು ಕೃಷಿಕರಾದ ಮೇಲುಕೊಪ್ಪದ ಅರವಿಂದ ಸಿಗದಾಳ್ ತಾಕೀತು ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಶಾಲಾ-ಕಾಲೇಜುಗಳು ಮಾಡುತ್ತಲೇ ಇರುತ್ತವೆ. ಪರಿಸರ ಕುರಿತು ಕೆಲವೊಂದು ಪಠ್ಯಗಳು ಇವೆ. ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಗಳಲ್ಲಿ ಪ್ಲಾಸ್ಟಿಕ್ ಬಳಸದಿದ್ದರೆ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಗೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿಕರಾ ಮೇಲುಕೊಪ್ಪದ ಅರವಿಂದ ಸಿಗದಾಳ್ ಅವರು ತಮ್ಮ ಮನವಿಯನ್ನು ಹಂಚಿಕೊಂಡಿದ್ದಾರೆ. ಇವರ ಬರಹವನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಗಳ ಶಾಲೆಗಳಲ್ಲಿನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ 'ಪ್ರತಿಭಾ ಕಾರಂಜಿ' ಕಾರ್ಯಕ್ರಮಗಳಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ. ಶಾಲೆಗಳ ಗುರುಗಳು, ವರ್ಕಿಂಗ್ ಸ್ಟಾಫ್, ಪೋಷಕರು, ವಿದ್ಯಾರ್ಥಿಗಳು, ಊರಿನ ಸಂಘಟನೆಗಳು, ಎಸ್ ಡಿಎಂಸಿ ಕಮಿಟಿಗಳು, ಶಿಕ್ಷಣ ಇಲಾಖೆಯ ಸೂಚನೆಯಲ್ಲಿ ಸ್ಥಾಪನೆಯಾದ ಹಳೇ ವಿದ್ಯಾರ್ಥಿಗಳ ಸಂಘಗಳು ಸೇರಿದಂತೆ ಎಲ್ಲರೂ ಸಂಭ್ರಮದಿಂದ ಯಶಸ್ವಿ ಪ್ರತಿಭಾ ಕಾರಂಜಿಗೆ ಶ್ರಮವಹಿಸುತ್ತಿದ್ದಾರೆ. ಕಾರ್ಯಕ್ರಮಗಳು ಯಶಸ್ವಿಯಾಗಲಿ. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿಗಳು, ತಾಲೂಕು ಶಿಕ್ಷಣಾಧಿಕಾರಿಗಳು, ಸಮಸ್ತ ಗುರುವೃಂದದವರಿಗೆ ಅಭಿನಂದನೆಗಳು.
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಿದ್ದರೆ ಒಳ್ಳೆಯದು. ಪ್ಲಾಸ್ಟಿಕ್ ಅಥವಾ ಪೇಪರ್ ಲೋಟ-ಪ್ಲೇಟ್-ಚಮಚ, ಪ್ಲಾಸ್ಟಿಕ್ ಬಾಟಲ್ನ ನೀರು, ಅತಿಥಿಗಳಿಗೆ ಪ್ಲಾಸ್ಟಿಕ್ ರ್ಯಾಪರ್ನಲ್ಲಿ ಸುತ್ತಿದ ಹೂಗುಚ್ಚ, ಪ್ಲಾಸ್ಟಿಕ್ ರ್ಯಾಪರ್ನಲ್ಲಿ ಸುತ್ತಿದ ಹಣ್ಣಿನ ಬುಟ್ಟಿ, ಏಕ ಬಳಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಮೊಮೆಂಟೋ, ಥರ್ಮಾಕೋಲ್ ಇತ್ಯಾದಿಗಳನ್ನು ಬಳಸದೆ ಕಾರ್ಯಕ್ರಮ ಮಾಡಿ ಎಂದು ಈ ಮೂಲಕ ಒಂದು ವಿನಂತಿ.
ಹೀಗೆ ಪ್ಲಾಸ್ಟಿಕ್ ತ್ಯಜಿಸಿ ಕಾರ್ಯಕ್ರಮ ಮಾಡುವುದರೊಂದಿಗೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ. ಜೊತೆಗೆ ಆ ಮೂಲಕ ಪರಿಸರಕ್ಕೂ, ಸಕಲ ಜೀವಿಗಳಿಗೂ, ಮುಂದಿನ ತಲೆಮಾರಿಗೂ ನಮ್ಮ ನೆಡೆಗಳಿಂದ ಒಂದು ಶುಭಾಶಯ ಕೋರಿದಂತಾಗುತ್ತದೆ. ಎಂಬುದು ಈ ವಿನಂತಿಯ ಉದ್ದೇಶ.
ನಮ್ಮ ಭೂಮಿ ಪ್ಲಾಸ್ಟಿಕ್ ಡಂಪಿಂಗ್ ಯಾರ್ಡ್ ಆಗುತ್ತಿದ್ದು, ಇಡೀ ಪರಿಸರವೇ ಹಾಳಾಗುತ್ತಿದೆ. ಮಣ್ಣು, ನೀರು, ಗಾಳಿಗಳಲ್ಲಿ ಪ್ಲಾಸ್ಟಿಕ್ ಮೈಕ್ರೋ ಕಣಗಳು ಸೇರಿ ಜೀವವೈವಿಧ್ಯಗಳ ಆರೋಗ್ಯವೇ ಹಾಳಾಗುತ್ತಿದೆ. ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ ಪ್ಲಾಸ್ಟಿಕ್ ಜಾಗೃತಿ ಮೂಡಿಸಲೂ ಪ್ಲಾಸ್ಟಿಕ್ ರಹಿತ, ಅದರಲ್ಲೂ ಮೇಲೆ ಹೇಳಿದಂತಹ ಪ್ಲಾಸ್ಟಿಕ್ಗಳನ್ನು ಬಿಟ್ಟು ಕಾರ್ಯಕ್ರಮಗಳು ಆಗಲಿ ಎಂದು ಪ್ರೀತಿಯಿಂದ ಆತ್ಮೀಯವಾಗಿ ಈ ಮೂಲಕ ಒತ್ತಾಯ ಮಾಡುತ್ತೇನೆ.
ಪ್ರತೀ ಜಿಲ್ಲಾ ಶಿಕ್ಷಣ ಅಧಿಕಾರಿಗಳು, ತಾಲೂಕು ಶಿಕ್ಷಣ ಅಧಿಕಾರಿಗಳು ಇದನ್ನು ತಮ್ಮ ವ್ಯಾಪ್ತಿಯ ಜಿಲ್ಲಾ/ತಾಲೂಕಿನ ಎಲ್ಲಾ ಶಾಲೆಗಳಿಗೆ ಸೂಚನಾ ಮೆಮೋ ಮಾಹಿತಿಯಾಗಿ ಹಂಚಿಕೊಂಡು ಅನುಷ್ಠಾನಕ್ಕೆ ಪ್ರೇರೇಪಣೆ ಮಾಡಲಿ. ಎಲ್ಲಾ ಶಾಲಾ ಗುರು ವೃಂದದವರೂ ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ರಹಿತ ಪ್ರತಿಭಾ ಕಾರಂಜಿ ನೆಡೆಸಲು ಮುಂದಾಗಲಿ. ಮತ್ತೊಮ್ಮೆ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ಹೇಳೋಣ ಎಂದು ಅರವಿಂದ ಸಿಗದಾಳ್ ಅವರು ಮನವಿ ಮಾಡಿಕೊಂಡಿದ್ದಾರೆ. ಅರವಿಂದ ಸಿಗದಾಳ್, ಮೇಲುಕೊಪ್ಪ, ಮೊಬೈಲ್ ಸಂಖ್ಯೆ 9449631248.