ಹಸೆ ಚಿತ್ತಾರಕ್ಕೆ ಉದ್ಯಮ ರೂಪ ಕೊಟ್ಟ ಗಟ್ಟಿಗಿತ್ತಿ, ನಶಿಸುತ್ತಿರುವ ಕಲೆಗೆ ಜೀವ ತುಂಬಿದ ಸಾಗರದ ಯಶೋದಾ; ರಾಘವೇಂದ್ರ ಶರ್ಮಾ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಹಸೆ ಚಿತ್ತಾರಕ್ಕೆ ಉದ್ಯಮ ರೂಪ ಕೊಟ್ಟ ಗಟ್ಟಿಗಿತ್ತಿ, ನಶಿಸುತ್ತಿರುವ ಕಲೆಗೆ ಜೀವ ತುಂಬಿದ ಸಾಗರದ ಯಶೋದಾ; ರಾಘವೇಂದ್ರ ಶರ್ಮಾ ಬರಹ

ಹಸೆ ಚಿತ್ತಾರಕ್ಕೆ ಉದ್ಯಮ ರೂಪ ಕೊಟ್ಟ ಗಟ್ಟಿಗಿತ್ತಿ, ನಶಿಸುತ್ತಿರುವ ಕಲೆಗೆ ಜೀವ ತುಂಬಿದ ಸಾಗರದ ಯಶೋದಾ; ರಾಘವೇಂದ್ರ ಶರ್ಮಾ ಬರಹ

ಗೋಡೆಗಳ ಮೇಲೆ, ಬುಟ್ಟಿಗಳ ಮೇಲೆ ಸುಂದರವಾಗಿ ಚಿತ್ತಾರ ಮೂಡಿಸುವ ಕಲೆ ಹಸೆ. ಮಲೆನಾಡಿನ ಭಾಗದಲ್ಲಿ ಖ್ಯಾತಿ ಪಡೆದಿರುವ ಈ ಕಲೆಯು ಈಗ ಅಳವಿನಂಚಿನಲ್ಲಿದೆ. ಆದರೆ ಈ ಕಲೆಗೆ ಜೀವ ನೀಡಿ, ಇದನ್ನೇ ಉದ್ಯಮವನ್ನಾಗಿಸಿಕೊಂಡಿದ್ದಾರೆ ಸಾಗರದ ಯಶೋಧಾ, ಇವರು ಶಿರೂರು ಆಲಳ್ಳಿಯಲ್ಲಿ ಹಸೆ ಚಿತ್ತಾರ ಅಂಗಡಿ ತೆರೆದಿದ್ದಾರೆ. ಈ ಅಂಗಡಿ ಬಗ್ಗೆ ರಾಘವೇಂದ್ರ ಶರ್ಮಾ ಅವರು ಬರೆದ ಬರಹ ಇಲ್ಲಿದೆ

ಹಸೆ ಚಿತ್ತಾರ ಅಂಗಡಿ (ಎಡಚಿತ್ರ), ಬುಟ್ಟಿಯ ಮೇಲೆ ಹಸೆ ಚಿತ್ತಾರ ಮೂಡಿಸುತ್ತಿರುವ ಯಶೋದಾ (ಬಲಚಿತ್ರ)
ಹಸೆ ಚಿತ್ತಾರ ಅಂಗಡಿ (ಎಡಚಿತ್ರ), ಬುಟ್ಟಿಯ ಮೇಲೆ ಹಸೆ ಚಿತ್ತಾರ ಮೂಡಿಸುತ್ತಿರುವ ಯಶೋದಾ (ಬಲಚಿತ್ರ) (PC: Raghavendra Sharma/ Facebook)

ಕರ್ನಾಟಕವು ಹಲವು ವೈಶಿಷ್ಟ್ಯಗಳನ್ನ ಹೊಂದಿರುವ ನಾಡು. ಇಲ್ಲಿನ ಸಂಸ್ಕೃತಿ, ಭಾಷೆ, ಆಚಾರ–ವಿಚಾರ ಎಲ್ಲವೂ ವಿಭಿನ್ನ. ಕರ್ನಾಟಕವು ಕಲಾ ಪರಂಪರೆಯನ್ನು ಬಿಂಬಿಸುವ ರಾಜ್ಯವು ಹೌದು. ನಮ್ಮ ರಾಜ್ಯದಲ್ಲಿ ವಿವಿಧ ಬಗೆಯ ಕಲಾ ಪ್ರಕಾರಗಳು ಹುಟ್ಟಿಕೊಂಡಿದ್ದವು. ಅಂತಹವುಗಳಲ್ಲಿ ಹಸೆ ಚಿತ್ತಾರವೂ ಒಂದು. ಈ ಹಸೆ ಚಿತ್ತಾರವು ಮಲೆನಾಡಿನ ಭಾಗದಲ್ಲಿ ಪರಿಚಯವಾಗಿ ಖ್ಯಾತಿ ಪಡೆದಿರುವುದು. ಆದರೆ ಈಗೀಗ ಈ ಕಲೆಯು ವಿನಾಶದ ಅಂಚಿಗೆ ಸರಿಯುತ್ತಿದೆ.

ಹಸೆ ಕಲೆಯು ನಾಶವಾಗಬಾರದು, ಇದನ್ನು ಮುಂದಿನ ಪೀಳಿಗೆಗೂ ಪಸರಿಸಬೇಕು ಎಂಬ ಉದ್ದೇಶದಿಂದ ಸಾಗರದ ಯಶೋದಾ ಎನ್ನುವವರು ಹೆಸೆ ಚಿತ್ತಾರದ ಅಂಗಡಿ ಮಾಡಿದ್ದಾರೆ. ಆ ಮೂಲಕ ಹಸೆ ಕಲೆಯನ್ನೇ ಉದ್ಯಮವನ್ನಾಗಿಸಿದ್ದಾರೆ. ಇವರ ಅಂಗಡಿಯ ಬಗ್ಗೆ ರಾಘವೇಂದ್ರ ಶರ್ಮಾ ಎನ್ನುವವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಹಸೆ ಚಿತ್ತಾರ ನಿಮಗೂ ಬೇಕಿದ್ದರೆ ಕಾಲ್ ಮಾಡಲು ನಂಬರ್ ಕೂಡ ನೀಡಿದ್ದಾರೆ. ರಾಘವೇಂದ್ರ ಅವರ ಬರಹವನ್ನು ನೀವೂ ಓದಿ.

ರಾಘವೇಂದ್ರ ಅವರ ಬರಹ

ಹಸೆ ಚಿತ್ತಾರ ಮಲೆನಾಡಿನ‌ ದೀವರ ಜನಾಂಗದ ಅದ್ಬುತವಾದ ಕಲೆ. ಸಾಗರದ ಗೌರಮ್ಮ ಹುಚ್ಚಪ್ಪ ಮಾಸ್ತರ್, ಶಿರವಂತೆಯ ಚಂದ್ರಶೇಖರ್, ಈಶ್ವರ ನಾಯ್ಕ ಹಸುವಂತೆ ಮೊದಲಾದವರು ರಾಜ್ಯ ಮಟ್ಟದಲ್ಲಿ ಈ ಕಲೆಯಲ್ಲಿ ಹೆಸರು ಮಾಡಿದವರು. ಇದಲ್ಲದೆ ಹಲವಾರು ಜನ ಎಲೆಮರೆಯ ಕಾಯಿಯಂತೆ ಕಲೆಯಲ್ಲಿ ಪರಿಣಿತರಿದ್ದಾರೆ.

ಭೂಮಿ ಹುಣ್ಣಿಮೆ, ದೀಪಾವಳಿ ಮುಂತಾದ ಹಬ್ಬಗಳಲ್ಲಿ ರೈತಾಪಿ ಜನರು ಬೆತ್ತದ ಬುಟ್ಟಿಯ ಮೇಲೆ, ಮನೆಯ ಗೋಡೆಯ ಮೇಲೆ ಹಸೆ ಚಿತ್ತಾರ ಮೂಡಿಸಿ ತಮ್ಮ ಸಂಪ್ರದಾಯವನ್ನು ಮೆರೆಸುವುದು ಕಾಲದಿಂದಲೂ ನಡೆದು ಬಂದ ಪದ್ದತಿ. ಕಾಲಕಳೆದಂತೆ ಹಸೆ ಚಿತ್ತಾರ ಬುಟ್ಟಿಗಳ ಮೇಲೆ ಚಿತ್ರ ಬಿಡಿಸುವ ಜನ ಕಡಿಮೆಯಾದಾಗ ಅದನ್ನು ತಯಾರಿಸಿ ಮಾರುವ ಕೆಲಸವನ್ನು ಶಿರವಂತೆಯ ಯಶೋದ ಆರಂಭಿಸಿದ್ದಾರೆ.

ಸಾಗರದಿಂದ ಜೋಗಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಿಗುವ ಶಿರೂರು ಆಲಳ್ಳಿಯಲ್ಲಿ ಯಶೋದ ಬುಟ್ಟಿ ಹಣತೆ ದೀಪ ಲೋಟಗಳ ಮೇಲೆ ಚಿತ್ರ ಬಿಡಿಸಿ ಮಾರಾಟ ಮಾಡುವ ಮಳಿಗೆ ತೆರೆದಿದ್ದಾರೆ. ಕಳೆದ 15 ವರ್ಷದಿಂದ ಶಿರವಂತೆಯ ಚಿತ್ರಸಿರಿ ಚಂದ್ರಶೇಖರ್ ಅವರಿಂದ ಈ ಕಲೆಯನ್ನು ಅಭ್ಯಾಸ ಮಾಡಿ ಈಗ ತಮ್ಮದೇ ಸ್ವಂತ ಉದ್ಯಮ ಆರಂಭಿಸಿದ್ದಾರೆ. ನಶಿಸಿ ಹೋಗುವ ಕಲೆ ಉಳಿಸುವ ಕೆಲಸ ಒಂದೆಡೆಯಾದರೆ ಕಾಲಾವಕಾಶವಿಲ್ಲದೆ ಭೂಮಿ ಹುಣ್ಣಿಮೆ ಬುಟ್ಟಿ ಮುಂತಾದವುಗಳನ್ನು ಬಳಸುವ ರೈತಾಪಿ ಜನರಿಗೆ ಇದು ಸಹಾಯವಾಗಲಿದೆ. ಜೋಗಕ್ಕೆ ಸಾಗುವ ದಾರಿಯ ಪಕ್ಕದಲ್ಲೆ ಮಳಿಗೆ ಇರುವುದರಿಂದ ಪ್ರವಾಸಿಗರನ್ನೂ ಈ ಕಲೆ ಆಕರ್ಷಿಸುತ್ತದೆ. ಇಂಥಹ ಹಳ್ಳಿಯ ಕಲೆಯೊಂದನ್ನು ಉಳಿಸುವ ಹಾಗೂ ತನ್ಮೂಲಕ ಸ್ವಂತ ಆದಾಯವನ್ನೂ ಗಳಿಸುವ ಯಶೋದ ರವರ ಸಹಾಯಕ್ಕೆ ಸರ್ಕಾರದ ಬೆಂಬಲವೂ ಬೇಕಿದೆ. ನಿಮಗೆ ಚಂದದ ಬುಟ್ಟಿ ಲೋಟ ಹಸೆಚಿತ್ತಾರದ್ದು ಬೇಕಾದಾಗ ಹಲೋ ಎನ್ನಿ. ಮೊಬೈಲ್: 7259895052

ಅಕ್ಟೋಬರ್ 18 ರಂದು ರಾಘವೇಂದ್ರ ಅವರು ಈ ಪೋಸ್ಟ್ ಹಾಕಿದ್ದು ಈಗಾಗಲೇ 380ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 26 ಮಂದಿ ಇವರ ಪೋಸ್ಟ್ ಶೇರ್ ಮಾಡಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ಯಶೋದಾ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ರಾಘವೇಂದ್ರ ಶರ್ಮಾ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು

‘ಎಲ್ಲಾ ಗ್ರಾಮೀಣ ಕಲೆಗಳೂ ಅಳಿವಿನತ್ತ ದಾರಿ ಹಿಡಿದಿರುವಾಗ ಅಲ್ಲೊಬ್ಬರು ಇಲ್ಲೊಬ್ಬರು ಉಳಿಸುವ ಹೋರಾಟ ಮಾಡುತ್ತಿರುವುದು ಅದಕ್ಕೆ ತಮ್ಮಂತಹ ಸಹೃದಯದವರು ಪ್ರಚಾರಕೊಟ್ಟು ಪ್ರೋತ್ಸಾಹ ನೀಡುತ್ತಿರುವುದು ತುಂಬಾ ತುಂಬಾ ಶ್ಲಾಘನೀಯ ಮತ್ತು ಅಭಿನಂದನೀಯ‘ ಎಂದು ರಮೇಶ್ ಕೆ. ಮರತ್ತೂರ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

‘ನಮ್ಮ ನೆಲದ ಕಲೆ. ನಮ್ಮ ಬದಿಯ ರೈತಾಪಿಗರೆಲ್ಲರ ಕಲೆ. ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಹಾಗೆ ನೋಡಿದರೆ ಇದು ನಮ್ಮ ನೆಲದ ಮೂಲ ನಿವಾಸಿಗಳಾದ "ಹಸಲರ" ಕಲೆ ಇರಬಹುದು‘ ಎಂದು ಶಶಿಧರ್ ಎಂ. ಹಿಟ್ಟಲಕೊಪ್ಪ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ‘ಬಹಳ ಚಂದ. ಗ್ರಾಮೀಣ ಕಲೆಯನ್ನುಳಿಸುವತ್ತ ಇಂಥವರ ಸಂತತಿ ಸಾವಿರವಾಗಲಿ‘ ಎಂದು ಲತಿಕಾ ಭಟ್ ಕಾಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಬಹಳ ಅದ್ಭುತವಾದ ಜಾನಪದ ಕಲೆ, ಇದನ್ನು ಉಳಿಸುವ ಪ್ರಯತ್ನವಾಗಬೇಕು‘ ಅರು ರಂಗ ಎನ್ನುವವರು ಕಾಮೆಂಟ್ ಮಾಡಿದ್ದಾರೆ.