ಕನ್ನಡ ಸುದ್ದಿ  /  ಜೀವನಶೈಲಿ  /  Summer Holidays: ಮಕ್ಕಳು ಬೇಸಿಗೆ ರಜೆಯನ್ನು ಮೋಜಿನೊಂದಿಗೆ ಅರ್ಥಪೂರ್ಣವಾಗಿ ಕಳೆಯುವಂತೆ ಮಾಡಲು ಹೀಗೆ ಮಾಡಿ

Summer holidays: ಮಕ್ಕಳು ಬೇಸಿಗೆ ರಜೆಯನ್ನು ಮೋಜಿನೊಂದಿಗೆ ಅರ್ಥಪೂರ್ಣವಾಗಿ ಕಳೆಯುವಂತೆ ಮಾಡಲು ಹೀಗೆ ಮಾಡಿ

Summer holidays: ಬೇಸಿಗೆ ರಜೆ ಎಂದರೆ ಎರಡು ತಿಂಗಳು ಮಜಾ ಮಾಡಬಹುದು ಎಂಬುದು ಮಕ್ಕಳ ಮನಸ್ಸಿನಲ್ಲಿರುತ್ತದೆ. ಆದರೆ ರಜೆಯ ಮಜವನ್ನು ಅನುಭವಿಸುವ ಜೊತೆಗೆ ರಜೆಯನ್ನು ಅರ್ಥಪೂರ್ಣವಾಗಿ ಕಳೆಯುವುದು ಬಹಳ ಮುಖ್ಯವಾಗುತ್ತದೆ.

ಬೇಸಿಗೆ ರಜೆ
ಬೇಸಿಗೆ ರಜೆ

ಒಂಬತ್ತು ತಿಂಗಳ ಶಾಲೆ, ಪ್ರಾಜೆಕ್ಟ್‌ ವರ್ಕ್‌, ಹೋರ್ಮ್‌ ವರ್ಕ್‌, ಪರೀಕ್ಷೆ ಈ ಎಲ್ಲಾ ಒತ್ತಡಗಳು ಕಳೆದು ಇನ್ನೇನು ಫಲಿತಾಂಶ ಬರಲು ಕೆಲವೇ ಕೆಲವು ದಿನಗಳು ಬಾಕಿಯಿವೆ. ಮಕ್ಕಳು ಫಲಿತಾಂಶದ ಆತಂಕದ ನಡುವೆಯೂ ಬೇಸಿಗೆ ರಜೆಯನ್ನು ಸ್ವಾಗತಿಸುವ ಖುಷಿಯಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೇಸಿಗೆ ರಜೆ ಎಂದರೆ ಎರಡು ತಿಂಗಳು ಮಜಾ ಮಾಡಬಹುದು ಎಂಬುದು ಮಕ್ಕಳ ಮನಸ್ಸಿನಲ್ಲಿರುತ್ತದೆ. ಆದರೆ ರಜೆಯ ಮಜವನ್ನು ಅನುಭವಿಸುವ ಜೊತೆಗೆ ರಜೆಯನ್ನು ಅರ್ಥಪೂರ್ಣವಾಗಿ ಕಳೆಯುವುದು ಬಹಳ ಮುಖ್ಯವಾಗುತ್ತದೆ. ರಜೆಯ ಖುಷಿಯನ್ನು ಅನುಭವಿಸುವ ಜೊತೆಗೆ ಈ ಹವ್ಯಾಸಗಳನ್ನೂ ಮಕ್ಕಳಲ್ಲಿ ರೂಢಿಸುವುದರಿಂದ ಅವರ ವೈಯಕ್ತಿಕ ಹಾಗೂ ಶೈಕ್ಷಣಿಕ ಬದುಕಿಗೆ ಸಹಾಯವಾಗುತ್ತದೆ.

ಪ್ರವಾಸ ಹೀಗಿರಲಿ

ಮಕ್ಕಳಿಗೆ ಬೇಸಿಗೆ ರಜೆ ಎಂದರೆ ಪ್ರವಾಸ. ಈ ಬೇಸಿಗೆ ರಜೆಯಲ್ಲಿ ಐತಿಹಾಸಿಕ ಹಾಗೂ ವಿಜ್ಞಾನದ ಹಿನ್ನೆಲೆ ಇರುವ ಪ್ರವಾಸಿ ತಾಣಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ. ಸ್ಮಾರಕಗಳು, ಕೋಟೆಗಳು ಇಂತಹ ಇತಿಹಾಸವನ್ನು ಸಾರುವ ಸ್ಥಳಗಳಲ್ಲಿ ಮಕ್ಕಳು ಕಲಿಯುವುದು ಸಾಕಷ್ಟಿರುತ್ತದೆ. ಅಲ್ಲಿ ಮಕ್ಕಳ ಕುತೂಹಲಕ್ಕೂ ಉತ್ತರ ಸಿಗುತ್ತದೆ, ಇದರೊಂದಿಗೆ ವಿಜ್ಞಾನ ಸಂಸ್ಥೆಗಳು, ತಾರಾಲಯದಂತಹ ಜಾಗಗಳನ್ನು ಮಕ್ಕಳಿಗೆ ತೋರಿಸುವುದರಿಂದ ಅವರಲ್ಲಿ ಕುತೂಹಲ ಹಾಗೂ ಆಸಕ್ತಿ ಹೆಚ್ಚುತ್ತದೆ, ಈ ಪ್ರವಾಸ ಮಕ್ಕಳಿಗೆ ಖುಷಿ ಕೊಡುವ ಜೊತೆಗೆ ಕಲಿಕೆಗೂ ನೆರವಾಗುವುದರಲ್ಲಿ ಸಂಶಯವಿಲ್ಲ.

ವಿಜ್ಞಾನದ ಪ್ರಾಜೆಕ್ಟ್‌ಗಳನ್ನು ಮಾಡಿಸಿ

ಮಕ್ಕಳು ರಜೆಯಲ್ಲಿ ಸುಮ್ಮನೆ ಕುಳಿತು ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎನ್ನಿಸಿದರೆ ಅವರಿಗೆ ಮೋಜು ಹಾಗೂ ಕಲಿಕೆ ಎರಡೂ ಸಾಧ್ಯವಾಗುವ ರೀತಿ ವಿಜ್ಞಾನದ ಪ್ರಾಜೆಕ್ಟ್‌ಗಳನ್ನು ಅವರಿಂದ ಮಾಡಿಸಿ. ಇದರಿಂದ ಅವರ ಮೆದುಳು ಚುರುಕಾಗುತ್ತದೆ, ಹೀಗೆ ಮಾಡಿದರೆ ಏನಾಗಬಹುದು ಎಂಬ ಯೋಚನಾಶಕ್ತಿಯ ಬೆಳವಣಿಗೆಗೂ ಇದು ಸಹಕಾರಿ. ಸಸ್ಯಗಳ ಬೆಳವಣಿಗೆಗಳ ಬಗ್ಗೆಯೂ ವಿವರಿಸಬಹುದು. ಮನೆಯಲ್ಲಿಯೇ ಇರುವ ಸಣ್ಣ ಪುಟ್ಟ ವಸ್ತುಗಳ ವೈಜ್ಞಾನಿಕ ಅಂಶಗಳ ಬಗ್ಗೆ ಹೇಳಿ ಅವರಲ್ಲಿ ಕುತೂಹಲ ಮೂಡುವಂತೆ ಮಾಡಬಹುದು. ಇದು ಅವರ ಕಲಿಕೆಗೂ ಸಹಕಾರಿ.

ಗಾರ್ಡನಿಂಗ್‌ ಮಾಡುವುದು

ಇಂದಿನ ಮಕ್ಕಳಿಗೆ ಪರಿಸರ ಕಾಳಜಿ ಸ್ವಲ್ಪವೂ ಇಲ್ಲ. ಆ ಕಾರಣಕ್ಕೆ ಮನೆ ಎದುರಿನ ಜಾಗದಲ್ಲಿ ಅಥವಾ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವುದನ್ನು ಕಲಿಸಿ. ಗಿಡ ನೆಡುವುದರಿಂದ ಅವುಗಳಿಗೆ ಪಾತಿ ಮಾಡುವುದು, ನೀರುಣಿಸುವುದು, ಕಳೆ ಕೀಳುವುದು ಹೀಗೆ ಪ್ರತಿ ಹಂತವನ್ನೂ ಅವರ ಕೈಯಿಂದಲೇ ಮಾಡಿಸಿ. ಇದು ಅವರಲ್ಲಿ ಪರಿಸರ ಆಸಕ್ತಿ ಮೂಡಿಸುವ ಜೊತೆಗೆ ಪರಿಸರದ ಬಗ್ಗೆ ಪ್ರಾಯೋಗಿಕವಾಗಿ ತಿಳಿದುಕೊಂಡ ಹಾಗೆಯೂ ಆಗುತ್ತದೆ. ಬೆಳಿಗ್ಗೆ ಸಂಜೆ ಗಾರ್ಡನ್‌ನಲ್ಲಿ ಸಮಯ ಕಳೆಯಲು ತಿಳಿಸಿ. ಇದರಿಂದ ಆಟದೊಂದಿಗೆ ಪಾಠವೂ ಸಿಗುತ್ತದೆ. ಅಲ್ಲದೆ ತಾವು ಬೆಳೆಸಿದ ಗಿಡಗಳಲ್ಲಿ, ಹೂ ಹಣ್ಣು ಆಗುವುದನ್ನು ನೋಡಿದರೆ ಮಕ್ಕಳ ಸಂತೋಷವೂ ಇಮ್ಮಡಿಯಾಗಬಹುದು.

ಹೊಸ ಕೌಶಲಗಳನ್ನು ಕಲಿಸುವುದು

ಬೇಸಿಗೆ ರಜೆ ಎಂದರೆ ಪ್ರವಾಸ, ಮೋಜು, ಮಸ್ತಿ ಇಷ್ಟೇ ಅಲ್ಲ. ಇದರೊಂದಿಗೆ ಹೊಸ ಹೊಸ ಕೌಶಲಗಳ ಕಲಿಕೆಗೂ ಆದ್ಯತೆ ನೀಡಬೇಕು. ಬಿಡುವಿನ ವೇಳೆಯಲ್ಲಿ ಹೊಸ ಕೌಶಲಗಳ ಕಲಿಕೆಯ ಮೇಲೆ ಒತ್ತು ನೀಡಲು ಮಗುವಿಗೆ ಪೋಷಕರು ಪ್ರೋತ್ಸಾಹಿಸಬೇಕು. ವಿಜ್ಞಾನ, ಕಂಪ್ಯೂಟರ್‌, ಕ್ರೀಡೆ, ಸಂಗೀತ, ಚಿತ್ರಕಲೆ ಹೀಗೆ ನಿಮ್ಮ ಮಗುವಿನ ಆಸಕ್ತಿಯ ಕ್ಷೇತ್ರ ಯಾವುದು ಎಂದು ಗುರುತಿಸಿ ಅದನ್ನು ಕಲಿಯಲು ಪ್ರೋತ್ಸಾಹಿಸಬೇಕು.

ಓದಿನ ಅಭ್ಯಾಸ ರೂಢಿಸಿ

ಇಂದಿನ ಬಹುತೇಕ ಮಕ್ಕಳಿಗೆ ಪಠ್ಯ ಪುಸ್ತಕವನ್ನು ಹೊರತು ಪಡಿಸಿ ಬೇರೆ ವಿಷಯಗಳನ್ನು ಓದಿ ಅಭ್ಯಾಸವೇ ಇಲ್ಲ. ದಿನಪತ್ರಿಕೆ ಓದುವುದಂತೂ ಕನಸಿನ ಮಾತು. ಆ ಕಾರಣಕ್ಕೆ ಮಕ್ಕಳಲ್ಲಿ ಕತೆ ಪುಸ್ತಕ, ವಿಜ್ಞಾನ, ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳು, ಮಾನವನ ಉಗುಮದ ಕುರಿತಾದ ಪುಸ್ತಕಗಳನ್ನು ತಂದು ಓದಲು ಹೇಳಿ. ಮಕ್ಕಳು ಓದಲು ನಿರಾಕರಿಸಿದರೆ ನೀವು ಆ ಪುಸ್ತಕದಲ್ಲಿನ ಆಸಕ್ತಿದಾಯಕ ವಿಷಯವನ್ನು ಓದಿ ಹೇಳಿ. ಇದರಿಂದ ಅವರಲ್ಲಿ ಆಸಕ್ತಿ ಹೆಚ್ಚುತ್ತದೆ.

ವಿಭಾಗ